ದೆಹಲಿ: ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮಹಾಸಂಗ್ರಾಮವು ಅಂತಿಮ ಘಟ್ಟ ತಲುಪಿದ್ದು, ಇಂದು (ಗುರುವಾರ, ಏಪ್ರಿಲ್ 9) ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಸುಮಾರು 5.3 ಕೋಟಿ ಮತದಾರರು ವಿವಿಧ ಪಕ್ಷಗಳ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆಯವರೆಗೆ ನಡೆಯಲಿದೆ. ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಣೆ ಮೇ 4 ರಂದು ನಡೆಯಲಿದೆ.
ಸುರಕ್ಷಿತ ಮತದಾನಕ್ಕಾಗಿ ಸಾವಿರಾರು ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಪಾರದರ್ಶಕತೆಗಾಗಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಕೇರಳ: ಹ್ಯಾಟ್ರಿಕ್ ಗೆಲುವಿನ ಮೇಲೆ ವಿಜಯನ್ ಕಣ್ಣು
140 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕೇರಳದಲ್ಲಿ ಆಡಳಿತಾರೂಢ ಎಲ್‌ಡಿಎಫ್ (LDF) ಮತ್ತು ಪ್ರತಿಪಕ್ಷ ಯುಡಿಎಫ್ (UDF) ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಎಲ್‌ಡಿಎಫ್ ಸತತ ಮೂರನೇ ಬಾರಿ ಅಧಿಕಾರ ಹಿಡಿಯಲು ಹವಣಿಸುತ್ತಿದೆ. ಆದರೆ, ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಇದೆ. ಇಲ್ಲಿ ಒಟ್ಟು 883 ಅಭ್ಯರ್ಥಿಗಳು ಕಣದಲ್ಲಿದ್ದು, 1.39 ಕೋಟಿ ಮಹಿಳಾ ಮತದಾರರು ಮತ್ತು 1.32 ಕೋಟಿ ಪುರುಷ ಮತದಾರರಿದ್ದಾರೆ.
ಅಸ್ಸಾಂ: ಬಿಜೆಪಿ-ಕಾಂಗ್ರಸ್ ನಡುವೆ ನೇರ ಹಣಾಹಣಿ
ಅಸ್ಸಾಂನ 126 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳ ನಡುವೆ ದ್ವಿಮುಖ ಸ್ಪರ್ಧೆ ಇದೆ. ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ನೇತೃತ್ವದಲ್ಲಿ ಬಿಜೆಪಿ ಮೈತ್ರಿಕೂಟ ಮೂರನೇ ಬಾರಿ ವಿಜಯದ ನಿರೀಕ್ಷೆಯಲ್ಲಿದ್ದರೆ, ಗೌರವ್ ಗೊಗೋಯ್ ನೇತೃತ್ವದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯಲು 99 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇಲ್ಲಿ 2.50 ಕೋಟಿ ಮತದಾರರಿದ್ದು, ಈ ಪೈಕಿ 1.25 ಕೋಟಿ ಮಹಿಳೆಯರು ಮತ್ತು 318 ತೃತೀಯ ಲಿಂಗಿ ಮತದಾರರಿದ್ದಾರೆ.
ಪುದುಚೇರಿ: ರಾಜ್ಯದ ಮಾನ್ಯತೆಗಾಗಿ ಸಂಘರ್ಷ
ಕೇವಲ 30 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಪುದುಚೇರಿಯಲ್ಲಿ 9.5 ಲಕ್ಷ ಮತದಾರರು 294 ಅಭ್ಯರ್ಥಿಗಳ ಹಣೆಬರಹ ನಿರ್ಧರಿಸಲಿದ್ದಾರೆ. ಇಲ್ಲಿ ಈ ಬಾರಿ ‘ರಾಜ್ಯದ ಮಾನ್ಯತೆ’ ಪ್ರಮುಖ ಚುನಾವಣಾ ವಿಷಯವಾಗಿದೆ. ಕೇಂದ್ರದಲ್ಲಿ ಮತ್ತು ಪುದುಚೇರಿಯಲ್ಲಿ ಡಬಲ್ ಇಂಜಿನ್ ಸರ್ಕಾರವಿದ್ದರೂ ಇಲ್ಲಿ ಸ್ವತಂತ್ರ ಆಡಳಿತವಿಲ್ಲ ಎಂದು ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಟೀಕಿಸಿದೆ. ನಟ ವಿಜಯ್ ಅವರ ಪಕ್ಷದ ಪ್ರವೇಶದಿಂದಾಗಿ ಈ ಬಾರಿ ಇಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
