Home ಅಂಕಣ ಅಂಬಾನಿ-ಅದಾನಿ ಗೋದಾಮು ಇಲ್ಲಿವೆ?

ಅಂಬಾನಿ-ಅದಾನಿ ಗೋದಾಮು ಇಲ್ಲಿವೆ?

0

“..ಇಡೀ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುವ ನಮ್ಮ ಕೇಂದ್ರ ಸರ್ಕಾರ, ಇಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗುವ ಬದಲು ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಮತ್ತು ಹಣಕಾಸಿನ ಕೊರತೆಯಾಗಲಿದೆ ಎಂಬ ಆತಂಕಕಾರಿ ಹೇಳಿಕೆಗಳನ್ನು ನೀಡುತ್ತಿದೆ..” ಸಂಘಟಕರಾದ ಅಭಿ ಒಕ್ಕಲಿಗ ಅವರ ಬರಹದಲ್ಲಿ

ಇಂಡಿಯಾದ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರು ಇತ್ತೀಚೆಗೆ ವಿಶ್ವಸಂಸ್ಥೆಯ ಮಹಾಸಭೆ ಮತ್ತು ನ್ಯೂಯಾರ್ಕ್‌ನ ‘ಏಷ್ಯಾ ಸೊಸೈಟಿ’ (Asia Society) ಕಾರ್ಯಕ್ರಮಗಳಲ್ಲಿ ಹೇಳಿಕೆ ಒಂದನ್ನು ನೀಡಿದ್ದಾರೆ.ವಿವರ ಇಂತಿದೆ, ಜಾಗತಿಕ ‘4F’ ಬಿಕ್ಕಟ್ಟು ಮತ್ತು ಮುಂಬರುವ ಆಹಾರದ ಕ್ಷಾಮ.

ಡಾ. ಜೈಶಂಕರ್ ಅವರು ಪ್ರಸ್ತುತ ಇಡೀ ಜಗತ್ತು, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಜಾಗತಿಕ ದಕ್ಷಿಣದ (Global South) ದೇಶಗಳು ತೀವ್ರವಾದ ‘4F ಬಿಕ್ಕಟ್ಟಿಗೆ’ (4F Crisis – Food, Fuel, Fertiliser, and Finance) ಸಿಲುಕುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಂದರೆ ಆಹಾರ, ಇಂಧನ, ರಸಗೊಬ್ಬರ ಕೊರತೆ ಮತ್ತು ಬೆಲೆ ಏರಿಕೆ ಏಕಕಾಲದಲ್ಲಿ ಜಗತ್ತನ್ನು ಕಾಡುತ್ತಿದೆ.

ಇಂದೆಂದು ಕಾಣದ ತೀವ್ರ ಬಿಸಿಲು, ಅಕಾಲಿಕ ವಾತಾವರಣದ ವೈಪರೀತ್ಯ ಇಡೀ ಜಗತ್ತನ್ನು ಆವರಿಸಿಕೊಳ್ಳುತ್ತಿದೆ. ಸಾಂಪ್ರದಾಯಿಕವಾಗಿ ಮಳೆಗಾಲ ಮತ್ತು ಚಳಿಯ ಅನುಭವ ನೀಡಬೇಕಾಗಿದ್ದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳು ಈಗ ಮರೀಚಿಕೆಯಾಗುತ್ತಿವೆ. ಜಾಗತಿಕ ಯುದ್ಧದ ಭೀತಿ ಹಾಗೂ ‘ಸೂಪರ್ ಎಲ್ ನಿನೋ’ (Super El Niño) ಪ್ರಭಾವದಿಂದಾಗಿ ದೇಶದಲ್ಲಿ ತೀವ್ರ ಬರಗಾಲದ ನೆರಳು ಆವರಿಸುತ್ತಿದೆ. ಇದು ಕೇವಲ ಪ್ರಕೃತಿಯ ಸಹಜ ಪ್ರಕ್ರಿಯೆಯಷ್ಟೇ ಅಲ್ಲ, ಮಾನವನ ಅತಿರೇಕಗಳ ಫಲವೂ ಹೌದು. ಆದರೆ, ಇಂತಹ ಗಂಭೀರ ಪರಿಸ್ಥಿತಿಯಲ್ಲಿ ದೇಶದ ಕಟ್ಟಕಡೆಯ ನಾಗರಿಕನನ್ನು ಕಾಪಾಡಬೇಕಾದ ಸರ್ಕಾರಗಳು ಮಾತ್ರ ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿರುವುದು ಇಂದಿನ ಬಹುದೊಡ್ಡ ದುರಂತ.

‘ಬನಿಯಾ ಮೈಂಡ್ಸೆಟ್’ ಮತ್ತು ಕೃತಕ ಅಭಾವ
ಇಡೀ ವಿಶ್ವದಲ್ಲೇ ಅತಿ ಹೆಚ್ಚು ತೆರಿಗೆ ವಸೂಲಿ ಮಾಡುವ ನಮ್ಮ ಕೇಂದ್ರ ಸರ್ಕಾರ, ಇಂತಹ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗುವ ಬದಲು ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಮತ್ತು ಹಣಕಾಸಿನ ಕೊರತೆಯಾಗಲಿದೆ ಎಂಬ ಆತಂಕಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಇಂತಹ ಬೇಜವಾಬ್ದಾರಿ ಹೇಳಿಕೆಗಳು ಪರೋಕ್ಷವಾಗಿ ಬಂಡವಾಳಶಾಹಿಗಳು ಮತ್ತು ಕಳಸಂತೆಕೋರರಿಗೆ ದಾರಿಕಲ್ಪಿಸಿಕೊಡುತ್ತಿವೆ.

ಸರ್ಕಾರದ ಇಂತಹ ಧೋರಣೆಯಿಂದಾಗಿ ಮಾರುಕಟ್ಟೆಯಲ್ಲಿ ಅಕ್ಕಿ, ರಾಗಿ, ತರಕಾರಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಇವತ್ತು ರಿಲಯನ್ಸ್ ಮಾರ್ಟ್, ಮೋರ್ ಮಾರ್ಟ್‌ನಂತಹ ಕಾರ್ಪೊರೇಟ್ ಸಂಸ್ಥೆಗಳ ಗೋದಾಮುಗಳಲ್ಲಿ ಮುಂದಿನ 2-3 ವರ್ಷಗಳಿಗೆ ಆಗುವಷ್ಟು ಆಹಾರ ಧಾನ್ಯಗಳು ಮತ್ತು ತೈಲ ಸಂಗ್ರಹವಿದೆ. ಆದರೆ, ಅವರು ತಮ್ಮ ಲಾಭದ ಮಾರ್ಜಿನ್‌ಗೆ ಧಕ್ಕೆ ಬರದಂತೆ ಕೃತಕ ಅಭಾವ ಸೃಷ್ಟಿಸಿ ಸಾಮಾನ್ಯ ಜನರನ್ನು ಸುಲಿಯುತ್ತಿದ್ದಾರೆ . ಜನಸಾಮಾನ್ಯರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಇವರ ಗೋದಾಮುಗಳಿಗೆ ಸುರಿಯುವ ಬದಲು, ಇಂತಹ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರವೇ ಆ ಗೋದಾಮುಗಳ ಮೇಲಿನ ನಿಯಂತ್ರಣವನ್ನು ಸಾಧಿಸಬೇಕಿದೆ.

ಸಂಸ್ಕೃತಿಯ ಹೆಸರಿನಲ್ಲಿ ದುಂದುವೆಚ್ಚ ಮತ್ತು ಪುರೋಹಿತಶಾಹಿ
ಒಂದೆಡೆ ಹಸಿವು, ಬರಗಾಲ ತಾಂಡವಾಡುತ್ತಿದ್ದರೆ, ಇನ್ನೊಂದೆಡೆ ಸಮಾಜದಲ್ಲಿ ನಕಲಿ ಮಡಿವಂತಿಕೆ ಮತ್ತು ದುಂದುವೆಚ್ಚಗಳು ರಾಜಾರೋಷವಾಗಿ ನಡೆಯುತ್ತಿವೆ. ಇತ್ತೀಚೆಗೆ ಶಿವಮೊಗ್ಗದ ಹಳ್ಳಿಯೊಂದರಲ್ಲಿ ಮದುವೆ ನಂತರದ ಮಾಂಸಾಹಾರದ ಬೀಗರೂಟಕ್ಕೆ ಭಾರಿ ದಂಡ ವಿಧಿಸುವ ವಿಲಕ್ಷಣ ನಿಯಮ ಜಾರಿಗೆ ತರಲಾಗಿತ್ತು . ಆದರೆ, ಅದೇ ಮದುವೆ ಹೆಸರಿನಲ್ಲಿ ಪುರೋಹಿತಶಾಹಿಗಳ ನೇತೃತ್ವದಲ್ಲಿ ಮೂರು ಮೂರು ಬಾರಿ ನಡೆಯುವ ದುಬಾರಿ ಶಾಖಾಹಾರಿ ಊಟ, ಹಾಲಿನ ಪೋಲು ಹಾಗೂ ಅಕ್ಕಿ ಕಾಳುಗಳನ್ನು ಚೆಲ್ಲುವ ದುಂದುವೆಚ್ಚದ ವಿರುದ್ಧ ಯಾರೂ ಮಾತನಾಡುತ್ತಿಲ್ಲ .
ಬರಗಾಲದ ಸಮಯದಲ್ಲಿ ಸಾಲಸೋಲ ಮಾಡಿ ಇಂತಹ ದುಂದುವೆಚ್ಚ ಮಾಡುವುದು ಖಂಡಿತ ತಪ್ಪು . ಇದಕ್ಕೆ ಪರ್ಯಾಯವಾಗಿ ರಾಷ್ಟ್ರಕವಿ ಕುವೆಂಪು ಅವರು ತಂದ ‘ಮಂತ್ರ ಮಾಂಗಲ್ಯ’ದಂತಹ ವೈಚಾರಿಕ ವಿವಾಹ ಪದ್ಧತಿಯನ್ನು ಜನರು ಅಳವಡಿಸಿಕೊಳ್ಳಬೇಕಿದೆ. ಪೂಜಾರಿಗಳ ಕಪಿಮುಷ್ಟಿಗೆ ಸಿಲುಕಿ ಹಣ ಪೋಲು ಮಾಡುವ ಬದಲು, ಸಂಕಷ್ಟದಲ್ಲಿರುವ ಜನರಿಗೆ ‘ಸಮುದಾಯ ಅಡುಗೆಮನೆ’ (Community Kitchens) ಗಳ ಮೂಲಕ ಉಚಿತ ಊಟ ಒದಗಿಸುವ ಮಾನವೀಯ ಸಂಸ್ಕೃತಿ ಬೆಳೆಯಬೇಕಿದೆ.

ಪ್ರಜ್ಞಾವಂತ ಸಮಾಜ ಮತ್ತು ಸರ್ಕಾರದ ಕರ್ತವ್ಯ
ಇಂದು ಇಂಡಿಯಾ ಒಕ್ಕೂಟದಲ್ಲಿ ನೀಟ್ (NEET) ಹಗರಣದಂತಹ ಗಂಭೀರ ಶೈಕ್ಷಣಿಕ ಬಿಕ್ಕಟ್ಟುಗಳು ಮತ್ತು ಹನಿಟ್ರ್ಯಾಪ್‌ಗಳಂತಹ ರಾಜಕೀಯ ಡ್ರಾಮಾಗಳನ್ನು ಸೃಷ್ಟಿಸಿ ಸಾರ್ವಜನಿಕರನ್ನು ಉನ್ಮಾದದಲ್ಲಿ ಇಡಲಾಗುತ್ತಿದೆ. ಇದರ ಹಿಂದೆ ಜನರ ನೈಜ ಸಮಸ್ಯೆಗಳನ್ನು ಮರೆಮಾಚುವ ಹುನ್ನಾರ ಅಡಗಿದೆ. ಮುಂಬರುವ ದಿನಗಳಲ್ಲಿ ತಾಪಮಾನ ಏರಿಕೆಯಿಂದಾಗಿ ಲಕ್ಷಾಂತರ ಜನರು ತೊಂದರೆಗೆ ಸಿಲುಕಲಿದ್ದಾರೆ ಎಂದು ಅಂಕಿ-ಅಂಶಗಳು ಹೇಳುತ್ತಿದ್ದರೂ ಸರ್ಕಾರಗಳು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿಲ್ಲ.

ನಾವಿರುವುದು ಪ್ರಜಾಪ್ರಭುತ್ವದ (Democracy) ವ್ಯವಸ್ಥೆಯಲ್ಲಿ. ಜನರು ಕಷ್ಟಪಟ್ಟು ಕಟ್ಟುವ ತೆರಿಗೆ ಹಣ ಕೇವಲ ಕಮಿಷನ್ ದಂಧೆಯ ಸ್ಟೀಲ್ ಬ್ರಿಡ್ಜ್, ಅಂಡರ್‌ಪಾಸ್ ಅಥವಾ ರಸ್ತೆ ಕಾಮಗಾರಿಗಳಿಗೆ ಸೀಮಿತವಾಗಬಾರದು. ಪ್ರತಿಯೊಬ್ಬ ಪ್ರಜೆಯ ಆರೋಗ್ಯ, ಆಹಾರ ಮತ್ತು ಆನಂದದಾಯಕ ಬದುಕನ್ನು ಖಾತರಿಪಡಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಬರಗಾಲ ಬಂದಾಗ ಕೆಲವು ಎನ್‌ಜಿಒಗಳು ಅಥವಾ ಧಾರ್ಮಿಕ ಸಂಸ್ಥೆಗಳು ತಮ್ಮ ಪ್ರಚಾರಕ್ಕಾಗಿ ಅನ್ನದಾನ, ಪಾನಕ ವಿತರಣೆ ಮಾಡಿ ಬಡವರಲ್ಲಿ ಕೀಳರಿಮೆ ಮೂಡಿಸುವುದನ್ನು ನಿಲ್ಲಿಸಬೇಕು. ಇಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರಜಾಪ್ರಭುತ್ವದ ಹಕ್ಕಿನಂತೆ ಸರ್ಕಾರವೇ ನೇರವಾಗಿ ಜವಾಬ್ದಾರಿಯಿಂದ ಮಾಡಬೇಕು.

ಈ ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡು, ಜನಸಾಮಾನ್ಯರ ಹಿತದೃಷ್ಟಿಯಿಂದ ತುರ್ತು ನಿವಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.

You cannot copy content of this page

Exit mobile version