Home ಬ್ರೇಕಿಂಗ್ ಸುದ್ದಿ ಜು.10ರಂದು ಕಪ್ಪು ದಿನಾಚರಣೆ ಅಂಗನವಾಡಿ ಸ್ಕೀಮ್ ನೌಕರರಿಂದ ಕಚೇರಿ ಮುತ್ತಿಗೆ – ಎಸ್. ವರಲಕ್ಷ್ಮೀ

ಜು.10ರಂದು ಕಪ್ಪು ದಿನಾಚರಣೆ ಅಂಗನವಾಡಿ ಸ್ಕೀಮ್ ನೌಕರರಿಂದ ಕಚೇರಿ ಮುತ್ತಿಗೆ – ಎಸ್. ವರಲಕ್ಷ್ಮೀ

ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಂಗನವಾಡಿ ಮತ್ತು ವಿವಿಧ ಸ್ಕೀಮ್ ನೌಕರರ ನ್ಯಾಯಸಮ್ಮತ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿರುವುದನ್ನು ಖಂಡಿಸಿ ಜುಲೈ 10ರಂದು ರಾಜ್ಯಾದ್ಯಂತ ಕಪ್ಪು ದಿನಾಚರಣೆ ನಡೆಸಿ, ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ಮುಖಂಡರಾದ ವರಲಕ್ಷ್ಮೀ ಅವರು ತಿಳಿಸಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಕರ್ನಾಟಕ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮೀ, ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಅನುದಾನವನ್ನು ಬೆಲೆ ಏರಿಕೆಗೆ ಅನುಗುಣವಾಗಿ ಹೆಚ್ಚಿಸದೆ ಯೋಜನೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಯಿಂದ 3 ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಯಿಂದ ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸುವ ಕ್ರಮದಿಂದ ಅಂಗನವಾಡಿ ಕೇಂದ್ರಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳಿದರು.

ಪೌಷ್ಟಿಕ ಆಹಾರದ ಘಟಕ ವೆಚ್ಚ ಹೆಚ್ಚಳ ಮಾಡದಿರುವುದು, ಪ್ಯಾಕೆಟ್ ಆಹಾರ ವಿತರಣೆಗೆ ಒತ್ತು ನೀಡುವುದು, ಎಫ್‌ಆರ್‌ಎಸ್, ಇ-ಕೆವೈಸಿ ಹಾಗೂ ಪೋಷಣ್ ಟ್ರ್ಯಾಕರ್ ಮೂಲಕ ಅನಗತ್ಯ ಒತ್ತಡ ಹೇರುವುದು, ಬಿಎಲ್‌ಒ ಸೇರಿದಂತೆ ಇಲಾಖೇತರ ಕೆಲಸಗಳನ್ನು ನೀಡುವುದು ನೌಕರರ ಮೇಲೆ ಹೆಚ್ಚುವರಿ ಹೊರೆ ತಂದಿದೆ ಎಂದು ದೂರಿದರು.
ಚುನಾವಣಾ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ಹಾಗೂ ಸಹಾಯಕಿಯರಿಗೆ ₹10 ಸಾವಿರ ಗೌರವಧನ ಜಾರಿಗೊಳಿಸಬೇಕು. ನೌಕರರನ್ನು ಖಾಯಂಗೊಳಿಸಿ ಕನಿಷ್ಠ ವೇತನ, ಪಿಂಚಣಿ, ಗ್ರಾಚ್ಯುಟಿ ಸೇರಿದಂತೆ ಸಾಮಾಜಿಕ ಭದ್ರತೆ ಒದಗಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ–ಯುಕೆಜಿ ಆರಂಭಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಉತ್ತಮ ಗುಣಮಟ್ಟದ ಸ್ಥಳೀಯ ಪೌಷ್ಟಿಕ ಆಹಾರ, ಅಗತ್ಯ ಮೂಲಸೌಕರ್ಯ, ಡಿಜಿಟಲ್ ಸಾಧನಗಳು ಹಾಗೂ ಮೊಬೈಲ್-ಡೇಟಾ ವೆಚ್ಚ ಮರುಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿದರು. ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ಪ್ರಸ್ತಾವ ಕೈಬಿಡಬೇಕು. ಬಿಸಿಯೂಟ ಕಾರ್ಮಿಕರಿಗೆ ರಾಜ್ಯ ಸರ್ಕಾರ ಭರವಸೆ ನೀಡಿದಂತೆ ₹7 ಸಾವಿರ ವೇತನ ಹೆಚ್ಚಳ ಜಾರಿಗೊಳಿಸಿ, ಉದ್ಯೋಗ ಭದ್ರತೆ ಹಾಗೂ ಆರೋಗ್ಯ ವಿಮೆ ಒದಗಿಸಬೇಕು ಎಂದು ಒತ್ತಾಯಿಸಿದರು. ಜುಲೈ 10ರಂದು ನಡೆಯುವ ರಾಷ್ಟ್ರವ್ಯಾಪಿ ಪ್ರತಿಭಟನೆಯ ಅಂಗವಾಗಿ ರಾಜ್ಯದಾದ್ಯಂತ ಅಂಗನವಾಡಿ ಹಾಗೂ ಸ್ಕೀಮ್ ನೌಕರರು ಕೆಲಸ ಸ್ಥಗಿತಗೊಳಿಸಿ ಕಪ್ಪು ದಿನಾಚರಣೆ ಆಚರಿಸಿ, ಜಿಲ್ಲಾಧಿಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಎಂ.ಬಿ. ಪುಷ್ಪ, ಶೈಲಜಾ, ಮೀನಾಕ್ಷಿ, ಕಾಮಾಕ್ಷಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

You cannot copy content of this page

Exit mobile version