ಪೆಂಟಗಾನ್: ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರನ್ನು ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ಗೆ ಹೋಲಿಸಿ, ಪೆಂಟಗಾನ್‌ನ ಮಾಜಿ ಅಧಿಕಾರಿ ಮೈಕೆಲ್ ರೂಬಿನ್ ತೀವ್ರ ಟೀಕೆ ಮಾಡಿದ್ದಾರೆ.
ಪಾಕಿಸ್ತಾನವು ಯುದ್ಧೋನ್ಮಾದಲ್ಲಿರುವ ದುಷ್ಟ ರಾಷ್ಟ್ರದಂತೆ ವರ್ತಿಸುತ್ತಿದೆ ಎಂದು ಅವರು ಆರೋಪಿಸಿದರು.
ಅಮೆರಿಕಾದಲ್ಲಿ ನಡೆದ 9/11 ದಾಳಿಗೆ ಕಾರಣನಾದ ಒಸಾಮಾ ಬಿನ್ ಲಾಡೆನ್‌ನಂತೆಯೇ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇತ್ತೀಚೆಗೆ ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಅಮೆರಿಕ ಮಿಲಿಟರಿ ಅಧಿಕಾರಿಗಳ ಸಭೆಯಲ್ಲಿ ಅಣ್ವಸ್ತ್ರ ಬೆದರಿಕೆ ಹಾಕಿದ್ದರು. ಪಾಕಿಸ್ತಾನವು ಸೋಲಿನ ಹಂತ ತಲುಪಿದರೆ, ಇಡೀ ಪ್ರಪಂಚವನ್ನು ನಮ್ಮೊಂದಿಗೆ ಕೊನೆಗೊಳಿಸುತ್ತೇವೆ ಎಂದು ಅಣ್ವಸ್ತ್ರದ ಎಚ್ಚರಿಕೆ ನೀಡಿದ್ದರು.
ಅಮೆರಿಕದ ನೆಲದ ಮೇಲೆ ನಿಂತು ಪಾಕಿಸ್ತಾನ ಇಂತಹ ಬೆದರಿಕೆಗಳನ್ನು ಒಡ್ಡುವುದು ಸ್ವೀಕಾರಾರ್ಹವಲ್ಲ ಎಂದು ರೂಬಿನ್ ಸ್ಪಷ್ಟಪಡಿಸಿದ್ದಾರೆ.
ಆಸಿಮ್ ಮುನೀರ್ ಒಬ್ಬ ‘ಸೂಟ್ ಧರಿಸಿದ ಒಸಾಮಾ ಬಿನ್ ಲಾಡೆನ್’ ಇದ್ದಂತೆ. ಅಮೆರಿಕ ಭಯೋತ್ಪಾದನೆಯನ್ನು ಒಂದು ಸಮಸ್ಯೆಯ ಕೋನದಿಂದ ನೋಡುತ್ತದೆ, ಆದರೆ ಅನೇಕ ಉಗ್ರರ ಸಿದ್ಧಾಂತ ಅರ್ಥವಾಗುವುದಿಲ್ಲ. ಇಸ್ಲಾಮಿಕ್ ಸ್ಟೇಟ್‌ನ ಹೇಳಿಕೆಗಳ ರೀತಿಯಲ್ಲಿ ಫೀಲ್ಡ್ ಮಾರ್ಷಲ್ ಮುನೀರ್ ಹೇಳಿಕೆಗಳು ಇವೆ ಎಂದು ರೂಬಿನ್ ಅಭಿಪ್ರಾಯಪಟ್ಟರು.
ಪಾಕಿಸ್ತಾನದಲ್ಲಿರುವ ಅಣ್ವಸ್ತ್ರ ಕೇಂದ್ರಗಳನ್ನು ಅಮೆರಿಕದ ಸೀಲ್ ಪಡೆಗಳು ವಶಪಡಿಸಿಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪಾಕಿಸ್ತಾನವನ್ನು ನಾಟೋ-ಯೇತರ ಸದಸ್ಯ ರಾಷ್ಟ್ರವಾಗಿ ಪರಿಗಣಿಸಬೇಕು, ಯುಎಸ್ ಸೆಂಟ್ರಲ್ ಕಮಾಂಡ್ ಸದಸ್ಯ ದೇಶವಾಗಿ ನೋಡಬಾರದು ಎಂದೂ ಅವರು ಹೇಳಿದರು
ಜೊತೆಗೆ ಆಸಿಮ್ ಮುನೀರ್ ಅವರಿಗೆ ಎಂದಿಗೂ ಯುಎಸ್ ವೀಸಾ ನೀಡಬಾರದು ಎಂದು ಅವರು ಆಗ್ರಹಿಸಿದರು.