Home ರಾಜ್ಯ ವಿಧಾನಸೌಧದಲ್ಲಿ ಉರ್ದು ಹಬ್ಬ: ಉರ್ದು ಆಚರಣೆಯಲ್ಲಿ ಅಸಾಂವಿಧಾನಿಕವಾದದ್ದು ಏನಿದೆ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

ವಿಧಾನಸೌಧದಲ್ಲಿ ಉರ್ದು ಹಬ್ಬ: ಉರ್ದು ಆಚರಣೆಯಲ್ಲಿ ಅಸಾಂವಿಧಾನಿಕವಾದದ್ದು ಏನಿದೆ? – ಪ್ರಿಯಾಂಕ್ ಖರ್ಗೆ ಪ್ರಶ್ನೆ

0

ಬೆಂಗಳೂರು: ನವೆಂಬರ್ 9 ರಂದು ಉರ್ದು ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮೆಟ್ಟಿಲುಗಳ ಮೇಲೆ ‘ಉರ್ದು ಹಬ್ಬ’ವನ್ನು ಆಯೋಜಿಸುವ ಪ್ರಸ್ತಾವನೆ ತೀವ್ರ ರಾಜಕೀಯ ಹಾಗೂ ಸಾಂಸ್ಕೃತಿಕ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಸಚಿವ ಪ್ರಿಯಾಂಕ್ ಖರ್ಗೆ ಈ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ವಿಧಾನಸೌಧದ ಮುಂಭಾಗ ಉರ್ದು ಉತ್ಸವ ನಡೆಸುವ ಕಲ್ಪನೆಯನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಮುಂದಿಟ್ಟಿದ್ದರು. ಆದರೆ, ಈ ಪ್ರಸ್ತಾವನೆಗೆ ಬಿಜೆಪಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧದ ಆವರಣದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಮಾಜದ ಸೌಹಾರ್ದತೆಗೆ ಧಕ್ಕೆ ತರುವಂತಹ ಅಪ್ರಬುದ್ಧ ನಿರ್ಧಾರ ಎಂದು ಕನ್ನಡ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಈ ವಿರೋಧಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, “ಉರ್ದು ಸಂವಿಧಾನ ಹಾಗೂ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಅಂಗೀಕರಿಸಲ್ಪಟ್ಟ ಭಾಷೆಯಾಗಿದೆ. ಒಂದು ಭಾಷೆಯನ್ನು ಆಚರಿಸುವುದರಲ್ಲಿ ಬಿಜೆಪಿಗೆ ಏನು ಸಮಸ್ಯೆ? ಇದರಲ್ಲಿ ಅಸಾಂವಿಧಾನಿಕವಾದದ್ದು ಏನಿದೆ? ಉರ್ದು ಒಂದು ಭಾಷೆಯಲ್ಲ ಎಂದು ಯಾರಾದರೂ ಹೇಳಿದ್ದಾರೆಯೇ? ನಾವು ದೈನಂದಿನ ಜೀವನದಲ್ಲಿ ಬಳಸುವ ಎಷ್ಟೋ ಸಾಮಾನ್ಯ ಪದಗಳು ಸಂಸ್ಕೃತ, ಹಿಂದಿ ಮತ್ತು ಉರ್ದು ಭಾಷೆಗಳಿಂದಲೇ ಬಂದಿವೆ,” ಎಂದು ಪ್ರಶ್ನಿಸಿ ಸಮರ್ಥಿಸಿಕೊಂಡಿದ್ದಾರೆ.

ಇದೇ ವೇಳೆ, ವಿವಾದ ತಾರಕಕ್ಕೇರುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಯು.ಟಿ. ಖಾದರ್, ಭಾಷೆ ಮತ್ತು ಸಾಹಿತ್ಯದ ಪರಿಚಯ ಮಾಡುವ ಉದ್ದೇಶದಿಂದ ಈ ಕಲ್ಪನೆಯನ್ನು ಹಂಚಿಕೊಳ್ಳಲಾಗಿತ್ತೇ ಹೊರತು, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಿಂದ ಸಾಮಾಜಿಕ ಸಾಮರಸ್ಯಕ್ಕೆ ಭಂಗ ಬರುವುದಾದರೆ ಅಥವಾ ತೀವ್ರ ವಿರೋಧ ಮುಂದುವರಿದರೆ ಸ್ಥಳ ಬದಲಾಯಿಸಲು ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸರ್ಕಾರೇತರ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂದು ಮುಖ್ಯಮಂತ್ರಿಗಳ ಸಚಿವಾಲಯ (ಸಿಎಂಒ) ಸಹ ಸ್ಪಷ್ಟಪಡಿಸಿದೆ.

You cannot copy content of this page

Exit mobile version