"ಕುವೆಂಪು ಯಾರನ್ನೂ ನಿಜವಾಗಿಯೂ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿರಲಿಲ್ಲ.."
"ಅವರು ಹೇಳಿದ್ದು ಪುರೋಹಿತಶಾಹಿ ಮನಸ್ಥಿತಿಗೆ"
"ಖಾದರ್ ತಲೆಯೊಳಗಿನ ಹಿಂಸಾತ್ಮಕ ರಾಜಕೀಯ ಮನೋಭಾವಕ್ಕೆ ಕುವೆಂಪು ಸಾಲುಗಳ ಸಾಮ್ಯತೆಯೇ ಈ ಗು*" ಪತ್ರಕರ್ತರಾದ ನವೀನ್ ಸೂರಿಂಜೆಯವರ ಬರಹದಲ್ಲಿ..
“ಪುರೋಹಿತಶಾಹಿ ಎಂಬ ಹುಲಿಯನ್ನೂ ಹಾಗೇ ಗುಂಡು ಹಾಕಿ ಕೆಡವಬೇಕು… ಆದರೆ ಮೊದಲ ಗುಂಡು ತಗುಲಬೇಕಾದ್ದು ಹುಲಿಗಲ್ಲ, ನಿಮ್ಮ ತಲೆಗೆ! ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು.” ರಾಷ್ಟ್ರಕವಿ ಕುವೆಂಪು ಅವರ ಈ ಮಾತನ್ನು ಅಕ್ಷರಶಃ ಓದಿದರೆ ಅದರ ಅರ್ಥವೇ ತಪ್ಪಾಗುತ್ತದೆ. ಕುವೆಂಪು ಯಾರನ್ನೂ ನಿಜವಾಗಿಯೂ ಗುಂಡಿಕ್ಕಿ ಕೊಲ್ಲಬೇಕು ಎಂದು ಹೇಳಿರಲಿಲ್ಲ. ಅವರು ಹೇಳಿದ್ದು ಚಿಂತನೆಯ ಕ್ರಾಂತಿಯ ಬಗ್ಗೆ. ಮೌಢ್ಯ, ಅಜ್ಞಾನ, ಹಿಂಸೆ ಮತ್ತು ಅನ್ಯಾಯವನ್ನು ಹೊತ್ತಿರುವ ಮನಸ್ಸಿನ ವಿರುದ್ಧ ಹೋರಾಡಬೇಕೆಂದೇ ಅವರ ಸಂದೇಶ.
ಅದೇ ಅರ್ಥದಲ್ಲಿ ಇಂದು ಹೇಳಬೇಕಾದರೆ, “ಮೊದಲು ಖಾದರ್ ತಲೆಗೆ ಗುಂಡು ಹೊಡೆಯಬೇಕು!” ಎನ್ನುವುದನ್ನು ರೂಪಕವಾಗಿ, ಕುವೆಂಪು ಅವರ ವೈಚಾರಿಕ ಅರ್ಥದಲ್ಲಿಯೇ ಓದಬೇಕು. ಅಂದರೆ ಯು ಟಿ ಖಾದರ್ ಅವರ ತಲೆಯೊಳಗಿನ ಹಿಂಸಾತ್ಮಕ ರಾಜಕೀಯ ಮನೋಭಾವಕ್ಕೆ ಗುಂಡು ಹೊಡೆಯಬೇಕು. ಸಂವಿಧಾನ ವಿರೋಧಿ ಚಿಂತನೆಗೆ ಗುಂಡು ಹೊಡೆಯಬೇಕು. ಪೊಲೀಸ್ ವ್ಯವಸ್ಥೆಯನ್ನು ಕಾನೂನಿನ ಹೊರಗೆ ನಡೆಸಬೇಕು ಎನ್ನುವ ಕಲ್ಪನೆಗೆ ಗುಂಡು ಹೊಡೆಯಬೇಕು.
ಜಿಲ್ಲೆಯ ವಿಪತ್ತು ನಿರ್ವಹಣಾ ಸಭೆಯಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಪೊಲೀಸ್ ಅಧಿಕಾರಿಗಳಿಗೆ “ಕಾಲಿಗೋ, ಕೈಗೋ ಗುಂಡು ಹಾರಿಸಿ” ಎಂದು ಹಿಂದಿನ ಅವಧಿಯ ಎನ್‌ಕೌಂಟರ್ ಮಾದರಿಯನ್ನು ಉಲ್ಲೇಖಿಸಿ ಮಾತನಾಡಿರುವುದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇದು ಕೇವಲ ಒಂದು ರಾಜಕೀಯ ಹೇಳಿಕೆ ಅಲ್ಲ. ಇದು ಆಡಳಿತದ ತತ್ವದ ಬಗ್ಗೆ ಪ್ರಶ್ನೆ ಎಬ್ಬಿಸುವ ವಿಚಾರ. ಕಳ್ಳರು, ರೌಡಿಗಳಿಗೆ ಗುಂಡು ಹಾರಿಸಿ ಎಂದರೆ ಈವರೆಗಿನ ಪೊಲೀಸ್ ಇತಿಹಾಸದಲ್ಲಿ ಹಿಂದುತ್ವವಾದಿ ಕಮ್ಯೂನಲ್ ಗೂಂಡಾಗಳಿಗೆ ಪೊಲೀಸರು ಗುಂಡು ಹಾರಿಸಿದ್ದು ಇಲ್ಲವೇ ಇಲ್ಲ. ಪೊಲೀಸರ ಗುಂಡು ತಾಕುವುದು ದನ ಸಾಗಾಟಗಾರರಿಗೆ ಮಾತ್ರ ಎಂಬಷ್ಟು ಕಣ್ಣಿಗೆ ರಾಚುತ್ತದೆ. ಪೊಲೀಸರ ಗುಂಡುಗಳಿಗೆ ಅಧಿಕಾರ ನೀಡಿದರೆ ಅದು ಬಡವರು, ಶೋಷಿತರು, ಧಮನಿತ ಆರೋಪಿಗಳನ್ನೇ ಗುರಿಯಾಗಿಸುತ್ತದೆ.
ಇದೆಲ್ಲದರ ಹೊರತಾಗಿ, ಭಾರತದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಜೀವಿಸುವ ಹಕ್ಕನ್ನು ನೀಡಿದೆ. ಅಪರಾಧಿ ಎಂದು ಆರೋಪಿಸಲ್ಪಟ್ಟವನಿಗೂ ನ್ಯಾಯಾಲಯದಲ್ಲಿ ನ್ಯಾಯಸಮ್ಮತ ವಿಚಾರಣೆಯ ಹಕ್ಕಿದೆ. ಶಿಕ್ಷೆ ವಿಧಿಸುವ ಅಧಿಕಾರ ನ್ಯಾಯಾಲಯಕ್ಕೇ ಸೇರಿದ್ದು ಹೊರತು ಸಚಿವರಿಗೆ ಅಥವಾ ಪೊಲೀಸರಿಗೆ ಅಲ್ಲ. ಪೊಲೀಸ್ ಪಡೆಗೆ ಕಾನೂನು ಜಾರಿಗೊಳಿಸುವ ಹೊಣೆಗಾರಿಕೆ ಇದೆ; ಕಾನೂನನ್ನು ಮೀರಿ ಶಿಕ್ಷೆ ನೀಡುವ ಅಧಿಕಾರವಿಲ್ಲ. ಹೀಗಿರುವಾಗ, ಸಾರ್ವಜನಿಕ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಗುಂಡು ಹಾರಿಸುವುದನ್ನು ಮಾದರಿಯನ್ನಾಗಿ ಹೇಳುವುದು ಅತ್ಯಂತ ಅಪಾಯಕಾರಿ ಸಂದೇಶ. ಇಂತಹ ಹೇಳಿಕೆಗಳು ಪೊಲೀಸರ ವೃತ್ತಿಪರ ಸ್ವಾತಂತ್ರ್ಯದ ಮೇಲೂ ಅನಗತ್ಯ ಒತ್ತಡ ಉಂಟುಮಾಡಬಹುದು. ಜನಪ್ರತಿನಿಧಿಗಳ ಕರ್ತವ್ಯ ಕಾನೂನಿನ ಆಳ್ವಿಕೆಯನ್ನು ಬಲಪಡಿಸುವುದು. ಕಾನೂನಿನ ಹೊರಗಿನ ಕ್ರಮಗಳನ್ನು ಪ್ರೋತ್ಸಾಹಿಸುವುದು ಅಲ್ಲ.
ಇನ್ನೊಂದು ಮುಖ್ಯ ಸಂಗತಿ ಎಂದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಗಮನಾರ್ಹವಾಗಿ ಸುಧಾರಿಸಿರುವುದು ಸಾಮಾನ್ಯವಾಗಿ ಚರ್ಚೆಯ ವಿಷಯವಾಗಿದೆ. ವಿವಿಧ ಅಪರಾಧ ಚಟುವಟಿಕೆಗಳ ವಿರುದ್ಧ ಕ್ರಮಗಳು ಕಾನೂನಿನ ಚೌಕಟ್ಟಿನಲ್ಲಿಯೇ ನಡೆದಿವೆ ಎಂಬುದನ್ನು ಪೊಲೀಸ್ ಇಲಾಖೆ ನಿರಂತರವಾಗಿ ಹೇಳಿಕೊಂಡಿದೆ. ಈ ಯಶಸ್ಸನ್ನು ಕಾನೂನಿನ ಮಿತಿಯೊಳಗಿನ ಆಡಳಿತದ ಮಾದರಿಯಾಗಿ ಪ್ರಶಂಸಿಸಬೇಕಾಗಿದ್ದ ಸಂದರ್ಭದಲ್ಲಿ, ಗುಂಡಿನ ಭಾಷೆಯನ್ನು ಉದಾಹರಣೆಯಾಗಿ ಬಳಸುವುದು ಅನಗತ್ಯ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ದ ಕ ಎಸ್ಪಿ ಅರುಣ್ ಕುಮಾರ್ ಅವರ ಕಾರ್ಯನಿರ್ವಹಣೆ ಇಡೀ ದೇಶದ ಪೊಲೀಸ್ ಇಲಾಖೆಗೆ ಮಾದರಿ. ಕರಾವಳಿಯನ್ನು ಹದ್ದುಬಸ್ತಿಗೆ ತಂದ ಅವರ ಕ್ರಮದ ಬಗ್ಗೆ ಇಲಾಖೆ ಅಧ್ಯಯನ ನಡೆಸಬೇಕಿದೆ. 2011 ರಲ್ಲಿ ಡಾ ಗುರುಪ್ರಸಾದ್ ಎಂಬ ಡಿಜಿಪಿ ಇದ್ದರು. ಅವರು ರಾಜ್ಯಗಳ ಗಮನಾರ್ಹ ಪೊಲೀಸ್ ಸಾಧನೆಯನ್ನು ಅಧ್ಯಯನ ಮಾಡಿ ಅದರ ಪುಸ್ತಕವನ್ನು ಸರ್ಕ್ಯುಲರ್ (ಅಧಿಕೃತ ಸುತ್ತೋಲೆ) ಮಾದರಿಯಲ್ಲಿ ರಾಜ್ಯದ ಎಲ್ಲಾ ಠಾಣೆಗಳಿಗೆ ಕಳುಹಿಸುತ್ತಿದ್ದರು. ನಾನು ಮಂಗಳೂರು ವರದಿಗಾರನಾಗಿದ್ದಾಗ ‘ಸೈನೆಡ್ ಮೋಹನ’ ನಡೆಸಿದ 23 ಯುವತಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಬೇಧಿಸಿದ ಮಂಗಳೂರು ಪೋಲೀಸರ ತನಿಖಾ ಕ್ರಮವನ್ನು ಅಧ್ಯಯನ ಮಾಡಿ ಖುದ್ದು ವರದಿ ತಯಾರಿಸಿ ಸುತ್ತೋಲೆಯಾಗಿ ಕಳುಹಿಸಿದ್ದರು. ಈಗ ಪೊಲೀಸ್ ಇಲಾಖೆಯು ಮಂಗಳೂರು ಕಮಿಷನರೇಟ್ ಮತ್ತು ದ ಕ ಪೊಲೀಸ್ ವ್ಯಾಪ್ತಿಯಲ್ಲಿ ಶಾಂತಿ ನೆಲೆಸಿದ್ದು ಹೇಗೆ ಎಂದು ಅಧ್ಯಯನ ಮಾಡಿ ಅದನ್ನೇ ಮಾದರಿ ಸುತ್ತೋಲೆಯನ್ನಾಗಿಸಬೇಕಿದೆ.
ಸಚಿವ ಯು ಟಿ ಖಾದರ್ ಸಂವಿಧಾನವನ್ನು ಓದಬೇಕು. ಪ್ರಜಾಪ್ರಭುತ್ವದಲ್ಲಿ ಭಯದಿಂದಲ್ಲ, ನ್ಯಾಯದಿಂದ ಶಾಂತಿ ಬರಬೇಕು. ಗುಂಡಿನಿಂದಲ್ಲ, ಕಾನೂನಿನಿಂದ ಅಪರಾಧವನ್ನು ನಿಯಂತ್ರಿಸಬೇಕು. ನಕಲಿ ಎನ್‌ಕೌಂಟರ್ ಅಥವಾ ಕಾನೂನುಬಾಹಿರ ಹಿಂಸೆಯನ್ನು ಒಪ್ಪಿಕೊಳ್ಳುವ ಸಮಾಜ ಕೊನೆಗೆ ತನ್ನದೇ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ.
ಕುವೆಂಪು ಹೇಳಿದ “ಮೊದಲು ನಿಮ್ಮ ತಲೆಗೆ ಗುಂಡು ಹೊಡೆಯಬೇಕು” ಎಂಬ ಮಾತಿನ ನಿಜವಾದ ಅರ್ಥ ಇದೇ. ದ್ವೇಷಕ್ಕೆ ಗುಂಡು ಹೊಡೆಯಬೇಕು. ಪ್ರತೀಕಾರದ ರಾಜಕಾರಣಕ್ಕೆ ಗುಂಡು ಹೊಡೆಯಬೇಕು. ಕಾನೂನಿಗಿಂತ ವ್ಯಕ್ತಿಯ ಇಚ್ಛೆಯೇ ದೊಡ್ಡದು ಎನ್ನುವ ಮನಸ್ಥಿತಿಗೆ ಗುಂಡು ಹೊಡೆಯಬೇಕು. ಅಜ್ಞಾನ, ಮೌಢ್ಯ, ಅಧಿಕಾರದ ಅಹಂಕಾರ ಮತ್ತು ಹಿಂಸೆಯ ಸಂಸ್ಕೃತಿಯನ್ನು ಮನಸ್ಸಿನಿಂದ ಹೊರಹಾಕಬೇಕು. ಇಂದು ಅಗತ್ಯವಿರುವುದು ಯಾರ ತಲೆಗೂ, ಕೈಗೂ, ಕಾಲಿಗೂ ಬೀಳುವ ನಿಜವಾದ ಗುಂಡು ಅಲ್ಲ. ಸಂವಿಧಾನದ ಮೌಲ್ಯಗಳನ್ನು ಉಳಿಸುವ ವೈಚಾರಿಕ ಗುಂಡು. ಕುವೆಂಪು ಬಯಸಿದ್ದ “ಮೆದುಳಿನ ಶುದ್ಧೀಕರಣ” ಎಂದರೆ ಇದೇ. ಸಚಿವರಾಗಲಿ, ಅಧಿಕಾರಿಯಾಗಲಿ, ಸಾಮಾನ್ಯ ನಾಗರಿಕರಾಗಲಿ, ಎಲ್ಲರೂ ಮೊದಲು ಸಂವಿಧಾನಕ್ಕೆ ಉತ್ತರದಾಯಕರಾಗಬೇಕು.
ಯು ಟಿ ಖಾದರ್ ತಲೆಯಿಂದ ಹೊರಟ ಗುಂಡು ಯಾರನ್ನು ಗುರಿಯಾಗಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ದನದ ವ್ಯಾಪಾರಿಗಳು, ಬಡವರು, ಬಡತನದ ಕಾರಣಕ್ಕಾಗಿ ಅಪರಾಧ ಕೃತ್ಯದಲ್ಲಿ ತೊಡಗಿರುವ ಶೋಷಿತ ವರ್ಗಗಳನ್ನೇ ಖಾದರ್ ಪೊಲೀಸ್ ಗುಂಡು ಗುರಿಯಾಗಿಸುತ್ತದೆ. ಸರ್ಕಾರಗಳು ಬದಲಾಗುತ್ತಿರುತ್ತದೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರ ಎನ್ ಕೌಂಟರ್ ಗಳು ಆಗುತ್ತವೆ ಎಂಬುದಕ್ಕೆ ಗುಜರಾತ್ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳ ಉದಾಹರಣೆ ಇದೆ. ಇಷ್ಟಕ್ಕೂ ರಕ್ತವೇ ಬೀದಿಗೆ ಚೆಲ್ಲದೇ ಮಂಗಳೂರು ಮತ್ತು ದಕ ಪೊಲೀಸ್ ವ್ಯಾಪ್ತಿ ಶಾಂತವಾಗಿರುವಾಗ ಗುಂಡಿನ ಸದ್ದು ಮತ್ತು ರಕ್ತದ ವಾಸನೆ ಖಾದರ್ ರವರಿಗೆ ಯಾಕೆ ಬೇಕು ? ಅವರ ಮೆದುಳಲ್ಲಿ ಇಂತಹ ದುರಾಲೋಚನೆ ಬಂದಿದ್ದು ಯಾಕೆ ? ಮೊದಲು ಖಾದರ್ ತನ್ನ ತಲೆಗೆ ತಾನೇ ಗುಂಡು ಹೊಡೆಸಿಕೊಳ್ಳಬೇಕು. ಅದು ಸಂವಿಧಾನದ ಓದಿನ ಗುಂಡು !
