Home ದೇಶ ವಿಬಿ-ಗ್ರಾಮ್‌ಜಿ ವಿರುದ್ಧ ಸಿಡಿದೆದ್ದ ಕಾರ್ಮಿಕ ಸಂಘಟನೆಗಳು: ಉದ್ಯೋಗ ಖಾತರಿ ಉಳಿಸಲು ಮೇ 15ರಂದು ಮುಷ್ಕರಕ್ಕೆ ಕರೆ

ವಿಬಿ-ಗ್ರಾಮ್‌ಜಿ ವಿರುದ್ಧ ಸಿಡಿದೆದ್ದ ಕಾರ್ಮಿಕ ಸಂಘಟನೆಗಳು: ಉದ್ಯೋಗ ಖಾತರಿ ಉಳಿಸಲು ಮೇ 15ರಂದು ಮುಷ್ಕರಕ್ಕೆ ಕರೆ

0

ಮೋದಿಯವರ ಸರ್ಕಾರ ಜಾರಿಗೆ ತಂದಿರುವ ‘ವಿಕಸಿತ್ ಭಾರತ್ ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಯೋಜನೆ’ (ವಿಬಿ-ಗ್ರಾಮ್‌ಜಿ) ಒಂದು ಬೂಟಾಟಿಕೆ ಹಾಗೂ ಇದು ಗ್ರಾಮೀಣ ಬಡವರ ಮೇಲೆ ನಡೆಸುತ್ತಿರುವ ನೇರ ದಾಳಿ ಎಂದು ಹಲವು ವಕ್ತಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯುವ ಈ ಯೋಜನೆಯನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ಮೊದಲಿನಂತೆಯೇ ಪುನಃಸ್ಥಾಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ಕನಿಷ್ಠ 200 ದಿನಗಳ ಕೆಲಸ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮಂಗಳವಾರ ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸಂಸದರು, ಅರ್ಥಶಾಸ್ತ್ರಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಉದ್ಯೋಗ ಖಾತರಿ ಕಾರ್ಮಿಕರನ್ನೊಳಗೊಂಡ ‘ಎನ್‌ಆರ್‌ಇಜಿಎ ಸಂಘರ್ಷ್ ಮೋರ್ಚಾ’ದ ಐಕ್ಯ ವೇದಿಕೆಯ ಅಡಿಯಲ್ಲಿ ಈ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ಪಾಲಿಟ್‌ಬ್ಯುರೋ ಸದಸ್ಯ ಹಾಗೂ ಲೋಕಸಭಾ ಸಂಸದ ಅಮ್ರಾ ರಾಮ್ ಅವರು, ಎಂಜಿಎನ್‌ಆರ್‌ಇಜಿಎ ಯೋಜನೆಯನ್ನು ದೆಬ್ಬೆಹಾಕಿರುವ ವಿಬಿ-ಗ್ರಾಮ್‌ಜಿಯಲ್ಲಿ 125 ದಿನಗಳ ಕೆಲಸ ನೀಡುತ್ತೇವೆ ಎನ್ನುವ ಭರವಸೆಯು ಟೊಳ್ಳು ಎಂದು ಟೀಕಿಸಿದರು.

ಕನಿಷ್ಠ 100 ದಿನಗಳ ಕೆಲಸ ನೀಡಲಾಗದವರು ಈಗ 125 ದಿನಗಳ ಭರವಸೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದರು. ರಾಜ್ಯಸಭಾ ಸಂಸದ ವಿ. ಶಿವದಾಸನ್ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯನ್ನು ಬದಲಿ ಮಾಡುವ ಮೂಲಕ ಕೇಂದ್ರ ಸರ್ಕಾರವು ಗಾಂಧೀಜಿಯವರ ಆಲೋಚನೆಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸಭೆಯಲ್ಲಿ ಕನಿಷ್ಠ ವೇತನವನ್ನು 700 ರೂಪಾಯಿಗಳಿಗೆ ನಿಗದಿಪಡಿಸಬೇಕು ಮತ್ತು ಅದನ್ನು ಪ್ರತಿವರ್ಷ ಹಣದುಬ್ಬರಕ್ಕೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಒತ್ತಾಯಿಸಲಾಯಿತು. ಹಾಜರಾತಿ ಮತ್ತು ವೇತನ ಪಾವತಿಗಾಗಿ ಬಳಸಲಾಗುವ ತಾಂತ್ರಿಕ ವ್ಯವಸ್ಥೆಗಳು ಕಾರ್ಮಿಕರನ್ನು ಉದ್ಯೋಗದಿಂದ ಹೊರಗಿಡುತ್ತಿದ್ದು, ಅಂತಹ ತಂತ್ರಜ್ಞಾನಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು. ಗ್ರಾಮಸಭೆಗಳ ಪಾತ್ರವನ್ನು ಬಲಪಡಿಸಿ, ಕೆಲಸದ ಯೋಜನೆ ಮತ್ತು ಮೇಲ್ವಿಚಾರಣೆಯಲ್ಲಿ ಸ್ಥಳೀಯರಿಗೆ ಹೆಚ್ಚಿನ ಅಧಿಕಾರ ನೀಡಬೇಕು ಎಂದು ನಿರ್ಣಯಿಸಲಾಯಿತು.

ಮೇ 15ರಂದು ರಾಷ್ಟ್ರವ್ಯಾಪಿ ಮುಷ್ಕರ ದೇಶಾದ್ಯಂತ ಉದ್ಯೋಗ ಖಾತರಿ ಕಾರ್ಮಿಕರನ್ನು ಒಗ್ಗೂಡಿಸಿ ಮೇ 15ರಂದು ಮುಷ್ಕರ ನಡೆಸಲು ಮತ್ತು ಪಂಚಾಯತ್ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲು ಸಭೆಯು ಕರೆ ನೀಡಿದೆ. ಕನಿಷ್ಠ 160 ಸಂಸದರ ಸಹಿಯೊಂದಿಗೆ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲು ಮತ್ತು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬಿ. ವೆಂಕಟ್ ಅವರು ಮಂಡಿಸಿದ ಈ ನಿರ್ಣಯವನ್ನು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತು. ಈ ಕಾರ್ಯಕ್ರಮದಲ್ಲಿ ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಸಂಸದರಾದ ಜ್ಯೋತಿಮಣಿ, ಶಶಿಕಾಂತ್ ಸೆಂಥಿಲ್, ಮನೋಜ್ ಝಾ ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

You cannot copy content of this page

Exit mobile version