ಗಾಂಧಿನಗರ: ಸ್ವಯಂಘೋಷಿತ ದೇವಮಾನವ ಆಶಾರಾಮ್ ಬಾಪುಗೆ ನೀಡಲಾಗಿದ್ದ ತಾತ್ಕಾಲಿಕ ಜಾಮೀನನ್ನು ಗುಜರಾತ್ ಹೈಕೋರ್ಟ್ ಮಂಗಳವಾರ ಸೆಪ್ಟೆಂಬರ್ 3 ರವರೆಗೆ ವಿಸ್ತರಿಸಿದೆ. ಆಗಸ್ಟ್ 21 ರಂದು ಮುಗಿಯಲಿರುವ ತಾತ್ಕಾಲಿಕ ಜಾಮೀನನ್ನು ಸೆಪ್ಟೆಂಬರ್ 3 ರವರೆಗೆ ವಿಸ್ತರಿಸುತ್ತಾ, ನ್ಯಾಯಮೂರ್ತಿ ಇಲೇಶ್ ವೋರಾ ಮತ್ತು ನ್ಯಾಯಮೂರ್ತಿ ಪಿ.ಎಂ. ರಾವಲ್ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ತಿಳಿಸಿದೆ.
ಮತ್ತೊಂದು ಅತ್ಯಾಚಾರ ಪ್ರಕರಣದಲ್ಲಿ ಆಶಾರಾಮ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ಆಗಸ್ಟ್ 29 ರಂದು ವಿಚಾರಣೆ ನಡೆಸಲಿದೆ. ನ್ಯಾಯಾಲಯದ ಆದೇಶದ ಮೇರೆಗೆ ಸೋಮವಾರ ಆಶಾರಾಮ್ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
2013ರ ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಆಶಾರಾಮ್ ಬಾಪುಗೆ ಗಾಂಧಿನಗರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಮೊದಲು, ವೈದ್ಯಕೀಯ ಕಾರಣಗಳಿಗಾಗಿ ಗುಜರಾತ್ ನ್ಯಾಯಾಲಯವು ಆಶಾರಾಮ್‌ಗೆ ಆಗಸ್ಟ್ 21 ರವರೆಗೆ ಮಧ್ಯಂತರ ಜಾಮೀನು ವಿಸ್ತರಿಸುವಂತೆ ಆದೇಶಿಸಿತ್ತು. ಆರೋಗ್ಯ ಹದಗೆಡುತ್ತಿರುವ ಕಾರಣ, ತಾತ್ಕಾಲಿಕ ಜಾಮೀನು ಪಡೆಯಲು ಗುಜರಾತ್ ಹೈಕೋರ್ಟ್‌ಗೆ ಮನವಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್ ಜುಲೈ 30 ರಂದು ಆದೇಶಿಸಿತ್ತು.