ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ: ಶಿವಮೊಗ್ಗದಲ್ಲಿ ರೈತ ನಾಯಕ ಹೆಚ್ಆರ್ ಬಸವರಾಜಪ್ಪ ಅವರಿಂದ ಚಾಲನೆ

ಶಿವಮೊಗ್ಗ : ಕೇಂದ್ರ ಸರ್ಕಾರದ ವಿವಾದಾತ್ಮಕ ಎಸ್‌ಐಆರ್ (SIR) ನೀತಿಯ ವಿರುದ್ಧ ರಾಜ್ಯಾದ್ಯಂತ ತೀವ್ರ ಜನಾಕ್ರೋಶ ಭುಗಿಲೆದ್ದಿದ್ದು, ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಮತ್ತು ‘ಎದ್ದೇಳು ಕರ್ನಾಟಕ’ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಜಾಥಾ ಚಾಲನೆ ಪಡೆದಿದೆ.

ಇಂದು ಬೆಳಿಗ್ಗೆ 8:30ಕ್ಕೆ ಶಿವಮೊಗ್ಗ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್. ಬಸವರಾಜಪ್ಪ ಅವರಿಂದ ಜಾಥಾವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಉದ್ಘಾಟನಾ ಭಾಷಣದಲ್ಲಿ ಬಸವರಾಜಪ್ಪ ಅವರು, ಎಸ್‌ಐಆರ್ ಮೂಲಕ ನಾಗರಿಕರ ಮತದಾನದ ಹಕ್ಕನ್ನು ಕಸಿದು, ಜೀವಂತ ಮತದಾರರ ಹೆಸರನ್ನೇ ಪಟ್ಟಿಯಿಂದ ಅಳಿಸಿ ಹಾಕುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು “ಅಕ್ಷಮ್ಯ ಅಪರಾಧ” ಎಂದು ಕಟುವಾಗಿ ಖಂಡಿಸಿದರು. ಇದು ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡುವ ಕುತಂತ್ರ ಎಂದು ಅವರು ಆರೋಪಿಸಿದರು.

ಹಿರಿಯ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಕೆ.ಪಿ. ಶ್ರೀಪಾಲ್ ಅವರು, ಸಾಹಿತಿ ದೇವನೂರು ಮಹಾದೇವ ಅವರ ಮಾತುಗಳನ್ನು ಸ್ಮರಿಸುತ್ತಾ, “ಮತದಾನದ ಹಕ್ಕು ಪ್ರಜಾಪ್ರಭುತ್ವದ ಮೂಲ ಆಧಾರ. ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಮೂಲಕ ಸರ್ಕಾರ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಕಿತ್ತೆಸೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾಗರಿಕರು BLA ಮೂಲಕ ತಮ್ಮ ಮತದಾರರ ಪಟ್ಟಿ ಪರಿಶೀಲಿಸಿ ತಿದ್ದುಪಡಿ ಮಾಡಿಸಿಕೊಳ್ಳಬೇಕೆಂದು ಅವರು ಜನರಿಗೆ ಮನವಿ ಮಾಡಿದರು.

ಒಟ್ಟು 5 ಮಾರ್ಗಗಳಲ್ಲಿ ಸಾಗಲಿರುವ ಈ ಜಾಥಾದಲ್ಲಿ, ಮಾರ್ಗ 3ರ ಅಡಿಯಲ್ಲಿ ಶಿವಮೊಗ್ಗದಿಂದ ಹೊರಟ ತಂಡವು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮತ್ತು ಭಟ್ಕಳ ಮೂಲಕ ಸಾಗಿ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ರ‍್ಯಾಲಿ ನಡೆಸಲಿದೆ. ಕೆ.ಎಲ್. ಅಶೋಕ್, ಸುರೇಶ್ ನಾಯಕ್ ಮತ್ತು ಮುನ್ನ ಕಡೂರು ಅವರು ಮಾರ್ಗ 3ರ ನೇತೃತ್ವ ವಹಿಸಿದ್ದಾರೆ.

ಎಲ್ಲಾ ಐದು ಮಾರ್ಗಗಳ ಜಾಥಾಗಳು ಜೂನ್ 20ರಂದು ಬೆಂಗಳೂರಿನಲ್ಲಿ ಒಂದುಗೂಡಿ ಬೃಹತ್ ಸಮಾರೋಪ ಸಮಾವೇಶ ನಡೆಸಲಿವೆ.

ಕಾರ್ಯಕ್ರಮದಲ್ಲಿ ದಲಿತ ಸಂಘರ್ಷ ಸಮಿತಿಯ ಬಸವಲಿಂಗಪ್ಪ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ, ಜಮಾತೆ ಇಸ್ಲಾಮಿ ಹಿಂದ್‌ನ ಅಬ್ದುಲ್ ವಾಹಬ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ನೂರಾರು ಸಾರ್ವಜನಿಕರು ಪಾಲ್ಗೊಂಡು ಕೇಂದ್ರ ಸರ್ಕಾರದ ಎಸ್‌ಐಆರ್ ನೀತಿಯ ವಿರುದ್ಧ ಗುಡುಗಿದರು.

Related Articles

ಇತ್ತೀಚಿನ ಸುದ್ದಿಗಳು