ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲೆಂದು ಪ್ರತಿದಿನ ಮಾವಿನಹಣ್ಣು, ಆಲೂ ಪೂರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ನ್ಯಾಯಾಲಯಕ್ಕೆ ತಿಳಿಸಿದೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕೇಜ್ರಿವಾಲ್ ಅವರು ವೈದ್ಯರ ಸಮಾಲೋಚನೆ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿರುವಾಗ ಇಡಿ ಈ ಹೇಳಿಕೆ ನೀಡಿದೆ.
ಅರವಿಂದ್ ಕೇಜ್ರಿವಾಲ್ ಸೇವಿಸುತ್ತಿರುವ ಆಹಾರ ಕ್ರಮದ ವರದಿಯನ್ನು ಸಲ್ಲಿಸುವಂತೆ ತಿಹಾರ್ ಜೈಲಿನ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ. ಟೈಪ್ 2 ಮಧುಮೇಹ ಹೊಂದಿರುವ ಎಎಪಿ ಮುಖ್ಯಸ್ಥರಿಗೆ ಸೂಚಿಸಲಾದ ಆಹಾರದ ವಿವರಗಳನ್ನು ಸಲ್ಲಿಸುವಂತೆ ಕೇಜ್ರಿವಾಲ್ ಅವರ ವಕೀಲರನ್ನು ನ್ಯಾಯಾಲಯ ಕೇಳಿದೆ.
ವಿಚಾರಣೆಯ ಸಂದರ್ಭದಲ್ಲಿ, ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ತಯಾರಿಸಿದ ಊಟಕ್ಕೆ ಅವಕಾಶ ನೀಡಿದ್ದು, ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ಪಡೆಯಲು ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುತ್ತಿದ್ದಾರೆ ಎಂದು ಇಡಿ ಹೇಳಿಕೊಂಡಿದೆ.
“ಅರವಿಂದ್ ಕೇಜ್ರಿವಾಲ್ ಅವರು ಸಕ್ಕರೆ ಹಾಕಿದ ಚಹಾ, ಬಾಳೆಹಣ್ಣು, ಸಿಹಿತಿಂಡಿಗಳು, ಪೂರಿ, ಆಲೂ ಸಬ್ಜಿ ಇತ್ಯಾದಿಗಳನ್ನು ಪ್ರಜ್ಞಾಪೂರ್ವಕವಾಗಿ ಸೇವಿಸುತ್ತಿದ್ದಾರೆ, ಡಯಾಬಿಟಿಸ್ ಮೆಲ್ಲಿಟಸ್ ಟೈಪ್ II ರ ರೋಗಿಯಾಗಿದ್ದರೂ ಮತ್ತು ಅಂತಹ ವಸ್ತುಗಳ ಸೇವನೆಯಿಂದ ರಕ್ತದ ಸಕ್ಕರೆ ಹೆಚ್ಚಾಗುತ್ತದೆ ಎಂದು ಚೆನ್ನಾಗಿ ತಿಳಿದಿದ್ದರೂ ಸೇವಿಸುತ್ತಿದ್ದಾರೆ” ಎಂದು ಇಡಿ ಸಂಸ್ಥೆಯನ್ನು ಪ್ರತಿನಿಧಿಸುವ ಕೌನ್ಸೆಲ್ ಹೇಳಿದರು.
“ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಲು, ವೈದ್ಯಕೀಯ ಆಧಾರದ ಮೇಲೆ ನ್ಯಾಯಾಲಯದಿಂದ ಸಹಾನುಭೂತಿಯನ್ನು ಗಳಿಸಲು ಇದನ್ನು ಮಾಡಲಾಗುತ್ತಿದೆ” ಎಂದು ಇಡಿ ತಿಳಿಸಿದೆ.
ಜೈಲಿನಲ್ಲಿ 24 ಗಂಟೆಯೂ ವೈದ್ಯರನ್ನು ನಿಯೋಜಿಸಲಾಗಿದೆ ಮತ್ತು ಕೇಜ್ರಿವಾಲ್ ಅವರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿನಕ್ಕೆ ಎರಡು ಬಾರಿ ಅಳೆಯಲಾಗುತ್ತಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.