Home ದೇಶ ಸಂಕಷ್ಟದಲ್ಲಿ ಆರಾವಳಿ ಸಾಲು!: ವಿಶ್ವದ ಅತ್ಯಂತ ಪುರಾತನ ಪರ್ವತಗಳಲ್ಲಿ ಗಣಿಗಾರಿಕೆಗೆ ಮುಕ್ತ ಅವಕಾಶ ನೀಡಲು ಮುಂದಾದ...

ಸಂಕಷ್ಟದಲ್ಲಿ ಆರಾವಳಿ ಸಾಲು!: ವಿಶ್ವದ ಅತ್ಯಂತ ಪುರಾತನ ಪರ್ವತಗಳಲ್ಲಿ ಗಣಿಗಾರಿಕೆಗೆ ಮುಕ್ತ ಅವಕಾಶ ನೀಡಲು ಮುಂದಾದ ಕೇಂದ್ರ!

0

ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರದಿಂದಾಗಿ ಪರ್ವತಗಳಿಗೆ ದೊಡ್ಡ ಅಪಾಯ ಎದುರಾಗಿದೆ. 100 ಮೀಟರ್ ನಿಯಮದಿಂದಾಗಿ ಗಣಿಗಾರಿಕೆಗೆ ಮುಕ್ತ ಅವಕಾಶ! ಇದರ ಪರಿಣಾಮವಾಗಿ 90% ಪರ್ವತಗಳು ನಾಶವಾಗುತ್ತವೆ ಎನ್ನುವುದು ತಜ್ಞರ ಆತಂಕ. ಇದು ಸಂಭವಿಸಿದರೆ, ದೆಹಲಿ ಸೇರಿದಂತೆ ಹಲವು ನಗರಗಳಿಗೆ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆರಾವಳಿ ಪರ್ವತ ಶ್ರೇಣಿ (Aravalli Range) ವಿಶ್ವದ ಅತ್ಯಂತ ಪುರಾತನ ಪರ್ವತ ಶ್ರೇಣಿಗಳ ಪೈಕಿ ಒಂದಾಗಿದ್ದು, ಪ್ರಸ್ತುತ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ದೇಶದ ವಾಯುವ್ಯ ಭಾಗದಲ್ಲಿರುವ ಈ ಪರ್ವತ ಶ್ರೇಣಿಗಳಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಗಣಿಗಾರಿಕೆ (Mining) ಮತ್ತು ಮಾನವ ಚಟುವಟಿಕೆಗಳು ಈಗಾಗಲೇ ತೀವ್ರ ಕಳವಳಕ್ಕೆ ಕಾರಣವಾಗಿವೆ. ಈ ಅಕ್ರಮಗಳನ್ನು ತಡೆಯಬೇಕಾದ ಕೇಂದ್ರ ಸರ್ಕಾರವು, ಅದರ ಬದಲು ಆರಾವಳಿ ಪರ್ವತಗಳ ಭೌಗೋಳಿಕ ಸ್ವರೂಪವನ್ನೇ ಬದಲಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಕೇಂದ್ರದ ಈ ನಿರ್ಧಾರದ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೇರಿದಂತೆ ವಿಪಕ್ಷ ನಾಯಕರು ಮತ್ತು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ, ಆರಾವಳಿ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

ಕೇಂದ್ರ ಸರ್ಕಾರ ಕೈಗೊಂಡ ಕ್ರಮವೇನು?

ಆರಾವಳಿ ಪರ್ವತಗಳು ಗುಜರಾತ್‌ನಿಂದ ಪ್ರಾರಂಭವಾಗಿ ರಾಜಸ್ಥಾನ, ಹರಿಯಾಣ, ದೆಹಲಿ-ಎನ್‌ಸಿಆರ್ (Delhi-NCR) ತನಕ ವಿಸ್ತರಿಸಿವೆ. ಈ ಪರ್ವತಗಳು ಕಾಡುಗಳು, ನೀರಿನ ಮೂಲಗಳು, ವನ್ಯಜೀವಿಗಳು, ಪ್ರಸಿದ್ಧ ಕೋಟೆಗಳು, ದೇವಾಲಯಗಳೊಂದಿಗೆ ಸತು, ತಾಮ್ರ, ಕ್ವಾರ್ಟ್ಜ್, ಸೀಸ, ಅಮೃತಶಿಲೆ ಮತ್ತು ರಾಕ್‌ಸಲ್ಫೇಟ್‌ನಂತಹ ಅಪರೂಪದ ಖನಿಜಗಳಿಗೆ ಹೆಸರುವಾಸಿಯಾಗಿದೆ. ಇದರಿಂದಾಗಿ ಕಳೆದ ಹಲವು ವರ್ಷಗಳಿಂದ ಇಲ್ಲಿ ಗಣಿಗಾರಿಕೆ ಮಾಫಿಯಾ ಹೆಚ್ಚುತ್ತಿದೆ.

ಆರಾವಳಿ ಪರ್ವತಗಳನ್ನು ಕೊಳ್ಳೆ ಹೊಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅನೇಕ ಮನವಿಗಳು ಬಂದರೂ, ಅಧಿಕಾರ ಯಂತ್ರವರ್ಗವು ಗಮನ ಹರಿಸಲಿಲ್ಲ. ಈ ಹಿನ್ನೆಲೆಯಲ್ಲಿ, ಆರಾವಳಿ ವ್ಯಾಪ್ತಿಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕೇಂದ್ರದ ಅಧೀನದಲ್ಲಿರುವ ಪರಿಸರ ಸಚಿವಾಲಯವು ಇತ್ತೀಚೆಗೆ ಸುಪ್ರೀಂ ಕೋರ್ಟ್‌ಗೆ ಒಂದು ವರದಿಯನ್ನು ಸಲ್ಲಿಸಿದೆ. 100 ಮೀಟರ್‌ಗಿಂತ ಕಡಿಮೆ ಎತ್ತರವಿರುವ ಪರ್ವತಗಳನ್ನು ಆರಾವಳಿ ವ್ಯಾಪ್ತಿಯಿಂದ ಹೊರಗಿಡಬೇಕು ಮತ್ತು ಗಣಿಗಾರಿಕೆಗೆ ಅವಕಾಶ ನೀಡಬೇಕು ಎಂದು ಕೇಂದ್ರವು ವರದಿಯಲ್ಲಿ ಉಲ್ಲೇಖಿಸಿದೆ. ಇದಕ್ಕೆ ಅನುಮೋದನೆ ನೀಡಿದ ಸುಪ್ರೀಂ ಕೋರ್ಟ್, ವೈಜ್ಞಾನಿಕ ಮ್ಯಾಪಿಂಗ್ ಪೂರ್ಣಗೊಳ್ಳುವವರೆಗೆ ಹೊಸ ಗುತ್ತಿಗೆಗಳನ್ನು ನೀಡಬಾರದು ಎಂದು ಹೇಳಿದೆ.

ಪ್ರಮುಖ ಆತಂಕಗಳು ಮತ್ತು ಆಕ್ಷೇಪಣೆಗಳು

ಫಾರೆಸ್ಟ್ ಸರ್ವೆ ಆಫ್ ಇಂಡಿಯಾದ (FSI) ಅಧ್ಯಯನದ ಪ್ರಕಾರ, ಆರಾವಳಿಯಲ್ಲಿರುವ ಒಟ್ಟು 12,081 ಪರ್ವತಗಳಲ್ಲಿ ಕೇವಲ 1,048 ಪರ್ವತಗಳು ಮಾತ್ರ 100 ಮೀಟರ್‌ಗಿಂತ ಹೆಚ್ಚು ಎತ್ತರದಲ್ಲಿವೆ. ಕೇಂದ್ರದ ಇತ್ತೀಚಿನ ಪ್ರಸ್ತಾವನೆಯ ಪ್ರಕಾರ, ಆರಾವಳಿ ಪರ್ವತಗಳ ಶೇ 90ರಷ್ಟು ಭಾಗವು ಇನ್ನು ಮುಂದೆ ಗಣಿಗಾರಿಕೆಯ ವ್ಯಾಪ್ತಿಗೆ ಬರಲಿದೆ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. 1975 ರಿಂದ 2019 ರವರೆಗೆ ನಡೆದ ಅಕ್ರಮ ಗಣಿಗಾರಿಕೆಯಿಂದ ಈಗಾಗಲೇ ಶೇ 8ರಷ್ಟು ಆರಾವಳಿ ಪರ್ವತಗಳು ಕಣ್ಮರೆಯಾಗಿವೆ. ಈಗಿನ ಈ ಹೊಸ ಪ್ರಸ್ತಾವನೆಗಳಿಂದಾಗಿ ಆರಾವಳಿಯ ಅಸ್ತಿತ್ವವೇ ಪ್ರಶ್ನಾರ್ಹವಾಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಆರಾವಳಿಗೆ ಅಪಾಯ ಎದುರಾದರೆ, ದೆಹಲಿಯಂತಹ ನಗರಗಳಿಗೆ ವಿಪತ್ತುಗಳು ಹೊಂಚು ಹಾಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಆರಾವಳಿ ಏಕೆ ಮುಖ್ಯ?

  • ರಕ್ಷಣಾತ್ಮಕ ಗೋಡೆ: ಥಾರ್ ಮರುಭೂಮಿಯಿಂದ ಬರುವ ಮರಳಿನ ಬಿರುಗಾಳಿಗಳು ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶಗಳಿಗೆ ಹರಡದಂತೆ ಆರಾವಳಿ ಪರ್ವತಗಳು ರಕ್ಷಣಾ ಗೋಡೆಯಂತೆ ತಡೆಯುತ್ತವೆ.
  • ಹಸಿರು ಶ್ವಾಸಕೋಶಗಳು: ದೆಹಲಿ-ಎನ್‌ಸಿಆರ್‌ನಂತಹ ಹೆಚ್ಚು ಜನಸಂಖ್ಯೆ ಇರುವ ನಗರಗಳಿಗೆ ಮರಳಿನ ಕಣಗಳಿಲ್ಲದ ಶುದ್ಧ ಗಾಳಿಯನ್ನು ಒದಗಿಸುವ ಹಸಿರು ಶ್ವಾಸಕೋಶಗಳು (Green Lungs) ಎಂದು ಆರಾವಳಿಯನ್ನು ಕರೆಯಲಾಗುತ್ತದೆ.
  • ಜಲ ನಿರ್ವಹಣೆ: ಆರಾವಳಿ ಪರ್ವತಗಳ ಕೆಳಗಿರುವ ದಟ್ಟವಾದ ಕಾಡುಗಳು ಮತ್ತು ಬಂಡೆಗಳು ಅಂತರ್ಜಲವನ್ನು ಹೆಚ್ಚಿಸುವುದರ ಜೊತೆಗೆ ಪ್ರವಾಹಗಳನ್ನು ತಡೆಯುತ್ತವೆ. ಇದರಿಂದಾಗಿ ಗುರುಗ್ರಾಮ್, ಫರಿದಾಬಾದ್, ದಕ್ಷಿಣ ದೆಹಲಿ, ಅಲ್ವಾರ್ ಮತ್ತು ಜೈಪುರದಲ್ಲಿ ಇಲ್ಲಿಯವರೆಗೆ ದೊಡ್ಡ ಪ್ರಮಾಣದ ಪ್ರವಾಹ ಅಥವಾ ನೀರಿನ ಸಮಸ್ಯೆ ಎದುರಾಗಿಲ್ಲ. ಆರಾವಳಿ ನಾಶವಾದರೆ, ಮುಂದೆ ಈ ತೊಂದರೆಗಳು ಎದುರಾಗಲಿವೆ.
  • ಜೀವ ವೈವಿಧ್ಯ: ಆರಾವಳಿ ಪರ್ವತಗಳಲ್ಲಿ ಅಪರೂಪದ ಜಾತಿಯ ಚಿರತೆಗಳು, ಹೈನಾಗಳು, ನೀಲ್ಗೈ, ತೋಳಗಳು, ನವಿಲುಗಳು ಮತ್ತು ನೂರಾರು ಪಕ್ಷಿ ಹಾಗೂ ವೃಕ್ಷ ಜಾತಿಗಳು ನೆಲೆಸಿವೆ. ಕೇಂದ್ರದ ಇತ್ತೀಚಿನ ಕ್ರಮಗಳು ಈ ಜೀವ ವೈವಿಧ್ಯಕ್ಕೆ ಧಕ್ಕೆಯನ್ನುಂಟುಮಾಡಬಹುದು.

You cannot copy content of this page

Exit mobile version