ಡೆಹ್ರಾಡೂನ್: ಬದರಿನಾಥ ಧಾಮದಲ್ಲಿ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಸೂಚನೆಯ ಮೇರೆಗೆ ಮೂವರು ಸದಸ್ಯರ ವಿಶೇಷ ತನಿಖಾ ಸಮಿತಿ ರಚಿಸಲಾಗಿದೆ.
ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಕೆಲವು ಲೋಪದೋಷಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಬದರಿನಾಥ್-ಕೇದಾರನಾಥ ದೇವಸ್ಥಾನ ಸಮಿತಿಯ ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್ ಅವರನ್ನು ಅಮಾನತುಗೊಳಿಸಲಾಗಿದ್ದು, ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸರ್ಕಾರ ರಚಿಸಿರುವ ಹೊಸ ತನಿಖಾ ಸಮಿತಿಯು ಜುಲೈ 8ರಿಂದಲೇ ತನಿಖೆ ಆರಂಭಿಸಿದ್ದು, ಮುಂದಿನ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸಮಿತಿಯು ಗರ್ವಾಲ್ ವಿಭಾಗದ ಕಮಿಷನರ್ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದೆ.
ಇದೇ ವೇಳೆ ದೇವಸ್ಥಾನ ಸಮಿತಿಯು ನಾಲ್ವರು ಹಿರಿಯ ಅಧಿಕಾರಿಗಳ ತಂಡವನ್ನು ರಚಿಸಿ ಪ್ರತ್ಯೇಕ ತನಿಖೆ ನಡೆಸುತ್ತಿದೆ. ತಂಡವು ದೇವಸ್ಥಾನದ ಸಿಸಿಟಿವಿ ದೃಶ್ಯಗಳು, ಸಿಬ್ಬಂದಿಗಳ ಹೇಳಿಕೆಗಳು ಹಾಗೂ ಹಣಕಾಸು ದಾಖಲೆಗಳನ್ನು ಪರಿಶೀಲಿಸುತ್ತಿದೆ.ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಬದರಿನಾಥ್-ಕೇದಾರನಾಥ ದೇವಸ್ಥಾನ ಸಮಿತಿ, 1939 ಮತ್ತು ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬದರಿನಾಥ ದೇವಸ್ಥಾನದ ಕಾಣಿಕೆ ಹಣ ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಬಳಿಕ ಭೈರವ ಸೇನೆ ಸಂಘಟನೆ ಈ ಕುರಿತು ತನಿಖೆಗೆ ದೂರು ನೀಡಿತ್ತು. ಭಕ್ತರ ಕಾಣಿಕೆ ಹಣಕ್ಕೆ ಸಂಬಂಧಿಸಿದ ಪ್ರಕರಣವಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
