ಗುವಾಹಟಿ : ಅಕ್ರಮ ವಲಸಿಗರು ಆಧಾರ್ ಕಾರ್ಡ್ ಪಡೆಯುವುದನ್ನು ತಡೆಯುವ ಉದ್ದೇಶದಿಂದ ಅಸ್ಸಾಂ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ವಿತರಣೆ ಪ್ರಕ್ರಿಯೆಯನ್ನು ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಒಳಪಡಿಸಲಾಗಿದ್ದು, ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಹೊಸ ಆಧಾರ್ ಕಾರ್ಡ್ ನೀಡದಿರಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಲಾಯಿತು. 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ್ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾದರೆ, ಸಂಬಂಧಿತ ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ರಾಜ್ಯದಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಕೆಲವು ಜಿಲ್ಲೆಗಳಲ್ಲಿ ನೋಂದಣಿ ಪ್ರಮಾಣ ಶೇ.100 ಕ್ಕಿಂತಲೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಆಧಾರ್ ಪಡೆಯುತ್ತಿರುವವರ ಹಿನ್ನೆಲೆಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಬಾಂಗ್ಲಾದೇಶದಿಂದ ಅಕ್ರಮವಾಗಿ ಪ್ರವೇಶಿಸುವ ವಲಸಿಗರು ಗುರುತಿನ ದಾಖಲೆಗಳನ್ನು ಪಡೆಯುವುದನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ಸರ್ಕಾರ ಹೇಳಿದೆ. ಆದರೆ ಚಹಾ ತೋಟ ಕಾರ್ಮಿಕ ಸಮುದಾಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ವರ್ಗದ ಜನರಿಗೆ ತಾತ್ಕಾಲಿಕವಾಗಿ ವಿನಾಯಿತಿ ನೀಡಲಾಗಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ವಿತರಣೆ ಮುಂದುವರಿಯಲಿದೆ.
ಆದಾಗ್ಯೂ, 2027ರ ಏಪ್ರಿಲ್ 1ರಿಂದ ಈ ವಿನಾಯಿತಿಗಳನ್ನೂ ಹಿಂಪಡೆಯಲಾಗುವುದು. ಆ ದಿನಾಂಕದ ಬಳಿಕ ಈ ಸಮುದಾಯಗಳ 18 ವರ್ಷ ಮೇಲ್ಪಟ್ಟ ಸದಸ್ಯರೂ ಹೊಸ ಆಧಾರ್ ಕಾರ್ಡ್ ಪಡೆಯಲು ಅವಕಾಶ ಇರುವುದಿಲ್ಲ ಎಂದು ಸರ್ಕಾರ ಘೋಷಿಸಿದೆ.
ಇದೇ ವೇಳೆ ಸಚಿವ ಸಂಪುಟವು ರಾಜ್ಯದಲ್ಲಿ ಹೊಸ ಗ್ರಾಮೀಣ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಜಾರಿಗೊಳಿಸಲು ಅನುಮೋದನೆ ನೀಡಿದೆ. ಜುಲೈ 1ರಿಂದ ಜಾರಿಗೆ ಬರುವ ಈ ಯೋಜನೆಗೆ ರಾಜ್ಯ ಬಜೆಟ್‌ನಲ್ಲಿ ₹2,000 ಕೋಟಿ ಮೀಸಲಿಡಲಾಗಿದ್ದು, ಫಲಾನುಭವಿಗಳಿಗೆ 125 ಮಾನವ ದಿನಗಳ ನೇರ ವೇತನ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಉದ್ಯೋಗಾವಕಾಶಗಳ ಜೊತೆಗೆ ಶಾಶ್ವತ ಆಸ್ತಿಗಳ ನಿರ್ಮಾಣಕ್ಕೂ ಯೋಜನೆಯಲ್ಲಿ ಆದ್ಯತೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದಲ್ಲದೆ, ಗುವಾಹಟಿ ಹಾಗೂ ಅದರ ಸುತ್ತಮುತ್ತಲಿನ ಉಪಗ್ರಹ ನಗರಗಳ ಸಮಗ್ರ ಅಭಿವೃದ್ಧಿಗಾಗಿ ಹೊಸ ಅಭಿವೃದ್ಧಿ ಪ್ರಾಧಿಕಾರ ರಚನೆಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ರಾಜ್ಯ ಆಡಳಿತ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಹಲವು ಮಹತ್ವದ ನಿರ್ಧಾರಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಅಸ್ಸಾಂ ವಿಧಾನಸಭೆಯ ಬಜೆಟ್ ಅಧಿವೇಶನ ಜುಲೈ 6ರಂದು ಆರಂಭವಾಗಲಿದ್ದು, ಬಜೆಟ್ ಮಂಡನೆಯ ನಿಖರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
