Home ರಾಜಕೀಯ ದೇಶದ ಜನರಿಗೆ ಉತ್ತರ ಕೊಡಬೇಕಾದ ಸಮಯ ಬಂದಾಗಲೆಲ್ಲ ಮೋದಿ ವಿದೇಶಕ್ಕೆ ಹೋಗಿರುತ್ತಾರೆ: ಪ್ರಿಯಾಂಕ್‌ ಖರ್ಗೆ

ದೇಶದ ಜನರಿಗೆ ಉತ್ತರ ಕೊಡಬೇಕಾದ ಸಮಯ ಬಂದಾಗಲೆಲ್ಲ ಮೋದಿ ವಿದೇಶಕ್ಕೆ ಹೋಗಿರುತ್ತಾರೆ: ಪ್ರಿಯಾಂಕ್‌ ಖರ್ಗೆ

0

ರಾಮಮಂದಿರ ದೇಣಿಗೆ ದುರ್ಬಳಕೆ ಆರೋಪ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪ್ರಮುಖವಾಗಿ ಮೂರು ಅಂಶಗಳನ್ನು ಪ್ರಸ್ತಾಪಿಸಿ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ರಾಮಮಂದಿರ ದೇಣಿಗೆ ಅಕ್ರಮದ ಹೊಣೆ ಬಿಜೆಪಿಯದ್ದೇ:

ರಾಮಮಂದಿರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು, ಶಿಲಾನ್ಯಾಸ, ಧ್ವಜಾರೋಹಣ, ಪ್ರಾಣ ಪ್ರತಿಷ್ಠೆ ಹಾಗೂ ಉದ್ಘಾಟನೆ ಸೇರಿದಂತೆ ಎಲ್ಲದರ ಶ್ರೇಯಸ್ಸನ್ನು ಬಿಜೆಪಿಯವರೇ ಪಡೆದುಕೊಂಡಿದ್ದಾರೆ. ಹೀಗಿರುವಾಗ ಆರ್‌ಎಸ್‌ಎಸ್, ವಿಎಚ್‌ಪಿ ಮತ್ತು ಟ್ರಸ್ಟ್‌ನವರು ಮಾಡಿರುವ ದೇಣಿಗೆ ದುರ್ಬಳಕೆಯ ಆರೋಪದ ಹೊಣೆಯನ್ನೂ ಅವರೇ ಹೊರಬೇಕಲ್ಲವೇ ಎಂದು ಖರ್ಗೆ ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್ ಏಕೆ ಉತ್ತರಿಸಬೇಕು ಎಂದು ಕೇಳಿದ ಅವರು, ಬಿಜೆಪಿಯವರಿಗೆ ‘ನೇಷನ್ ಫಸ್ಟ್’ (ದೇಶ ಮೊದಲು) ಅಲ್ಲ, ‘ಡೊನೇಷನ್ ಫಸ್ಟ್’ (ದೇಣಿಗೆ ಮೊದಲು) ಎಂದು ಲೇವಡಿ ಮಾಡಿದರು. ಅಲ್ಲದೆ, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಂದರ್ಭ ಬಂದಾಗಲೆಲ್ಲ ಪ್ರಧಾನಮಂತ್ರಿಯವರು ವಿದೇಶ ಪ್ರವಾಸಕ್ಕೆ ತೆರಳುತ್ತಾರೆ ಎಂದು ಟೀಕಿಸಿದರು.

ಕೇಂದ್ರದ ಕೈಗೊಂಬೆಯಾದ ಚುನಾವಣಾ ಆಯೋಗ:

ಬಿಜೆಪಿ ಅಥವಾ ಜೆಡಿಎಸ್ ಯಾವುದೇ ವಿಷಯವನ್ನು ಪ್ರಸ್ತಾಪಿಸಿದರೆ ತಕ್ಷಣ ಸ್ಪಂದಿಸುವ ಚುನಾವಣಾ ಆಯೋಗವು, ರಾಜ್ಯ ಸರ್ಕಾರ ಪ್ರಾದೇಶಿಕ ಆಯುಕ್ತರ ಮೂಲಕ ಅಧಿಕೃತವಾಗಿ ಸಲ್ಲಿಸಿರುವ ಸಲಹೆಗಳಿಗೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ತಾರತಮ್ಯದ ಧೋರಣೆಯನ್ನು ಗಮನಿಸಿದರೆ ಚುನಾವಣಾ ಆಯೋಗವು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಗೃಹ ಸಚಿವರು ಆರೋಪಿಸಿದರು.

ವಿಪಕ್ಷಗಳ ಧ್ವನಿ ಅಡಗಿಸಲು ನಿಗದಿತ ಕಾರ್ಯವಿಧಾನ (SOP):

ಚುನಾವಣಾ ಪ್ರಕ್ರಿಯೆಗಳಲ್ಲಿ ವಿರೋಧ ಪಕ್ಷಗಳನ್ನು ಕಟ್ಟಿಹಾಕಲು ಬಿಜೆಪಿ ಒಂದು ನಿಗದಿತ ಕಾರ್ಯವಿಧಾನವನ್ನು (SOP) ಬಳಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಆರಂಭವಾದಾಗ, ಅಲ್ಲಿನ ಬೂತ್ ಮಟ್ಟದ ಅಧಿಕಾರಿಗಳು (BLO) ಮಮತಾ ಬ್ಯಾನರ್ಜಿ ಅವರ ಪ್ರಭಾವದಲ್ಲಿದ್ದಾರೆ ಎಂದು ಬಿಜೆಪಿ ದೂರು ನೀಡಿತ್ತು. ತದನಂತರ ‘ಲಾಜಿಕಲ್ ಡಿಸ್ಕ್ರೆಪೆನ್ಸಿ’ ಎಂಬ ನಿಯಮವನ್ನು ತಂದು ಅನೇಕ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ಪ್ರಸ್ತುತ ಕರ್ನಾಟಕದಲ್ಲೂ ಅದೇ ರೀತಿಯ ವ್ಯವಸ್ಥಿತ ತಂತ್ರಗಾರಿಕೆಯನ್ನು ಜಾರಿಗೊಳಿಸಲು ಕೇಂದ್ರದ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

You cannot copy content of this page

Exit mobile version