Home ಬ್ರೇಕಿಂಗ್ ಸುದ್ದಿ ಬೇಲೂರು ಚೆನ್ನಕೇಶವ ದೇಗುಲದಲ್ಲಿ ಹುಂಡಿ‌ ಕಳ್ಳತನ – 2 ಲಕ್ಷ ಹಣ ಎಗರಿಸಿದ ವಿಡಿಯೋಗ್ರಾಫರ್

ಬೇಲೂರು ಚೆನ್ನಕೇಶವ ದೇಗುಲದಲ್ಲಿ ಹುಂಡಿ‌ ಕಳ್ಳತನ – 2 ಲಕ್ಷ ಹಣ ಎಗರಿಸಿದ ವಿಡಿಯೋಗ್ರಾಫರ್

ಹಾಸನ : ವಿಶ್ವವಿಖ್ಯಾತ ಹಾಸನ (Hassan) ಜಿಲ್ಲೆಯ ಬೇಲೂರು ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ (Chennakeahava Swamy temple) ಭಕ್ತರು ದೇವರಿಗೆ ಭಕ್ತಿಯಿಂದ ಸಮರ್ಪಿಸಿದ ಕಾಣಿಕೆ ಹಣಕ್ಕೆ ಕನ್ನ (Crime) ಹಾಕಲು ಯತ್ನಿಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದೇವಾಲಯದ ಹುಂಡಿ ಎಣಿಕೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲು ಬಂದಿದ್ದ ವಿಡಿಯೋಗ್ರಾಫರ್ ಒಬ್ಬನೇ ಲಕ್ಷಾಂತರ ರೂಪಾಯಿ ಹಣವನ್ನು ಕದ್ದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ದೇವಾಲಯದ ಪಾರದರ್ಶಕತೆಗಾಗಿ ಹುಂಡಿ ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಲು ನೀಲಕಂಠ ಎಂಬ ವಿಡಿಯೋಗ್ರಾಫರ್‌ನನ್ನು ಕರೆಯಿಸಲಾಗಿತ್ತು. ಇಡೀ ಜಗತ್ತಿಗೆ ಕಳ್ಳತನವಾಗದಂತೆ ಕಣ್ಣಿಡಲು ಬಂದ ಈ ಭೂಪ, ಅಧಿಕಾರಿಗಳ ಕಣ್ಣು ತಪ್ಪಿಸಿ ತಾನೇ ಹುಂಡಿ ಹಣವನ್ನು ಎಗರಿಸಲು ಆರಂಭಿಸಿದ್ದಾನೆ. ಎಣಿಕೆ ನಡೆಯುತ್ತಿದ್ದ ಜಾಗದಲ್ಲೇ ಯಾರಿಗೂ ತಿಳಿಯದಂತೆ ಬರೊಬ್ಬರಿ 1.98 ಲಕ್ಷ ರೂಪಾಯಿ ನಗದನ್ನು ಕದ್ದು ತನ್ನ ಬಳಿ ಬಚ್ಚಿಟ್ಟುಕೊಂಡಿದ್ದನು.

ಪೊಲೀಸ್ ಪೇದೆಯ ಚಾಣಾಕ್ಷತನ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಳ್ಳ

ವಿಡಿಯೋಗ್ರಾಫರ್ ನೀಲಕಂಠ ಅತ್ಯಂತ ಜಾಣ್ಮೆಯಿಂದ ಹಣವನ್ನು ಕದಿಯುತ್ತಿದ್ದ ದೃಶ್ಯವನ್ನು ದೇವಾಲಯದ ಭದ್ರತೆಯಲ್ಲಿದ್ದ ಪೊಲೀಸ್ ಪೇದೆಯೊಬ್ಬರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಪೇದೆ, ಈ ಕಳ್ಳತನದ ವಿಚಾರವನ್ನು ತಹಶೀಲ್ದಾರ್ ಹಾಗೂ ದೇವಾಲಯದ ಉನ್ನತಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಬೇಲೂರು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆರೋಪಿ ನೀಲಕಂಠನನ್ನು ತಪಾಸಣೆ ನಡೆಸಿದಾಗ ಆತ ಕದ್ದಿದ್ದ 1.98 ಲಕ್ಷ ರೂಪಾಯಿ ಪತ್ತೆಯಾಗಿದ್ದು, ತಹಶೀಲ್ದಾರ್ ಅವರು ಕದ್ದ ಹಣವನ್ನು ವಶಕ್ಕೆ ಪಡೆದು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಧಿಕಾರಿಗಳ ಕೈವಾಡದ ಶಂಕೆ: ಸ್ಥಳೀಯರ ಭಾರಿ ಆಕ್ರೋಶ

ಈ ಘಟನೆ ಹೊರಬರುತ್ತಿದ್ದಂತೆ ದೇವಾಲಯದ ಸುತ್ತಮುತ್ತ ಭಾರಿ ಆಕ್ರೋಶ ವ್ಯಕ್ತವಾಗಿದೆ. ದೇವಾಲಯದ ಆಡಳಿತ ಮಂಡಳಿ ಸಿಬ್ಬಂದಿ ಹಾಗೂ ಅಧಿಕಾರಿಗಳ ಶಾಮೀಲಾತಿ ಇಲ್ಲದೆ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಒಬ್ಬನೇ ಕದಿಯಲು ಸಾಧ್ಯವಿಲ್ಲ ಎಂದು ಸ್ಥಳೀಯರು ನೇರವಾಗಿ ಆರೋಪಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿತನ ಅಥವಾ ಒಳಗಣ್ಣಿನ ಸಹಕಾರದಿಂದಲೇ ಈ ಹಿಂದೆಯೂ ದೇವಾಲಯದಲ್ಲಿ ಇಂತಹ ಹಲವು ಕಳ್ಳತನದ ಘಟನೆಗಳು ನಡೆದಿರುವ ಸಾಧ್ಯತೆಯಿದೆ ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಭ್ರಷ್ಟಾಚಾರ ಮತ್ತು ಕಳ್ಳತನದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ಸೂಕ್ತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಕ್ತರು ಮತ್ತು ಸ್ಥಳೀಯ ನಿವಾಸಿಗಳು ತೀವ್ರವಾಗಿ ಆಗ್ರಹಿಸಿದ್ದಾರೆ.

You cannot copy content of this page

Exit mobile version