ಲಂಡನ್ನಿನ ಬಲಪಂಥೀಯ ಕಾರ್ಯಕರ್ತ ಟಾಮಿ ರಾಬಿನ್ಸನ್ ನೇತೃತ್ವದಲ್ಲಿ ನಡೆದ ಬೃಹತ್ ʻವಲಸೆ ವಿರೋಧಿʼ ಮೆರವಣಿಗೆಯಲ್ಲಿ ಸುಮಾರು 1,00,000ಕ್ಕೂ ಹೆಚ್ಚು ಪ್ರತಿಭಟನಾಕಾರರು ಭಾಗವಹಿಸಿದ್ದಾರೆ. ʻಮಾರ್ಚ್ ಅಗೈನ್‌ಸ್ಟ್ ಫ್ಯಾಸಿಸಂʼ ಎಂಬ ಹೆಸರಿನಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಈ ರ್ಯಾಲಿಯಲ್ಲಿ ಅಂದಾಜು 110,000 ರಿಂದ 150,000 ಜನರು ಸೇರಿದ್ದರು, ಇದು ನಿರೀಕ್ಷೆಗೂ ಮೀರಿದ ಘಟನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟ್ಯಾಂಡ್ ಅಪ್ ಟು ರೇಸಿಸಂ ಆಯೋಜಿಸಿದ್ದ ಪ್ರತಿಸ್ಪರ್ಧಿ “ಫ್ಯಾಸಿಸಂ ವಿರುದ್ಧ ಮಾರ್ಚ್” ಪ್ರತಿಭಟನೆಯಲ್ಲಿ ಸುಮಾರು 5,000 ಜನರು ಭಾಗವಹಿಸಿದ್ದರು ಎನ್ನಲಾಗಿದೆ.
ಈ ಪ್ರತಿಭಟನೆಯನ್ನು ಫಾರ್-ರೈಟ್ ಅಕ್ಟಿವಿಸ್ಟ್ ಟಾಮಿ ರಾಬಿನ್ಸನ್ (ಸ್ಟೀಫನ್ ಯ್ಯಾಕ್ಷಿ-ಲೆನ್ನನ್) ನೇತೃತ್ವದಲ್ಲಿ ಯುನೈಟ್ ದಿ ಕಿಂಗ್‌ಡಮ್ ಎಂಬ ಹೆಸರಿನಲ್ಲಿ ಆಯೋಜಿಸಲಾಗಿದ್ದು, ಇಂಗ್ಲಿಷ್ ಡಿಫೆನ್ಸ್ ಲೀಗ್ ಸಂಸ್ಥಾಪಕನಾದ ರಾಬಿನ್ಸನ್, ಬ್ರಿಟನ್‌ನ ಪ್ರಭಾವಶಾಲಿ ಬಲಪಂಥೀಯ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಪ್ರತಿಭಟನಾಕಾರರು ಇಂಗ್ಲೆಂಡ್ (England) ಮತ್ತು ಬ್ರಿಟನ್ ಧ್ವಜಗಳನ್ನ ಹಿಡಿದು, ವೆಸ್ಟ್‌ಮಿನ್‌ಸ್ಟರ್ ಕಡೆಗೆ ಮೆರವಣಿಗೆ ಹೊರಟಿದ್ದರು. ಇದೇ ವೇಳೆ ರಾಬಿನ್ಸನ್ ಪ್ರತಿಭಟನೆಗೆ ಪ್ರತಿಯಾಗಿ ಸ್ಟ್ಯಾಂಡ್ ಅಪ್ ಟು ರೇಸಿಸಂ ಗುಂಪು ನೇತೃತ್ವದಲ್ಲಿ 5,000 ಮಂದಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ರ್ಯಾಲಿ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಸಂಘರ್ಷ ಕೂಡ ನಡೆದ ವರದಿಯಾಗಿದೆ. ರ್ಯಾಲಿಯ ಅಂಚಿನಲ್ಲಿ ಜನರು ಎಸೆದ ಬಾಟಲಿಗಳಿಂದ ಹಲವಾರು ಅಧಿಕಾರಿಗಳಿಗೆ ಥಳಿಸಿದ್ದಾರೆ. ಕರ್ತವ್ಯದಲ್ಲಿದ್ದ 1,000 ಕ್ಕೂ ಹೆಚ್ಚು ಅಧಿಕಾರಿಗಳಿಗೆ ಬೆಂಬಲವಾಗಿ ಹೆಲ್ಮೆಟ್‌ಗಳು ಮತ್ತು ಗಲಭೆ ಗುರಾಣಿಗಳೊಂದಿಗೆ ಬಲವರ್ಧನೆಗಳನ್ನು ನಿಯೋಜಿಸಲಾಗಿದೆ.
ಈ ಘಟನೆಯಲ್ಲಿ ಇಪ್ಪತ್ತಾರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡರು. ಹಿಂಸಾತ್ಮಕ ಅವ್ಯವಸ್ಥೆ, ಹಲ್ಲೆಗಳು ಮತ್ತು ಕ್ರಿಮಿನಲ್ ಹಾನಿ ಸೇರಿದಂತೆ ಕನಿಷ್ಠ 25 ಜನರನ್ನು ಬಂಧಿಸಲಾಗಿದೆ ಮತ್ತು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.