ದೆಹಲಿ: ಅಸ್ಸಾಂನಲ್ಲಿ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 87 ಕ್ಕೆ ಏರಿಕೆಯಾಗಿದ್ದು, ರಾಜ್ಯದ 6 ಜಿಲ್ಲೆಗಳಲ್ಲಿ ಸುಮಾರು 1.3 ಲಕ್ಷ ಜನರು ಪ್ರವಾಹದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಶಿವಸಾಗರ ಜಿಲ್ಲೆಯಲ್ಲಿ ಇಬ್ಬರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಮೇಲ್ಭಾಗದ ಅಸ್ಸಾಂನ ಹಲವು ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ರಾತ್ರಿಯಿಡೀ ಮಳೆಯಾಗಿದ್ದರೂ, ಬಹುತೇಕ ಮುಳುಗಡೆಯಾದ ಗ್ರಾಮಗಳಲ್ಲಿ ನೀರಿನ ಮಟ್ಟ ತಗ್ಗುತ್ತಿದ್ದು, ಜನರಿಗೆ ಕೊಂಚ ನಿರಾಳತೆ ತಂದಿದೆ.
ಶಿವಸಾಗರ ಜಿಲ್ಲೆಯು ಅತ್ಯಂತ ತೀವ್ರವಾಗಿ ಸಂಕಷ್ಟಕ್ಕೆ ಈಡಾಗಿದ್ದು, 55,000 ಕ್ಕೂ ಹೆಚ್ಚು ಜನರು ಪ್ರಭಾವಿತರಾಗಿದ್ದಾರೆ. ಚರಾಯಿದೇವೋದಲ್ಲಿ ಸುಮಾರು 35,000 ಹಾಗೂ ಜೋರ್‌ಹಾಟ್‌ನಲ್ಲಿ 20,000 ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ.
ಐದು ಜಿಲ್ಲೆಗಳಲ್ಲಿ 55 ಪರಿಹಾರ ಶಿಬಿರಗಳು ಮತ್ತು ವಿತರಣಾ ಕೇಂದ್ರಗಳನ್ನು ನಿರ್ವಹಿಸುತ್ತಿದ್ದು, 11,250 ಜನರಿಗೆ ಆಶ್ರಯ ಹಾಗೂ ಸಹಾಯವನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ ಮತ್ತು ಪಶುವೈದ್ಯಕೀಯ ತಂಡಗಳು ಹಾಗೂ ವಿವಿಧ ಸಂಸ್ಥೆಗಳ ಸಿಬ್ಬಂದಿಯನ್ನು ಪರಿಹಾರ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ.
ಪ್ರವಾಹವು ಕೃಷಿ ಮತ್ತು ಜಾನುವಾರುಗಳ ಮೇಲೆಯೂ ತೀವ್ರ ಪರಿಣಾಮ ಬೀರಿದೆ. 14,230 ಹೆಕ್ಟೇರ್‌ಗೂ ಹೆಚ್ಚು ಬೆಳೆ ಪ್ರದೇಶ ನೀರಿನಲ್ಲಿ ಮುಳುಗಡೆಯಾಗಿದೆ. ಸುಮಾರು 55,000 ಪ್ರಾಣಿಗಳು ಕೊಚ್ಚಿಹೋಗಿದ್ದು, 35,000 ಕ್ಕೂ ಹೆಚ್ಚು ಪ್ರಾಣಿಗಳು ಪ್ರವಾಹದಿಂದ ಬಾಧಿತವಾಗಿವೆ ಎಂದು ಎಎಸ್‌ಡಿಎಂಎ ಬಿಡುಗಡೆ ಮಾಡಿದ ವರದಿ ತಿಳಿಸಿದೆ.
ಹಲವು ಪ್ರದೇಶಗಳಲ್ಲಿ ಮನೆಗಳು, ರಸ್ತೆಗಳು, ತಡೆಗೋಡೆಗಳು, ಶಾಲೆಗಳು ಮತ್ತು ಇತರ ಸಾರ್ವಜನಿಕ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ನುಮಾಲಿಗಢದಲ್ಲಿ ಧನಸಿರಿ ನದಿಯು ಪ್ರಸ್ತುತ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.
ಇದೇ ವೇಳೆ, ಮುಂಬರುವ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶ ಮತ್ತು ಮೇಘಾಲಯದ ಕೆಲವು ಭಾಗಗಳಲ್ಲಿ ಭಾರಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಹವಾಮಾನ ವೈಪರೀತ್ಯವು ಅಸ್ಸಾಂನ ನೆರೆಯ ಜಿಲ್ಲೆಗಳ ಮೇಲೆಯೂ ಪರಿಣಾಮ ಬೀರಬಹುದು.
ಮೇಘಾಲಯದ ಪೂರ್ವ ಖಾಸಿ ಹಿಲ್ಸ್, ಪಶ್ಚಿಮ ಜೈಂತಿಯಾ ಹಿಲ್ಸ್ ಮತ್ತು ಪೂರ್ವ ಜೈಂತಿಯಾ ಹಿಲ್ಸ್ ಹಾಗೂ ಅರುಣಾಚಲ ಪ್ರದೇಶದ ಪಾಪುಂಪಾರೆ, ಕುರುಂಗ್ ಕುಮೇ, ಪೂರ್ವ ಕಮೆಂಗ್, ಪೂರ್ವ ಸಿಯಾಂಗ್, ಲೋಹಿತ್ ಮತ್ತು ಚಾಂಗ್‌ಲಾಂಗ್ ಜಿಲ್ಲೆಗಳಿಗೆ ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ.
ನಾಗಾಲ್ಯಾಂಡ್‌ನ ಬಹುತೇಕ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಗಾಲ್ಯಾಂಡ್‌ನಲ್ಲಿ ಸುರಿಯುವ ಮಳೆಯು ಅಸ್ಸಾಂನ ಚರಾಯಿದೇವೋ, ಶಿವಸಾಗರ, ಜೋರ್‌ಹಾಟ್ ಮತ್ತು ಗೋಲಾಘಾಟ್ ಜಿಲ್ಲೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
