Home ರಾಜಕೀಯ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿ: ಅಸ್ಸಾಂ ರಾಜ್ಯದ ಹಿರಿಯ ಉಸ್ತುವಾರಿಯಾಗಿ ನೇಮಕ

ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿ: ಅಸ್ಸಾಂ ರಾಜ್ಯದ ಹಿರಿಯ ಉಸ್ತುವಾರಿಯಾಗಿ ನೇಮಕ

0

ಬೆಂಗಳೂರು: 2026ರಲ್ಲಿ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷ ಭರ್ಜರಿ ತಯಾರಿ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ವಿವಿಧ ರಾಜ್ಯಗಳಿಗೆ ಎಐಸಿಸಿ ಹಿರಿಯ ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಪಟ್ಟಿಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮುಖ ಜವಾಬ್ದಾರಿ ವಹಿಸಲಾಗಿದೆ. ಮುಖ್ಯಮಂತ್ರಿ ಆಗುವ ಉತ್ಸಾಹದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಅಸ್ಸಾಂ ರಾಜ್ಯದ ಎಐಸಿಸಿ ಹಿರಿಯ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ. ಇದೇ ವೇಳೆ ಕರ್ನಾಟಕದ ಸಚಿವ ಕೆ.ಜೆ.ಜಾರ್ಜ್ ಅವರಿಗೂ ಮತ್ತೊಂದು ರಾಜ್ಯದ ಉಸ್ತುವಾರಿ ನೀಡಲಾಗಿದೆ.

ಅಸ್ಸಾಂ ಮತ್ತು ಕೇರಳಕ್ಕೆ ಕರ್ನಾಟಕ ನಾಯಕರ ಜವಾಬ್ದಾರಿ
ಎಐಸಿಸಿ ಪ್ರಕಟಿಸಿರುವ ಪಟ್ಟಿಯಂತೆ, ಅಸ್ಸಾಂ ರಾಜ್ಯಕ್ಕೆ ಭೂಪೇಶ್ ಬಘೇಲ್, ಡಿ.ಕೆ.ಶಿವಕುಮಾರ್ ಮತ್ತು ಬಂಧು ಟರ್ಕಿ ಅವರನ್ನು ಹಿರಿಯ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಈ ವರ್ಷವೇ ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ.

ಇನ್ನು ಕೇರಳ ರಾಜ್ಯದ ಉಸ್ತುವಾರಿಗಳಾಗಿ ಸಚಿನ್ ಪೈಲೆಟ್, ಕೆ.ಜೆ.ಜಾರ್ಜ್, ಇಮ್ರಾನ್ ಪ್ರತಾಪ್ ಗಡಿ ಮತ್ತು ಕನ್ನಯ್ಯ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಐದು ರಾಜ್ಯಗಳ ಪೈಕಿ ಕರ್ನಾಟಕದಿಂದ ಇಬ್ಬರು ನಾಯಕರಿಗೆ ಜವಾಬ್ದಾರಿ ನೀಡಿರುವುದು ಪಕ್ಷದೊಳಗೆ ಮಹತ್ವ ಪಡೆದುಕೊಂಡಿದೆ.

ಕೇರಳದಲ್ಲಿ ಯುಡಿಎಫ್‌ಗೆ ಅವಕಾಶದ ನಿರೀಕ್ಷೆ
ಕೇರಳದಲ್ಲಿ ಸತತವಾಗಿ ಎರಡು ಬಾರಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರ ಅಧಿಕಾರದಲ್ಲಿದ್ದು, ಈ ಬಾರಿ ಆಡಳಿತ ವಿರೋಧಿ ಅಲೆ ಇದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಅಧಿಕಾರ ಪಡೆಯುವ ವಿಶ್ವಾಸದಲ್ಲಿದೆ.

ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯುಡಿಎಫ್‌ ಉತ್ತಮ ಪ್ರದರ್ಶನ ನೀಡಿದ್ದು, ಇದರ ಬೆನ್ನಲ್ಲೇ ವಿಧಾನಸಭೆ ಚುನಾವಣೆಗೆ ಬಲಿಷ್ಠ ತಂತ್ರ ರೂಪಿಸಲು ಎಐಸಿಸಿ ವೀಕ್ಷಕರನ್ನು ನೇಮಕ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆ.ಜೆ.ಜಾರ್ಜ್ ಅವರನ್ನು ಕರ್ನಾಟಕದಿಂದ ಕೇರಳಕ್ಕೆ ವೀಕ್ಷಕರಾಗಿ ಕಳುಹಿಸಲಾಗಿದೆ.

ಅಸ್ಸಾಂ: ಕಾಂಗ್ರೆಸ್‌ಗೆ ಈಶಾನ್ಯದಲ್ಲಿ ಸವಾಲು
ಅಸ್ಸಾಂ ರಾಜ್ಯದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ 126 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. 2021ರ ಚುನಾವಣೆಯಲ್ಲಿ ಬಿಜೆಪಿ 60, ಕಾಂಗ್ರೆಸ್ 29, ಎಐಯುಡಿಎಫ್ 16, ಎಜಿಪಿ 9, ಯುಪಿಪಿಎಲ್ 6 ಸ್ಥಾನಗಳನ್ನು ಗೆದ್ದಿದ್ದವು.

ಈ ಬಾರಿ ಅಸ್ಸಾಂನಲ್ಲಿ ಅಧಿಕಾರ ಹಿಡಿದು ಈಶಾನ್ಯ ರಾಜ್ಯಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಪಕ್ಷ ತಂತ್ರ ರೂಪಿಸುತ್ತಿದ್ದು, ಅದರ ಭಾಗವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಪ್ರಮುಖ ಜವಾಬ್ದಾರಿ ನೀಡಲಾಗಿದೆ.

You cannot copy content of this page

Exit mobile version