Home ರಾಜಕೀಯ ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು, ಲಾಠಿಚಾರ್ಜ್ ಪರಿಹಾರವಲ್ಲ: ಮೋದಿ ಸರ್ಕಾರಕ್ಕೆ ಮುರಳಿ ಮನೋಹರ್ ಜೋಶಿ ಸಲಹೆ

ವಿದ್ಯಾರ್ಥಿಗಳ ಮಾತನ್ನು ಆಲಿಸಬೇಕು, ಲಾಠಿಚಾರ್ಜ್ ಪರಿಹಾರವಲ್ಲ: ಮೋದಿ ಸರ್ಕಾರಕ್ಕೆ ಮುರಳಿ ಮನೋಹರ್ ಜೋಶಿ ಸಲಹೆ

0

ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಹಾಗೂ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ದೇಶಾದ್ಯಂತ ವಿದ್ಯಾರ್ಥಿ ಮತ್ತು ನಾಗರಿಕ ಸಂಘಟನೆಗಳು ಬೀದಿಗಿಳಿದಿರುವ ಬೆನ್ನಲ್ಲೇ, ಬಿಜೆಪಿಯ ಹಿರಿಯ ಮುತ್ಸದ್ದಿ ನಾಯಕ ಹಾಗೂ ಮಾಜಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಮುರಳಿ ಮನೋಹರ್ ಜೋಶಿ ಕೇಂದ್ರ ಸರ್ಕಾರಕ್ಕೆ ನೇರ ಕಿವಿಮಾತು ಹೇಳಿದ್ದಾರೆ.

“ವಿದ್ಯಾರ್ಥಿಗಳ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಆಲಿಸಬೇಕು, ಅವರ ಮೇಲೆ ಲಾಠಿಚಾರ್ಜ್ ಮಾಡುವುದು ಯಾವುದೇ ಸಮಸ್ಯೆಗೆ ಪರಿಹಾರವಲ್ಲ” ಎಂದು ಅವರು ಹೇಳಿದ್ದಾರೆ.

ಗುರುವಾರ ನವದೆಹಲಿಯಲ್ಲಿ ನಡೆದ 21ನೇ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FICCI) ಉನ್ನತ ಶಿಕ್ಷಣ ಸಮಾವೇಶದಲ್ಲಿ ಪಾಲ್ಗೊಂಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಬಲಪ್ರಯೋಗ ನಡೆಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

“ವಿದ್ಯಾರ್ಥಿಗಳ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಯಾವಾಗಲೂ ಆಲಿಸಬೇಕು. ಲಾಠಿಚಾರ್ಜ್ ಮಾಡುವುದು ಸರಿಯಾದ ಮಾರ್ಗವಲ್ಲ, ಅದರಿಂದ ಎಂದಿಗೂ ಪರಿಹಾರ ಸಿಗದು. ಸಮಸ್ಯೆಯಿದ್ದರೆ ಕುಳಿತು ಅವರ ಮಾತನ್ನು ಕೇಳಿ; ಏಕೆಂದರೆ ಆ ವಿದ್ಯಾರ್ಥಿಗಳು ನಮ್ಮದೇ ಮಕ್ಕಳು” ಎಂದು ಮಾರ್ಮಿಕವಾಗಿ ಹೇಳಿದರು.

ಇದಕ್ಕೆ ತಂದೆ-ಮಗನ ನಿದರ್ಶನ ನೀಡಿದ ಜೋಶಿ, “ಮಗ ತನಗೆ ಯಾವುದೋ ವಸ್ತುವನ್ನು ಕೊಡಿಸುವುದಾಗಿ ಮಾತುಕೊಟ್ಟು ತಪ್ಪಿದಾಗ ತಂದೆಯ ಬಳಿ ಪ್ರಶ್ನಿಸುತ್ತಾನೆ. ಆಗ ತಾನು ಕೊಟ್ಟ ಭರವಸೆಯನ್ನು ಏಕೆ ಈಡೇರಿಸಲು ಸಾಧ್ಯವಾಗಲಿಲ್ಲ ಎಂದು ಮಗನಿಗೆ ಸಮಾಧಾನದಿಂದ ವಿವರಿಸಿ ಹೇಳುವುದು ತಂದೆಯ ಕರ್ತವ್ಯವೇ ಹೊರತು, ಆ ಮಗನನ್ನು ಮನೆಯಿಂದ ಓಡಿಸುವುದಲ್ಲ. ಅದೇ ರೀತಿ ವಿದ್ಯಾರ್ಥಿಗಳೂ ನಮ್ಮ ಮಕ್ಕಳಿದ್ದಂತೆ, ಅವರನ್ನು ಅದೇ ಪ್ರೀತಿ ಹಾಗೂ ಸಂಯಮದಿಂದ ನಡೆಸಿಕೊಳ್ಳಬೇಕು” ಎಂದರು.

ಇದೇ ವೇಳೆ, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ ಹಾಗೂ ಎಸ್‌ಐಆರ್ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳು ಸಂಪೂರ್ಣ ನಿಷ್ಪಕ್ಷಪಾತವಾಗಿರಬೇಕು, ಸರ್ಕಾರಗಳು ಜನರಿಗೆ ಜವಾಬ್ದಾರಿಯುತವಾಗಿರಬೇಕು ಮತ್ತು ಆಡಳಿತಶಾಹಿ (ಬ್ಯೂರೋಕ್ರಸಿ) ಪಾರದರ್ಶಕವಾಗಿರಬೇಕು. ಆಗ ಮಾತ್ರ ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ಸರ್ಕಾರ ಭೂಮಿಯ ಮೇಲೆ ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯ.

ವಿಪಕ್ಷಗಳಿಗೂ ಪರ್ಯಾಯ ಕಾರ್ಯಕ್ರಮಗಳನ್ನು ನೀಡುವ ಹೊಣೆಗಾರಿಕೆ ಇರುತ್ತದೆ. ಪ್ರತಿಯೊಂದು ಪ್ರಕ್ರಿಯೆಯೂ ಸಂವಿಧಾನದ ಚೌಕಟ್ಟಿನಲ್ಲೇ ನಡೆಯಬೇಕು. ಒಂದು ವೇಳೆ ಸಂವಿಧಾನದ ಉಲ್ಲಂಘನೆಯಾದರೆ ಸುಪ್ರೀಂ ಕೋರ್ಟ್ ಖಂಡಿತವಾಗಿಯೂ ಮಧ್ಯಪ್ರವೇಶಿಸಿ ಪರಿಶೀಲನೆ ನಡೆಸಬೇಕು” ಎಂದು ಪ್ರತಿಪಾದಿಸಿದರು.

You cannot copy content of this page

Exit mobile version