ಎಐಎಡಿಎಂಕೆಯಲ್ಲಿ ಬಾರಿ ಬಿರುಕು: ಬರೋಬ್ಬರಿ 30 ಶಾಸಕರು ಮುಖ್ಯಮಂತ್ರಿ ವಿಜಯ್ ಬೆಂಬಲಕ್ಕೆ

ಚೆನ್ನೈ, ಮೇ 12: ತಮಿಳುನಾಡು ರಾಜಕಾರಣದಲ್ಲಿ ಮಂಗಳವಾರ ನಡೆದ ಬೆಳವಣಿಗೆ ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ವಿರೋಧ ಪಕ್ಷ ಎಐಎಡಿಎಂಕೆಯ ಸುಮಾರು 30 ಶಾಸಕರು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಬೆಂಬಲ ಘೋಷಿಸಿದ್ದಾರೆ. ವಿಶ್ವಾಸಮತ ಯಾಚನೆಗೆ ಸಜ್ಜಾಗಿರುವ ವಿಜಯ್ ಸರ್ಕಾರಕ್ಕೆ ಈ ಬೆಳವಣಿಗೆ ನಿರ್ಣಾಯಕ ಶಕ್ತಿ ತಂದಿದೆ.

ಸೋಲಿನ ನಂತರ ಒಡಕು
ಏಪ್ರಿಲ್ 23ರ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ 164 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 47 ಸ್ಥಾನ ಗೆದ್ದು ಭಾರಿ ಹಿನ್ನಡೆ ಅನುಭವಿಸಿತ್ತು. ಈ ಚುನಾವಣಾ ಅವಮಾನದ ನಂತರ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ನಾಯಕತ್ವದ ವಿರುದ್ಧ ಒಳಗೊಳಗೇ ಕುದಿಯುತ್ತಿದ್ದ ಅಸಮಾಧಾನ ಇದೀಗ ಬಹಿರಂಗ ಬಂಡಾಯವಾಗಿ ಸ್ಫೋಟಗೊಂಡಿದೆ.

ಪಳನಿಸ್ವಾಮಿ ಅವರು ತಮ್ಮ ಸಾಂಪ್ರದಾಯಿಕ ಎದುರಾಳಿ ಡಿಎಂಕೆ ನಾಯಕರೊಂದಿಗೆ ರಹಸ್ಯ ಮಾತುಕತೆ ನಡೆಸುತ್ತಿದ್ದಾರೆ ಎಂಬ ಆರೋಪ ಬಂಡಾಯ ಶಾಸಕರನ್ನು ಮತ್ತಷ್ಟು ಕೆರಳಿಸಿದೆ. “ಸಿದ್ಧಾಂತ ಬಿಟ್ಟು ಅಧಿಕಾರಕ್ಕಾಗಿ ಡಿಎಂಕೆ ಜೊತೆ ಕೈಜೋಡಿಸುವ ಮಾತು ಪಕ್ಷದ ಕಾರ್ಯಕರ್ತರಿಗೆ ದ್ರೋಹವಾಗುತ್ತದೆ” ಎಂದು ಬಂಡಾಯ ಬಣದ ನಾಯಕರು ಸ್ಪಷ್ಟಪಡಿಸಿದ್ದಾರೆ.

ಪ್ರತ್ಯೇಕ ಬಣಕ್ಕೆ ವೇಲುಮಣಿ–ಷಣ್ಮುಗಂ ನೇತೃತ್ವ
ಈ ಬಂಡಾಯ ಬಣವನ್ನು ಮುನ್ನಡೆಸುತ್ತಿರುವವರು ಹಿರಿಯ ನಾಯಕರಾದ ಎಸ್ ಪಿ ವೇಲುಮಣಿ ಮತ್ತು ಸಿ ವಿ ಷಣ್ಮುಗಂ. ಹಿಂದಿನ ಎಐಎಡಿಎಂಕೆ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಇವರಿಬ್ಬರೂ ಪಶ್ಚಿಮ ಮತ್ತು ಉತ್ತರ ತಮಿಳುನಾಡಿನಲ್ಲಿ ಗಟ್ಟಿ ನೆಲೆ ಹೊಂದಿದ್ದಾರೆ. ಸಿಎಂ ವಿಜಯ್ ಅವರೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರ ಮುಂದೆ ಮಾತನಾಡಿದ ಅವರು, “ರಾಜ್ಯದ ಅಭಿವೃದ್ಧಿ ಮತ್ತು ಸ್ಥಿರ ಆಡಳಿತವೇ ನಮ್ಮ ಆದ್ಯತೆ; ಅದಕ್ಕಾಗಿ ವಿಜಯ್ ಸರ್ಕಾರಕ್ಕೆ ನಮ್ಮ ಬೆಂಬಲ” ಎಂದು ಘೋಷಿಸಿದರು.

ಸಂಖ್ಯಾಬಲದ ಲೆಕ್ಕಾಚಾರ
ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅಗತ್ಯ ಸಂಖ್ಯೆ ತಲುಪಲು ವಿಜಯ್ ಅವರಿಗೆ ಈ 30 ಶಾಸಕರ ಬೆಂಬಲ ತೀರ ನಿರ್ಣಾಯಕ. ಈ ಬಂಡಾಯ ಶಾಸಕರು ಸರ್ಕಾರದ ಪರ ಮತ ಚಲಾಯಿಸಿದರೆ ವಿರೋಧ ಪಕ್ಷದ ಸಂಖ್ಯಾಬಲ ಕೇವಲ 17ಕ್ಕೆ ಕುಸಿಯಲಿದ್ದು, ವಿಶ್ವಾಸಮತ ಯಾಚನೆ ತೀರಾ ಸುಲಭ ಔಪಚಾರಿಕತೆ ಮಾತ್ರ ಆಗಲಿದೆ.

ಹೊಸ ಶಕ್ತಿ ಸಮೀಕರಣ
ನಟನೆಯಿಂದ ರಾಜಕಾರಣಕ್ಕಿಳಿದ ವಿಜಯ್ ಅಲ್ಪಾವಧಿಯಲ್ಲೇ ಮುಖ್ಯಮಂತ್ರಿ ಗಾದಿ ಏರಿದ್ದಷ್ಟೇ ಅಲ್ಲ, ದಶಕಗಳ ಕಾಲ ಅಚಲವಾಗಿ ನಿಂತಿದ್ದ ದ್ರಾವಿಡ ರಾಜಕಾರಣದ ಎರಡು ಧ್ರುವಗಳಾದ ಡಿಎಂಕೆ-ಎಐಎಡಿಎಂಕೆ ನಡುವಿನ ಸಮೀಕರಣವನ್ನೇ ಅಲ್ಲಾಡಿಸಿದ್ದಾರೆ. ಎಐಎಡಿಎಂಕೆ ಶಾಸಕರು ತಮ್ಮ ಪಕ್ಷ ತೊರೆದು ವಿಜಯ್ ಶಿಬಿರ ಸೇರಿರುವ ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಒಂದು ನಿರ್ಣಾಯಕ ತಿರುವಾಗಿ ದಾಖಲಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು