ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತೆ ತಾರಕಕ್ಕೇರಿದ್ದು, ಜೂನ್ 17 ರಂದು ಮಾಡಿಕೊಳ್ಳಲಾಗಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದೆ.ಇರಾನ್ ಮೇಲೆ ಅಮೆರಿಕದ ಭಾರಿ ವೈಮಾನಿಕ ದಾಳಿ ನಡೆಸಿದ್ದು, ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಇರಾನ್, ಬಹ್ರೇನ್, ಕುವೈತ್ ಹಾಗೂ ಕತಾರ್‌ನಲ್ಲಿರುವ ಗುರಿಗಳತ್ತ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸಿದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ ಕವಿದಿದೆ.
ಈ ದಾಳಿಗಳು ನಡೆಯುವ ಕೆಲವೇ ಗಂಟೆಗಳ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ವ್ಯಾಪಾರ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಯೊಂದಿಗೆ ತಾತ್ಕಾಲಿಕ ಕದನ ವಿರಾಮ ಒಪ್ಪಂದವು ಅಂತ್ಯಗೊಂಡಿದೆ ಎಂದು ಘೋಷಿಸಿದ್ದರು.ಇರಾನ್ ವಿರುದ್ಧದ ಈ ಕಾರ್ಯಾಚರಣೆ, ಸಮುದ್ರ ಮಾರ್ಗಗಳ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.
ಅಮೆರಿಕ ಸೇನೆಯ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನಕ್ಕೆ ಬೆದರಿಕೆ ಒಡ್ಡುವ ಇರಾನ್‌ನ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಈ ದಾಳಿಗಳನ್ನು ನಡೆಸಲಾಗಿದೆ. ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲ ಸಾಗಣೆಯ ಸುಮಾರು 20 ಪ್ರತಿಶತ ಇದೇ ಜಲಸಂಧಿಯ ಮೂಲಕ ನಡೆಯುವುದರಿಂದ, ಈ ಪ್ರದೇಶದಲ್ಲಿ ಯಾವುದೇ ಸಂಘರ್ಷ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಿದೆ.ಈ ನಡುವೆ ಇರಾನ್ ಸರ್ಕಾರಿ ಮಾಧ್ಯಮಗಳು, ಬುಶೆಹರ್ ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ. ಪರಮಾಣು ವಿದ್ಯುತ್ ಸ್ಥಾವರ ಹೊಂದಿರುವ ಬುಶೆಹರ್ ನಗರ, ದಕ್ಷಿಣದ ಚಬಹಾರ್, ಕೊನಾರಕ್, ಬಂದರ್ ಅಬ್ಬಾಸ್ ಮತ್ತು ಸಿರಿಕ್ ಬಂದರು ನಗರಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ತಿಳಿಸಿವೆ. ಆದರೆ, ಈ ದಾಳಿಗಳಿಂದ ಉಂಟಾದ ಹಾನಿಯ ಸಂಪೂರ್ಣ ವಿವರ ಇನ್ನೂ ಬಹಿರಂಗವಾಗಿಲ್ಲ. ಇತ್ತ ಬಹ್ರೇನ್, ಕುವೈತ್ ಮತ್ತು ಕತಾರ್ ಕಡೆಗೆ ಇರಾನ್ ಉಡಾಯಿಸಿದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳ ಪರಿಣಾಮದ ಕುರಿತು ಆರಂಭಿಕ ಮಾಹಿತಿ ಲಭ್ಯವಾಗಿಲ್ಲ. ಆದರೆ, ಕುವೈತ್ ಸೇನೆ ತನ್ನ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿ, ಹಲವು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಮಧ್ಯದಲ್ಲೇ ಹೊಡೆದುರುಳಿಸಲಾಗಿದೆ ಎಂದು ತಿಳಿಸಿದೆ.
