Thursday, July 3, 2025

ಸತ್ಯ | ನ್ಯಾಯ |ಧರ್ಮ

ಕರಾವಳಿಯಲ್ಲಿ ಕೋಮು ಹಿಂಸಾಚಾರ ತಡೆಗಟ್ಟಲು ಕಾನೂನು ಕ್ರಮಕ್ಕೆ ಆಗ್ರಹಿಸಿ ಡಿ.ಸಿ ಗೆ ಮನವಿ

ಹಾಸನ : ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರ ತಡೆಗಟ್ಟಲು ಮತ್ತು ದ್ವೇಷ ಹರಡುವ ದುಷ್ಟ ಶಕ್ತಿಗಳ ಕಡಿವಾಣಕ್ಕೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಾಗು ನಾಡಿನಲ್ಲಿ ಶಾಂತಿ-ಸಾಮರಸ್ಯ ಕಾಪಾಡುವಂತೆ ಹಾಸನ ಜಿಲ್ಲೆಯ ಜನರ ಪರವಾಗಿ ಒತ್ತಾಯಿಸಿ ಸೌಹಾರ್ದ ಕರ್ನಾಟಕ ದಲಿತ ಮತ್ತು ಜನಪರ ಸಂಘಟನೆಯಿಂದ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರಿಗೆ ಮನವಿ ಸಲ್ಲಿಸಿದರು.


ಇದೆ ವೇಳೆ ಸಿ.ಐ.ಟಿ.ಯು ಜಿಲ್ಲಾಧ್ಯಕ್ಷ ಧರ್ಮೇಶ್ ಮತ್ತು ಸಾಹಿತಿ ರೂಪ ಹಾಸನ್ ಮಾಧ್ಯಮದೊಂದಿಗೆ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ದ್ವೇಷದ ಕೊಲೆ – ಪ್ರತಿಕೊಲೆಗಳು ಮತ್ತೊಮ್ಮೆ ಭುಗಿಲೆದ್ದಿದೆ. ಒಂದು ತಿಂಗಳ ಅವಧಿಯಲ್ಲಿ ಇಂತಹ ನಾಲ್ಕು ಕೊಲೆಗಳು ನಡೆದಿರುವುದು ನಾಡನ್ನು ದಿಗ್ಭಮೆಗೊಳಿಸಿದೆ. ಆಟೋ ಚಾಲಕ ಮುಹಮ್ಮದ್ ಶರೀಫ್; ಮಾಬ್ ಲಿಂಚಿಂಗ್‌ಗೆ ಬಲಿಯಾದ ಅಶ್ರಫ್ ವಯನಾಡು, ರೌಡಿ ಶೀಟರ್ ಹಾಗೂ ಸಂಘಪರಿವಾರದ ಕಾರ್ಯಕರ್ತ ಸುಹಾಸ್ ಶೆಟ್ಟಿ; ಕೊಳತ್ತಮಜಲು ಅಬ್ದುಲ್ ರೆಹಮಾನ್ ಹೀಗೆ ಸಾಲುಸಾಲು ಕೊಲೆಗಳು ಕರಾವಳಿಯನ್ನು ಮಾತ್ರ ಅಲ್ಲದೆ ಇಡೀ ರಾಜ್ಯದಲ್ಲಿ ಭೀತಿಯನ್ನು ಉಂಟು ಮಾಡಿದೆ. ಈ ಅವಧಿಯಲ್ಲಿ ಬಲಿಯಾದ ಮುಸ್ಲಿಂ ಸಮುದಾಯದ ಮೂರೂ ಜನರು ಅಮಯಾಕರು ಹಾಗೂ ಧರ್ಮದ ಗುರುತಿನ ಕಾರಣಕ್ಕಾಗಿಯೆ ಕೊಲೆಗೀಡಾದರು ಎನ್ನುವುದು ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದ, ಮತೀಯ ದ್ವೇಷ, ಮುಸ್ಲಿಂ ದ್ವೇಷ ತೀರಾ ಉಲ್ಬಣವಾಸ್ಥೆ ತಲುಪಿರುವುದನ್ನು ಎತ್ತಿತೋರಿಸುತ್ತದೆ ಎಂದರು ಹತ್ತಾರು ಅಮಾಯಕ ಜನರು ಈ ರೀತಿಯ ಹತ್ಯೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಅವಧಿಯಲ್ಲಿ ಅದು ಮತ್ತಷ್ಟು ವೇಗ ಪಡೆದುಕೊಂಡಿರುವುದು ಇಡೀ ಕರಾವಳಿಯನ್ನು ಪ್ರಕ್ಷುಬ್ದ ಪ್ರದೇಶವನ್ನಾಗಿ ಪರಿವರ್ತಿಸಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ನಡೆಯುತ್ತಿರುವ ಈ ಕೊಲೆ, ಪ್ರತಿ ಕೊಲೆ ಹಾಗು ಅದರ ಸುತ್ತಲಿನ ಬೆಳವಣಿಗೆಗಳು ಅಲ್ಲಿನ ಜನ ಸಮುದಾಯಗಳನ್ನು ಧರ್ಮದ ಆಧಾರದಲ್ಲಿ ಪೂರ್ತಿಯಾಗಿ ವಿಭಜಿಸಿ ಹಾಕಿದೆ. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು, ಇದರ ಪರಿಣಾಮಗಳು ರಾಜ್ಯ ಇತರೆಡೆಗಳಲ್ಲೂ ನಿಧಾನವಾಗಿ ಗೋಚರಿಸತೊಡಗಿದೆ ಎಂದು ಎಚ್ಚರಿಸಿದರು. ಸರ್ಕಾರದ ಅಸಹನೀಯ ನಿರ್ಲಕ್ಷ ಇಂದು ಕೋಮುವಾದ ತನ್ನ ಅತಿಯನ್ನು ತಲುಪಿದೆ ಸರಣಿ ಸಾವುಗಳು ಸಂಭವಿಸಿವೆ ಎಂದು ಹೇಳಿದರು. ಕೋಮುವಾದಿ ಶಕ್ತಿಗಳಿಗೆ ಕಡಿವಾಣ ಹಾಕಲು ಮತ್ತು ಅಲ್ಲಿನ ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಸ್ಪಷ್ಟವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೀರ್ಮಾನಿಸಿ, ನಾವು ಈ ಮೂಲಕ ಹಾಸನ ಜಿಲ್ಲೆಯ ಜನರ ಪರವಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ ಎಂದರು.


ನಮ್ಮ ಪ್ರಮುಖ ಬೇಡಿಕೆಗಳೆಂದರೇ ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದದ ವಿಷಜ್ವಾಲೆ ತೀವ್ರವಾಗುತ್ತಿರುವುದರಿಂದ ತಕ್ಷಣವೇ ಇದನ್ನು ಮತೀಯವಾದ ಉಲ್ಭಣಗೊಂಡಿರುವ “ರೆಡ್ ಝೋನ್” ಎಂದು ಘೋಷಿಸಬೇಕು. ಇಲ್ಲಿ ಕೋಮು ಸೌಹಾರ್ದತೆ, ಪರಸ್ಪರ ಜನರಲ್ಲಿ ಸಾಮರಸ್ಯ ಮೂಡಿಸಲು ರಾಜ್ಯ ಸರ್ಕಾರವು ತಕ್ಷಣಕ್ಕೆ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ, ಯುದ್ಧೋಪಾದಿಯಲ್ಲಿ ಅದನ್ನು ಜಾರಿಗೊಳಿಸಬೇಕು. ಕುಡುಪು ಗುಂಪು ಹತ್ಯೆ ಪ್ರಕರಣವನ್ನು ವಿಶೇಷ ತನಿಖಾ ತಂಡದ ಮೂಲಕ ಹೊಸ ಎಫ್‌ಐಆರ್ ದಾಖಲಿಸಿ ಮರು ತನಿಖೆ ನಡೆಸಬೇಕು. ಕುಡುಪು ಮಾಬ್ ಲಿಂಚಿಂಗ್ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ, ದ್ವೇಷ ಭಾಷಣಗಳು, ಮತೀಯ ದ್ವೇಷದ ಕೊಲೆ, ಪ್ರತಿಕೊಲೆಗಳನ್ನು ತಡೆಯಲು ಯಾವ ಯತ್ನವನ್ನೂ ಮಾಡದ ಆರೋಪ ಹೊತ್ತಿರುವ ಅಂದಿನ ಪೊಲೀಸ್ ಕಮೀಷನರ್ ಅನುಮಪ್ ಅಗರ್ವಾಲ್ ಅವರನ್ನು ತನಿಖೆಗೆ ಒಳಪಡಿಸಬೇಕು. ಈ ಗುಂಪು ಹತ್ಯೆ, ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ತಕ್ಷಣವೆ ಸಮರ್ಥ ವಿಶೇಷ ಅಭಿಯೋಜಕರನ್ನು ನೇಮಿಸಬೇಕು. ಈ ಅವಧಿಯಲ್ಲಿ ಮತೀಯ ದ್ವೇಷದಿಂದ ಹತ್ಯೆಗೀಡಾದ ಅಮಾಯಕರ ಕುಟುಂಬಗಳಿಗೆ ಪರಿಹಾರ ಧನ ಒದಗಿಸಿ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಕರಾವಳಿ ಜಿಲ್ಲೆಗಳಲ್ಲಿ ದ್ವೇಷ ಭಾಷಣ, ಪ್ರತೀಕಾರದ ಕರೆಗಳನ್ನು ನೀಡುವ ವ್ಯಕ್ತಿಗಳ ಮೇಲೆ ಸರ್ಕಾರ ಯಾವುದೇ ಮುಲಾಜಿಲ್ಲದೆ ನಿರ್ಧಾಕ್ಷಿಣ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು, ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಸುಲಭದಲ್ಲಿ ಜಾಮೀನು, ತಡೆಯಾಜ್ಞೆಗಳು ದೊರಕದಂತೆ ನೋಡಲು ಪ್ರತ್ಯೇಕವಾಗಿ ವಿಶೇಷ ಅಭಿಯೋಕರನ್ನು ನೇಮಿಸಬೇಕು. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಕೋಮುವಾದ ಪ್ರೇರಿತ ಕೊಲೆ, ಪ್ರತಿಕೊಲೆಗಳನ್ನು ‘ವಿಶೇಷ ತನಿಖಾ ತಂಡ’ದ (ಎಸ್.ಐ.ಟಿ) ಮೂಲಕ ಮರು ತನಿಖೆಗೆ ಒಳಪಡಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಶಕದಿಂದ ಸರಣಿ ಹತ್ಯೆಗಳು ತಡೆಯಿಲ್ಲದೆ ನಡೆಯುತ್ತಾ ಬಂದಿದೆ. ರಾಜಕೀಯ ಬೆಂಬಲಗಳಿಲ್ಲದೆ ಇದು ಅಸಾಧ್ಯದ ಸಂಗತಿ. ಈ ಕುರಿತಾದ ಸಂಚು, ಉದ್ದೇಶಗಳನ್ನು ಬಯಲಿಗೆ ತರುವುದು, ಸತ್ಯ ಸಂಗತಿಗಳನ್ನು ಬಯಲಿಗೆ ತರುವುದು ಅತಿ ಅಗತ್ಯ. ಅದಕ್ಕಾಗಿ ಮೂರು ದಶಕದ ಅವಧಿಯಲ್ಲಿ ನಡೆದಿರುವ ಇಂತಹ ಕೊಲೆ, ಹಿಂಸೆಗಳನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಲು ಆದೇಶ ಹೊರಡಿಸಬೇಕು ಎಂದರು.


ಈ ಕೋಮುವಾದದ ವಿಷಜ್ವಾಲೆ ದಕ್ಷಿಣ ಕನ್ನಡದಿಂದ ಪ್ರೇರಣೆ ಪಡೆದು ಇತರ ಜಿಲ್ಲೆಗಳಿಗೂ ಹಬ್ಬುವ ಸೂಚನೆಗಳು ತೀವ್ರವಾಗಿ ಕಾಣುತ್ತಿರುವುದರಿಂದ ತಕ್ಷಣವೇ ಇದನ್ನು ತಡೆಗಟ್ಟಲು ಪ್ರಯತ್ನಿಸಬೇಕು. ಕರ್ನಾಟಕದಲ್ಲಿ ಕೋಮು ದ್ವೇಷ ಹರಡದಂತೆ ಕಟ್ಟು ನಿಟ್ಟಿನ ಕಾನೂನು ರೂಪಿಸಿ ಜಾರಿಗೊಳಿಸಿ ತಡೆಗಟ್ಟಲು ಕಠಿಣ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು. ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ ವೆಂಕಟೇಶ್ ಮೂರ್ತಿ, ದಲಿತ ಹಿರಿಯ ಮುಖಂಡ ಎಚ್.ಕೆ. ಸಂದೇಶ್, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್. ನವೀನ್ ಕುಮಾರ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ದ.ಸಂ.ಸ ಮುಖಂಡ ರಾಜಶೇಖರ್ ಹುಲಿಕಲ್, ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯ್ ಕುಮಾರ್, ಸಾಹಿತಿ ಹರೀಶ್ ಕಟ್ಟೆಬೆಳಗುಲಿ, ಪತ್ರಕರ್ತ ತೌಫಿಕ್ ಅಹಮದ್, ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಷಿರ್ ಅಹಮದ್, ಅನ್ಸರ್ ಅಹಮದ್, ಎಸ್.ಎಫ್.ಐ. ಕಾರ್ಯದರ್ಶಿ ರಮೇಶ್ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page