Home ಇನ್ನಷ್ಟು ಕೋರ್ಟು - ಕಾನೂನು ಚುನಾವಣಾ ಬಾಂಡ್ ಅಕ್ರಮ : ರಾಜಕೀಯ ಪಕ್ಷಗಳಿಂದ ಹಣ ಮುಟ್ಟುಗೋಲು ಹಾಕಿಕೊಳ್ಳಲು ಸು.ಕೋರ್ಟ್ ಗೆ ಮನವಿ

ಚುನಾವಣಾ ಬಾಂಡ್ ಅಕ್ರಮ : ರಾಜಕೀಯ ಪಕ್ಷಗಳಿಂದ ಹಣ ಮುಟ್ಟುಗೋಲು ಹಾಕಿಕೊಳ್ಳಲು ಸು.ಕೋರ್ಟ್ ಗೆ ಮನವಿ

0

ಸುಪ್ರೀಂ ಕೋರ್ಟ್‌ ಕಳೆದ ಫೆಬ್ರವರಿಯಲ್ಲಿ ರದ್ದುಗೊಳಿಸಿದ್ದ 2018ರ ಚುನಾವಣಾ ಬಾಂಡ್‌ ಯೋಜನೆಯಡಿ ರಾಜಕೀಯ ಪಕ್ಷಗಳು ಸಂಗ್ರಹಿಸಿರುವ ಎಲ್ಲಾ ಹಣ ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಚುನಾವಣಾ ಬಾಂಡ್ ಮೂಲಕ ತಾವು ಪಡೆದ ಹಣಕ್ಕಾಗಿ ರಾಜಕೀಯ ಪಕ್ಷಗಳು ದಾನಿಗಳಿಗೆ ಮಾಡಿಕೊಟ್ಟ ಕಾನೂನುಬಾಹಿರ ಅನುಕೂಲಗಳ ಕುರಿತಂತೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಕೂಡ ಅರ್ಜಿದಾರರು ಕೋರಿದ್ದಾರೆ.

ಅರ್ಜಿಯ ಪ್ರಮುಖಾಂಶಗಳು
* ಎಲ್ಲಾ ಫಲಾನುಭವಿ ರಾಜಕೀಯ ಪಕ್ಷಗಳ , 2018-2019ರಿಂದ 2023-2024ರ ವರೆಗಿನ ಆದಾಯ ಮರುಪರಿಶೀಲಿಸಬೇಕು
* ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 13A ಅಡಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಮೊತ್ತಕ್ಕೆ ಸಂಬಂಧಿಸಿದಂತೆ ಪಕ್ಷಗಳು ಆದಾಯ ತೆರಿಗೆ ವಿನಾಯಿತಿ ಪಡೆಯಲು ಅನುಮತಿ ನೀಡಬಾರದು.
* ಕ್ರಿಮಿನಲ್ ಮೊಕದ್ದಮೆ ತಪ್ಪಿಸಲು ಅಥವಾ ಒಪ್ಪಂದ ಅಥವಾ ಇತರ ನೀತಿ ನಿರೂಪಣಾ ವಿಚಾರಗಳ ಮೂಲಕ ವಿತ್ತೀಯ ಲಾಭ ಪಡೆಯುವುದಕ್ಕಾಗಿ ಕಂಪೆನಿಗಳು ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಹಣ ಪಾವತಿಸಿರುವುದು ಚುನಾವಣಾ ಬಾಂಡ್‌ಗಳ ಖರೀದಿ ಮತ್ತು ಅದನ್ನು ನಗದೀಕರಿಸಿರುವ ವಿವರಗಳಿಂದ ತಿಳಿಯುತ್ತದೆ.
* ಕಾರ್ಪೊರೇಟ್ ಸಂಸ್ಥೆಗಳ ಕ್ರಿಮಿನಲ್ ಮೊಕದ್ದಮೆಯಲ್ಲಿ ರಾಜಿ ಮಾಡಿಕೊಳ್ಳುವ ಮೂಲಕ ಅಥವಾ ಸರ್ಕಾರಿ ಬೊಕ್ಕಸದ ಲೆಕ್ಕದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಸರ್ಕಾರದ ದೊಡ್ಡ ಮೊತ್ತವನ್ನು ನೀಡಿ ಅನಗತ್ಯ ಲಾಭ ಉಂಟು ಮಾಡುವ ಮೂಲಕ ಅವುಗಳಿಂದ ಹಣ ಗಿಟ್ಟಿಸಲು ಚುನಾವಣಾ ಬಾಂಡ್ ಅನ್ನು ಸಾಧನವಾಗಿ ಮತ್ತು ವಿಧಾನವಾಗಿ  ರಾಜಕೀಯ ಪಕ್ಷಗಳು ಬಳಸಿಕೊಂಡಿವೆ.

ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಫೆಬ್ರವರಿ 15ರಂದು ಚುನಾವಣಾ ಬಾಂಡ್‌ ಯೋಜನೆ ರದ್ದುಗೊಳಿಸಿದ್ದಲ್ಲದೆ 2019ರ ಏಪ್ರಿಲ್‌ 12ರಿಂದ 2024ರ ಫೆಬ್ರವರಿಯವರೆಗೆ ರಾಜಕೀಯ ಪಕ್ಷಗಳು ಸ್ವೀಕರಿಸಿರುವ ದೇಣಿಗೆಯ ಮಾಹಿತಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ನಿರ್ದೇಶಿಸಿತ್ತು. ಅಲ್ಲದೇ, ರಾಜಕೀಯ ಪಕ್ಷಗಳು ಪ್ರತಿ ಚುನಾವಣಾ ಬಾಂಡ್‌ ಅನ್ನು ನಗದು ಮಾಡಿಕೊಂಡಿರುವ ವಿವರವನ್ನು ಮಾರ್ಚ್‌ 6ರ ವೇಳೆಗೆ ಇಸಿಐಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.

ಪ್ರತಿ ಚುನಾವಣಾ ಬಾಂಡ್‌ ಖರೀದಿಸಿರುವ ವಿವರ; ಅದನ್ನು ಖರೀದಿಸಿರುವವರು ಯಾರು; ಎಷ್ಟು ಮೊತ್ತದ ಚುನಾವಣಾ ಬಾಂಡ್‌; ಚುನಾವಣಾ ಬಾಂಡ್‌ ಅನ್ನು ರಾಜಕೀಯ ಪಕ್ಷಗಳು ಎಂದು ನಗದೀಕರಿಸಿಕೊಂಡಿವೆ ಎಂಬ ಮಾಹಿತಿಯನ್ನು ಎಸ್‌ಬಿಐ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಎಸ್‌ಬಿಐನಿಂದ ಮಾಹಿತಿ ಪಡೆದ ಒಂದು ವಾರದಲ್ಲಿ ಇಸಿಐ ತನ್ನ ಜಾಲತಾಣದಲ್ಲಿ ಅದನ್ನು ಪ್ರಕಟಿಸಬೇಕು ಎಂದು ಸೂಚಿಸಿತ್ತು.

ಅದರಂತೆ  ಬಾಂಡ್‌ಗಳನ್ನು ಖರೀದಿಸಿದ ರಾಜಕೀಯ ಪಕ್ಷಗಳ ವಿವರ ಸೇರಿದಂತೆ ಎಲ್ಲಾ ಮಾಹಿತಿಯನ್ನು ಎಸ್‌ಬಿಐ ಒದಗಿಸಿತ್ತು.

ಕೃಪೆ : ಬಾರ್ ಅಂಡ್ ಬೆಂಚ್

You cannot copy content of this page

Exit mobile version