Home ರಾಜಕೀಯ ಕೇರಳ | ಮತದಾರರಿಗೆ ಹಣ ಹಂಚಿದ ಆರೋಪ: ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು

ಕೇರಳ | ಮತದಾರರಿಗೆ ಹಣ ಹಂಚಿದ ಆರೋಪ: ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲು

0

ಪಾಲಕ್ಕಾಡ್ (ಕೇರಳ): ಕೇರಳ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡಿದ ಆರೋಪದ ಮೇಲೆ ಬಿಜೆಪಿ ನೇತೃತ್ವದ ಎನ್‌ಡಿಎ ಪ್ರತಿನಿಧಿಗಳ ವಿರುದ್ಧ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ.

ಪಾಲಕ್ಕಾಡ್ ಟೌನ್ ಸೌತ್ ಪೊಲೀಸರು ಎನ್‌ಡಿಎ ಅಭ್ಯರ್ಥಿ ಶೋಭಾ ಸುರೇಂದ್ರನ್ ಅವರಿಗೆ ಸಂಬಂಧಿಸಿದ ಘಟನೆಯ ಕುರಿತು ಎಫ್‌ಐಆರ್ ದಾಖಲಿಸಿದ್ದಾರೆ. ಏಪ್ರಿಲ್ 8ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮೈತ್ರಿಕೂಟದ ಪ್ರತಿನಿಧಿಗಳು ಪಾಲಕ್ಕಾಡ್‌ನ ಮನೆ ಮನೆಗೆ ತೆರಳಿ ಮತದಾರರಿಗೆ ಹಣ ಹಂಚುವ ಮೂಲಕ 2026ರ ವಿಧಾನಸಭಾ ಚುನಾವಣೆಯ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ ಮತ್ತು ಜನಪ್ರತಿನಿಧಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಈ ದೂರನ್ನು ದಾಖಲಿಸಿಕೊಳ್ಳಲಾಗಿದ್ದು, ಇದು ಚುನಾವಣಾ ನಿಯಮಗಳ ಉಲ್ಲಂಘನೆ ಮತ್ತು ಮತದಾರರಿಗೆ ಲಂಚ ನೀಡಿದಂತಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 9ರ ಮತದಾನಕ್ಕೂ ಮುನ್ನ ನಡೆಯುವ ‘ಮನೆ ಮನೆ ಪ್ರಚಾರ’ದ ಅವಧಿಯಲ್ಲಿ ಶೋಭಾ ಸುರೇಂದ್ರನ್ ಅವರು ಹಣ ಹಂಚುವಾಗ ಸಿಕ್ಕಿಬಿದ್ದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೇ ಈ ರಾಜಕೀಯ ವಿವಾದ ಸ್ಫೋಟಗೊಂಡಿದೆ. ಆದರೆ, ಈ ಆರೋಪಗಳನ್ನು ನಿರಾಕರಿಸಿರುವ ಶೋಭಾ ಸುರೇಂದ್ರನ್, ಇವೆಲ್ಲವೂ ರಾಜಕೀಯ ಪ್ರೇರಿತ ಮತ್ತು ಸುಳ್ಳು ಆರೋಪಗಳಾಗಿವೆ ಎಂದು ಹೇಳಿದ್ದಾರೆ. ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಟಿವಿ ಪತ್ರಕರ್ತರೊಬ್ಬರು ಈ ಪಿತೂರಿಯ ಹಿಂದೆ ಇದ್ದಾರೆ ಎಂದು ಅವರು ಪ್ರತ್ಯಾರೋಪ ಮಾಡಿದ್ದಾರೆ.

ದೃಶ್ಯಾವಳಿಗಳಲ್ಲಿ ಕಾಣಿಸಿಕೊಂಡಿರುವ ವಯಸ್ಸಾದ ಮಹಿಳೆಯೊಬ್ಬರು, ತಮಗೆ ಮತಕ್ಕಾಗಿ ಹಣ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ತಾವು ಔಷಧಿಗಳಿಗಾಗಿ 5,000 ರೂಪಾಯಿ ನೀಡುವಂತೆ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ. ಈ ವಿಡಿಯೋ ಆಧರಿಸಿ ಕಾಂಗ್ರೆಸ್ ಹಣ ಹಂಚಿಕೆಯಾಗಿದೆ ಎಂದು ವಾದಿಸುತ್ತಿದ್ದರೆ, ಶೋಭಾ ಸುರೇಂದ್ರನ್ ಅದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9 ರಂದು ಮತದಾನ ನಡೆಯಲಿದೆ.

You cannot copy content of this page

Exit mobile version