ಬೆಳಗಾವಿ ಗಡಿ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಯಂತಹ ಸಂಘಟನೆಗಳಿಗೆ ಕಾನೂನು ನೆರವು ನೀಡಲು ಮಹಾರಾಷ್ಟ್ರ ಸ್ವತಂತ್ರವಾಗಿದೆ. ಆದರೆ, ಕರ್ನಾಟಕದಲ್ಲಿ ಶಾಂತಿ ಕದಡುವ ಮತ್ತು ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೆ ಅದು ಬೆಂಬಲ ನೀಡಬಾರದು ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಗುರುವಾರ ಎಚ್ಚರಿಸಿದ್ದಾರೆ.
ಗಡಿ ಜಿಲ್ಲೆಯಾದ ಬೆಳಗಾವಿಯಲ್ಲಿ ಎಂಇಎಸ್‌ನಂತಹ ಪ್ರೊ-ಮಹಾರಾಷ್ಟ್ರ ಸಂಘಟನೆಗಳು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಅಥವಾ ಸಂಘರ್ಷಕ್ಕೆ ಕಾರಣವಾಗುವ ಆಂದೋಲನಗಳನ್ನು ನಡೆಸಲು ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಪ್ರಿಯಾಂಕ್, ನೆರೆ ರಾಜ್ಯ ಇದನ್ನು “ಎಚ್ಚರಿಕೆ ಅಥವಾ ಸಲಹೆ” ಎಂದು ತೆಗೆದುಕೊಳ್ಳಬಹುದು ಎಂದಿದ್ದಾರೆ. ಅಲ್ಲದೆ, ಅಲ್ಲಿನ ಸರ್ಕಾರಕ್ಕೆ ಈ ನಿಟ್ಟಿನಲ್ಲಿ ಸಾಕಷ್ಟು “ಪಕ್ವತೆ ಮತ್ತು ವಿವೇಚನೆ” ಇದೆ ಎಂದು ಭಾವಿಸುವುದಾಗಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಕೋರ್ಟ್ ಕೇಸ್‌ಗಳನ್ನು ಎದುರಿಸುತ್ತಿರುವ ಮರಾಠಿ ಭಾಷಿಕರು ಮತ್ತು ಎಂಇಎಸ್‌ನಂತಹ ಸಂಘಟನೆಗಳಿಗೆ ಮಹಾರಾಷ್ಟ್ರ ಸರ್ಕಾರ ಕಾನೂನು ನೆರವು ನೀಡುವುದಾಗಿ ಘೋಷಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು ಈ ಪ್ರತಿಕ್ರಿಯೆ ನೀಡಿದ್ದಾರೆ.
“ಅವರು ತಮ್ಮ ಸಂಘಟನೆಗಳನ್ನು ಬೆಂಬಲಿಸಲು ಬಯಸಿದರೆ ಬೆಂಬಲಿಸಲಿ, ಅದರಲ್ಲಿ ನಮಗೆ ಯಾವುದೇ ಹಕ್ಕಿಲ್ಲ (locus standi). ಆದರೆ ನಮ್ಮ ಭೂಮಿ, ನೀರು, ರಾಜ್ಯ ಮತ್ತು ಭಾಷೆಯ ವಿಷಯಕ್ಕೆ ಬಂದರೆ ನಾವು ಹಿಂದೆ ಸರಿಯುವುದಿಲ್ಲ. ಅವರು ಎಂಇಎಸ್ ಅಥವಾ ಬೇರೆ ಯಾರನ್ನಾದರೂ ಬೆಂಬಲಿಸಲಿ, ಆದರೆ ಮಹಾರಾಷ್ಟ್ರ, ಗೋವಾ, ಕೇರಳ, ತಮಿಳುನಾಡು ಅಥವಾ ಆಂಧ್ರಪ್ರದೇಶ ಯಾವುದೇ ಇರಲಿ, ಗಡಿ ಸಮಸ್ಯೆಗಳಿದ್ದರೆ ಅಂತಿಮವಾಗಿ ವಿಷಯವನ್ನು ಕಾನೂನಾತ್ಮಕವಾಗಿಯೇ ಹೋರಾಡಬೇಕು” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಯಾರೋ ಕೆಲವು ಸಂಘಟನೆಗಳು ಅಥವಾ ಮುಖ್ಯಮಂತ್ರಿ ಅಥವಾ ಸಚಿವರು ಏನೋ ಹೇಳಿದರು ಎಂದಾಕ್ಷಣ ನಾವು ನಮಗೆ ಇಷ್ಟ ಬಂದಂತೆ ಗಡಿ ರೇಖೆಗಳನ್ನು ಎಳೆಯಲು ಸಾಧ್ಯವಿಲ್ಲ. ಭಾಷಾವಾರು ಆಧಾರದ ಮೇಲೆ ರಾಜ್ಯ ಪುನರ್ರಚನಾ ಆಯೋಗದಿಂದ ಗಡಿಗಳನ್ನು ಈಗಾಗಲೇ ನಿರ್ಧರಿಸಲಾಗಿದೆ” ಎಂದರು. ಮಹಾರಾಷ್ಟ್ರ ಸರ್ಕಾರವು ಎಂಇಎಸ್‌ನಂತಹ ಸಂಘಟನೆಗಳಿಗೆ ಕಾನೂನು ನೆರವು ನೀಡಿದರೆ ಕರ್ನಾಟಕಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದ ಅವರು, “ಆದರೆ ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಚಟುವಟಿಕೆಗಳಿಗೆ ಬೆಂಬಲ ಇರಬಾರದು. ನಾವು ಸಹ ಅಂತಹ ಘಟನೆಗಳು ನಡೆಯಲು ಬಿಡುವುದಿಲ್ಲ. ಇದನ್ನು ಅವರು ಎಚ್ಚರಿಕೆ ಅಥವಾ ಸಲಹೆ ಎಂದು ತೆಗೆದುಕೊಳ್ಳಲಿ. ನಮ್ಮ ರಾಜ್ಯದಲ್ಲಿ ಕಿಡಿಗೇಡಿತನ ಮಾಡಲು ಅಥವಾ ಸಂಘರ್ಷಕ್ಕೆ ಕಾರಣವಾಗುವ ಆಂದೋಲನಗಳಿಗೆ ನಾವು ಅವಕಾಶ ನೀಡುವುದಿಲ್ಲ” ಎಂದು ಕಟುವಾಗಿ ಹೇಳಿದರು.
“ಅವರು ಕಾನೂನು ಚೌಕಟ್ಟಿನೊಳಗೆ ಹೋರಾಡಲು, ತಮ್ಮ ಬೇಡಿಕೆಗಳನ್ನು ಮಂಡಿಸಲು ಸ್ವತಂತ್ರರಾಗಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ, ನಾವು ಕೂಡ ಹಾಗೆಯೇ ಮಾಡುತ್ತೇವೆ. ಆದರೆ ಸರ್ಕಾರವಾಗಿ ಅವರ ಎಲ್ಲಾ ಚಟುವಟಿಕೆಗಳನ್ನು ಬೆಂಬಲಿಸುವುದು ಒಪ್ಪಲು ಸಾಧ್ಯವಿಲ್ಲ. ಮಹಾರಾಷ್ಟ್ರ ಸರ್ಕಾರದಲ್ಲಿ ಹೆಚ್ಚಿನ ಪಕ್ವತೆ ಮತ್ತು ವಿವೇಚನೆ ಇದೆ ಎಂದು ನಾನು ನಂಬುತ್ತೇನೆ” ಎಂದು ಅವರು ತಿಳಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬುಧವಾರ ಮಾತನಾಡಿ, ಕರ್ನಾಟಕದೊಂದಿಗಿನ ದೀರ್ಘಕಾಲದ ಗಡಿ ವಿವಾದವನ್ನು ಸುಪ್ರೀಂ ಕೋರ್ಟ್‌ನಲ್ಲಿ ಆದಷ್ಟು ಬೇಗ ವಿಚಾರಣೆಗೆ ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿದ್ದರೆ ಹಿರಿಯ ಕಾನೂನು ತಜ್ಞರನ್ನು ನೇಮಿಸುವುದಾಗಿ ಹೇಳಿದ್ದರು. ಮುಂಬೈನಲ್ಲಿ ನಡೆದ ಗಡಿ ಸಮಸ್ಯೆಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಫಡ್ನವಿಸ್, ಗಡಿ ಭಾಗದಲ್ಲಿ ವಾಸಿಸುವ ಮರಾಠಿ ಭಾಷಿಕರ ಹಕ್ಕುಗಳನ್ನು ರಕ್ಷಿಸಲು ಮತ್ತು ವಿವಾದವನ್ನು ಬಗೆಹರಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಒತ್ತಿಹೇಳಿದ್ದರು. ಕರ್ನಾಟಕದಲ್ಲಿ ನ್ಯಾಯಾಲಯದ ಪ್ರಕರಣಗಳನ್ನು ಎದುರಿಸುತ್ತಿರುವ ಮರಾಠಿ ಭಾಷಿಕರಿಗೆ ಮಹಾರಾಷ್ಟ್ರ ಸರ್ಕಾರವು ಕಾನೂನು ನೆರವು ನೀಡಲಿದೆ ಮತ್ತು ವಕೀಲರನ್ನು ನೇಮಿಸಲಿದ್ದು, ಈ ಪ್ರಕರಣಗಳ ಕಾನೂನು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಭರವಸೆ ನೀಡಿದ್ದರು.
ಎರಡೂ ರಾಜ್ಯಗಳ ನಡುವಿನ ಗಡಿ ವಿವಾದವು 1957 ರಲ್ಲಿ ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನು ಪುನರ್ರಚಿಸಿದಾಗಿನಿಂದಲೂ ನಡೆದುಕೊಂಡು ಬಂದಿದೆ. ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿದ್ದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣವನ್ನು ನೀಡಿ ಮಹಾರಾಷ್ಟ್ರವು ಬೆಳಗಾವಿ ಮತ್ತು ಪ್ರಸ್ತುತ ಕರ್ನಾಟಕದ ಭಾಗವಾಗಿರುವ 800 ಕ್ಕೂ ಹೆಚ್ಚು ಮರಾಠಿ ಭಾಷಿಕ ಗಡಿ ಗ್ರಾಮಗಳ ಮೇಲೆ ಹಕ್ಕು ಸಾಧಿಸುತ್ತಿದೆ. ಆದರೆ, ರಾಜ್ಯ ಪುನರ್ರಚನಾ ಕಾಯ್ದೆ ಮತ್ತು 1967 ರ ಮಹಾಜನ್ ಆಯೋಗದ ವರದಿಯ ಪ್ರಕಾರ ನಡೆದಿರುವ ಗಡಿ ಗುರುತಿಸುವಿಕೆಯೇ ಅಂತಿಮ ಎಂದು ಕರ್ನಾಟಕ ಪ್ರತಿಪಾದಿಸುತ್ತಿದೆ. ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗ ಎಂಬುದನ್ನು ಸಾರಲು ಕರ್ನಾಟಕ ಸರ್ಕಾರವು ಬೆಂಗಳೂರಿನ ವಿಧಾನ ಸೌಧದ ಮಾದರಿಯಲ್ಲೇ ಬೆಳಗಾವಿಯಲ್ಲಿ ‘ಸುವರ್ಣ ವಿಧಾನ ಸೌಧ’ವನ್ನು ನಿರ್ಮಿಸಿದ್ದು, ವರ್ಷಕ್ಕೊಮ್ಮೆ ಅಲ್ಲಿ ಶಾಸಕಾಂಗ ಅಧಿವೇಶನವನ್ನು ನಡೆಸುತ್ತಾ ಬಂದಿದೆ.
