Home ಅಂಕಣ ಅಂಧತ್ವಕ್ಕೆ ಒಲಿದಾನಾ… ಶಿವನು?

ಅಂಧತ್ವಕ್ಕೆ ಒಲಿದಾನಾ… ಶಿವನು?

0

“..ಮುಸ್ಲಿಂ ಸಮುದಾಯಕ್ಕೆ ಸೇರಿದ ಮುದುಕನಿಂದ ಹುಡುಗನಿಂದ ಹೆಂಗಸಿನಿಂದ ಜೈ ಶ್ರೀ ರಾಮ್ ಎಂದು ಹೇಳಿಸಿದರೆ ಅದು ತಳಹದಿಯೇ ಇಲ್ಲದ ಹಿಂದೂ ಧರ್ಮಕ್ಕೆ ಕ್ಷೋಭೆ ತರುವುದೇ? ಅದನ್ನೇ ಹಿಂದೂ ಧರ್ಮ ಅಥವಾ ಸನಾತನ ಧರ್ಮ ಬಯಸುವುದೇ?..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ಲಕ್ಷಾಂತರ ವರ್ಷಗಳಿಂದ ವಿಕಾಸಗೊಂಡು ಬರುತ್ತಿರುವ ಮನುಷ್ಯ ಬದುಕುತ್ತಿರುವುದು, ಬದುಕಲೇಬೇಕಾದದ್ದು ಸಮಾಜದಲ್ಲಿ. ಆ ಸಮಾಜಕ್ಕೆ ನಾನಾ ಕಡೆಯಿಂದ ನಾನಾ ರೀತಿಯಾಗಿ ಕಂಟಕಗಳು ಬಂದೊದಗುತ್ತವೆ. ಮುಖ್ಯವಾಗಿ ದೇವರು- ಧರ್ಮಗಳ ಕುರಿತು ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಮತ್ತು ಗಾಢವಾಗಿ ಬೆಳೆಯುತ್ತವೆ, ಬೆಳೆದು ಹತ್ಯಾಕಾಂಡಗಳಾಗುತ್ತದೆ.

ಸಾವಿರಾರು ವರ್ಷಗಳಿಂದ ಗುಡಿಗುಂಡಾರಗಳಿವೆ, ಗುಡಿಗಳೊಳಗೆ, ಹೊರಗೆ ಮತ್ತು ಗುಡಿ ಇಲ್ಲದೆ ಪೂಜೆಗೆ ಒಳಪಡುವ ದೇವರುಗಳು ಸಹ ಇವೆ. ಆ ದೇವರುಗಳನ್ನು ಪೂಜಿಸಿ ಹಬ್ಬ ಹರಿದಿನಗಳನ್ನು ಆಚರಿಸುವವರು ಇದ್ದಾರೆ.

2000 ವರ್ಷಗಳ ಹಿಂದೆಯೇ ದೇವರನ್ನು- ದೇವರ ಆಚರಣೆ ಆಡಂಬರಗಳನ್ನು ವಿರೋಧಿಸಿ, ದೇವರೆಂಬ ಮಿತ್ಯೆಯನ್ನು ವೈಚಾರಿಕವಾಗಿ ವಿಮರ್ಶಿಸಿ ನಾಡಿಗೆ ಅರಿವು ಮೂಡಿಸಿದ ವಿಚಾರವಂತ ನಾಸ್ತಿಕರು, ಚಾರ್ವಾಕರು ಮತ್ತು ಬೌದ್ಧರು ಇದ್ದಾರೆ ಈ ನಾಡಿನಲ್ಲಿ. ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ದ್ರಾವಿಡ ಚಿಂತನೆಯಿಂದ ನಾಡು ನುಡಿ ಪ್ರಜ್ಞೆ ಮತ್ತು ನಾಸ್ತಿಕತೆಯನ್ನು ಬಿತ್ತಿದರು, ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಕಂದಾಚಾರ ಜಾತಿಯತೆ ಅಸ್ಮೃಶ್ಯತೆ ಅಜ್ಞಾನವನ್ನು ತೊಲಗಿಸಿದವರಲ್ಲಿ ಪ್ರಮುಖರಾದವರು, ಅವರು ನಾಡು -ನುಡಿಗಾಗಿ ಸಲ್ಲಿಸಿದ ಸೇವೆ ಅದ್ವಿತೀಯ. ಈ ಸಮಾಜಕ್ಕೆ ಇಂತಹ ವಿಚಾರವಂತರಿಂದ ಖಂಡಿತವಾಗಿಯೂ ತೊಂದರೆ ಆಗುವುದಿಲ್ಲ.

ಹಾಗೆಯೇ ದೇವರು ಧರ್ಮ ಭಕ್ತಿ ಆಚರಣೆಗಳು ಖಾಸಗಿತನದಿಂದ ಕೂಡಿದ್ದರೂ ಕೂಡ ಸಮಾಜಕ್ಕೆ ಮಾರಕವಾಗುವುದಿಲ್ಲ, ವಚನ ಚಳುವಳಿಯಲ್ಲಿ ಬರುವ ಶಿವಶರಣರ ಭಕ್ತಿಯನ್ನು ಆವಲೋಕಿಸುವುದಾದರೆ, ಶಿವಗಣ ಪ್ರಸಾದಿ ಮಹದೇವಯ್ಯ ಅವರ ಸಂಪಾದನಾ ಕೃತಿಯಾದ ‘ಶೂನ್ಯ ಸಂಪಾದನೆ’ ಯಲ್ಲಿ ಬರುವ ಅಜಗಣ್ಣ ಮತ್ತು ಮುಕ್ತಯಕ್ಕರ ಪ್ರಸಂಗ ಒಂದು ಅತ್ಯುತ್ತಮ ಉದಾಹರಣೆ. ಅಜಗಣ್ಣ ಮತ್ತು ಮುಕ್ತಾಯಕ್ಕ ಇವರಿರ್ವರು ಅಣ್ಣ ತಂಗಿಯರು ಮತ್ತು ಇವರ ವಿಶಿಷ್ಟತೆಯ ಬಗ್ಗೆ ಹೇಳುವುದಾದರೆ, ಇವರು ಗುಪ್ತಶರಣರು. ಇವರು ತಮ್ಮ ಜೀವಮಾನದಲ್ಲಿ ಎಂದಿಗೂ ತಾವು ಶಿವಭಕ್ತರೆಂದು ಎಲ್ಲಿಯೂ ತೋರ್ಪಡಿಸಿಕೊಳ್ಳದೆ ಅಂತರಂಗದಲ್ಲೇ ಪೂಜೆ ಆರಾಧನೆ ಮಾಡುವವರು.

ಹೀಗಿರಬೇಕಾದರೆ ಒಂದು ದಿನ, ಮನೆಯ ಒಳಗೆ ಬರುವಾಗ ಅಜಗಣ್ಣನ ತಲೆ ಬಾಗಿಲಿಗೆ ತಗಲುತ್ತದೆ. ಆಗ ಪಂಚಾಕ್ಷರಿ ಮಂತ್ರವಾದ ನಮಃ ಶಿವಾಯ ಎಂದು ಹೇಳಿಬಿಡುತ್ತಾನೆ. ನಾನು ಇಷ್ಟು ದಿನಗಳವರೆಗೂ ನನ್ನ ಗುಪ್ತ ಭಕ್ತಿಯನ್ನು ಕಾಪಾಡಿಕೊಂಡು ಬಂದಿದ್ದೆ ಆದರೆ ಇವತ್ತು ನನ್ನ ಗುಪ್ತ ಭಕ್ತಿ ಅನಾವರಣವಾಯಿತೆಂದು ಲಿಂಗಸಾನಿಧ್ಯ ಹೊಂದುತ್ತಾನೆ. ದೂರದಲ್ಲಿದ್ದ ತಂಗಿ ಮುಕ್ತಾಯಕ್ಕನಿಗೆ ಗುರುವಿನಂತಿದ್ದ ಅಣ್ಣನ ಹಗಲುವಿಕೆಯಿಂದ ದುಃಖಿತಳಾಗುತ್ತಾಳೆ. ಮುಕ್ತಾಯಕ್ಕ ದುಃಖಿತಳಾಗಿರುವ ಸಂಗತಿ ಅಲ್ಲಮಪ್ರಭು ಅವರಿಗೆ ತಿಳಿದು ಅವರು ಮುಕ್ತಾಯಕ್ಕನ ಬಳಿಗೆ ಬರುತ್ತಾರೆ. ಆಗ ಮುಕ್ತಾಯಕ್ಕನಿಗೆ ನಿನಗೆ ನೀನೇ ಗುರು, ‘ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ಸಂದೇಶವನ್ನು ಆ ಸಂದರ್ಭದಲ್ಲಿ ಹೇಳುತ್ತಾರೆ. ದೇವರ ಇರುವಿಕೆಯನ್ನು ಪ್ರಶ್ನಿಸದೆ, ದೇವರನ್ನು ನಂಬಿ, ತಮ್ಮ ದೇವರನ್ನು ಸಾಮಾಜಿಕವಾಗಿ ಪ್ರದರ್ಶಿಸದೆ ಖಾಸಗಿಯಾಗಿ ಪೂಜಿಸುತ್ತಾ ಪರರಿಗೆ ಚುಟುಕು ತೊಂದರೆಯಾಗದಂತೆ ಜೀವನ ನಡೆಸುತ್ತಿರುವ ಆಚಾರವಂತರಿಂದಲೂ ಈ ಸಮಾಜಕ್ಕೆ ತೊಂದರೆ ಉಂಟಾಗುವುದಿಲ್ಲ. ಇದೇ ತರಹ ಮುಂದುವರಿದ ಕೆಲವು ದೇಶಗಳಲ್ಲಿ ಧಾರ್ಮಿಕತೆಯನ್ನು ವೈಯಕ್ತಿಕವಾಗಿ ಕಾಪಾಡಿಕೊಳ್ಳುವಂತೆ ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸದಂತೆ ನೀತಿ ನಿಯಮ ಕಾನೂನುಗಳು ಜಾರಿಯಲ್ಲಿವೆ. ಹಾಗೆಯೇ ಭಕ್ತಿ ಎಂಬುದು ವೈಯಕ್ತಿಕವಾಗಿದ್ದರೆ ಸಮಾಜಕ್ಕೆ ತೊಂದರೆ ಉಂಟಾಗುವುದಿಲ್ಲ.

ಜೈನ ಧರ್ಮೀಯರು, ಅವರ ಧರ್ಮ ಹೇಳುವಂತೆ ಪ್ರಾಣಿಹಿಂಸೆ ಇಲ್ಲದ ಜೀವನ , ತ್ಯಾಗ, ಮತ್ತು ಆತ್ಮಶುದ್ಧಿ ಇವುಗಳನ್ನು ಅನುಸರಿಸುತ್ತಾರೆ. ಹಾಗೆಯೇ ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಕ್ಕರು, ಪಾರ್ಸಿಗಳು ಮತ್ತು ಲಿಂಗಾಯತರು ಅವರ ಧರ್ಮದ ತತ್ವಗಳಿಗೆ ಅನುಯಾಯಿಗಳಾಗಿರುತ್ತಾರೆ. ಸಮಾಜಕ್ಕೆ ನೋವುಂಟು ಮಾಡುವುದಕ್ಕೆ ಅಲ್ಲ ತಮ್ಮಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು.

ಇವುಗಳನ್ನೆಲ್ಲ ಹೊರತುಪಡಿಸಿ
ದೇವರನ್ನು ವಿಮರ್ಶೆಯ ಒಳಪಡಿಸುವವರು ಮತ್ತು ವೈಯಕ್ತಿಕವಾಗಿ ಪೂಜಿಸುವವರಷ್ಟೆ ಅಲ್ಲದೆ ಸಮಾಜವನ್ನು ಜಾತಿ ಧರ್ಮಗಳ ಅಮಲಿನಲ್ಲಿ ನರಳುವಂತೆ, ದೇವರ ಹೆಸರಿನಲ್ಲಿ ಸಾಮಾನ್ಯ ಜನರನ್ನು ಕೊಂದು ಹಿಂಸಿಸುವುದೆ ಜೀವನದ ಉದ್ದೇಶವಾಗಿಸಿಕೊಂಡ, ಅನೈತಿಕತೆಯುಳ್ಳ ಅಂಧರ ಗುಂಪುಗಳು ಈ ಸಮಾಜದಲ್ಲಿವೆ.

ಅಂಧ ಗುಂಪಿಗೆ ಭಕ್ತಿ ಎಂಬುದೆ ತಿಳಿದಿಲ್ಲ, ಅವರ ಅಂತರಾಳದಲ್ಲಿ ಭಕ್ತಿ ಎಂಬುದಕ್ಕೆ ಜಾಗವೇ ಇಲ್ಲ, ಹುಟ್ಟಿರುವ ಜೀವಕ್ಕೆ ಅರ್ಥವೂ ಇಲ್ಲ. ಹಾಗಾದರೂ ನಾವಷ್ಟೇ ಶ್ರೇಷ್ಠ, ನಮ್ಮ ದೇವರೇ ಪರಮ ಶ್ರೇಷ್ಠ, ನಮ್ಮ ಧರ್ಮದ ಆಚರಣೆಗಳೆ ಪರಮೋಚ್ಚವಾದವು ಎಂದು, ಬೀಸುವ ಗಾಳಿಗೆ ಖಾಲಿ ಬಿಂದಿಗೆ ಹಲುಗಾಡುವಂತೆ, ವಿಚಾರವಂತಿಕೆ ಎಂಬುದೇ ಇಲ್ಲದ ಖಾಲಿ ತಲೆಗಳಿಂದ ದೇವರನ್ನು ಮತ್ತದರ ಧರ್ಮವನ್ನು ರಕ್ಷಿಸಲು ಹೊರಟವರೇ ಈ ಅಂಧ ಗುಂಪಿನ, ಅಂಧ ಭಕ್ತರು.

ಈ ಅಂಧರ ಬಗ್ಗೆ ಇನ್ನೂ ವಿವರಿಸಿ ಹೇಳುವುದಾದರೆ, ಅನಾರೋಗ್ಯ ಪೀಡಿತ ರೋಗಿಗೆ ಚಿಕಿತ್ಸೆ ನೀಡಲು ಇವರಿಗೆ ವೈದ್ಯಕೀಯವು ಗೊತ್ತಿಲ್ಲ, ಕನಿಷ್ಠಪಕ್ಷ ಇವರಿಗೆ ತಲೆನೋವು, ನಗಡಿ ಶೀತಕ್ಕೆ ಕಷಾಯ ಮಾಡಲು ಸಹ ಬರುವುದಿಲ್ಲ. ಆದರೂ ಇವರುಗಳು ಪುರಾಣ- ಪಾಪಿ ಕತೆಗಳಲ್ಲಿ ಬರುವ ಕಪಿಯೊಂದು ಲಂಕೆಗೆ ಹಾರಿ, ಆ ಲಂಕೆಗೆ ಬೆಂಕಿಯಿಟ್ಟು, ತನ್ನ ಒಡೆಯನ ಪ್ರಾಣ ಉಳಿಸಲು ಸಂಜೀವಿನಿ ಬೆಟ್ಟ ತಂದ, ಕಲ್ಪಿತ ಕಥೆಗಳನ್ನು ಜನರಿಗೆ ಹೇಳುತ್ತಾ ತಮ್ಮನ್ನು ತಾವುಗಳೇ ಪವಾಡ ಪುರುಷರೆಂದು, ಅಜೈವಿಕ ಶಿಶುಗಳೆಂದು ಜಂಬ ಕೊಚ್ಚಿಕೊಳ್ಳುತ್ತಾ, ಮಾನಸಿಕ ಅಸ್ವಸ್ಥೆಗೆ ಒಳಗಾಗಿರುತ್ತಾರೆ.

ಇವರು ಸಮಾಜದ ಮುಂದೆ ತಮ್ಮನ್ನು ದೊಡ್ಡ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಮಾಡುವ ಹೇಸಿಗೆ ಕೆಲಸಗಳೆಂದರೆ, ಧಾರ್ಮಿಕ ದೊಂಬಿ- ಗಲಾಟೆಗಳು, ಸಾಮಾನ್ಯರ ಕೊಲೆ, ಸುಲಿಗೆ, ದರೋಡೆ, ಹಿಂಸೆ, ಅತ್ಯಾಚಾರ, ಹತ್ಯಾಕಾಂಡಗಳು. ಉದಾಹರಣೆಗೆ ಜೂನ್ ತಿಂಗಳ ಮೊದಲ ವಾರದಂದೂ, ಉತ್ತರ ಪ್ರದೇಶದ ಸುಲ್ತಾನಾಪುರದಲ್ಲಿ ಆರು ಅಂಧಭಕ್ತರಿದ್ದ ಗುಂಪೊಂದು ಅಫ್ತಾಬ್ ಆಲಮ್ ಮತ್ತು ಜೀಷನ್ ಎಂಬುವವರ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿತ್ತು. ಅವರಿಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು ಮತ್ತು ಜೈ ಶ್ರೀ ರಾಮ್ ಎಂದು ಕೂಗಲು ನಿರಾಕರಿಸಿದ ಕಾರಣಕ್ಕೆ ಅವರಿಗೆ ಈ ರೀತಿ ಹಲ್ಲೆ ಮಾಡಲಾಗಿತ್ತು.

ಕಳೆದ ವರ್ಷ ಜೂನ್ ತಿಂಗಳಲ್ಲಿ ತೆಂಕಣ ಬೆಂಗಳೂರಿನ, ಸಂಪಿಗೆನಹಳ್ಳಿಯಲ್ಲಿ 27 ವರ್ಷದ ವಸಿಂ ಅಹಮದ್ ಎಂಬ ಮುಸ್ಲಿಂ ವ್ಯಕ್ತಿಯ ಮೇಲೆ 7-8 ಜನರ ಗುಂಪು ಅನಾವಶ್ಯಕವಾಗಿ ಹಲ್ಲೆ ಮಾಡಿ, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸಿ, ಅಹಮದ್ ಗೆ ಹೊಡೆದ ಕಾರಣ ಆತನ ಮುಖಕ್ಕೆ, ಪೆಕ್ಕೆಲುಬಿಗೆ ಮತ್ತು ಬಲ ಕಿವಿಗೆ ಗಾಯಗಳಾದವು. ಈ ಘಟನೆ ಕುರಿತು ಸಂಪಂಗೇನ್ಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣವು ದಾಖಲಾಗಿತ್ತು.

ಫೆಬ್ರವರಿ 2024ರಲ್ಲಿ ಮಂಗಳೂರಿನಲ್ಲಿ ಕೋಮುವಾದದ ಘಟನೆ ನಡೆದಿತ್ತು, ಇಬ್ಬರೂ ಬಿಜೆಪಿ ಎಂಎಲ್ಎ ಗಳಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ಎಂಬುವರು ಅವರ ಜೊತೆ ಇನ್ನೂ ಮೂರು ಜನ ಸೇರಿ ಸೆಂಟ್ ಜೆರೋಸಾ ಇಂಗ್ಲಿಷ್ ಮಾಧ್ಯಮದ ಶಾಲಾ ಮಕ್ಕಳಿಗೆ ಜೈ ಶ್ರೀರಾಮ್ ಎಂದು ಕೂಗಲು ಬಲವಂತ ಪಡಿಸಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದ ಕಾರಣ ಅವರ ಮೇಲೆ ಮಂಗಳೂರು ಸೌತ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್ಐಆರ್ ದಾಖಲಾಗಿತ್ತು.

2002 ರಲ್ಲಿ ಗುಜರಾತ್ ನಲ್ಲಿ ನಡೆದ ಗೋಧ್ರ ಹತ್ಯಾಕಾಂಡ, ಯಾತ್ರಿಕರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಯೋಧ್ಯೆಯಿಂದ ಹಿಂದಿರುಗುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ ರೈಲಿಗೆ ಕುತಂತ್ರಿಗಳು ಬೇಕಂತಲೆ ಬೆಂಕಿ ಹಾಕಿ 59 ಜನರನ್ನು ಕೊಂದರು, ಸತ್ತವರು ಹಿಂದೂಗಳೆಂದು, ಸಾವಿಗೆ ಕಾರಣ ಆದವರು ಮುಸ್ಲಿಮರೆಂದು, ಈ ಪೂರ್ವ ನಿಯೋಜಿತ ಕೊಲೆಯನ್ನು ಮುಸ್ಲಿಂ ಸಮುದಾಯದ ತಲೆಗೆ ಕಟ್ಟಲಾಗಿ. ನಂತರ ಅದಕ್ಕೆ ಪ್ರತಿಕಾರ ತೆಗೆದುಕೊಳ್ಳುವಂತೆ ಮುಸ್ಲಿಂ ಸಮುದಾಯದ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಯಿತು ಅದರ ಫಲವಾಗಿ, 2,000 ಜನ ಸಾವನ್ನಪ್ಪಿದ್ದರು, 2500 ಜನರಿಗೆ ಹಾನಿಯಾಯಿತು, 223 ಜನರು ಕಾಣೆಯಾದರು.

ಇದೆಲ್ಲವೂ ನಡೆದದ್ದು ಅಂಧ ಭಕ್ತರ ಗುಂಪಿನಿಂದ.
ಇವರುಗಳೆಲ್ಲಾ, ಇಷ್ಟೆಲ್ಲವನ್ನು ಮಾಡುವುದು ಯಾರಿಗಾಗಿ ? ದೇವರಿಗಾಗಿಯೇ ? ಧರ್ಮಕ್ಕಾಗಿಯೇ ? ಇವರು ಹೇಳುವ ದೇವರ ಕಥೆಗಳಲ್ಲಿ ಚಾರಿತ್ರಿಕವಾದವುಗಳು ಇರುವುದಿಲ್ಲ, ಜನಪದ ಕಥೆಗಳನ್ನು ಬಳಸಿಕೊಂಡು ಇವರೇ ಒಂದು ಕಥೆ ಕಟ್ಟಿರುತ್ತಾರೆ, ಕಲ್ಪನೆಗಳಿಂದ ಕೂಡಿದ, ಕಲ್ಪಿತ ದೇವರುಗಳನ್ನೇ ಸನಾತನ ಧರ್ಮದ ಅಥವಾ ಹಿಂದೂ ಧರ್ಮದ ದೇವರುಗಳೆಂದು ಪ್ರಚಾರಪಡಿಸಿದ್ದಾರೆ. ಈ ಧರ್ಮಕ್ಕೆ ತಳಹದಿಯೇ ಇಲ್ಲ, ನಿಂತಿರುವುದು ಗಾಳಿಯ ಗೋಪುರದ ಮೇಲೆ. ವೈದಿಕರು ತಮ್ಮ ಸ್ವಾರ್ಥಕ್ಕೆ ಸಮಾಜವನ್ನು ಯಾಮಾರಿಸುತ್ತ ತಮ್ಮ ಸ್ವಾರ್ಥ ಮತ್ತು ಕ್ರೂರ ಇಚ್ಛೆಗೆ ಬಳಸಿಕೊಳ್ಳಲು ಕೊಟ್ಟಂತಹ ಹೆಸರುಗಳಿವು.

ನಾವು ದೇವರಿಗೆ ಭಕ್ತಿಯಿಂದ ಇದ್ದೇವೆ, ಧರ್ಮಕ್ಕೆ ನಿಷ್ಠೆಯಿಂದ ಇದ್ದೇವೆ ಎಂದು ಹೇಳುವವರು ಮಾಡುವ ಹೇಸಿಗೆ ಕೃತ್ಯಗಳು ಈ ಮೇಲಿನವು. ನಿಜವಾಗಿ ಭಕ್ತಿ ಎಂಬುದನ್ನು ಶಿವಶರಣರಿಂದ ನೋಡಿ ಕಲಿಯಬೇಕು. ಹರಿಹರನ ರಗಳೆಗಳಲ್ಲಿ ಮಾದರ ಚೆನ್ನಯ್ಯನ ರಗಳೆ ಎಂಬುದು ಮಹತ್ವದ್ದು ಮತ್ತು ಬಲು ಪ್ರಸಿದ್ಧ. ಮಾದರ ಚೆನ್ನಯ್ಯನೆಂಬ ಶಿವಭಕ್ತ ಜೀವನ ಸಾಗಿಸುವುದಕ್ಕಾಗಿ ರಾಜ ಕರಿಕಾಲ ಚೋಳನ ಅರಮನೆಯಲ್ಲಿದ್ದ ಕುದುರೆಗಳಿಗೆ ಹುಲ್ಲು ತಂದು ಹಾಕುವ ಕೆಲಸ ಮಾಡುತ್ತಿರುತ್ತಾನೆ. ಈತ ದಿನ ಬೆಳಿಗ್ಗೆ ಕುದುರೆಗಳಿಗೆ ಹುಲ್ಲು ತಂದು ಹಾಕಿ, ನಂತರ ಊಟ ಮಾಡುವಾಗ, ಒಂದು ದಿನವೂ ತಪ್ಪಿಸಿದೆ ಶಿವನಿಗೆ ತಾನು ಕುಡಿಯುತ್ತಿದ್ದ ಅಂಬಲಿಯನ್ನೇ ನೈವೇದ್ಯವನ್ನಾಗಿ ಇಟ್ಟು ಸ್ವಲ್ಪ ಹೊತ್ತಿನ ನಂತರ ಅದನ್ನು ಸೇವಿಸುತ್ತಿದ್ದನು. ಇವನ ಹಾಗೆಯೇ ಕರಿಕಾಲ ಚೋಳನ್ನು ಸಹ ಶಿವಭಕ್ತ, ಅವನು ತನ್ನ ಆಸ್ತಿ ಅಂತಸ್ತು ಸಂಪತ್ತಿಗೆ ಸಮನಾಗಿ ಶಿವನಿಗೆ ನೈವೇದ್ಯ ಇಡುತ್ತಿದ್ದನು. ಮಾದರ ಚೆನ್ನಯ್ಯ ತನ್ನ ಭಕ್ತಿ ಸ್ವಾಮಿ ನಿಷ್ಠೆಯನ್ನು ಅರವತ್ತು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದನು. ಒಂದು ದಿನವೂ ತಪ್ಪಿಸಿರಲಿಲ್ಲ, ಒಂದು ದಿನ ಶಿವನು, ತನ್ನ ಭಕ್ತನಾದ ಚೆನ್ನಯ್ಯನಿಟ್ಟಿದ್ದ ಅಂಬಲಿಯನ್ನು ಸೇವಿಸಿದನ ಕಾರಣ ರಾಜನಿಟ್ಟಿದ್ದ ನೈವೇದ್ಯವನ್ನು ಸೇವಿಸಲಾಗಲಿಲ್ಲ ಇದನ್ನು ಅರಿಯದೆ ಕೋಪಗೊಂಡ ಚೋಳನೂ ತನ್ನನ್ನು ತಾನೇ ಕೊಂದುಕೊಳ್ಳಲು ಮುಂದಾಗುತ್ತಾನೆ, ಆಗ ಶಿವ ಬಂದು ಆತನನ್ನು ತಡೆದು, ನಾನು ಈ ದಿನ ಮಾದರ ಚೆನ್ನಯ್ಯನ ಮನೆಯಲ್ಲಿ ಅಂಬಲಿ ಕೂಡಿದೆ ಹಾಗಾಗಿ ನೀನು ಇಟ್ಟಿದ್ದ ನೈವೇದ್ಯವನ್ನು ಸೇವಿಸಲಾಗಲಿಲ್ಲ ಎಂದು ಹೇಳಿದಾಗ. ಕರಿಕಾಲ ಚೋಳ ತಾನು ರಾಜನೆಂಬುದನ್ನು ರಕ್ಷಿಸಿದೆ ಚೆನ್ನಯ್ಯನಿಗೆ ಸತ್ಕರಿಸುತ್ತಾನೆ ನಂತರ ಚೆನ್ನಯ್ಯ ಶಿವಗಣ ಸೇರುತ್ತಾನೆ. ಇದು ಮಾದರ ಚೆನ್ನಯ್ಯನ ರಗಳೆಯ ಸಾರಾಂಶ. ಶಿವಶರಣರು ಮತ್ತು ಶಿವ, ಹಣ ಆಸ್ತಿ ಅಂತಸ್ತು ಸಂಪತ್ತು, ಆಡಂಬರಿಗಳಿಗೆ ಆಸೆ ಪಟ್ಟವರು ಅಲ್ಲ, ಆಸೆ ಪಡುವುದು ಇಲ್ಲ.

ಶಿವನಿಗೆ ಭಕ್ತನಾಸೆ – ಭಕ್ತನಿಗೆ ಶಿವನಾಸೆ, ವಚನಕಾರ ಬಸವಣ್ಣ ಹೇಳುವ ಹಾಗೆ
ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲಯ್ಯಾ
ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲಯ್ಯಾ
ನಾದವ ಮಾಡಿದ ರಾವಣಂಗೆ ಅರೆ ಆಯುಷ್ಯವಾಯಿತ್ತು
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು
ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
ಭಕ್ತಿಪ್ರಿಯ ನಮ್ಮ ಲಿಂಗದೇವ.

ಆದರೆ ಇಲ್ಲಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮುದುಕನಿಂದ ಹುಡುಗನಿಂದ ಹೆಂಗಸಿನಿಂದ ಜೈ ಶ್ರೀ ರಾಮ್ ಎಂದು ಹೇಳಿಸಿದರೆ ಅದು ತಳಹದಿಯೇ ಇಲ್ಲದ ಹಿಂದೂ ಧರ್ಮಕ್ಕೆ ಕ್ಷೋಭೆ ತರುವುದು, ಅದನ್ನೇ ಹಿಂದೂ ಧರ್ಮ ಅಥವಾ ಸನಾತನ ಧರ್ಮ ಬಯಸುವುದು. ಸತ್ಯಾರ್ಥದಲ್ಲಿ, ಜನರಿಗೆ ಭಕ್ತಿ ಸಾರುವರಲ್ಲಿ ಇರಬೇಕಾದದ್ದು ಕರುಣೆ ದಯೆ, ಕ್ರೌರ್ಯವಲ್ಲ.

ಇದು ಅಂಧ ಗುಂಪಿಗೆ ಗೊತ್ತಾ ಎಂದರೆ ನಿಜವಾಗಲೂ ಗೊತ್ತಿಲ್ಲ, ಅಂಧ ಗುಂಪಿನ ಸೂತ್ರಧಾರನಾದ ಕುತಂತ್ರ ಸಂಸ್ಕೃತದವನಿಗೆ ಗೊತ್ತು, ಸೂತ್ರದಾರ ತಾನು ಮೈಬಗ್ಗಿಸಿ ದುಡಿದು ತಿನ್ನಲಾರದ ಸೋಂಬೇರಿ ಆಗಿರುವುದರಿಂದ, ತನ್ನ ವೈಯಕ್ತಿಕ ಜೀವನ ಬಹಳ ಆಡಂಬರದಿಂದ ಕೂಡಿರಬೇಕೆಂದು ಬಯಸುವ ಕಾರಣ ಇವುಗಳನ್ನೆಲ್ಲ ಮಾಡಿಸುತ್ತಾನೆ. ಸಮಾಜದಲ್ಲಿ ಶಾಂತಿ ಕದಡಿ ದೊಂಬಿಯೆಬ್ಬಿಸಿ ತನ್ನ ವೈಭೋಗಯುತವಾದ ಜೀವನವನ್ನು ಹೆಚ್ಚಿಸಿಕೊಳ್ಳುತ್ತಾನೆ. ಅಂಧ ಗುಂಪಿಗೆ ತಾವು ಹೇಸಗುವ ಕೃತ್ಯದ ಒಳ ಮರ್ಮ ಅವರಿಗೆ ಬೇಕಾಗಿಲ್ಲ,
ಆ ಗುಂಪಿಗೆ ಬೇಕಿರುವುದು ಸೂತ್ರಧಾರನ ನಿರ್ದೇಶನ ಮತ್ತು ಆತ ಎಸೆಯುವ ಮೂಳೆ, ಅಷ್ಟೇ. ಆ ಮೂಳೆ ಕುರಿದೊ ಕೋಳಿದೊ ನಾಯಿದೊ ದನಿಂದೊ ಅಥವಾ ಮನುಷ್ಯನದೊ, ಎಂಬ ವಿಷಯ ಬೇಡ. ಮೂಳೆ ಬೇಕಷ್ಟೇ, ಆ ಅಂಧ ಗುಂಪಿಗೆ. ಆ ಗುಂಪಿಗೆ ಮನುಷ್ಯನ ಮೂಳೆ ಎಂದರೆ ಬಹಳ ರುಚಿ, ಹೆಚ್ಚು ಮನುಷ್ಯನ ಮೂಳೆಯನ್ನು ಬಯಸುತ್ತದೆ, ಮನುಷ್ಯನ ರಕ್ತವೇ ಬೇಕು, ಹಾಗಾಗಿ ಇಷ್ಟೆಲ್ಲಾ ರಕ್ತಪಾತ. ಮೂಳೆಗಾಗಿ ಏನು ಬೇಕಾದರು ಮಾಡಲು ಸಿದ್ಧ.‌

ಈ ಕ್ರೌರ್ಯಕ್ಕೆ ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳ ಕೃಪಾಕಟಾಕ್ಷ, ಒಮ್ಮತ, ಸಮ್ಮತಿ ಎಲ್ಲವೂ ಇದೆ. ಜೊತೆಗೆ ಕೆಲವು ಎಂಜಲು ಮಾಧ್ಯಮಗಳ ಬೂಟು ನೆಕ್ಕುವಿಕೆ, ಒಡೆಯನ ನಿಷ್ಠೆ ಒಂದು ಕೈ ಮೇಲಿದೆ.

ಇತ್ತೀಚಿಗೆ ತಿರುವನಂತಪುರಂನಲ್ಲಿ ಬಿ ಎಲ್ ಜೋಸ್ ಎಂಬ ವ್ಯಕ್ತಿ ಪರಿಚಯ ಆದರು, ಆತ ಹೊಟ್ಟೆಪಾಡಿಗಾಗಿ ನಗರದಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ, ಆತ ಗೋದ್ರಾ ಹತ್ಯಾಕಾಂಡದ ನೇರ ಸಂತ್ರಸ್ತ. ಆದ ನನ್ನ ಬಳಿ ಹೇಳಿದ ವಿಷಯವೇನೆಂದರೆ, 2002 ಆ ಸಮಯದಲ್ಲಿ ಗುಜರಾತ್ನಲ್ಲಿ ಪೊಲೀಸ್ ಪಡೆಗಳಿಗೆ ಕರಾಟೆ ಮಾಸ್ಟರ್ ಆಗಿ ತರಬೇತಿ ಕೊಡುತ್ತಿರುತ್ತಾನೆ, ಆತನ ಹೆಂಡತಿ ಮತ್ತು ಇಬ್ಬರ ಮಕ್ಕಳು ಅವನ ಜೊತೆಯಲ್ಲಿಯೇ ಗುಜರಾತ್ ನಲ್ಲಿ ಇರುತ್ತಾರೆ. ಹತ್ಯಾಕಾಂಡದ ಸಮಯದಲ್ಲಿ ಈತ ವಾಸಿಸುತ್ತಿದ್ದ ಮನೆಯ ಮುಂದೆ ನೂರಾರು ಜನ ಸೇರಿ ಒಬ್ಬ ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟು ಸಾಯಿಸುತ್ತಾರೆ, ಮುಂದಿನ ದಿನ ತನ್ನ ಹೆಂಡತಿಯು ನಗರಕ್ಕೆ ಹೋಗಿ ಮನೆಗೆ ಬರುವ ಸಂದರ್ಭದಲ್ಲಿ ಆಕೆಯು ಮುಸ್ಲಿಂ ವ್ಯಕ್ತಿಗೆ ಸೇರಿದ್ದ ವ್ಯಾನ್ ನಲ್ಲಿ ಚಲಿಸುತ್ತಿರಬೇಕಾದರೆ ಹಿಂದೂ ಭಯೋತ್ಪಾದಕರು ಆ ವ್ಯಾನಿನಲ್ಲಿ ಇರುವವರೆಲ್ಲ ಮುಸ್ಲಿಮರೆಂದು ಭಾವಿಸಿ ಅಥವಾ ಬೇಕೆಂತಲೆ ಆ ವಾಹನಕ್ಕೆ ಬೆಂಕಿ ಹಚ್ಚಿದಾಗ ಈತನ ಹೆಂಡತಿಯು ಕೊಲೆಯಾಗುತ್ತಾಳೆ. ಗುಜರಾತ್ ನ ಗೋದ್ರಾ ಹತ್ಯಾಕಾಂಡಕ್ಕೆ ಒಕ್ಕೂಟ ಸರ್ಕಾರವಾಗಲಿ ಗುಜರಾತ್ ಸರ್ಕಾರವಾಗಲಿ ಸಮಂಜಸವಾದ ನ್ಯಾಯ ಮತ್ತು ಪರಿಹಾರವನ್ನು ಇಂದಿನವರೆಗೂ ನೀಡಲಿಲ್ಲ. ಗೋದ್ರಾ ಹತ್ಯಾಕಾಂಡವು ಮಾನವ ಕುಲವೇ ಹೇಸಿಗೆ ಪಡುವಂತಹ ಘಟನೆ ಆದರೆ ಈ ಹತ್ಯಾಕಾಂಡ ಮಾಡಿದ್ದು ತಳಹದಿ ಇಲ್ಲದ ಹಿಂದೂ ಧರ್ಮದ ರಕ್ಷಣೆಗಾಗಿ.

ಹಿಂದೂ ಧರ್ಮ ಎಂದರೆ ಕುತಂತ್ರ ಸಂಸ್ಕೃತದವರ ಸೊಕ್ಕಿನ ಪ್ರದರ್ಶನ, ಮಿಕ್ಕೆಲ್ಲ ಜನರು ಅಂದರೆ ಮಹಿಳೆಯರು ಮಕ್ಕಳು ಕೇಳ ಜಾತಿಯವರು ಅನ್ಯ ಧರ್ಮರು ಆ ಸೊಕ್ಕಿಗೆ ಬಲಿಯಾಗಿ ನೆರಳುವುದು. ಇವುಗಳನ್ನೆಲ್ಲ ಸನಾತನ ಧರ್ಮವನ್ನು ಉಳಿಸಲು ಅಂದ ಭಕ್ತರು ಮಾಡುವ ಕೆಲಸಗಳು, ಅಲ್ಲ ಅಲ್ಲ ಧರ್ಮ ರಕ್ಷಣೆಯ ಮಹತ್ಕಾರ್ಯಗಳು ಇವು. – ಮಸೀದಿಯ ಮುಂದೆ ಹೋಗಿ ಜೈ ಶ್ರೀರಾಮ್ ಎಂದು ಕೂಗುವುದು, ಅದೇ ಮಸೀದಿಗಳಿಗೆ ಕಲ್ಲು ಹೊಡೆಯುವುದು, ಮಸೀದಿಯ ಕೆಳಗೆ ಶಿವಲಿಂಗ ಹುಡುಕುವುದು, ಮುಸ್ಲಿಂ ಹೆಂಗಸರ ಮೇಲೆ ಅತ್ಯಾಚಾರ ಮಾಡುವುದು, ಮುಸ್ಲಿಂ ಗಂಡಸರನ್ನು, ಮಕ್ಕಳನ್ನು ಕೊಲ್ಲುವುದು, ಚರ್ಚ್ ಗಳಿಗೆ ಬೆಂಕಿ ಹಚ್ಚುವುದು, ಕ್ರಿಶ್ಚಿಯನ್ ಜನರನ್ನು ಕೊಲೆ ಮಾಡುವುದು, ಲಿಂಗಾಯತ ಧರ್ಮಕ್ಕೆ ಸಂವಿಧಾನದ ಅಡಿಯಲ್ಲಿ ಧರ್ಮದ ಮಾನ್ಯತೆ ಸಿಗದೇ ಇರುವ ಹಾಗೆ ಮಾಡಿ ಅವರನ್ನು ಹಿಂದೂಗಳನ್ನಾಗಿ ಮಾಡುವುದು, ಅಸ್ಪೃಶ್ಯತೆಯ ಪ್ರಮಾಣವನ್ನು ತೀವ್ರಗೊಳಿಸುವುದು. ಸಾಮಾಜಿಕ ಅಂತರವನ್ನು ಹೆಚ್ಚಿಸುವುದು, ಇನ್ನು ಮುಂತಾದವುಗಳು.

ಹಿಂದೂ ಧರ್ಮದಲ್ಲಿ ಕೊಲೆಗಳೆ – ಆಚರಣೆ,
ಸುಲಿಗೆ – ಧರ್ಮಗುರು,
ಕ್ರೌರ್ಯ – ಧರ್ಮದ ಸಂದೇಶ ಮತ್ತು ಉದ್ದೇಶ,
ಅತ್ಯಾಚಾರ – ಧರ್ಮದ ಸಾಧನೆ.

ಉತ್ತರ ಪ್ರದೇಶದಲ್ಲಿ 16ನೇ ಶತಮಾನದಲ್ಲಿ ನಿರ್ಮಾಣವಾದ ಬಾಬ್ರಿ ಮಸೀದಿ ಕೆಡವಿದನ್ನು ಹಿಂದೂ ಧರ್ಮದ ಶ್ರೇಯಸ್ಸು, ಸಾಧನೆ ಎಂದು ಬಿಂಬಿಸಿ, ಲೋಕದ ಮುಂದೆ ಇಂತಹ ಕೊಲೆಪಾತಕಿ ಗುಂಪೊಂದು ಇದೆ ಎಂಬ ಹೆಗ್ಗಳಿಕೆಗೆ ಕಾರಣವಾಗಿ. ಮಸೀದಿಯ ಜಾಗದಲ್ಲಿ ರಾಮಮಂದಿರ ಎಂಬ ಖಾಸಗಿ ಕಟ್ಟಡವನ್ನು ನಿರ್ಮಿಸಿ, ಅಕ್ರಮವೇ ಆ ಕಟ್ಟಡದ ಜೀವಾಳವಾಯಿತು.

ಗುಂಪು ಗುಂಪು ಗುಂಪು, ಗುಂಪು ಯಾವಾಗಲೂ ಅಂಧವಾಗಿರುತ್ತದೆ, ಅಂದರೆ ಕುರುಡಾಗಿರುತ್ತದೆ ಅಂತ ಅರ್ಥ. ಈ ಕುರುಡು ಗುಂಪಿಗೆ ಸ್ವಲ್ಪ ಗರ ಹೊಡೆದರು ಸಹ ರಕ್ತಪಾತವೇ ಹರಿಯುತ್ತದೆ. ಈ ನಾಡಿನಲ್ಲಿ ಸಾವಿರಾರು ವರ್ಷಗಳಿಂದ ನೂರಾರು ವರ್ಷಗಳಿಂದ ದ್ರಾವಿಡರು, ಬೌದ್ಧರು, ಜೈನರು, ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಲಿಂಗಾಯತರು ಜೀವಿಸುತ್ತಿದ್ದಾರೆ. ನಮ್ಮ ಅಭಿಲಾಷೆ ಈ ನಾಡು ‘ಸರ್ವ ಜನಾಂಗದ ಶಾಂತಿಯ ತೋಟ’ ಆಗಬೇಕೆಂದು.

You cannot copy content of this page

Exit mobile version