Home ದೇಶ ಪ್ರಜಾಪ್ರಭುತ್ವ ಉಳಿಸುವ ಹೋರಾಟದ ನೇತೃತ್ವವನ್ನು ದಕ್ಷಿಣ ಭಾರತ ವಹಿಸಲಿದೆ: ಬೆಂಗಳೂರು ರ‍್ಯಾಲಿಯಲ್ಲಿ ಅಭಿಜಿತ್ ದಿಪ್ಕೆ ಘೋಷಣೆ

ಪ್ರಜಾಪ್ರಭುತ್ವ ಉಳಿಸುವ ಹೋರಾಟದ ನೇತೃತ್ವವನ್ನು ದಕ್ಷಿಣ ಭಾರತ ವಹಿಸಲಿದೆ: ಬೆಂಗಳೂರು ರ‍್ಯಾಲಿಯಲ್ಲಿ ಅಭಿಜಿತ್ ದಿಪ್ಕೆ ಘೋಷಣೆ

0
  • ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಹೆಸರಿನಲ್ಲಿ ಪ್ರಾದೇಶಿಕ ನಾಯಕರನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಲ್ಲಿ ಭಾರಿ ಅಕ್ರಮ ಎಸಗಲಾಗುತ್ತಿದೆ ಹಾಗೂ ಸಂಸತ್ತಿನಲ್ಲಿ ದಕ್ಷಿಣ ಭಾರತದ ಪ್ರಾತಿನಿಧ್ಯವನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸುತ್ತಿದೆ ಎಂದು ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜಿತ್ ದಿಪ್ಕೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
  • ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಫಲಕಗಳನ್ನು ಹಿಡಿದು ಜಮಾಯಿಸಿದ್ದ ಸಾವಿರಾರು ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಹೋರಾಟ ಕೇವಲ ಮತಪಟ್ಟಿಗೆ ಸೀಮಿತವಾಗಿರದೆ ದಕ್ಷಿಣ ಭಾರತದ ಪ್ರಾದೇಶಿಕ ಅಸ್ಮಿತೆ ಹಾಗೂ ಸಾಂವಿಧಾನಿಕ ಹಕ್ಕುಗಳ ಉಳಿವಿಗಾಗಿ ನಡೆಯುತ್ತಿರುವ ಸಮರ ಎಂದು ಬಣ್ಣಿಸಿದರು.
  • ವಿಶೇಷವಾಗಿ ಕ್ಷೇತ್ರ ಮರುವಿಂಗಡಣೆ (Delimitation) ವಿಷಯವನ್ನು ಪ್ರಸ್ತಾಪಿಸಿದ ಅವರು, “ಕೇಂದ್ರದ ಆಡಳಿತಗಾರರು ಸಂಸತ್ತಿನಲ್ಲಿ ದಕ್ಷಿಣ ಭಾರತದ ಸಂಸದರ ಪ್ರಾತಿನಿಧ್ಯವನ್ನು ಕಡಿತಗೊಳಿಸಲು ವ್ಯವಸ್ಥಿತ ತಂತ್ರ ರೂಪಿಸುತ್ತಿದ್ದಾರೆ. ಆದರೆ ನಾವು ಅದಕ್ಕೆ ಎಂದಿಗೂ ಅವಕಾಶ ಕೊಡುವುದಿಲ್ಲ. ಭಾರತದ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟದ ಮುಂದಾಳತ್ವವನ್ನು ದಕ್ಷಿಣ ಭಾರತವೇ ವಹಿಸಲಿದೆ ಮತ್ತು ಮುಂಬರುವ ದಿನಗಳಲ್ಲಿ ಇಡೀ ದೇಶವನ್ನೇ ಮುನ್ನಡೆಸಲಿದೆ” ಎಂದು ಗುಡುಗಿದರು.
  • 2024 ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಉಲ್ಲೇಖಿಸಿದ ದಿಪ್ಕೆ, “ಆ ಚುನಾವಣೆಯಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ಕೇವಲ ಶೇ. 2 ರಷ್ಟು ಮತಗಳ ಅಂತರ ಮಾತ್ರವಿತ್ತು. ಆ ಸಣ್ಣ ಅಂತರವನ್ನು ಕೃತಕವಾಗಿ ಹೆಚ್ಚಿಸಿಕೊಳ್ಳಲು ಇದೀಗ ಮತದಾರರ ಹಕ್ಕನ್ನು ಕಸಿಯುವ ಕುತಂತ್ರ ಹೆಣೆಯಲಾಗಿದೆ.
  • ದೇಶಾದ್ಯಂತ ಬರೋಬ್ಬರಿ 13 ಕೋಟಿ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಕೇವಲ ಕರ್ನಾಟಕದಲ್ಲೇ ಸುಮಾರು 1 ಕೋಟಿ ಮತದಾರರ ಹೆಸರುಗಳನ್ನು ವ್ಯವಸ್ಥಿತವಾಗಿ ಡಿಲೀಟ್ ಮಾಡಲಾಗಿದೆ. ಈ ಮೂಲಕ ಶೇ. 13 ರಿಂದ 14 ರಷ್ಟು ಮತಗಳ ಅಂತರವನ್ನು ಅಕ್ರಮವಾಗಿ ಸೃಷ್ಟಿಸಲಾಗುತ್ತಿದೆ” ಎಂದು ನೇರ ಆರೋಪ ಮಾಡಿದರು.
  • ಪ್ರಾದೇಶಿಕ ಪಕ್ಷಗಳ ಪ್ರಮುಖ ಮುಖಂಡರಾದ ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್, ಎಂ.ಕೆ. ಸ್ಟಾಲಿನ್ ಮತ್ತು ಪಿಣರಾಯಿ ವಿಜಯನ್ ಅವರ ಪ್ರಭಾವಿ ಕ್ಷೇತ್ರಗಳಲ್ಲಿ ಮತದಾರರ ಹೆಸರುಗಳನ್ನು ಅಳಿಸಿಹಾಕಿ, ಕಡಿಮೆ ಅಂತರದ ಸೋಲು ಉಂಟಾಗುವಂತೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ ಅವರು, “2024 ರಲ್ಲಿ ಬಿಜೆಪಿಗೆ ಸ್ವತಂತ್ರ ಬಹುಮತ ಸಿಗದಂತೆ ತಡೆದಿದ್ದೇ ಈ ಪ್ರಾದೇಶಿಕ ನಾಯಕರು.
  • ಹೀಗಾಗಿ ಪ್ರಾದೇಶಿಕ ಶಕ್ತಿಗಳನ್ನು ಸಂಪೂರ್ಣವಾಗಿ ನಾಶಪಡಿಸಿ, ತಮ್ಮ ಸಿದ್ಧಾಂತವನ್ನು ಹೇರಲು ಸಂಘ ಪರಿವಾರ ಮುಂದಾಗಿದೆ. ನಮ್ಮ ಸಾಂವಿಧಾನಿಕ ಹಾಗೂ ಪ್ರಜಾಪ್ರಭುತ್ವದ ರಕ್ಷಣಾ ಕವಚಗಳನ್ನು ಕಿತ್ತುಕೊಳ್ಳಲು ಯಾರೇ ಯತ್ನಿಸಿದರೂ ಪ್ರಾದೇಶಿಕ ಶಕ್ತಿಗಳು ಹಾಗೂ ನಾಗರಿಕ ಸಮಾಜ ಒಗ್ಗಟ್ಟಾಗಿ ತಿರುಗಿಬೀಳಬೇಕು” ಎಂದು ಕರೆ ನೀಡಿದರು.

You cannot copy content of this page

Exit mobile version