Home ಬ್ರೇಕಿಂಗ್ ಸುದ್ದಿ ಬಾರಿ ಮಳೆಗೆ ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ – ಪ್ರಯಾಣಿಕರಿಗೆ ಎಚ್ಚರಿಕೆ

ಬಾರಿ ಮಳೆಗೆ ಶಿರಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ – ಪ್ರಯಾಣಿಕರಿಗೆ ಎಚ್ಚರಿಕೆ

ಹಾಸನ : ಜಿಲ್ಲೆಯ (Hassan) ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದ್ದು, ಜನರಲ್ಲಿ ಮತ್ತೊಮ್ಮೆ ಶಿರಾಡಿ ಘಾಟಿ (Shiradi Ghat) ರಸ್ತೆಯ ಭೀತಿ ಶುರುವಾಗಿದೆ. ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ವ್ಯಾಪ್ತಿಯ ಕಪ್ಪಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ (ಬೆಂಗಳೂರು-ಮಂಗಳೂರು ರಸ್ತೆ) ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದಿದ್ದು, ವಾಹನ ಸವಾರರು ಆತಂಕದಲ್ಲೇ ಸಂಚರಿಸುವಂತಾಗಿದೆ. ಸಕಲೇಶಪುರದಿಂದ ಮಂಗಳೂರು ಕಡೆಗೆ ಸಾಗುವ ಮಾರ್ಗದಲ್ಲೇ ಈ ಮಣ್ಣಿನ ಕುಸಿತ (Land Slide) ಉಂಟಾಗಿದೆ.

ಘಟನೆ ಸಂಭವಿಸುತ್ತಿದ್ದಂತೆ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ಧಾವಿಸಿ ರಸ್ತೆಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯಕ್ಕೆ ಸಂಚಾರಕ್ಕೆ ದೊಡ್ಡ ಮಟ್ಟದ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. ಇತ್ತೀಚೆಗೆ ಚತುಷ್ಪಥ (ನಾಲ್ಕು ಪಥ) ರಸ್ತೆ ನಿರ್ಮಾಣದ ಕಾಮಗಾರಿಗಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ನೂರಾರು ಅಡಿ ಎತ್ತರದ ಗುಡ್ಡಗಳನ್ನು ಕತ್ತರಿಸಲಾಗಿತ್ತು.

ಈಗ ನಿರಂತರವಾಗಿ ಸುರಿಯುತ್ತಿರುವ ಧೋ ಮಳೆಗೆ ಮಣ್ಣು ಸಂಪೂರ್ಣ ಸಡಿಲಗೊಂಡಿದ್ದು, ಬೃಹತ್ ಗಿಡ-ಮರಗಳ ಸಮೇತ ರಸ್ತೆಯ ಕಡೆಗೆ ಜಾರಿ ಬೀಳುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಇಡೀ ಬೆಟ್ಟವೇ ರಸ್ತೆಗೆ ಉರುಳಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯ ಎದುರಾಗಿದೆ.

ಕಳಪೆ ಹಾಗೂ ಅವೈಜ್ಞಾನಿಕ ಕೆಲಸಕ್ಕೆ ಸ್ಥಳೀಯರ ಆಕ್ರೋಶ

ಶಿರಾಡಿ ಘಾಟ್‌ನ ಈ ದುಸ್ಥಿತಿಗೆ ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಅವೈಜ್ಞಾನಿಕ ಕಾಮಗಾರಿಯೇ ನೇರ ಕಾರಣ ಎಂದು ಸ್ಥಳೀಯರು ಮತ್ತು ಪ್ರಯಾಣಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಬೇಸಿಗೆಯ ಇಡೀ ದಿನಗಳನ್ನು ವ್ಯರ್ಥ ಮಾಡಿ, ಮಳೆಗಾಲ ಶುರುವಾದಾಗ ಕಾಮಗಾರಿಗೆ ವೇಗ ನೀಡುವ ಗುತ್ತಿಗೆದಾರರ ನಡೆಯಿಂದಾಗಿ ಈ ಅವಾಂತರ ಸೃಷ್ಟಿಯಾಗುತ್ತಿದೆ. ಗುಡ್ಡಗಳನ್ನು ಕತ್ತರಿಸುವಾಗ ತೆಗೆದುಕೊಳ್ಳಬೇಕಾದ ಯಾವುದೇ ಸುರಕ್ಷತಾ ಕ್ರಮಗಳನ್ನು ಇಲ್ಲಿ ಪಾಲಿಸಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಮಳೆಗಾಲ ಬಂತೆಂದರೆ ಸಕಲೇಶಪುರ ಭಾಗದಲ್ಲಿ ಗುಡ್ಡ ಕುಸಿಯುವುದು ಮಾಮೂಲಿಯಾಗಿದೆ. ಪ್ರತಿ ವರ್ಷ ದುರಂತಗಳು ಸಂಭವಿಸುತ್ತಿದ್ದರೂ ಹೆದ್ದಾರಿ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರರಾಗಲಿ ಯಾವುದೇ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ. ಸದ್ಯಕ್ಕೆ ಜಿಲ್ಲಾಡಳಿತವು ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿಯುವ ಅಪಾಯವಿರುವ ಕಡೆಗಳನ್ನು ಗುರುತಿಸಿ ನಿಗಾ ಇಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವ ತೈಲ ಟ್ಯಾಂಕರ್, ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು ಚಾಲಕರು ಅತ್ಯಂತ ಎಚ್ಚರಿಕೆಯಿಂದ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

You cannot copy content of this page

Exit mobile version