ಹೈದರಾಬಾದ್: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗಳು ಕೇವಲ ಹೊರಜಗತ್ತನ್ನು ಮೆಚ್ಚಿಸಲು ಮಾಡುವ ತಂತ್ರಗಳಷ್ಟೇ ಎಂದು ಎಐಎಂಐಎಂ (AIMIM) ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ. ಹೊರದೇಶಗಳಲ್ಲಿ ಹಾಗೂ ಸಾರ್ವಜನಿಕವಾಗಿ ಸಾಮರಸ್ಯದ ಮಾತನಾಡಿದರೂ, ಆರ್‌ಎಸ್‌ಎಸ್ ತನ್ನ ಮೂಲ ಸಿದ್ಧಾಂತ ಮತ್ತು ನಿಲುವುಗಳಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಓವೈಸಿ, “ಆರ್‌ಎಸ್‌ಎಸ್ ಎಂದಿಗೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಮಹಾತ್ಮಾ ಗಾಂಧಿಯವರು ಎಲ್ಲಾ ಧರ್ಮೀಯರನ್ನು ಒಗ್ಗೂಡಿಸಿ ಬ್ರಿಟಿಷರ ವಿರುದ್ಧ ಹೋರಾಡಲು ಮುಂದಾಗಿದ್ದಕ್ಕೆ ಬೇಸತ್ತು ಹೆಡ್ಗೆವಾರ್ ಅವರು ಕಾಂಗ್ರೆಸ್ ತೊರೆದಿದ್ದರು. ಆರ್‌ಎಸ್‌ಎಸ್‌ನ ಇತಿಹಾಸ ಮತ್ತು ಪುಸ್ತಕಗಳೇ ಅವರ ನೈಜ ಸಿದ್ಧಾಂತವನ್ನು ಬಿಂಬಿಸುತ್ತವೆ. ಗುರು ಗೋಲ್ವಾಲ್ಕರ್ ಅವರು ತಮ್ಮ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ದೇಶದ ಆಂತರಿಕ ಬೆದರಿಕೆಗಳು ಎಂದು ಕರೆದಿದ್ದಾರೆ” ಎಂದು ಉಲ್ಲೇಖಿಸಿದರು.
ದೇಶದಲ್ಲಿ ಸೌಹಾರ್ದತೆ ಇದೆ ಎಂಬ ವಾದವನ್ನು ತಳ್ಳಿಹಾಕಿದ ಅವರು, “ಇಂದು ದೇಶದಲ್ಲಿ ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು, ಮತಾಂತರ ನಿಷೇಧ ಕಾಯ್ದೆಯ ದುರುಪಯೋಗ, ಧರ್ಮ ಸಂಸದ್‌ಗಳಲ್ಲಿ ನೀಡಲಾಗುವ ದ್ವೇಷದ ಭಾಷಣಗಳು ಹಾಗೂ ಗೋಮಾಂಸದ ಹೆಸರಿನಲ್ಲಿ ನಡೆಯುವ ಗುಂಪು ಹತ್ಯೆಗಳನ್ನು ಗಮನಿಸಿದರೆ ವಾಸ್ತವವೇನು ಎಂಬುದು ಸ್ಪಷ್ಟವಾಗುತ್ತದೆ. ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಹೆಸರಿನಲ್ಲಿ ಹಿಂದೂ ಕಾನೂನುಗಳನ್ನು ಎಲ್ಲರ ಮೇಲೂ ಹೇರಲು ಯತ್ನಿಸಲಾಗುತ್ತಿದೆ. ಭಾಗವತ್ ಅವರು ನಿಜಕ್ಕೂ ಸೌಹಾರ್ದತೆಯನ್ನು ನಂಬುವುದಾದರೆ ತಮ್ಮ ಹಿರಿಯ ನಾಯಕರು ಬರೆದಿರುವ ದ್ವೇಷಪೂರಿತ ವಿಚಾರಗಳನ್ನು ಸಾರ್ವಜನಿಕವಾಗಿ ತಿರಸ್ಕರಿಸಲಿ” ಎಂದು ಸವಾಲು ಹಾಕಿದರು.
