Home ದೇಶ ಸತತ ನಾಲ್ಕನೇ ದಿನವೂ 400ಕ್ಕೂ ಹೆಚ್ಚು ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರಿಗೆ ತಪ್ಪದ ಪರದಾಟ

ಸತತ ನಾಲ್ಕನೇ ದಿನವೂ 400ಕ್ಕೂ ಹೆಚ್ಚು ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರಿಗೆ ತಪ್ಪದ ಪರದಾಟ

0

ನಿರ್ವಹಣಾ ಲೋಪಗಳಿಂದಾಗಿ ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೊ (IndiGo) ವಿಮಾನ ಸೇವೆಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿರುವುದು ತಿಳಿದಿರುವ ವಿಷಯ. ಕಳೆದ ನಾಲ್ಕು ದಿನಗಳಿಂದ ಸಂಸ್ಥೆಯು ನೂರಾರು ವಿಮಾನಗಳನ್ನು ರದ್ದುಗೊಳಿಸಿದೆ. ಗುರುವಾರ ಒಂದೇ ದಿನ ಇಂಡಿಗೊ ಇತಿಹಾಸದಲ್ಲಿ ಹಿಂದೆಂದೂ ಇಲ್ಲದಂತೆ ದೇಶಾದ್ಯಂತ 550 ವಿಮಾನಗಳು ರದ್ದಾಗಿದ್ದವು.

ಇನ್ನು ಸತತ ನಾಲ್ಕನೇ ದಿನವಾದ ಶುಕ್ರವಾರವೂ ಪರಿಸ್ಥಿತಿ ಮುಂದುವರಿದಿದೆ. ಸುಮಾರು 400 ವಿಮಾನಗಳು ರದ್ದಾಗಿವೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಕಾಯುವುದು ಅನಿವಾರ್ಯವಾಗಿದ್ದು, ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ದೆಹಲಿ, ಹೈದರಾಬಾದ್, ಬೆಂಗಳೂರು ಸೇರಿದಂತೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಇಂಡಿಗೊ ವಿಮಾನಗಳು ರದ್ದಾಗಿವೆ. ಶುಕ್ರವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸುಮಾರು 225 ವಿಮಾನಗಳು ರದ್ದಾಗಿವೆ ಎಂದು ದೆಹಲಿ ವಿಮಾನ ನಿಲ್ದಾಣವು ಎಕ್ಸ್‌ನಲ್ಲಿ (X) ಘೋಷಿಸಿದೆ.

ಈ ಕುರಿತು ಪ್ರಮುಖ ಸಲಹಾ ಸೂಚನೆಯನ್ನು (Advisory) ಹೊರಡಿಸಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣಗಳಿಗೆ ಹೊರಡುವ ಮೊದಲು ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವಂತೆ ಸೂಚಿಸಿದೆ.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ 100ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಬೆಂಗಳೂರಿಗೆ ಬರಬೇಕಿದ್ದ 52 ವಿಮಾನಗಳು ಮತ್ತು ಇಲ್ಲಿಂದ ಹೊರಡಬೇಕಿದ್ದ 50 ವಿಮಾನಗಳು ರದ್ದಾಗಿವೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ 104 ವಿಮಾನಗಳು ರದ್ದಾಗಿದ್ದು, ಅದರಲ್ಲಿ 53 ವಿಮಾನಗಳು ಮುಂಬೈನಿಂದ ಹೊರಡಬೇಕಾಗಿದ್ದು ಮತ್ತು 51 ವಿಮಾನಗಳು ಮುಂಬೈ ವಿಮಾನ ನಿಲ್ದಾಣಕ್ಕೆ ಬರಬೇಕಾಗಿದ್ದವು.

ಇನ್ನು ಹೈದರಾಬಾದ್‌ನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿಯೂ ಸುಮಾರು 100 ವಿಮಾನಗಳು ರದ್ದಾಗಿದ್ದು, ಒಟ್ಟು 92 ವಿಮಾನಗಳು ರದ್ದಾಗಿವೆ (43 ಆಗಮನ ಮತ್ತು 49 ನಿರ್ಗಮನ) ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ದೃಢಪಡಿಸಿದ್ದಾರೆ.

ವಿಮಾನ ರದ್ದತಿಯಿಂದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಚೆಕ್-ಇನ್ ಆದ ನಂತರ ರದ್ದತಿ ಮಾಹಿತಿ ನೀಡಿರುವುದಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಇದಲ್ಲದೆ ವಿಶಾಖಪಟ್ಟಣಂನಿಂದ 8 ಇಂಡಿಗೊ ವಿಮಾನ ಸೇವೆಗಳನ್ನು (ಹೈದರಾಬಾದ್, ಚೆನ್ನೈ, ಬೆಂಗಳೂರು, ಅಹಮದಾಬಾದ್‌ಗೆ ಹೊರಡಬೇಕಿದ್ದ ವಿಮಾನಗಳು) ರದ್ದುಗೊಳಿಸಲಾಗಿದೆ.

ಕಳೆದ ತಿಂಗಳು ಇಂಡಿಗೊಗೆ ಸೇರಿದ 1,232 ವಿಮಾನ ಸೇವೆಗಳು ರದ್ದಾಗಿದ್ದು, ಗಣನೀಯ ವಿಳಂಬವೂ ಉಂಟಾಗಿತ್ತು. ಪ್ರತಿದಿನ ಸುಮಾರು 2,300 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುವ ಇಂಡಿಗೊ, ಕಳೆದ ಎರಡು ದಿನಗಳಿಂದ ಉಂಟಾದ ತೀವ್ರ ಅಡೆತಡೆಗಳ ಬಗ್ಗೆ ಪ್ರತಿಕ್ರಿಯಿಸಿ, ಅನಿರೀಕ್ಷಿತ ಸಮಸ್ಯೆಗಳು ಎದುರಾಗಿವೆ ಎಂದು ಹೇಳಿದೆ.

ವಿವಿಧ ವಿಮಾನ ನಿಲ್ದಾಣಗಳಲ್ಲಿನ ಪಾರ್ಕಿಂಗ್ ಸ್ಥಳಗಳನ್ನು ಇಂಡಿಗೊ ವಿಮಾನಗಳು ಆಕ್ರಮಿಸಿಕೊಂಡಿದ್ದರಿಂದ ಇತರ ವಿಮಾನಯಾನ ಸಂಸ್ಥೆಗಳು ನಿರ್ವಹಿಸುವ ವಿಮಾನಗಳು ವಿಳಂಬವನ್ನು ಎದುರಿಸಬೇಕಾಯಿತು.

ಪೈಲಟ್‌ಗಳ ವಿಶ್ರಾಂತಿ ಮತ್ತು ಕರ್ತವ್ಯದ ನಿಯಮಗಳಿಂದ (FDTL) 2026ರ ಫೆಬ್ರವರಿ 10ರವರೆಗೆ ವಿನಾಯಿತಿ ನೀಡುವಂತೆ ಇಂಡಿಗೊ ಸರ್ಕಾರವನ್ನು ಕೋರಿದೆ. A320 ವಿಮಾನಗಳ ರಾತ್ರಿ ಕರ್ತವ್ಯದ ಸೇವೆಗಳಿಗೆ ಈ ವಿನಾಯಿತಿಯನ್ನು ನೀಡಬೇಕು ಎಂದು ಅದು ಕೋರಿದೆ.

ಹೊಸ ನಿಯಮಗಳ ಪ್ರಕಾರ ಸಿಬ್ಬಂದಿ ಅಗತ್ಯತೆಗಳನ್ನು ತಪ್ಪು ನಿರ್ಧಾರ ಮತ್ತು ಯೋಜನಾ ಲೋಪಗಳಿಂದಾಗಿ ಸರಿಯಾಗಿ ಅರ್ಥೈಸಿಕೊಳ್ಳಲಾಗಿಲ್ಲ. ಸಾಕಷ್ಟು ಸಿಬ್ಬಂದಿ ಲಭ್ಯರಿಲ್ಲ ಎಂದು ಸಂಸ್ಥೆ ತಿಳಿಸಿದೆ.

You cannot copy content of this page

Exit mobile version