Home ಬೆಂಗಳೂರು ಹನೂರು ಶೂಟೌಟ್ ಪ್ರಕರಣ: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ತೀವ್ರ ಗದ್ದಲ, ಕಲಾಪ ರದ್ದು ಭೀತಿ

ಹನೂರು ಶೂಟೌಟ್ ಪ್ರಕರಣ: ವಿಧಾನಸಭೆಯಲ್ಲಿ ಆಡಳಿತ-ವಿರೋಧ ಪಕ್ಷಗಳ ನಡುವೆ ತೀವ್ರ ಗದ್ದಲ, ಕಲಾಪ ರದ್ದು ಭೀತಿ

0

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಮೂವರು ಸಾವನ್ನಪ್ಪಿದ ಗುಂಡಿನ ಚಕಮಕಿ ಪ್ರಕರಣವು ಕರ್ನಾಟಕ ವಿಧಾನಸಭೆಯಲ್ಲಿ ಭಾರಿ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ ಬಿಜೆಪಿ ನಾಯಕರು, ಘಟನೆಯ ಕುರಿತು ಸಮಗ್ರ ಸ್ಪಷ್ಟನೆ ನೀಡುವಂತೆ ಪಟ್ಟು ಹಿಡಿದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿ, “ಮೃತಪಟ್ಟವರ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ ಎಂದು ಸ್ವತಃ ಸರ್ಕಾರವೇ ಹೇಳುತ್ತಿದೆ. ಹೀಗಿರುವಾಗ ಅವರನ್ನು ಗುಂಡಿಕ್ಕಿ ಕೊಲ್ಲಲು ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಸರ್ಕಾರ ಇದು ಎನ್‌ಕೌಂಟರ್ ಎಂದು ಅಧಿಕೃತವಾಗಿ ಘೋಷಿಸಲಿ, ನಾವು ಈ ವಿಚಾರವನ್ನು ಇಲ್ಲಿಗೇ ಬಿಡುತ್ತೇವೆ” ಎಂದು ಕಿಡಿಕಾರಿದರು. ‌

ಜೊತೆಗೆ ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಘಟನೆಯ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದರು. ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಕೂಡ ಧ್ವನಿಗೂಡಿಸಿ, ಸರ್ಕಾರವು ರೈತರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ ಎಂದು ಆರೋಪಿಸಿ ಸ್ಪಷ್ಟನೆಗೆ ಆಗ್ರಹಿಸಿದರು.

ವಿರೋಧ ಪಕ್ಷದ ಆರೋಪಗಳಿಗೆ ತೀವ್ರ ಪ್ರತ್ಯುತ್ತರ ನೀಡಿದ ಸಚಿವ ಕೃಷ್ಣ ಬೈರೇಗೌಡ, ಜನರ ಸಾವಿನ ವಿಚಾರದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಹನೂರು ಘಟನೆಯ ಕುರಿತು ತಮಿಳುನಾಡು ಮುಖ್ಯಮಂತ್ರಿ ಕಚೇರಿ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿದ ಪ್ರತಿಪಕ್ಷಗಳು ಸರ್ಕಾರದ ನಿಲುವನ್ನು ತರಾಟೆಗೆ ತೆಗೆದುಕೊಂಡವು.

ಪ್ರಶ್ನೋತ್ತರ ಕಲಾಪ ಮುಗಿದ ನಂತರವಷ್ಟೇ ಸ್ಪಷ್ಟನೆ ಕೋರಲು ಅವಕಾಶ ನೀಡುವುದಾಗಿ ಸ್ಪೀಕರ್ ಜಿ.ಎಸ್. ಪಾಟೀಲ್ ಸ್ಪಷ್ಟಪಡಿಸಿದರೂ ಸದನದಲ್ಲಿ ಉಭಯ ಪಕ್ಷಗಳ ನಡುವೆ ಮಾತಿನ ಚಕಮಕಿ ಮುಂದುವರಿಯಿತು.

You cannot copy content of this page

Exit mobile version