Home ರಾಜಕೀಯ ನಕಲಿ ‘ಫಾರ್ಮ್ 7’ ಮೂಲಕ ಮತದಾರರ ಹೆಸರು ಅಳಿಸಿಹಾಕುವ ಹುನ್ನಾರ: ಎಫ್‌ಐಆರ್ ದಾಖಲಿಸುವಂತೆ ಆಯೋಗದಿಂದ ಆದೇಶ,...

ನಕಲಿ ‘ಫಾರ್ಮ್ 7’ ಮೂಲಕ ಮತದಾರರ ಹೆಸರು ಅಳಿಸಿಹಾಕುವ ಹುನ್ನಾರ: ಎಫ್‌ಐಆರ್ ದಾಖಲಿಸುವಂತೆ ಆಯೋಗದಿಂದ ಆದೇಶ, ಧರಣಿ ಹಿಂಪಡೆದ ಡಿ.ಕೆ. ಶಿವಕುಮಾರ್

0

ಬೆಂಗಳೂರು: ಮತದಾರರ ಪಟ್ಟಿಯಿಂದ ಲಕ್ಷಾಂತರ ಮತಗಳನ್ನು ಅಕ್ರಮವಾಗಿ ತೆಗೆದುಹಾಕಲು ನಕಲಿ ‘ಫಾರ್ಮ್ 7’ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದೆ ಎಂದು ಆರೋಪಿಸಿ, ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ (ಸಿಇಒ) ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಗುರುವಾರ ತಡರಾತ್ರಿ ಹಿಂಪಡೆದಿದ್ದಾರೆ. ಬೃಹತ್ ಪ್ರಮಾಣದ ಅಕ್ರಮ ಅರ್ಜಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಮತ್ತು ಎಫ್‌ಐಆರ್ ದಾಖಲಿಸುವ ಭರವಸೆಯನ್ನು ಚುನಾವಣಾ ಆಯೋಗ ನೀಡಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ.

ಚುನಾವಣಾ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, “ಎಲೆಕ್ಟ್ರಾನಿಕ್ ರೂಪದಲ್ಲಿ ಮುದ್ರಿತಗೊಂಡ ನಕಲಿ ಫಾರ್ಮ್‌ಗಳನ್ನು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಕೆ ಮಾಡಲಾಗಿದೆ. ದಾಖಲೆ ಸಹಿತ ನಾವು ನೀಡಿದ ವಿವರಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಕೇಂದ್ರ ಚುನಾವಣಾ ಆಯೋಗದೊಂದಿಗಿನ ಚರ್ಚೆಯ ಬಳಿಕ ವ್ಯಾಪಕ ವಂಚನೆ ನಡೆದಿರುವುದು ದೃಢಪಟ್ಟಿದೆ,” ಎಂದು ತಿಳಿಸಿದರು.

ಇದೇ ವೇಳೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಅವರು, “25,000 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ. ಈ ಸಂಖ್ಯೆ 25,000 ಆಗಿರಲಿ ಅಥವಾ 25 ಲಕ್ಷವೇ ಆಗಿರಲಿ, ಇಷ್ಟೊಂದು ಅರ್ಜಿಗಳನ್ನು ಎಲ್ಲಿ ಮುದ್ರಿಸಲಾಯಿತು ಮತ್ತು ಇದರ ಜಾಲದ ಹಿಂದಿರುವ ಸೂತ್ರಧಾರರು ಯಾರು ಎಂಬುದರ ಬಗ್ಗೆ ತನಿಖೆಯಾಗಬೇಕು. ನಮಗೆ ಪಕ್ಷದ ಮುಖಂಡರೇ ಈ ಫಾರ್ಮ್‌ಗಳನ್ನು ನೀಡಿದ್ದರು ಎಂದು ಹಲವರು ಈಗಾಗಲೇ ಪೊಲೀಸರು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ,” ಎಂದರು.

ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮಗಳು:

  • ಸಾಮಾನ್ಯ ಆಕ್ಷೇಪಣಾ ಅರ್ಜಿಗಳಿಗೆ ತಡೆ: ಇಆರ್‌ಒ (ERO) ಮಟ್ಟದಲ್ಲಿ ಸಾಮಾನ್ಯ ಕಾರಣ ನೀಡಿ ಸಲ್ಲಿಸುವ ಯಾವುದೇ ಫಾರ್ಮ್ 7 ಅರ್ಜಿಗಳನ್ನು ಅನುಮೋದಿಸದಂತೆ ತಕ್ಷಣವೇ ನಿಷೇಧ ಹೇರಲಾಗಿದೆ.
  • ಮರಣ ಪ್ರಮಾಣಪತ್ರ ಕಡ್ಡಾಯ: ಕೇವಲ ಮೃತ ವ್ಯಕ್ತಿಗಳ ಹೆಸರನ್ನು ತೆಗೆಯಲು ಮಾತ್ರ ಅವಕಾಶವಿದ್ದು, ಅದಕ್ಕೆ ಅಧಿಕೃತ ಮರಣ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡುವುದು ಕಡ್ಡಾಯಗೊಳಿಸಲಾಗಿದೆ.
  • ದ್ವಿಮುಖ ನೋಂದಣಿಗೆ ಸಾಕ್ಷಿ: ಮತದಾರರ ಹೆಸರು ಪುನರಾವರ್ತನೆಯಾಗಿದ್ದರೆ, ಎರಡನೇ ಎಪಿಕ್ (EPIC) ಕಾರ್ಡ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.
  • ಕ್ರಿಮಿನಲ್ ಕೇಸ್ ದಾಖಲು: ಫಾರ್ಮ್ 6, 6A, 7 ಮತ್ತು 8 ರ ಅಡಿಯಲ್ಲಿ ಸುಳ್ಳು ಘೋಷಣೆ ಅಥವಾ ಮಾಹಿತಿ ನೀಡಿದವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆ 1950 ರ ಸೆಕ್ಷನ್ 31 ಹಾಗೂ 1960 ರ ನಿಯಮ 20 ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಮತ್ತು ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಲಾಗಿದೆ.

ಈ ಅಕ್ರಮವನ್ನು ಕಾನೂನಾತ್ಮಕವಾಗಿ ಎದುರಿಸಲು ಸಚಿವ ಸಂಪುಟದ ಇತರ ಕಾರ್ಯಕಲಾಪಗಳನ್ನೂ ಬದಿಗೊತ್ತಿ ಹೋರಾಟ ನಡೆಸಲಾಗಿದೆ ಎಂದ ಡಿ.ಕೆ. ಶಿವಕುಮಾರ್, ದಾಖಲಾಗುವ ಎಫ್‌ಐಆರ್‌ಗಳ ಕುರಿತು ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಪೊಲೀಸರು ಸ್ವತಂತ್ರ ತನಿಖೆ ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

You cannot copy content of this page

Exit mobile version