ನವದೆಹಲಿ: ಏಷ್ಯಾ ಕಪ್ 2023 ಪಾಕಿಸ್ತಾನದಲ್ಲಿ ನಡೆಯಲಿರುವುದರಿಂದ, ಮುಂದಿನ ವರ್ಷ ಭಾರತ ಕ್ರಿಕೆಟ್ ತಂಡವು ಪಂದ್ಯಾವಳಿಗಳನ್ನು ಆಡುವುದರ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ನೀಡಿದ್ದು, ಏಷ್ಯಾಕಪ್ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, 2006 ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಭಾರತ ತಂಡ, ತದನಂತರ ಯಾವುದೇ ಪಂದ್ಯಾವಳಿಗಳಿಗೆ ಪಾಕಿಸ್ತಾನಕ್ಕೆ ಹೋಗಿರುವುದಿಲ್ಲ. ಈ ಕುರಿತಂತೆ ಮಂಗಳವಾರ ಮುಂಬೈನಲ್ಲಿ ನಡೆದ 91 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನಕ್ಕೆ ಹೋಗದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಮುಂಬರುವ ಏಷ್ಯಾಕಪ್ ಟೂರ್ನಿಗೆ ಭಾರತೀಯ ತಂಡವು ಪಾಕಿಸ್ತಾನ ಹೊರತು ಪಡಿಸಿ ಬೇರೆ ಯಾವುದೇ ಪ್ರದೇಶದಲ್ಲಾದರು ಆಡಲು ಸಿದ್ದವಾಗಿದೆ ಎಂದು ಜಯ್ ಶಾ ತಿಳಿಸಿದ್ದಾರೆ.
ಭಾರತ ತಂಡವು ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ತೆರಳುವುದು ಸೂಕ್ತವಲ್ಲ ಎಂದು ಬಿಸಿಸಿಐ ನಿರ್ಧರಿಸಿದೆ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ಭೇಟಿ ನೀಡುವ ಅನುಮತಿಯ ಕುರಿತು ಸರ್ಕಾರವು ನಿರ್ಧಾರ ಕೈಗೊಳ್ಳುವುದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಸುವುದಿಲ್ಲ ಎಂದು ಜಯ್ ಶಾ ಮಾಹಿತಿ ನೀಡಿದ್ದಾರೆ.
2023 ರ ಏಷ್ಯಾಕಪ್ ಆಡಲು ಭಾರತ ತಂಡವು ಪಾಕಿಸ್ತಾನಕ್ಕೆ ಹೋಗಬಹುದು ಎನ್ನುವ ವಿಷಯ ಈ ಹಿಂದೆ ಬಹಿರಂಗವಾಗಿತ್ತು. ಆದರೆ ಸಚಿನ್ ಜಯ್ ಶಾ ಅವರ ಹೇಳಿಕೆ ಭಾರತೀಯ ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.