ನವದೆಹಲಿ: ಲೋಕಸಭೆ ಸ್ಪೀಕರ್ ಹುದ್ದೆಯಿಂದ ಓಂ ಬಿರ್ಲಾ ಅವರನ್ನು ಪದಚ್ಯುತಗೊಳಿಸಲು ವಿರೋಧ ಪಕ್ಷಗಳು ನೋಟಿಸ್ ನೀಡಿವೆ. ಈ ನೋಟಿಸ್‌ಗೆ 119 ಸಂಸದರು ಸಹಿ ಹಾಕಿದ್ದಾರೆ. ನೋಟಿಸ್ ಮಾನ್ಯವಾಗಬೇಕಾದರೆ ಕನಿಷ್ಠ 50 ಸಂಸದರ ಸಹಿ ಬೇಕು. ಭಾರತದ ಸಂವಿಧಾನದ 94ಸಿ ವಿಧಿಯಡಿ ನೋಟಿಸ್ ಸಲ್ಲಿಸಲಾಗಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೋಗೊಯ್ ತಿಳಿಸಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?
ಲೋಕಸಭೆಯ ಕಲಾಪಗಳನ್ನು ನಡೆಸುವಾಗ ಪಕ್ಷಪಾತ ತೋರಿಸುತ್ತಿದ್ದಾರೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ವಿರೋಧ ಪಕ್ಷದ ನಾಯಕರಿಗೆ ಹಲವು ಬಾರಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ಕೆಲವು ನಿದರ್ಶನಗಳನ್ನು ಉಲ್ಲೇಖಿಸಲಾಗಿದೆ.
- 2025ರ ಫೆಬ್ರುವರಿ 2ರಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಕುರಿತಾದ ಭಾಷಣವನ್ನು ಪೂರ್ಣಗೊಳಿಸಲು ಅನುಮತಿ ನೀಡಲಿಲ್ಲ. ಇದು ಕೇವಲ ಒಂದು ಘಟನೆಯಲ್ಲ. ಲೋಕಸಭೆಯ ವಿರೋಧ ಪಕ್ಷದ ನಾಯಕರಿಗೆ ಬಹುತೇಕವಾಗಿ ಮಾತನಾಡಲು ಅವಕಾಶ ನೀಡಲಾಗುವುದಿಲ್ಲ.
- 2025 ಫೆ. 3ರಂದು ವಿರೋಧ ಪಕ್ಷದ 8 ಸದಸ್ಯರನ್ನು ಬಜೆಟ್ ಅಧಿವೇಶನದ ಪೂರ್ಣ ಅವಧಿಗೆ ಸ್ವೇಚ್ಛಾನುಸಾರ ಅಮಾನತು ಮಾಡಲಾಗಿದೆ. ಅವರ ಹಕ್ಕನ್ನು ಪ್ರತಿಪಾದಿಸಿದ್ದಕ್ಕೆ ಈ ದಂಡನೆ ವಿಧಿಸಲಾಗಿದೆ.
- 2025ರ ಫೆ. 4ರಂದು ಭಾರತೀಯ ಜನತಾ ಪಕ್ಷದ ಸದಸ್ಯರೊಬ್ಬರು ಇಬ್ಬರು ಮಾಜಿ ಪ್ರಧಾನಿಗಳ ಬಗ್ಗೆ ಆಕ್ಷೇಪಾರ್ಹ ಹಾಗೂ ವೈಯಕ್ತಿಕ ದಾಳಿ ನಡೆಸಿದ್ದರು. ಸ್ಥಾಪಿತ ಸಂಪ್ರದಾಯಗಳು ಮತ್ತು ಶಿಷ್ಟಾಚಾರ ನಿರ್ಲಕ್ಷಿಸಿದ್ದಕ್ಕಾಗಿ ಒಮ್ಮೆಯೂ ಎಚ್ಚರಿಕೆಯೂ ನೀಡಲಿಲ್ಲ. ನಮ್ಮ ಮನವಿಯ ಹೊರತಾಗಿಯೂ ಪದೇ ಪದೇ ತಪ್ಪೆಸಗುತ್ತಿರುವ ಆ ಸದಸ್ಯರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
