ದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ನಡುವಿನ ಸಂಘರ್ಷ ತಾರಕಕ್ಕೇರಿದೆ. ಬುಧವಾರ ನಡೆದ ಉಭಯ ಪಕ್ಷಗಳ ಸಭೆಯು ತೀವ್ರ ಗದ್ದಲ ಮತ್ತು ಪರಸ್ಪರ ಆರೋಪ-ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದೆ.
ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯನ್ ಅವರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. “ನಾವು ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರು ಬರೆದ ಒಂಬತ್ತು ಪತ್ರಗಳೊಂದಿಗೆ ಸಿಇಸಿ ಅವರನ್ನು ಭೇಟಿ ಮಾಡಿದ್ದೆವು. ಆದರೆ ಕೇವಲ ಏಳು ನಿಮಿಷಗಳ ಸಭೆಯಲ್ಲಿ ಸಿಇಸಿ ಅವರು ನಮ್ಮ ಮಾತು ಕೇಳುವ ಬದಲಿಗೆ ‘ಇಲ್ಲಿಂದ ಹೊರಹೋಗಿ’ ಎಂದು ಅವಮಾನಕರವಾಗಿ ಮಾತನಾಡಿದರು. ನಾವು ಸಂಸತ್ತಿನಲ್ಲಿ ಎರಡನೇ ಅತಿದೊಡ್ಡ ವಿರೋಧ ಪಕ್ಷವಾಗಿದ್ದರೂ ನಮಗೆ ಈ ರೀತಿ ಅವಮಾನ ಮಾಡಲಾಗಿದೆ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಹಿರಿಯ ಅಧಿಕಾರಿಗಳನ್ನು ಏಕಪಕ್ಷೀಯವಾಗಿ ವರ್ಗಾವಣೆ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ ಸಿಇಸಿ ಅವರು ಅಸಮಾಧಾನಗೊಂಡು ತಮ್ಮನ್ನು ಹೊರಕ್ಕೆ ಕಳುಹಿಸಿದರು ಎಂದು ಒಬ್ರಿಯನ್ ತಿಳಿಸಿದ್ದಾರೆ.
ಈ ಆರೋಪಗಳನ್ನು ಚುನಾವಣಾ ಆಯೋಗದ ಮೂಲಗಳು ತಳ್ಳಿಹಾಕಿವೆ. ಡೆರೆಕ್ ಒಬ್ರಿಯನ್ ಅವರೇ ಸಿಇಸಿ ಮೇಲೆ ಕೂಗಾಡಿದರು ಮತ್ತು ಅಸಭ್ಯವಾಗಿ ವರ್ತಿಸಿದರು ಎಂದು ಆಯೋಗ ತಿಳಿಸಿದೆ. “ಸಭೆಯಲ್ಲಿ ಕಿರುಚುವುದು ಮತ್ತು ಮರ್ಯಾದೆಯಿಲ್ಲದ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ” ಎಂದು ಇಸಿ ಸ್ಪಷ್ಟಪಡಿಸಿದೆ.
ಈ ಬೆಳವಣಿಗೆಯ ಬೆನ್ನಲ್ಲೇ ಚುನಾವಣಾ ಆಯೋಗವು ಸಾಮಾಜಿಕ ಜಾಲತಾಣದಲ್ಲಿ ಟಿಎಂಸಿಗೆ ನೇರ ಎಚ್ಚರಿಕೆ ನೀಡಿದೆ. “ಈ ಬಾರಿ ಪಶ್ಚಿಮ ಬಂಗಾಳದಲ್ಲಿ ಯಾವುದೇ ಭಯ, ಹಿಂಸೆ, ಬೆದರಿಕೆ ಅಥವಾ ಆಮಿಷಗಳಿಲ್ಲದೆ ಚುನಾವಣೆ ನಡೆಸಲಾಗುವುದು. ಬೂತ್ ಜಾಮಿಂಗ್, ದಾಳಿ ಅಥವಾ ಸಂಪನ್ಮೂಲಗಳ ತಡೆಗೆ ಅವಕಾಶ ನೀಡದೆ ಪಾರದರ್ಶಕ ಮತದಾನ ಖಚಿತಪಡಿಸುತ್ತೇವೆ,” ಎಂದು ಆಯೋಗ ತಿಳಿಸಿದೆ.
ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ ಸಂಸದರು, ಸಭೆಯಲ್ಲಿ ನಡೆದ ನೈಜ ಘಟನೆ ಹೊರಬರಲು ಅಂದಿನ ಸಭೆಯ ಆಡಿಯೋ ಅಥವಾ ವಿಡಿಯೋ ರೆಕಾರ್ಡಿಂಗ್ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ. ಚುನಾವಣಾ ಆಯೋಗವು ಪಕ್ಷಪಾತಿಯಾಗಿ ವರ್ತಿಸುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಈ ಘಟನೆ ಮತ್ತಷ್ಟು ಪುಷ್ಟಿ ನೀಡಿದಂತಾಗಿದೆ.
