ಚಂಬಾ: ಹಿಮಾಚಲ ಪ್ರದೇಶದಲ್ಲಿ ಸರಣಿ ಭೂಕಂಪಗಳು ಭೀತಿ ಮೂಡಿಸಿವೆ. ರಾಜ್ಯದ ಚಂಬಾ ಜಿಲ್ಲೆಯಲ್ಲಿ ಮುಂಜಾನೆ 3:27 ಗಂಟೆಗೆ 3.3 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ. ಅದೇ ಜಿಲ್ಲೆಯಲ್ಲಿ ಒಂದು ಗಂಟೆಯ ನಂತರ (4:39 ಗಂಟೆಗೆ) 4.0 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.
ಮತ್ತೊಂದೆಡೆ, ಹಿಮಾಚಲ ಪ್ರದೇಶದಾದ್ಯಂತ ಮುಂಗಾರು ಮಳೆಯು ಭಾರಿ ಅನಾಹುತವನ್ನು ಸೃಷ್ಟಿಸಿದೆ. ಭಾರೀ ಮಳೆಯಿಂದಾಗಿ ಜೂನ್ 20 ರಿಂದ ಒಟ್ಟು ಸಾವಿನ ಸಂಖ್ಯೆ 276 ಕ್ಕೆ ಏರಿದೆ ಎಂದು ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮಂಗಳವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.
ಜೀವಹಾನಿಯ ಜೊತೆಗೆ, ವರದಿ ಪ್ರಕಾರ ಸೇತುವೆಗಳು, ಮನೆಗಳು, ಕೊಟ್ಟಿಗೆಗಳು, ಕೃಷಿ ಭೂಮಿ, ಬೆಳೆಗಳು ಮತ್ತು ಸ್ಮಶಾನಗಳು ವ್ಯಾಪಕವಾಗಿ ಹಾನಿಗೊಳಗಾಗಿವೆ. ಒಟ್ಟು 1,104 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, 37 ಅಂಗಡಿಗಳು ಮತ್ತು ಕಾರ್ಖಾನೆಗಳು ನಾಶವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.