Home ರಾಜಕೀಯ ಬಿಜೆಪಿ ಫಾರ್ಮ್‌ 7 ದುರ್ಬಳಕೆ ಮಾಡಿಕೊಂಡು ಮೂಲಕ ಜನರ ಮತದಾನದ ಹಕ್ಕನ್ನು ಕಸಿಯುವ ಸಂಚು ನಡೆಸುತ್ತಿದೆ:...

ಬಿಜೆಪಿ ಫಾರ್ಮ್‌ 7 ದುರ್ಬಳಕೆ ಮಾಡಿಕೊಂಡು ಮೂಲಕ ಜನರ ಮತದಾನದ ಹಕ್ಕನ್ನು ಕಸಿಯುವ ಸಂಚು ನಡೆಸುತ್ತಿದೆ: ಸಿಎಂ ಡಿ.ಕೆ. ಶಿವಕುಮಾರ್

0

ಬೆಂಗಳೂರು: ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ನೆಪದಲ್ಲಿ ದೀನದಲಿತರು, ಬಡವರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಕಿತ್ತುಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಅತಿದೊಡ್ಡ ದಾಳಿ ಇದಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವೀಡಿಯೋ ಸಂದೇಶದ ಮೂಲಕ ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ಬೂತ್ ಮಟ್ಟದ ಏಜೆಂಟರನ್ನು (ಬಿಎಲ್‌ಎ-1 ಮತ್ತು ಬಿಎಲ್‌ಎ-2) ಉದ್ದೇಶಿಸಿ ಮಾತನಾಡಿದ ಅವರು, “ಮತದಾನವು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು. ಆದರೆ, ಕೇಂದ್ರ ಮತ್ತು ಸ್ಥಳೀಯ ಬಿಜೆಪಿ ನಾಯಕರ ನಿರ್ದೇಶನದಂತೆ ಪರಾಜಿತ ಬಿಜೆಪಿ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ತಪ್ಪು ಮಾಹಿತಿಯೊಂದಿಗೆ ‘ಫಾರ್ಮ್-7’ ಸಲ್ಲಿಸಿ, ಮತದಾರರ ಪಟ್ಟಿಯಿಂದ ಅರ್ಹರ ಹೆಸರುಗಳನ್ನು ತೆಗೆದುಹಾಕಲು ಯತ್ನಿಸುತ್ತಿದ್ದಾರೆ. ಕೇವಲ ವಿಪಕ್ಷಗಳ ಕ್ಷೇತ್ರಗಳಲ್ಲಷ್ಟೇ ಅಲ್ಲದೆ, ಕಾಂಗ್ರೆಸ್ ಹಾಲಿ ಶಾಸಕರ ಕ್ಷೇತ್ರಗಳಲ್ಲೂ ಈ ಕುತಂತ್ರ ನಡೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಈಶ್ವರ್ ಖಂಡ್ರೆ ಅವರ ಭಾಲ್ಕಿ, ನಯನಾ ಮೋಟಮ್ಮ ಅವರ ಮೂಡಿಗೆರೆ, ತನ್ವೀರ್ ಸೇಠ್, ರಾಜು ಸೇಠ್ ಹಾಗೂ ಎಸ್.ಟಿ. ಸೋಮಶೇಖರ್ ಅವರ ಕ್ಷೇತ್ರಗಳು ಸೇರಿದಂತೆ ರಾಜ್ಯಾದ್ಯಂತ ಹಲವೆಡೆ ವ್ಯವಸ್ಥಿತವಾಗಿ ‘ಫಾರ್ಮ್-7’ ದುರ್ಬಳಕೆ ಮಾಡಿಕೊಂಡು ಅರ್ಜಿ ಸಲ್ಲಿಸಿರುವ ಬಗ್ಗೆ ದಾಖಲೆಗಳು ಲಭ್ಯವಾಗಿವೆ ಎಂದು ಅವರು ತಿಳಿಸಿದರು. ಎಸ್‌ಐಆರ್ ಪ್ರಕ್ರಿಯೆಯಡಿ ಈಗಾಗಲೇ ರಾಜ್ಯದಲ್ಲಿ 1 ಕೋಟಿಗೂ ಅಧಿಕ ಮತದಾರರ ಹೆಸರುಗಳು ಕೈಬಿಟ್ಟುಹೋಗಿದ್ದು, ಸುಮಾರು 50 ಲಕ್ಷಕ್ಕೂ ಅಧಿಕ ಮತದಾರರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅರ್ಹ ಮತದಾರರ ಹೆಸರುಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಇಂತಹ ಕೃತ್ಯಗಳು ಕಂಡುಬಂದಲ್ಲಿ ಬಿಎಲ್‌‌ಎಗಳು ತಕ್ಷಣವೇ ನಿಖರ ದಾಖಲೆಗಳೊಂದಿಗೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದಾರೆ. ಈ ಗಂಭೀರ ಅಕ್ರಮದ ವಿರುದ್ಧ ಶುಕ್ರವಾರ ಚುನಾವಣಾ ಆಯೋಗಕ್ಕೆ ಖುದ್ದು ದೂರು ನೀಡುವುದಾಗಿ ತಿಳಿಸಿರುವ ಅವರು, ದಾಖಲೆಗಳ ಸಮೇತ ವಿಸ್ತೃತ ಮಾಧ್ಯಮಗೋಷ್ಠಿ ನಡೆಸಿ ಸತ್ಯಾಂಶವನ್ನು ಬಯಲಿಗೆಳೆಯುವುದಾಗಿ ಎಚ್ಚರಿಸಿದ್ದಾರೆ.

You cannot copy content of this page

Exit mobile version