ಟೆಹ್ರಾನ್/ವಾಷಿಂಗ್ಟನ್: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ನಿಧನರಾಗಿದ್ದಾರೆ ಎಂಬ ಸುದ್ದಿ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸುತ್ತಿದೆ. ಇರಾನ್‌ನ ಪ್ರಮುಖ ವಿರೋಧ ಪಕ್ಷದ ಸಶಸ್ತ್ರ ಗುಂಪು ‘ಪೀಪಲ್ಸ್ ಮುಜಾಹಿದ್ದೀನ್ ಆರ್ಗನೈಸೇಶನ್ ಆಫ್ ಇರಾನ್’ (MEK) ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದೆ.
ಸೋಮವಾರದಂದು ಅತ್ಯಂತ ಕಟ್ಟುನಿಟ್ಟಿನ ಭದ್ರತೆ ಇರುವ ಖಮೇನಿಯವರ ನಿವಾಸ ‘ಮೊತಾಹರಿ ಕಾಂಪ್ಲೆಕ್ಸ್’ ಮೇಲೆ ತಮ್ಮ ಸದಸ್ಯರು ಸಶಸ್ತ್ರ ದಾಳಿ ನಡೆಸಿದ್ದಾರೆ ಎಂದು ಆ ಸಂಸ್ಥೆ ತಿಳಿಸಿದೆ. ಸುಮಾರು 100 ಮಂದಿ ಹೋರಾಟಗಾರರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಈ ಭೀಕರ ಕಾಳಗದಲ್ಲಿ ಇರಾನ್ ಸರ್ಕಾರಿ ಪಡೆಗಳಿಗೆ ಭಾರಿ ಪ್ರಾಣಹಾನಿಯಾಗಿದೆ ಮತ್ತು ತಮ್ಮ ಕಡೆಯೂ ಸಾವು-ನೋವು ಸಂಭವಿಸಿದೆ ಎಂದು MEK ಹೇಳಿಕೊಂಡಿದೆ. ದಾಳಿ ನಡೆದಿದೆ ಎನ್ನಲಾದ ಸಮಯದಲ್ಲಿ ಮೊತಾಹರಿ ಕಾಂಪ್ಲೆಕ್ಸ್ ಸುತ್ತಮುತ್ತ ಭಾರಿ ಸಂಖ್ಯೆಯಲ್ಲಿ ಅಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿತ್ತು ಎಂಬ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೆ, ಇರಾನ್ ಸರ್ಕಾರದ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿ ನಡೆದಿದ್ದು, ಖಮೇನಿ ವಿರುದ್ಧದ ಸಂದೇಶಗಳು ಪ್ರಸಾರವಾಗಿವೆ ಎನ್ನಲಾಗುತ್ತಿದೆ.
ಆದರೆ ಈ ಬಗ್ಗೆ ಇರಾನ್‌ನ ಅಧಿಕೃತ ಮಾಧ್ಯಮಗಳಾಗಲಿ ಅಥವಾ ಅಂತರಾಷ್ಟ್ರೀಯ ಸ್ವತಂತ್ರ ಸಂಸ್ಥೆಗಳಾಗಲಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಖಮೇನಿ ಅವರ ಆರೋಗ್ಯ ಸ್ಥಿತಿ ಅಥವಾ ನಿಧನದ ಬಗ್ಗೆ ಯಾವುದೇ ಅಧಿಕೃತ ಪುರಾವೆಗಳು ಲಭ್ಯವಿಲ್ಲದ ಕಾರಣ, ಜಗತ್ತಿನ ರಾಷ್ಟ್ರಗಳು ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಇರಾನ್ ಆಡಳಿತವನ್ನು ಹಿಡಿಯಲು ಪ್ರಯತ್ನಿಸುತ್ತಿರುವ MEK ಇತಿಹಾಸವನ್ನು ನೋಡಿದರೆ, ಈ ಹಿಂದೆಯೂ ಇಂತಹ ಸಂಚಲನ ಮೂಡಿಸುವ ಹೇಳಿಕೆಗಳನ್ನು ನೀಡಿದ ಉದಾಹರಣೆಗಳಿವೆ.
