Friday, July 12, 2024

ಸತ್ಯ | ನ್ಯಾಯ |ಧರ್ಮ

ಅಸ್ಸಾಂ ಪ್ರವಾಹ| 92ಕ್ಕೆ ಏರಿದ ಸಾವಿನ ಸಂಖ್ಯೆ, ಬದುಕು ಅಸ್ತವ್ಯಸ್ಥ

ಅಸ್ಸಾಂನಲ್ಲಿ ಪ್ರವಾಹ ಮುಂದುವರಿದಿದೆ. ಈ ಪ್ರವಾಹದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ಸುರಿದ ಮಳೆಗೆ ರಾಜ್ಯದ ಎಲ್ಲ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಆದರೆ, ಮಳೆ ಕಡಿಮೆಯಾಗಿರುವುದರಿಂದ ಪ್ರಮುಖ ನದಿಗಳು ಹಾಗೂ ಉಪನದಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಾದ್ಯಂತ ಪ್ರವಾಹದಿಂದ 17.70 ಲಕ್ಷ ಜನರು ತೀವ್ರ ತೊಂದರೆಗೀಡಾಗಿದ್ದಾರೆ. ಪ್ರವಾಹದಿಂದಾಗಿ ನಿನ್ನೆಯಷ್ಟೇ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಮಂಗಳವಾರ ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕ್ಯಾಚಾರ್‌ನಲ್ಲಿ ಇಬ್ಬರು ಸಾವನ್ನಪ್ಪಿದರೆ, ಧುಬ್ರಿ, ಧೇಮಾಜಿ, ದಕ್ಷಿಣ ಸಲ್ಮಾರಾ, ನಾಗಾಂವ್ ಮತ್ತು ಶಿವಸಾಗರ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ವರ್ಷ ಪ್ರವಾಹ, ಭೂಕುಸಿತ ಮತ್ತು ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಪ್ರವಾಹದಿಂದಾಗಿ 79 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಶುಕ್ರವಾರದ ವೇಳೆಗೆ, 27 ಜಿಲ್ಲೆಗಳಲ್ಲಿ 18.80 ಲಕ್ಷ ಜನರು ಪ್ರವಾಹದಿಂದ ಪ್ರಭಾವಿತರಾಗಿದ್ದರು. ಆದರೆ ಮಂಗಳವಾರ ಆ ಸಂಖ್ಯೆ 17.70 ಲಕ್ಷಕ್ಕೆ ಇಳಿದಿದೆ. 38,870.3 ಹೆಕ್ಟೇರ್ ಸಾಗುವಳಿ ಜಮೀನು ಜಲಾವೃತಗೊಂಡಿದೆ. 3,54,045 ಜನಸಂಖ್ಯೆಯನ್ನು ಹೊಂದಿರುವ ಧುಬ್ರಿ ಜಿಲ್ಲೆ ಪ್ರವಾಹದಿಂದ ಅತಿ ಹೆಚ್ಚು ಹಾನಿಗೊಳಗಾಗಿದೆ. ಆ ನಂತರ ಕ್ಯಾಚಾರ್ (ಜನಸಂಖ್ಯೆ 1,81,545), ಶಿವಸಾಗರ್ (1,36,547), ಬಾರ್ಪೇಟಾ (1,16,074) ಮತ್ತು ಗೋಲಾಘಾಟ್ (1,09,475) ಪ್ರವಾಹಕ್ಕೆ ತುತ್ತಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ಒಟ್ಟು 48,021 ಸಂತ್ರಸ್ತರು 507 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸುಮಾರು 1,04,665 ಜನರಿಗೆ ಅಧಿಕಾರಿಗಳು ಪರಿಹಾರ ಸಾಮಗ್ರಿಗಳನ್ನು ಒದಗಿಸಿದ್ದಾರೆ.

ಕಾಜಿರಂಗ ಉದ್ಯಾನದಲ್ಲಿ 159 ಕಾಡು ಪ್ರಾಣಿಗಳ ಸಾವು

ಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನವು ಹಿಂದೆಂದೂ ಕಾಣದ ರೀತಿಯಲ್ಲಿ ಇತ್ತೀಚೆಗೆ ಜಲಾವೃತವಾಗಿತ್ತು. ಇದರಿಂದ ಒಟ್ಟು 159 ಕಾಡು ಪ್ರಾಣಿಗಳು ಸಾವನ್ನಪ್ಪಿವೆ. ಪ್ರವಾಹದಲ್ಲಿ 20 ಪ್ರಾಣಿಗಳು ಕೊಚ್ಚಿ ಹೋಗಿವೆ. ಸುಮಾರು 133 ಪ್ರಾಣಿಗಳನ್ನು ಅಧಿಕಾರಿಗಳು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ರಾಜ್ಯದಲ್ಲಿ 13,66,829 ಪ್ರಾಣಿಗಳು ಬಾಧಿತವಾಗಿವೆ. ಪ್ರವಾಹದಿಂದಾಗಿ ರಾಜ್ಯಾದ್ಯಂತ 94 ರಸ್ತೆಗಳು ಸಂಪೂರ್ಣ ಹಾಳಾಗಿವೆ.. ಮೂರು ಸೇತುವೆಗಳು ಕೊಚ್ಚಿ ಹೋಗಿವೆ. 26 ಮನೆಗಳು ಮತ್ತು ಆರು ಒಡ್ಡುಗಳಿಗೂ ಹಾನಿಯಾಗಿದೆ. ನಿಮತಿಘಾಟ್, ತೇಜ್‌ಪುರ, ಗುವಾಹಟಿ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು