Home ರಾಜಕೀಯ ನಿಜವಾದ ಅಪಾಯ SIR ಅಲ್ಲ, ಕುರುಡು ಬಿಜೆಪಿ ವಿರೋಧ: ಎಸ್‌ಐಆರ್ ಹೋರಾಟಗಾರರ ವಿರುದ್ಧ ನಟ ಚೇತನ್...

ನಿಜವಾದ ಅಪಾಯ SIR ಅಲ್ಲ, ಕುರುಡು ಬಿಜೆಪಿ ವಿರೋಧ: ಎಸ್‌ಐಆರ್ ಹೋರಾಟಗಾರರ ವಿರುದ್ಧ ನಟ ಚೇತನ್ ಅಹಿಂಸಾ ತೀವ್ರ ವಾಗ್ದಾಳಿ

0

ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿರುವ ಹೊತ್ತಿನಲ್ಲೇ, ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಪ್ರತಿಭಟನಾನಿರತ ಸಿಜೆಪಿ (ಕಾಕ್‌ರೋಚ್ ಜನತಾ ಪಾರ್ಟಿ) ಹಾಗೂ ವಿಪಕ್ಷಗಳ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.

“ಕಾಕ್‌ರೋಚ್‌ಗಳು ಮತ್ತು ಇತರ ಮನುವಾದಿಗಳು ಎಸ್‌ಐಆರ್ ಅನ್ನು ವಿರೋಧಿಸುವ ಮೂಲಕ ಸರ್ವಾಧಿಕಾರಿ ಹಿಂದುತ್ವದಿಂದ ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಿದ್ದಾರೆ ಎಂಬ ಕಲ್ಪನೆಯು ಕೇವಲ ಬಿಜೆಪಿ-ವಿರೋಧಿ (ಲಿಬರಲ್) ರಾಜಕೀಯ ವ್ಯವಸ್ಥೆ ಮತ್ತು ಅದರ ಬೆಂಬಲಿಗ ಮಾಧ್ಯಮಗಳು ಸೃಷ್ಟಿಸಿರುವ ‘ಒಳ್ಳೆಯವರು–ಕೆಟ್ಟವರು’ ಎಂಬ ಏಕಮುಖ ಚಿಂತನೆಯಾಗಿದೆ” ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಇಂದಿನ ರಾಜಕೀಯ ಸನ್ನಿವೇಶವನ್ನು ಹೋಲಿಸಿದ ಚೇತನ್, “ಅಂದು ‘ಒಳ್ಳೆಯವರು-ಕೆಟ್ಟವರು’ ಎಂಬ ಗಾಂಧಿ ಮತ್ತು ಬ್ರಿಟಿಷ್ ರಾಜ್ ನಡುವಿನ ವಿಚಾರವೇ ಹೆಚ್ಚಿನ ಗಮನ ಪಡೆದಿತ್ತು. ಆದರೆ ಅದರಲ್ಲಿ ಮುಂದಿನ ಭಾರತದ ಪರಿವರ್ತನೆಗೆ ಬೇಕಾದ ಸ್ಪಷ್ಟ ದೃಷ್ಟಿಕೋನ ಕಾಣಿಸಲಿಲ್ಲ. ಅದೇ ರೀತಿ, ಕಾಂಗ್ರೆಸ್ ಮನಸ್ಥಿತಿಯವರು ಮತ್ತು ಬಿಜೆಪಿಯ ‘ಸರ್ವಾಧಿಕಾರಿಗಳು’ ಎಂಬ ಇಂದಿನ ಸರಳೀಕೃತ ಚಿತ್ರಣವೂ ನೈಜ ಪರಿಹಾರಗಳಿಗಿಂತ ಕೇವಲ ಸುದ್ದಿಯ ಮುಖ್ಯಾಂಶಗಳಿಗೆ (ಹೆಡ್‌ಲೈನ್‌ಗಳಿಗೆ) ಹೆಚ್ಚು ಸೂಕ್ತವಾಗಿದೆ” ಎಂದು ವಿಶ್ಲೇಷಿಸಿದ್ದಾರೆ.

ಮುಂದುವರಿದು ಎಸ್‌ಐಆರ್ ಕುರಿತು ಮಾತನಾಡಿದ ಅವರು, “ದೇಶಕ್ಕೆ ನಿಜವಾದ ಅಪಾಯವಿರುವುದು ಎಸ್‌ಐಆರ್‌ನಿಂದ ಅಲ್ಲ. ಎಸ್‌ಐಆರ್ ಅನ್ನು ಮರುಪರಿಶೀಲಿಸಬಹುದು, ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಬಹುದು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಬಹುದು. ಆದರೆ, ನಿಜವಾದ ಅಪಾಯವೆಂದರೆ ಪಕ್ಷಪಾತದ ರಾಜಕೀಯದಲ್ಲಿ ಸಿಲುಕಿಕೊಂಡು ಬಿಜೆಪಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು — ಅದು ದೇಶದ ಹಿತಕ್ಕಾಗಿ ಸರಿಪಡಿಸಿ ಮುಂದುವರಿಸುವುದು ಉತ್ತಮವಾಗಿದ್ದರೂ ಸಹ — ಕೇವಲ ಅದು ಬಿಜೆಪಿಯದ್ದೆಂಬ ಒಂದೇ ಕಾರಣಕ್ಕಾಗಿ ಕುರುಡಾಗಿ ವಿರೋಧಿಸುವ ಕೆಟ್ಟ ಮನೋಭಾವ” ಎಂದು ಕಟುವಾಗಿ ಎಚ್ಚರಿಸಿದ್ದಾರೆ.

You cannot copy content of this page

Exit mobile version