Monday, June 17, 2024

ಸತ್ಯ | ನ್ಯಾಯ |ಧರ್ಮ

ದೆಹಲಿ ಲಿಕ್ಕರ್ ಪಾಲಿಸಿ ಪ್ರಕರಣದಲ್ಲಿ ಬಂಧಿತನಾದವನಿಂದ ಬಿಜೆಪಿಗೆ 5 ಕೋಟಿ

ಬಿಜೆಪಿಯ ಚುನಾವಣಾ ಬಾಂಡ್‌ ಭ್ರಷ್ಟಾಚಾರ – 1

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮಾರ್ಚ್ 21, ಗುರುವಾರ ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿರುವ ಹೈದರಾಬಾದ್ ಮೂಲದ ಉದ್ಯಮಿ ಪಿ. ಶರತ್ ಚಂದ್ರ ರೆಡ್ಡಿ ಎಂಬಾತನ ಕಂಪನಿ ಅರಬಿಂದೋ ಫಾರ್ಮಾ ಲಿಮಿಟೆಡ್  5 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಬಿಜೆಪಿಗೆ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ. 2022 ರ ನವೆಂಬರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯವನ್ನು ಬಳಸಿ ಈತನನ್ನು ಬಂಧಿಸಿತ್ತು, ಬಂಧನವಾಗಿ ಕೇವಲ ಐದು ದಿನಗಳ ನಂತರ ಈತ ಬಿಜೆಪಿಗೆ ದೇಣಿಗೆ ನೀಡಿದ್ದಾನೆ.

ಚುನಾವಣಾ ಆಯೋಗವು ಪ್ರತಿ ಚುನಾವಣಾ ಬಾಂಡ್‌ಗೆ ಸಂಬಂಧಿಸಿದ ವಿಶಿಷ್ಟ ಸಂಖ್ಯೆಯನ್ನು ಗುರುವಾರ ಬಿಡುಗಡೆ ಮಾಡಿದ ಈ ಚುನಾವಣಾ ಬಾಂಡ್‌ ಹಗರಣದ ಒಂದು ಕಥೆ ಬೆಳಕಿಗೆ ಬಂದಿದೆ. ಅರಬಿಂದೋ ಫಾರ್ಮಾ ಲಿಮಿಟೆಡ್ ಎಂಬ ಈ ಕಂಪನಿಯನ್ನು ಶರತ್ ರೆಡ್ಡಿಯ ತಂದೆ ಪಿವಿ ರಾಮ್ ಪ್ರಸಾದ್ ರೆಡ್ಡಿ ಸ್ಥಾಪಿಸಿದ್ದು, ಶರತ್ ರೆಡ್ಡಿ ಅದರ ನಿರ್ದೇಶಕರಲ್ಲಿ ಓರ್ವ.

ಶರತ್ ರೆಡ್ಡಿಯ ಬಂಧನದ ನಂತರ ಈತ ದೆಹಲಿ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದಾಗ ಈತನನ್ನು ಬಂಧಿಸಿದ ಜಾರಿ ನಿರ್ದೇಶನಾಲಯ ಈ ಜಾಮೀನಿಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಮೇ 2023 ರಂದು ನ್ಯಾಯಾಲಯವು ವೈದ್ಯಕೀಯ ಕಾರಣಕ್ಕೆ  ಜಾಮೀನು ನೀಡಿತ್ತು.

ಜೂನ್ 2023 ರಲ್ಲಿ, ಶರತ್ ರೆಡ್ಡಿ ಪ್ರಕರಣದಲ್ಲಿ ಅಪ್ರೂವರ್‌ ಆಗಿ, ಎರಡು ತಿಂಗಳ ನಂತರ ಈತನ ಫಾರ್ಮಾ ಕಂಪನಿಯು ಬಿಜೆಪಿಗೆ ಮತ್ತೆ 25 ಕೋಟಿ ರುಪಾಯಿ ನೀಡಿದ್ದ.

ಶರತ್ ರೆಡ್ಡಿ ಬಂಧನಕ್ಕೂ ಮುನ್ನ ಇದೇ ಕಂಪನಿ ಭಾರತ್ ರಾಷ್ಟ್ರ ಸಮಿತಿ ಮತ್ತು ತೆಲುಗು ದೇಶಂ ಪಕ್ಷಕ್ಕೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆಯನ್ನು ನೀಡಿತ್ತು.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಭಾರತ್ ರಾಷ್ಟ್ರ ಸಮಿತಿ ಎಂಎಲ್‌ಸಿ ಕೆ ಕವಿತಾ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ಈ ಹಿಂದೆ ಲಿಕ್ಕರ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ದೇಶದಲ್ಲಿರುವ ಎಲ್ಲಾ ಭಿನ್ನ ದನಿಗಳನ್ನು ಮತ್ತು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.

Related Articles

ಇತ್ತೀಚಿನ ಸುದ್ದಿಗಳು