ಬೆಂಗಳೂರು : ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಗುರೂಜಿ (Aryavardhan Guruji) ವಿರುದ್ಧ ಬೆಂಗಳೂರಿನಲ್ಲಿ (Bengaluru) ಕಾನೂನು ಸಂಕೋಲೆ ಬಿಗಿಯಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಹಿಂದೂ ದೇವತೆ ಹಾಗೂ ಮಹಿಳೆಯರ ಕುರಿತು ಅವಹೇಳನಕಾರಿಯಾಗಿ (Controversy Statement) ಮಾತನಾಡಿದ ಆರೋಪದ ಹಿನ್ನೆಲೆಯಲ್ಲಿ, ಗುರೂಜಿ ವಿರುದ್ಧ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ಇದೀಗ ಅಧಿಕೃತವಾಗಿ ಎಫ್ಐಆರ್ (FIR) ದಾಖಲಾಗಿದೆ.
ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರ್ಯವರ್ಧನ್ ಗುರೂಜಿ ಅವರು ಲಕ್ಷ್ಮೀ ದೇವಿಯನ್ನು ಮಾನವನ ಅಂಗಾಂಗವೊಂದಕ್ಕೆ ಹೋಲಿಸಿ ಮಾತನಾಡಿದ್ದರು ಎನ್ನಲಾಗಿದೆ. ಅಷ್ಟಕ್ಕೇ ನಿಲ್ಲಿಸದೆ, ಆ ನಿರ್ದಿಷ್ಟ ಅಂಗಕ್ಕೆ ಪೂಜೆ ಮಾಡಬೇಕು ಎಂದೂ ಹೇಳಿಕೆ ನೀಡಿದ್ದರು.
ಗುರೂಜಿ ಅವರ ಈ ವಿವಾದಾತ್ಮಕ ಮಾತುಗಳಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಧಾರ್ಮಿಕ ಭಾವನೆಗೆ ಧಕ್ಕೆ, ಕಠಿಣ ಕ್ರಮಕ್ಕೆ ಒತ್ತಾಯ
ಆರ್ಯವರ್ಧನ್ ಗುರೂಜಿ ಅವರ ಈ ಆಕ್ಷೇಪಾರ್ಹ ಹೇಳಿಕೆಯಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಿದೆ. ಜೊತೆಗೆ ಒಟ್ಟಾರೆ ಸ್ತ್ರೀ ಸಮುದಾಯದ ಗೌರವಕ್ಕೂ ಭಂಗ ಉಂಟಾಗಿದೆ ಎಂದು ಸಾರ್ವಜನಿಕರು ಹಾಗೂ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಈ ಹಿನ್ನೆಲೆಯಲ್ಲಿ ‘ಕರ್ನಾಟಕ ಗೋವು ರಕ್ಷಕರು’ ಸಂಘಟನೆಯ ಪದಾಧಿಕಾರಿಗಳು ಶಂಕರಪುರಂ ಪೊಲೀಸ್ ಠಾಣೆಗೆ ತೆರಳಿ, ಗುರೂಜಿ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಲಿಖಿತ ದೂರು ನೀಡಿದ್ದರು.
ಗೋವು ರಕ್ಷಕರು ನೀಡಿದ ದೂರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಸಾಕ್ಷ್ಯಾಧಾರಗಳನ್ನು ಗಂಭೀರವಾಗಿ ಪರಿಗಣಿಸಿರುವ ಶಂಕರಪುರಂ ಠಾಣೆಯ ಪೊಲೀಸರು, ಸದ್ಯ ಆರ್ಯವರ್ಧನ್ ಗುರೂಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಭ್ಯವಿರುವ ಡಿಜಿಟಲ್ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಮುಂದಿನ ಕಾನೂನು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
