ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಮತ್ತೊಮ್ಮೆ ವಿಸ್ತರಿಸಿದೆ.
ಕಸ್ಟಡಿ ಅವಧಿ ಇಂದಿಗೆ ಮುಗಿಯುತ್ತಿದ್ದಂತೆ ತಿಹಾರ್ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರ ಮುಂದೆ ಕೇಜ್ರಿವಾಲ್ ಅವರನ್ನು ಹಾಜರುಪಡಿಸಲಾಯಿತು. ಈ ಸಂದರ್ಭದಲ್ಲಿ ನ್ಯಾಯಾಲಯವು ಕೇಜ್ರಿ ಅವರ ಕಸ್ಟಡಿಯನ್ನು ಸೆಪ್ಟೆಂಬರ್ 25ರವರೆಗೆ ವಿಸ್ತರಿಸಿತು.
ಇದೇ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ದುರ್ಗೇಶ್ ಪಾಠಕ್ ಅವರಿಗೆ ಜಾಮೀನು ಸಿಕ್ಕಿದೆ. ಸಿಬಿಐ ಸಲ್ಲಿಸಿದ್ದ ಆರೋಪಪಟ್ಟಿಯನ್ನು ಪರಿಗಣಿಸಿದ ನ್ಯಾಯಾಲಯ ಕೇಜ್ರಿ ಮತ್ತು ದುರ್ಗೇಶ್ ಪಾಠಕ್ ಅವರಿಗೆ ಸಮನ್ಸ್ ಕಳುಹಿಸಿತ್ತು. ಈ ಸಮನ್ಸ್‌ಗೆ ಸ್ಪಂದಿಸಿದ ಶಾಸಕರು ಇಂದು ನ್ಯಾಯಾಲಯದ ಮುಂದೆ ಹಾಜರಾದರು. ಬಳಿಕ ಜಾಮೀನು ಪಡೆದರು.
ಮತ್ತೊಂದೆಡೆ ಜಾಮೀನು ಅರ್ಜಿಯೊಂದಿಗೆ ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಇದೇ 5ರಂದು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರ ಪೀಠವು ಅರ್ಜಿಗಳ ವಿಚಾರಣೆ ನಡೆಸಿತು. ಕೇಜ್ರಿ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಮತ್ತು ಇಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ವಾದ ಮಂಡಿಸಿದ್ದರು. ಎರಡೂ ಕಡೆಯ ಸುದೀರ್ಘ ವಾದ ಆಲಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು.
ಮದ್ಯ ನೀತಿ ಹಗರಣದ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಕೇಜ್ರಿ ಅವರನ್ನು ಇಡಿ ಬಂಧಿಸಿತ್ತು. ಅಂದಿನಿಂದ ಅವರು ತಿಹಾರ್ ಜೈಲಿನಲ್ಲೇ ಇದ್ದಾರೆ. ಜಾಮೀನಿಗಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಇಡಿ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ, ಸಿಬಿಐ ಪ್ರಕರಣದಲ್ಲಿ ಅವರು ಪ್ರಸ್ತುತ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.