Home ಅಂಕಣ ವ್ಯಕ್ತಿಗಳ ಸಂಘರ್ಷಕ್ಕೆ ಜಾತಿಯ ಲೇಪನ

ವ್ಯಕ್ತಿಗಳ ಸಂಘರ್ಷಕ್ಕೆ ಜಾತಿಯ ಲೇಪನ

0

“..ಜಟಾಪಟಿ ಶುರುವಾಗಿದ್ದು ಕುಮಾರಸ್ವಾಮಿ ಮತ್ತು ಪ್ರದೀಪ್ ಈಶ್ವರ್ ಅವರ ನಡುವೆ ಅದು ಮುಂದುವರೆದು ಪಕ್ಷದ ಜಗಳವಾಗಿ ರೂಪಾಂತರ ಪಡೆಯಿತು. ಅದು ಜಾತಿ, ವರ್ಗದ ಕದನವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ..” ಸ್ನಾಕೋತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ನಾಡಪ್ರಭು ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಯಲಹಂಕ ನಾಡಿನ ಪಾಳೆಗಾರರಾಗಿದ್ದರು. ಆ ಸಮಯದಲ್ಲಿ ಒಂದು ಜಾತಿಗೆ ಅಂಧನಾಗದೆ ನಾಡಿನ ಜನಗಳ ಒಳಿತಿಗಾಗಿ ಚಿಂತಿಸಿ, ನಾಡಿನ ಅಭಿವೃದ್ಧಿಗೆ ಅವರ ದೂರದೃಷ್ಟಿ ಸಮೀಕರಿಸಿ ಬೆಂದಕಾಳೂರು (ಬೆಂಗಳೂರು) ಎಂಬ ನಗರವನ್ನು ಕಟ್ಟಿದರು ಆ ನಗರದಲ್ಲಿ ಎಲ್ಲಾ ಜಾತಿಯವರಿಗಾಗಿ, ಅವರ ಜೀವನೋಪಾಯಕ್ಕೆ ಹಲವಾರು ಯೋಜನೆಗಳನ್ನು ಮಾಡಲಾಗಿತ್ತು. ಆ ನಗರದಲ್ಲಿ ಇಂದು ಕೋಟ್ಯಾಂತರ ಜನ ಬದುಕುತ್ತಿದ್ದಾರೆ, ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಯ ಸ್ಮರಣೆಗಾಗಿ ಪ್ರತಿ ವರ್ಷ ಜಯಂತಿಯನ್ನು ಆಚರಿಸಲಾಗುತ್ತದೆ ಹಾಗೆಯೇ ಈ ವರ್ಷವೂ ಸಹ ಕರ್ನಾಟಕದಾತ್ಯಂತ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರದ ಕಡೆಯಿಂದ ಮತ್ತು ಹಲವಾರು ಸಂಘಟನೆಗಳಿಂದ ಶನಿವಾರದಂದು ಕೆಂಪೇಗೌಡರ 517ನೇ ಜಯಂತಿಯನ್ನು ಆಚರಿಸಲಾಯಿತು. ಕೆಂಪೇಗೌಡರ ಜಯಂತಿ ಅಂಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು 15 ಲಕ್ಷ ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭಿಸಿತು.

ಇಂತಹ ಅಭುತಪೂರ್ವ ದಿನದಂದು ವ್ಯಕ್ತಿಗಳ ನಡುವೆ ನಡೆದ ಜಗಳದಲ್ಲಿ ಜಾತಿಯನ್ನು ತಂದು ನಾಡಿನ ಸ್ವಾಸ್ಥ್ಯ ಕದಡಿಸುವ ಕೆಲಸಗಳು ಬೇಕೆಂತಲೇ ಆಯಿತು.

ಚಿಕ್ಕಬಳ್ಳಾಪುರದ ಶಾಸಕರಾದ ಪ್ರದೀಪ್ ಈಶ್ವರ್ ರವರು ಕೆಲವು ದಿನಗಳ ಹಿಂದೆ ಪ್ರೆಸ್ ಮೀಟ್ ಮಾಡಿ ಕುಮಾರಸ್ವಾಮಿಯವರ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು. ಪ್ರೆಸ್ ಮೀಟ್ ನಲ್ಲಿ ಪ್ರದೀಪ್ ಈಶ್ವರರವರು ಹೇಳಿರುವುದು, ಕುಮಾರಸ್ವಾಮಿಯವರು ಜೆಡಿಎಸ್ ನ ಅಫೀಸಿಯಲ್ ಪೇಜಿನಿಂದ ಅವರು ಪರಿಶ್ರಮ ಕಾಲೇಜಿನ ಹೆಸರಿನಲ್ಲಿ ನಾನು ಮೂರು ಸಿ ಎ ಸೈಟ್ ಗಳನ್ನು ಅಕ್ರಮವಾಗಿ ತೆಗೆದುಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು, ಎಂದರು. ಈ ವಿಷಯಕ್ಕೆ ಸಮಜಾಯಿಸಿಕೊಡಲೆಂದು ಪ್ರೆಸ್ ಮೀಟ್ ಮಾಡಿದ್ದು. ಆ ಪ್ರೆಸ್ ಮೀಟ್ ನಲ್ಲಿ ಪ್ರದೀಪ್ ಈಶ್ವರ್ ಹೇಳಿದ್ದು, ನಾನು ಸಿ ಎ ಸೈಟ್ ಅನ್ನು ಅಕ್ರಮವಾಗಿ ಖರೀದಿಸಿಲ್ಲ. ನಾನು ನಡೆಸುತ್ತಿರುವ ಪರಿಶ್ರಮ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಒಂದು ಎಕರೆ ಸಿ ಎ ಸೈಟ್ ಅನ್ನು 5 ಕೋಟಿಗೆ 30 ವರ್ಷಗಳ ತನಕ ಗುತ್ತಿಗೆ ಪಡೆಯಲಿದ್ದೇನೆ. ಇಷ್ಟನ್ನು ಹೇಳಿ ಮುಗಿಸದೆ ಇನ್ನು ಮುಂದುವರೆದು ಕುಮಾರಸ್ವಾಮಿಯವರು ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡುವುದಿಲ್ಲ ಶೋಷಿತ ವರ್ಗದರನ್ನು ಬೆಳೆಯಲು ಬಿಡುವುದಿಲ್ಲ. ಒಕ್ಕಲಿಗ ಸಮುದಾಯದ ನಾಯಕರಾದ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ಕುಮಾರಸ್ವಾಮಿಗೆ ಸಹಿಸಲಾಗುವುದಿಲ್ಲ ಎಂದೆಲ್ಲಾ ಹೇಳಿ. ಇನ್ನೂ ಮುಂದುವರೆದು,

ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಗಮನಿಸಿದ್ದೇನೆ ಅವರು 62 ಕೈಗಡಿಯಾರಗಳನ್ನು ಕಟ್ಟಿದ್ದರು ಅವುಗಳ ಪ್ರಾರಂಭದ ಬೆಲೆ 10 ಲಕ್ಷದಿಂದ ಶುರುವಾಗುತ್ತದೆ ಮತ್ತು 75 ಲಕ್ಷದ ತನಕ ಇರುತ್ತದೆ. ಬಿಡದಿಯಲ್ಲಿ ಅನಿತಾ ಕುಮಾರಸ್ವಾಮಿ ಅವರು 32 ಎಕ್ಕರೆ ಭೂಮಿಯನ್ನು ಖರೀದಿಸಿದ್ದಾರೆ ಅದಕ್ಕೆ ಆದಾಯ ಎಲ್ಲಿಂದ ಬಂತೆಂದು ಪ್ರಶ್ನಿಸಿ. ಕುಮಾರಸ್ವಾಮಿ ಅವರ ಬಳಿ 700 ರಿಂದ 800 ಎಕರೆ ಭೂಮಿ ಇದೆಯೆಂದು. ಕುಮಾರಸ್ವಾಮಿಯವರ ಕುಟುಂಬದಲ್ಲಿ ಒಬ್ಬರು ನಿವೃತ್ತ ಸರ್ಕಾರಿ ನೌಕರನ ಆಸ್ತಿ ಸಾವಿರ ಕೋಟಿ ಇದೆ ಎಂದೆಲ್ಲಾ ಆರೋಪಿಸಿ. ಇಷ್ಟೆಲ್ಲ ಇರುವ ನೀವು ನಾನು ಒಂದು ಎಕರೆ ಸಿಎ ಸೈಟ್ ಅನ್ನು ಗುತ್ತಿಗೆ ಪಡೆಯಲು ನೀವು ಬಿಡುವುದಿಲ್ಲ, ಒಬ್ಬ ಹಿಂದುಳಿದ ವರ್ಗದ ಶೋಷಿತ ಬೆಳೆಯುವುದನ್ನು ನಿಮ್ಮಿಂದ ಸಹಿಸಲಾಗುವುದಿಲ್ಲ ಎಂದು ಸಾಲು ಸಾಲು ಆರೋಪಗಳನ್ನು ಮಾಡಿದ್ದರು.

ಇದಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ರಾಜಕೀಯದಲ್ಲಿ ಆದಂತಹ ಕೆಟ್ಟ ಬೆಳವಣಿಗೆಯ ಪರಿಣಾಮ ಕೆಂಪೇಗೌಡರ ಜಯಂತಿಗೂ ತಟ್ಟಿತು. ಶನಿವಾರದಂದು ನಾಡಿನಾದ್ಯಂತ ಕೆಂಪೇಗೌಡ ಜಯಂತಿಯನ್ನು ಹಮ್ಮಿಕೊಳ್ಳಲಾಗಿತ್ತು, ಅದೇ ತರಹ ಚಿಕ್ಕಬಳ್ಳಾಪುರದಲ್ಲಿನ ಕನ್ನಡ ಭವನದಲ್ಲಿ ಕೆಂಪೇಗೌಡ ಜಯಂತಿ ನಡೆಯುತ್ತಿದ್ದು ಆ ಕಾರ್ಯಕ್ರಮಕ್ಕೆ ಪ್ರದೀಪ್ ಈಶ್ವರ್ ಅವರನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಂದಂತಹ ಪ್ರದೀಪ್ ಅನ್ನು ವಿರೋಧಿಸಿ ಕುಮಾರಸ್ವಾಮಿಯವರ ಹಿಂಬಾಲಕರು ಮತ್ತು ಕೆ. ಸುಧಾಕರ್ ರ ಹಿಂಬಾಲಕರು ಪ್ರದೀಪ್ ಈಶ್ವರನನ್ನು ಹೊರಹೋಗುವಂತೆ ಗಲಾಟೆ ಮಾಡಿ, ಆತನನ್ನು ಹುಚ್ಚ ಎಂದು ಕರೆದು ಅವಮಾನಿಸಿ ಕಾರ್ಯಕ್ರಮ ನಡೆಯದಂತೆ ದೊಂಬಿ ಎಬ್ಬಿಸಿದರು ಆಗ ಅಲ್ಲಿನ ಡಿಸಿ ಮತ್ತು ಅತಿಥಿಯಾಗಿ ಬಂದಂತಹ ಸ್ವಾಮಿಜೀಗಳು ಸಮಾಧಾನ ಮಾಡಿದರು ಸಹ ಗುಂಪು ಸಮಾಧಾನವಾಗದೆ ಗದ್ದಲ ಮುಂದುವರೆಯಿತು. ಆಗ ಪ್ರದೀಪ್ ಈಶ್ವರ್ ನಾನು ಕುಮಾರಸ್ವಾಮಿಯವರಿಗೆ ಮತ್ತವರ ಚೇಲಗಳಿಗೆ ಹೆದರುವುದಿಲ್ಲ ಎಂದು ಮೀಡಿಯಾಗಳ ಮುಂದೆ ಹೇಳಿ ಕಾರ್ಯಕ್ರಮದಿಂದ ಹೊರ ನಡೆದರು.

ಆಗ ಪ್ರದೀಪ್ ಕಾರಿನಲ್ಲಿ ಹೋಗುವ ಸಮಯದಲ್ಲಿ ತೋಳು ತಟ್ಟಿ, ಮೀಸೆ ತಿರುವಿ ಈ ತರಹ ಸನ್ನೆಗಳನ್ನೆಲ್ಲ ಮಾಡಿ ಹೋಗುತ್ತಿರಬೇಕಾದರೆ, ಆಗ ಆತನನ್ನು ವಿರೋಧಿಸುತ್ತಿದ್ದ ಗುಂಪಿನವರು ಚಪ್ಪಲಿ ಎಸೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿ ಇಷ್ಟರ ಮಟ್ಟಿಗೀನ ಅಸಯ್ಯಕರ ಬೆಳವಣಿಗೆ ನಡೆದಿದೆ.

ಮೊದಲಿಗೆ ಜಟಾಪಟಿ ಶುರುವಾಗಿದ್ದು ಕುಮಾರಸ್ವಾಮಿ ಮತ್ತು ಪ್ರದೀಪ್ ಈಶ್ವರ್ ಅವರ ನಡುವೆ ಅದು ಮುಂದುವರೆದು ಪಕ್ಷದ ಜಗಳವಾಗಿ ರೂಪಾಂತರ ಪಡೆಯಿತು. ಇಬ್ಬರೂ ಬೇರೆ ಬೇರೆ ಪಕ್ಷದವರು, ಪಕ್ಷದಿಂದ ಅವರ ಹೇಳಿಕೆ ಆರೋಪಗಳನ್ನು ನೀಡಲಿ ತೊಂದರೆ ಇಲ್ಲ.

ಕೆಲವು ಎಂಜಲು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ, ಬಾಯಿಂದ ಬಾಯಿಗೆ ಮತ್ತು ಸಮೂಹ ಮಾಧ್ಯಮಗಳ ಮುಖಾಂತರ ಈ ಘಟನೆಗಳನ್ನು ವೈಯಕ್ತಿಕ ನಿಟ್ಟಿನಲ್ಲಿ ಅಥವಾ ಪಕ್ಷಗಳ ನಿಟ್ಟಿನಲ್ಲಿ ವ್ಯಾಖ್ಯಾನಿಸದೆ, ನಡೆದ ಘಟನೆಗೆ ಜಾತಿಯ ಬಣ್ಣ ಕಟ್ಟುತ್ತಿದ್ದಾರೆ. ಪ್ರದೀಪ್ ಈಶ್ವರ್ ಕುಮಾರಸ್ವಾಮಿಯವರನ್ನು ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡುವುದಿಲ್ಲ ಶೋಷಿತರನ್ನು ಬೆಳೆಯಲು ಬಿಡುವುದಿಲ್ಲ ಎಂದು ಆರೋಪಿಸಿದ್ದಾರೆ
ಮತ್ತು ಒಕ್ಕಲಿಗರ ನಾಯಕರಾದ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿಯಾಗಿರುವುದನ್ನು ಸಹ ಸಹಿಸಲಾಗಿರುವುದು ಸಹಿಸಲಾಗುವುದಿಲ್ಲ ಎಂದು ಆರೋಪಿಸಿದ್ದಾರೆ. ಜವಾಬ್ದಾರಿತ ವ್ಯಕ್ತಿ, ಶಾಸಕನಾಗಿರಬಹುದು ಅಥವಾ ರಾಜಕೀಯ ಪಕ್ಷದವನಾಗಿರಬಹುದು ಆತ/ಆಕೆ ವ್ಯಕ್ತಿಗತವಾಗಿ ಅಥವಾ ಪಕ್ಷದ ಆಧಾರದ ಮೇಲೆ ಆರೋಪ ಮಾಡುವುದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದಿಲ್ಲ. ಆದರೆ ಜಾತಿಯನ್ನು ಅಡ್ಡ ತಂದಿದ್ದು ಅವರ ಅವಿವೇಕತನ ಮತ್ತು ಅದನ್ನು ಕರ್ನಾಟಕದ ಶಾಂತಿಯನ್ನು ಕದಡಲು ಜಾತಿಯ ಆಧಾರವಾಗಿ ಮೀಡಿಯಾಗಳು, ಜಾತಿಗಳಲ್ಲಿ ಒಡಕು ಉಂಟಾಗುವ ರೀತಿ ಬಿಂಬಿಸಿ ಸುದ್ದಿ ಹರಡುತ್ತಿರುವುದು ಅಕ್ಷಮ್ಯ ಅಪರಾಧ.

ಡಿಕೆ ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಸಾಕಷ್ಟು ಬಾರಿ ವಾಗ್ವಾದಗಳು ಮತ್ತು ವಾಗ್ದಾಳಿಗಳು ಆರೋಪಗಳು ನಡೆದಿದೆ ಆಗ ಮೀಡಿಯಾಗಳು ಡಿಕೆಶಿ ವರ್ಸಸ್ ಎಚ್ ಡಿ ಕೆ ಎಂದು ತೋರಿಸಿ ಸುದ್ದಿ ಪ್ರಸರಿಸಿವೆ. ಇನ್ನೂ ಮುಂದುವರೆದು ಕಾಂಗ್ರೆಸ್ ವರ್ಸಸ್ ಜೆಡಿಎಸ್ ಅಂತಲೂ ತೋರಿಸಿವೆ ಯಾಕೆಂದರೆ ಇಬ್ಬರು ಒಂದೇ ಜಾತಿಯವರು ಎಂದು. ಈಗ ಪ್ರದೀಪ್ ಈಶ್ವರ್ ಜಾತಿ ಬೇರೆ ಕುಮಾರಸ್ವಾಮಿ ಜಾತಿ ಬೇರೆ. ಹಾಗಾಗಿ ಒಕ್ಕಲಿಗರನ್ನು ನಾಡಿನಾದ್ಯಂತ ಕಾಂಗ್ರೆಸ್ ಪಕ್ಷದ ಮೇಲೆ ಎತ್ತು ಕಟ್ಟಲು ಮತ್ತು ಅವರಿಗೆ ಜಾತಿಯ ಮೇಲೆ ಅಂಧಾಭಿಮಾನ ಬರಿಸುವ ಸಲುವಾಗಿ, ಬೇರೆ ಜಾತಿಯವರ ಮೇಲೆ ವೈಮನಸ್ಸು ಉಂಟಾಗಲು ಮಾಡುತ್ತಿರುವ ಪೂರ್ವಗ್ರಹವುಳ್ಳ ಕುತಂತ್ರದ ಕೆಲಸವಿದು.

ಇದನ್ನು ಖಂಡಿಸಲು ಮತ್ತು ವ್ಯಾಖ್ಯಾನಿಸಲು ಬಾರದ ರಾಜಕೀಯ ನಾಯಕರು ಸುಮ್ಮನಿದ್ದಾರೆ ಇನ್ನು ಕೆಲವರು ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ಪ್ರದೀಪ್ ಈಶ್ವರ್ ಹೇಳಿರುವ ಹಾಗೆ ಡಿಕೆಶಿ ಒಕ್ಕಲಿಗ ಸಮುದಾಯದ ನಾಯಕನಾದರೆ, ಜಾತಿ ಆಧಾರದ ಮೇಲಷ್ಟೇ ಅವರಿಗೆ ಮುಖ್ಯಮಂತ್ರಿ ಸ್ಥಾನ ದೊರಕಿರುವುದು ಎಂಬಂತಾಗುತ್ತದೆ, ಡಿಕೆಶಿಗೆ ಬೇರೆ ಇನ್ಯಾವುದೇ ಅರ್ಹತೆ ಇಲ್ಲವಾ? ಓಬಿಸಿ ಗಳನ್ನು ಬೆಳೆಯಲು ಬಿಡುವುದಿಲ್ಲ ಎಂಬುದು ಅರ್ಥವಿಲ್ಲದ ಮಾತು ಒಕ್ಕಲಿಗರು ಸಹ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿಯೇ ಬರುತ್ತಾರೆ.

ವ್ಯಕ್ತಿಗತವಾಗಿ ಅಥವಾ ಪಕ್ಷದಿಂದ ಕಲ್ಲುತೂರಾಟ ಮಾಡಲಿ, ನಡುರಸ್ತೆಯಲ್ಲಿ ಹೊಡೆದಾಡಿಕೊಳ್ಳಲಿ, ಚಪ್ಪಲಿ ಎಸೆಯಲಿ ಅವುಗಳನ್ನು ವ್ಯಕ್ತಿಗತವಾಗಿ ಅಥವಾ ಪಕ್ಷದ ಆಧಾರದ ಮೇಲೆ ನೋಡಬೇಕು ಆದರೆ ಜಾತಿ ಆಧಾರದ ಮೇಲೆ ವಿಭಜಿಸಿ, ಜಾತಿ ಆಧಾರದ ಮೇಲೆ ಒಂದು ಜಾತಿಯ ಜನಗಳನ್ನು ಒಗ್ಗೂಡಿಸುವುದು, ಜಾತಿಯ ಆಧಾರದ ಮೇಲೆ ಬೇರೆ ಬೇರೆ ಜಾತಿಯ ಜನಗಳನ್ನು ವಿಭಜಿಸುವುದು ಮೂರ್ಖತನ ಮತ್ತು ಅಪರಾಧ.

ಈ ಇಂಡಿಯಾ ಒಕ್ಕೂಟದಲ್ಲಿ ಒಂದು ಅಪರಾಧ ನಡೆದರೆ, ಅಪರಾಧ ತೀವ್ರತೆಯನ್ನು ಅಳೆಯುವುದು ಅಪರಾಧಿಯ ಮತ್ತು ಅಪರಾಧಕ್ಕೆ ಒಳಗ ಒಳಗಾದ ಸಂತ್ರಸ್ತರ ಸಾಮಾಜಿಕ ಹಿನ್ನೆಲೆಯ ಆಧಾರದ ಮೇಲೆ. ನ್ಯಾಷನಲ್ ಪಾರ್ಟಿಗಳು ಮತ್ತು ಮೀಡಿಯಾಗಳು ಅಪರಾಧಿ ಮುಸ್ಲಿಂ ವ್ಯಕ್ತಿಯಾದರೆ ಅದನ್ನು ವಿಜೃಂಭಣೆಯಿಂದ ಜನರ ಮುಂದೆ ತೋರಿಸುತ್ತವೆ, ಆ ಅಪರಾಧಕ್ಕೆ ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತವೆ. ಸಂತ್ರಸ್ತ ಮುಸ್ಲಿಂ ವ್ಯಕ್ತಿ ಆಗಿದ್ದರೆ ಆ ಸುದ್ದಿಯನ್ನು ಮರೆಮಾಚುತ್ತವೆ ಇಲ್ಲವೇ ಕಡೆಗಣಿಸುತ್ತವೆ. ಹಾಗೆಯೇ ಅಪರಾಧಿ ಮೇಲ್ಜಾತಿಯವರಿಗೆ ಸಂಬಂಧಪಟ್ಟಹರೆ ಭಾಗಶಃ ಅದು ಸುದ್ದಿಯೇ ಆಗುವುದಿಲ್ಲ. ಅಪರಾಧದ ತೀವ್ರತೆ ಎಷ್ಟಿದೆ ಎಂಬುದು ಅಪರಾಧದ ಮೇಲೆ ವಿಭಜಿಸಬೇಕು ಹೊರತು ಅಪರಾಧ ಮಾಡಿದವರ ಸಾಮಾಜಿಕ ಹಿನ್ನೆಲೆಯಿಂದ ಅಲ್ಲ.

ಕುಮಾರಸ್ವಾಮಿಯವರು ಪ್ರದೀಪ್ ಈಶ್ವರ್ ಮೇಲೆ ಆರೋಪ ಮಾಡಿರುವುದು, ಪ್ರದೀಪ್ ಈಶ್ವರ್ ಕುಮಾರ ಸ್ವಾಮಿಯ ಮೇಲೆ ಆರೋಪ ಮಾಡಿರುವುದು ವ್ಯಕ್ತಿಗತ ಮತ್ತು ಪಕ್ಷಕ್ಕೆ ಸಂಬಂಧಿಸಿದ್ದು. ಇಬ್ಬರು ಸಹ ರಾಜಕೀಯ ನಾಯಕರು ರಾಜಕೀಯ ವ್ಯಕ್ತಿಗಳೇ ಮತ್ತು ವ್ಯಕ್ತಿಗತವಾಗಿ, ಪಕ್ಷದ ಆಧಾರದ ಮೇಲೆ ನೋಡುವುದು ಉತ್ತಮವಾದ ದೃಷ್ಟಿಕೋನ. ಆದರೆ ನಾಯಿಗೆ ಮೂಳೆ ಸಿಕ್ಕಿದಂತೆ, ಸಮಾಜವಾದ ಸ್ವಾಸ್ಥ್ಯವನ್ನು ಹಾಳುಗೆಡವಲು ನಿಂತಿರುವ ಕೆಲವು ಎಂಜಲು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರ, ಬಾಯಿಂದ ಬಾಯಿಗೆ ಮತ್ತು ಸಮೂಹ ಮಾಧ್ಯಮಗಳು ಈ ಘಟನೆಗಳನ್ನು ಬಳಸಿಕೊಂಡು ಕರ್ನಾಟಕದಲ್ಲಿ ಜಾತಿಯ ಆಧಾರದ ಮೇಲೆ ಒಡಕನ್ನು ಉಂಟುಮಾಡಲು ತನ್ನೆಲ್ಲ ಶಕ್ತಿಯನ್ನು ಮೀರಿ ಕೆಲಸ ಮಾಡುತ್ತಿದೆ.

ಸುದ್ದಿಯನ್ನು ಸಾಮಾನ್ಯವಾಗಿ ಹೇಳುವುದು ಬಿಟ್ಟು, ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದ ಒಕ್ಕಲಿಗ ನಾಯಕರು, ಪ್ರದೀಪ್ ಈಶ್ವರ್ ವರ್ಸಸ್ ಒಕ್ಕಲಿಗರು. ಈ ತರದ ಜಾತಿ ಭೇದ ಭಾವ ಎಲ್ಲಿಂದ ಬಂತು. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಯೇ ಹೆಚ್ಚಿರುವುದು ಪ್ರದೀಪ್ ಈಶ್ವರ್ ಶಾಸಕನಾಗಿ ಆಯ್ಕೆಯಾದದ್ದು ಒಬ್ಬ ಒಕ್ಕಲಿಗ ರಾಜಕಾರಣಿಯ ವಿರುದ್ಧ ಸ್ಪರ್ಧಿಸಿ ಮತ್ತು ಒಕ್ಕಲಿಗ ಸಮುದಾಯದ ಮತದಾರರಿಂದ ಮತ ಪಡೆದು. ಹೀಗಿರುವಾಗ ಪ್ರದೀಪ್ ಈಶ್ವರ್ ಪ್ರೆಸ್ ಮೀಟ್ ನಲ್ಲಿ ನಾನು 10,000 ಜನಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇನೆ ಅದರಲ್ಲಿ ಎರಡು ಸಾವಿರ ಜನ ಒಕ್ಕಲಿಗರು ನಾನು ಒಕ್ಕಲಿಗರಿಗೆ ಮಾಡಿರುವಂತಹ ಕೆಲಸವನ್ನು ಕುಮಾರಸ್ವಾಮಿಯವರು ಮಾಡಿಲ್ಲ ಎಂದು ಆರೋಪಿಸಿದ್ದರು. ಇದು ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ ನೋಡುವುದಾದರೆ ಎಷ್ಟು ಸಮಂಜಸ. ಒಬ್ಬ ಶಾಸಕನಾಗಿ ವಿಧಾನಸಭಾ ಕ್ಷೇತ್ರದ ಜನರ ಕಷ್ಟಕ್ಕೆ ಪರಿಹಾರ ಸೂಚಿಸುವುದು ಸಮಂಜಸ, ಅದನ್ನು ಬಿಟ್ಟು ಜಾತಿ ನೋಡಿ ಮಣೆಹಾಕುವುದೇ ?

ಸಾಮಾಜಿಕವಾಗಿ ಜಾತಿ ಸಾವಿರಾರು ವರ್ಷಗಳಿಂದಲೂ ಇದೆ, ಅದು ಮುಂದುವರೆದು ರಾಜಕೀಯವಾಗಿ ತನ್ನ ಶಕ್ತಿಯನ್ನು ಕರಾಳತೆಯನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಚಾಚಿದೆ. ಪ್ರತಿ ವರ್ಷ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿದೆ ಅದರ ಜೊತೆಗೆ ಜಾತಿಯ ತೀವ್ರತೆಯು ಸಹ ಹೆಚ್ಚುತ್ತಿದೆ, ಕಾರಣ ರಾಜಕೀಯದಲ್ಲಿ ಜಾತಿಯನ್ನು ಪ್ರವೇಶಿಸಲು ಅವಕಾಶ ಕೊಟ್ಟು, ಜಾತಿ ಧರ್ಮ ರಾಜಕಾರಣ ಮಾಡಲು ಪ್ರಾರಂಭಿಸಿದ್ದು.

ಮೀಸಲಾತಿಯನ್ನು ವ್ಯಾಖ್ಯಾನಿಸುವಾಗ ಸಾಕಷ್ಟು ಜನರು ತಪ್ಪಾಗಿ ವ್ಯಾಖ್ಯಾನಿಸುತ್ತಾರೆ, ಮೀಸಲಾತಿ ಇರುವುದು ಸಾಮಾಜಿಕ ಅಸಮಾನತೆಯ ಮೇಲೆ ಹೊರತು ಆರ್ಥಿಕ ಅಸಮಾನತೆ ಮೇಲೆ ಅಲ್ಲ. ಒಬ್ಬ ವ್ಯಕ್ತಿ ಜಾತಿ ಆಧಾರದ ಮೇಲೆ ಶಿಕ್ಷಣ ಪಡೆದು ಉದ್ಯೋಗ ಪಡೆದರೆ ಅದು ತಪ್ಪಿಲ್ಲ ಯಾಕೆಂದರೆ ಜಾತಿ ಆಗ ವೈಯಕ್ತಿಕವಾಗಷ್ಟೆ ಸೀಮಿತವಾಗಿ, ಶೋಷಿತರಿಗೆ ಲಾಭ ಪಡೆದುಕೊಳ್ಳಲು ಸಹಕಾರಿಯಾಗಿ ವ್ಯಕ್ತಿಗತವಾಗಿ ನಿಲ್ಲುತ್ತದೆ. ಆದರೆ ರಾಜಕೀಯದಲ್ಲಿ ಜಾತಿ ತಂದಾಗ ಅದರಿಂದ ದುಷ್ಪರಿಣಾಮ ಉಂಟಾಗುತ್ತದೆ, ಹೇಗೆಂದರೆ ಜಾತಿಯ ಹೆಸರಿನ್ನು ಹೇಳಿಕೊಂಡು ಚುನಾವಣೆಯಲ್ಲಿ ಗೆದ್ದು, ತನ್ನ ಮನಸ್ಸಿನ ಅಭಿಲಾಷೆಗೋಸ್ಕರ ನಾಡಿನ ಸ್ವಾಸ್ಥ್ಯವನ್ನು ಬಲಿಕೊಡುವ ಸಾಕಷ್ಟೂ ರಾಜಕಾರಣಿಗಳು ನಮ್ಮ ಕಣ್ಣು ಮುಂದೆ ಇದ್ದಾರೆ. ರಾಜಕೀಯದಲ್ಲಿ ಜಾತಿ ತಂದಾಗ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ಹಿನ್ನೆಲೆ ಬಹಳ ಮುಖ್ಯವಾಗುತ್ತದೆ. ಆತ ಏನು ಸಮಾಜಮುಖಿ ಕೆಲಸ ಮಾಡಬಲ್ಲನೆಂದು ಪರಿಗಣನೆಗೆ ಬರುವುದಿಲ್ಲ ಬದಲಿಗೆ ಆತನ ಜಾತಿಯನ್ನು ಆಧಾರವಾಗಿಟ್ಟುಕೊಂಡು ಆತನ ಜಾತಿಗೆ ಸೇರಿದವರು ಆತನನ್ನು ಚುನಾಯಿಸುವ ಕೆಲಸ ನಡೆಯುತ್ತದೆ. ಈ ಜಾತಿಯ ವಿಷ ರಾಜಕೀಯದಲ್ಲಿ ಮೊಳೆತು ಬೃಹದಾಕಾರವಾಗಿ ಬೆಳೆದಿದೆ. ಪಂಚಾಯಿತಿಯಿಂದ ಹಿಡಿದು ವಿಧಾನಸಭಾ, ಲೋಕಸಭಾ ಚುನಾವಣೆವರೆಗೆ ಜಾತಿ ಬೃಹಸ್ಪತಿಯಂತೆ ಕೆಲಸ ಮಾಡುತ್ತದೆ. ಜಾತಿಯ ಸಹಾಯವಿಲ್ಲದೆ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಲು ಸಹ ಸಾಧ್ಯವಾಗುವದಿಲ್ಲ. ಇದಕ್ಕೆ ಕಾರಣ ರಾಜಕೀಯ ಕ್ಷೇತ್ರದಲ್ಲಿ ಜಾತಿಗೆ ಅವಕಾಶ ಮಾಡಿಕೊಟ್ಟಿರುವುದು.

ಸಾಮಾಜಿಕವಾಗಿ ಜಾತಿ ವ್ಯವಸ್ಥೆ ಇದೆ ಅದನ್ನು ಹೋಗಲಾಡಿಸಲು ಸಾಕ್ಷರತೆ ಮತ್ತು ತಿಳುವಳಿಕೆ ಸಹಾಯ ಮಾಡುತ್ತದೆ. ರಾಜಕೀಯವಾಗಿ ಜಾತಿ ತಂದರೆ ಅದು ಒಬ್ಬ ವ್ಯಕ್ತಿಯ ದುರಾಸೆಯಿಂದ ಇಡೀ ಸಮುದಾಯವನ್ನು ಕುರುಡನ್ನಾಗಿಸುತ್ತದೆ.

ಎಲ್ಲಾ ಸಮುದಾಯಗಳಲ್ಲಿಯೂ ಇರುವ ಕೆಡುಕರು, ವ್ಯಕ್ತಿಗೆ ಸಂಬಂಧಪಟ್ಟ ವಿಷಯವನ್ನು ಸಮುದಾಯಕ್ಕೆ ಸಮೀಕರಿಸಿ, ಅವರ ಸಮುದಾಯವನ್ನು ಕುರುಡಾಗಿಸುತ್ತಾರೆ. ಆಗ ಆ ಸಮದಾಯಕ್ಕೆ ಒಬ್ಬ ನಾಯಕನ ಅವಶ್ಯಕತೆ ಉಂಟಾಗುತ್ತದೆ. (ಸಮುದಾಯವನ್ನು ಮುನ್ನಡೆಸಲಿಕ್ಕೆ ಅಲ್ಲ ಬದಲಾಗಿ ಸಮುದಾಯದ ಅಧಃಪತನಕ್ಕೆ)
ನಾಯಕನ ಅನ್ವೇಷಣೆಯಲ್ಲಿ ನಿರತವಾದ ಸಮುದಾಯ ಕೊನೆಗೂ ಒಬ್ಬ ನಾಯಕನನ್ನು ಹುಡುಕುವಲ್ಲಿ ಯಶಸ್ವಿಯಾಗಿ, ಅವನ ಬುಟುನೆಕ್ಕಲೂ ಸಹ ಹಿಂಜರಿಯದೆ, ಗುಲಾಮಗಿರಿಗೂ ಹೇಸದೆ ಅವುಗಳಿಗೂ ಉತ್ಸುಕತೆಯನ್ನ ತೋರುತ್ತದೆ.

ಆವಾಗ ನಾಯಕನ ಶ್ರೇಯೋಭಿರುದ್ಧಿಯನ್ನೇ ಸಮುದಾಯದ ವರ್ಚಸ್ಸೆಂದು ಭಾವಿಸಿ, ಆಗ ಸಮುದಾಯದ ಕೆಲಸ – ನಾಯಕ, ಅವನ ಮಕ್ಕಳು, ಅವನು ಸಾಕಿದ ನಾಯಿಗೂ ನಿಷ್ಠೆಯಿಂದ ನಡೆದುಕೊಳ್ಳುವುದು, ಇದನ್ನು ಪ್ರಶ್ನಿಸಿದವರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಅವರನ್ನು ಜನ್ಮಾಂತರದ ಶತ್ರುಗಳೆಂದು ಭಾವಿಸಿ, ಅವರಿಗೆ ಕೇಡನ್ನು ಬಯಸಲು ಮುಂದಾಗುವುದು.

ವಾಸ್ತವವಾಗಿ ಆ ಸಮದಾಯದ ನಾಯಕ ತನ್ನ ವೈಯಕ್ತಿಕ ಲಾಭದ ಇಚ್ಛೇಗೆ ಆ ಸಮುದಾಯವನ್ನು ಬಲಿಕೊಡಲು ಹೇಸುವುದಿಲ್ಲ. ಈ ವಿಚಾರ ತಿಳಿಯುವಷ್ಟರ ಹೊತ್ತಿಗೆ ಶತಮಾನ ಕಳೆದುಹೋಗಿರುತ್ತದೆ, ಶತಮಾನಗಳು ಕಳೆದರೂ ಆ ಸಮುದಾಯಗಳು ಈ ವಿಷಯವನ್ನು ಅರ್ಥೈಸಿಕೊಳ್ಳಲು ಶಕ್ತವಾಗಿದೆಯಾ ಎಂದು ಕರಾರುವಕ್ಕಾಗಿ ಹೇಳಲಿಕ್ಕಾಗುವುದಿಲ್ಲ. (ಇದು ಎಲ್ಲಾ ಸಮುದಾಯಗಳಲ್ಲಿರುವ ಕೆಡುಕರಿಗೂ, ಆ ಸಮುದಾಯದ ನಾಯಕನ ಚೇಲಾಗಳಿಗೂ ಅನ್ವಯಿಸುತ್ತದೆ.)

ಪ್ರದೀಪ್ ಈಶ್ವರ್ ಒಬ್ಬ ರಾಜಕೀಯ ವ್ಯಕ್ತಿಯಾಗಿ, ಇನ್ನೊಬ್ಬ ರಾಜಕೀಯ ವ್ಯಕ್ತಿಯಾದ ಕುಮಾರಸ್ವಾಮಿ ಮೇಲೆ ಆರೋಪಗಳು ಜಟಾಪಟಿ ನಡೆದಿರುವುದು ಸಾಮಾನ್ಯ ಸಂಗತಿಯೇ. ಆದರೆ ಪ್ರದೀಪ್ ಈಶ್ವರ್, ಡಿಕೆ ಶಿವಕುಮಾರ್ ಒಕ್ಕಲಿಗರನಾಯಕ ಎಂದು ಹೇಳಿರುವುದು ತಪ್ಪು. ಮೀಡಿಯಯಗಳು, ಒಕ್ಕಲಿಗರು ಪ್ರದೀಪ್ ಈಶ್ವರ್ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂಬುದು ತೋರಿಸುತ್ತಿರುವುದು ತಪ್ಪು. ನ್ಯಾಯಾಂಗ ಕಾರ್ಯಾಂಗ ಶಾಸಕಾಂಗ, ಈ ಮೂರಲ್ಲಿ ವ್ಯಕ್ತಿಯನ್ನು ಜಾತಿ ಆಧಾರದ ಮೇಲೆ ಗುರುತಿಸುಹುದು, ವಿಂಗಡಿಸುವುದು ಮೂರ್ಖತನ ಮತ್ತು ಅಪರಾಧತನ.

ಹಾಗೆಯೇ ಐತಿಹಾಸಿಕ ವ್ಯಕ್ತಿಗಳನ್ನು, ಸಮಾಜಕ್ಕೆ ಸೇವೆ ನೀಡಿದ ವ್ಯಕ್ತಿಗಳನ್ನು ಜಾತಿಯ ಆಧಾರದ ಮೇಲೆ ಗುರುತಿಸುವುದು ಸಹ ಕ್ಷಮೆ ಇಲ್ಲದ ಅಪರಾಧ. ಪ್ರದೀಪ್ ಈಶ್ವರ್ ಕುಮಾರಸ್ವಾಮಿ ಮೇಲೆ ಆರೋಪ ಮಾಡಿರುವುದರಿಂದ ಕೆಂಪೇಗೌಡ ಜಯಂತಿಯಲ್ಲಿ ಆತನನ್ನು ಕಾರ್ಯಕ್ರಮದಿಂದ ಹೊರ ಹೋಗುವಂತೆ ಗಲಾಟೆ ಮಾಡಲಾಗಿದೆ. ಕೆಂಪೇಗೌಡರಿಗೂ ಕುಮಾರಸ್ವಾಮಿಗೂ ಯಾವ ರೀತಿ ಸಂಬಂಧ ಕಲ್ಪಿಸಲಾಗಿದೆ, ಯಾವ ರೀತಿ ಹೋಲಿಕೆ ಮಾಡಲಾಗಿದೆ ಎಂದು ನೋಡುವುದಾದರೆ, ಕೇವಲ ಜಾತಿಯ ಆಧಾರದ ಮೇಲೆ ಹೋಲಿಕೆ ಮಾಡಲಾಗಿದೆಯೇ ಹೊರತು, ಇನ್ನು ಅವರ ಯಾವುದೇ ನಡವಳಿಕೆ ಚಿಂತನೆ ಅಭಿಲಾಷೆ ಉದ್ದೇಶಗಳ ಮಾನದಂಡದಿಂದ ಅಲ್ಲ.

ಕೆಂಪೇಗೌಡನನ್ನು ಕುವೆಂಪು ಅವರನ್ನು ಒಕ್ಕಲಿಗ ಜಾತಿಗೆ ಸೀಮಿತ ಮಾಡಿ, ಇವರುಗಳನ್ನು ಒಕ್ಕಲಿಗ ಜಾತಿಗೆ ಕಟ್ಟು ಹಾಕಲಾಗಿದೆ. ಕನಕದಾಸರು ಸಂಗೊಳ್ಳಿ ರಾಯಣ್ಣರನ್ನು ಕುರುಬ ಸಮುದಾಯಕ್ಕೆ ಮಾತ್ರ ಸೀಮಿತ ಮಾಡಿ. ಅಂಬೇಡ್ಕರ್ ರನ್ನು ಕೇವಲ ಅನುಸೂಚಿತ ಜಾತಿಗಳಿಗೆ ಸೀಮಿತ ಮಾಡಿ, ಎಸ್ಸಿಗಳು ಮಾತ್ರ ಅಂಬೇಡ್ಕರ್ ಮೇಲೆ ಹಿಡಿತ ಸಾಧಿಸಬಹುದಾಗಿದೆ. ಬಸವಣ್ಣ ಕೇವಲ ಲಿಂಗಾಯತ ಧರ್ಮಕ್ಕೆ ಮಾತ್ರ ಸೀಮಿತ ಮಾಡಿ, ಇವರುಗಳನ್ನು ಬೇರೆ ಜಾತಿಗೆ ಸೇರಿದ ಜನರು ವಿಮರ್ಶೆ ಮಾಡಿದರೆ, ಅವರ ಮೇಲೆ ದಂಡು ದಂಡಾಗಿ ದಾಳಿ ಮಾಡಲಾಗುತ್ತದೆ. ಈ ನಡೆ, ನಾಡು ನುಡಿಗೆ ತಮ್ಮ ಅಭೂತಪೂರ್ವ ಸೇವೆ ಸಲ್ಲಿಸಿದವರಿಗೆ ಅವಮಾನ ಮಾಡಿದಂತಾಗಿ, ಇವರು ನಾಡಿನ ಸ್ವತ್ತು ಎಂಬುದನ್ನು ಮರೆಮಾಚಿ ಕ್ಷುಲಕ್ಷ ಜಾತಿಯ ತೋರಿಕೆ ಗೊಂಬೆಗಳಾಗಿ ಮಾರ್ಪಾಟು ಮಾಡವ ಕುತಂತ್ರಗಳು ನಡೆಯುತ್ತಿವೆ.

ಅಂಬೇಡ್ಕರನ್ನು ಅಸ್ಪೃಶ್ಯ ನಲ್ಲದ ವ್ಯಕ್ತಿ ಟೀಕೆ ಮಾಡಿದರೆ, ಕೆಂಪೇಗೌಡರನ್ನು, ಬಸವಣ್ಣನವರನ್ನು, ಕನಕದಾಸರನ್ನು, ಬೇರೆ ಜಾತಿಗೆ ಸೇರಿದ ವ್ಯಕ್ತಿ ಟೀಕಿಸಿದರೆ, ಅನುಸರಿಸಿದರೆ ಸಮಾಜದಲ್ಲಿ ಅದಕ್ಕೆ ವಿರೋಧವಿದೆ,‌ ಪರವಿಲ್ಲ. ಒಬ್ಬ ಐತಿಹಾಸಿಕ ವ್ಯಕ್ತಿಯ ಮೇಲೆ ಮೇಲೆ ಟೀಕೆ ಮಾಡುವುದರಲಿ ಅವರ ಬಗ್ಗೆ ಮಾತನಾಡಲು ಸಹ ಅವಕಾಶವಿಲ್ಲದೆ ಇರುವ ಸಮಾಜ ರೂಪುಗೊಳ್ಳುತ್ತಿದೆ, ಒಂದು ನಾಯಕನ ಬಗ್ಗೆ ಮಾತನಾಡಲು ವಿಮರ್ಶಿಸಲು ಹಿಡಿತ ಸಾಧಿಸಲು ಒಂದು ಜಾತಿಗೆ ಸೀಮಿತ ಮಾಡಿ ಬಿಡುತ್ತಾರೆ. ಆಗ ಐತಿಹಾಸಿಕ ವ್ಯಕ್ತಿ ಒಂದು ಜಾತಿಗೆ ಸೀಮಿತನಾಗಿ ಬಿಡುತ್ತಾನೆ/ಬಿಡುತ್ತಾಳೆ.

ಕೆಂಪೇಗೌಡರನ್ನು ಈ ಜಾತಿಯ ಕೂಪಕ್ಕೆ ಸೇರಿಸಿದ್ದಾರೆ. ಪ್ರದೀಪ್ ಈಶ್ವರ್ ಒಕ್ಕಲಿಗನಲ್ಲ ಆತ ಕೆಂಪೇಗೌಡ ಜಯಂತಿಗೆ ಬಂದದ್ದನ್ನು ಕುಮಾರಸ್ವಾಮಿ ಹಿಂಬಾಲಕರು ಸೈದ್ಧಾಂತಿಕವಾಗಿ ಎದುರಿಸದೆ ಜಾತಿಯ ಆಧಾರವಾಗಿ ವಿರೋಧಿಸಿದ್ದಾರೆ, ಇದಕ್ಕೆ ಕರ್ನಾಟಕದಲ್ಲಿರುವ 60 ಲಕ್ಷ ಒಕ್ಕಲಿಗರ ಒಮ್ಮತ ಇಲ್ಲ. ಅಂದರೆ ನಾಲ್ಕು ಜನ ಇದನ್ನು ವ್ಯಕ್ತಿಗತವಾಗಿ ಮತ್ತು ರಾಜಕೀಯವಾಗಿ ವಿರೋಧಿಸಿದ್ದನ್ನು ಸಮುದಾಯದ ಎಲ್ಲರ ಒಮ್ಮತ ಇದೆ ಎಂದು ಇಡೀ ಸಮುದಾಯದ ತಲೆ ಕಟ್ಟುವುದು ಎಷ್ಟು ಸಮಜಂಸ.

ವ್ಯಕ್ತಿಗತವಾಗಿ ಮತ್ತು ರಾಜಕೀಯವಾಗಿ ನೋಡುವುದಾದರೆ ಕುಮಾರಸ್ವಾಮಿ ಮತ್ತು ಪ್ರದೀಪ್ ಈ ಇಬ್ಬರಲ್ಲಿಯೂ ಸಾಕಷ್ಟು ನ್ಯೂನತೆಗಳು ಕಂಡುಬರುತ್ತವೆ. ಅದರಲ್ಲಿ ಎರಡು ಮಾತಿಲ್ಲ ಪ್ರತಿಯೊಬ್ಬ ರಾಜಕೀಯ ವ್ಯಕ್ತಿಯನ್ನು ಟೀಕಿಸುವುದು ವಿಮರ್ಶಿಸುವುದು, ಸರ್ವೇಸಾಮಾನ್ಯ. ಪ್ರದೀಪ್ ಈಶ್ವರ್ ಅನ್ನು ಜಾತಿಯ ಆಧಾರವಾಗಿ ವಿರೋಧಿಸುತ್ತಿರುವವರು ಕೆಲವು ಒಕ್ಕಲಿಗ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಷ್ಟೇ, ಪೂರ್ತಿ ಒಕ್ಕಲಿಗರ ಸಮುದಾಯ ಅಲ್ಲ.

ಈ ರೀತಿಯ ಘಟನೆಗಳಿಂದ ಒಕ್ಕಲಿಗ ಸಮುದಾಯದ ಸಾಮಾನ್ಯ ಜನ ಬೇರೆ ಜಾತಿಯವರ ಜೊತೆ ಸೇರಲು ಮತ್ತು ಬೇರೆ ಜಾತಿಯ ಸಾಮಾನ್ಯ ಜನ ಒಕ್ಕಲಿಗರ ಜೊತೆ ಸೇರಲು ಹಿಂಜರಿಯುತ್ತಾರೆ. ಆಗ ಸಾಮಾಜಿಕ ಅಂತರ ಏರ್ಪಡುತ್ತದೆ. ಈ ಸಾಮಾಜಿಕ ಅಂತರ ಏರ್ಪಟ್ಟಾಗ ಅಲ್ಲಿ ಸ್ನೇಹ ಸಂಬಂಧಗಳಿಗೆ ಆಸ್ಪದವಿಲ್ಲದೆ ಒಂದು ಜಾತಿಯವರು ಮಾತ್ರ ಒಗ್ಗೂಡಿ ಬೇರೆ ಜಾತಿಯವರೆಲ್ಲ ದೂರವಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ.

ಇದೇ ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಮೊದಲು, ವೈದಿಕಶಾಹಿಯ ಕ್ರೂರತ್ವದ ಬಗ್ಗೆ ಟೀಕೆ ಮಾಡುತ್ತಿದ್ದರು ಆಗ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಬಿಜೆಪಿ, ಆರ್ ಎಸ್ ಎಸ್ ಮತ್ತು ಹಿಂದೂ ಪರ ಸಂಘಟನೆಗಳು ಕುಮಾರಸ್ವಾಮಿಯನ್ನು ಅವರ ಮೈಬಣ್ಣದ ಆಧಾರದ ಮೇಲೆ ಮತ್ತು ರಾಧಿಕಾಳನ್ನು ಎರಡನೇ ಮದುವೆಯಾಗಿದ್ದರಿಂದ, ಆತನ ಆಸ್ತಿ-ಪಾಸ್ತಿ ಅಕ್ರಮಗಳ ಆಧಾರದ ಮೇಲೆ ವ್ಯಕ್ತಿಗತವಾಗಿ ಮಾತ್ರ ದಾಳಿ ಮಾಡುತ್ತಿದ್ದರು ಮತ್ತು ಅವಮಾನಿಸುತ್ತಿದ್ದರು ಅದರ ಹೊರತು ಜಾತಿಯ ಆಧಾರದ ಮೇಲೆ ಟೀಕೆ ಮಾಡಲಿಲ್ಲ. ಕಾರಣ ಅವರಿಗೆ ಗೊತ್ತು ಕುಮಾರಸ್ವಾಮಿಯನ್ನು ವ್ಯಕ್ತಿಗತವಾಗಿ ವಿರೋಧಿಸಿದರೆ ಅದು ಕುಮಾರಸ್ವಾಮಿಗೆ ಮಾತ್ರ ಸಂಬಂಧಿಸಿರುತ್ತದೆ, ಆತನ ಜಾತಿಯ ಬಗ್ಗೆ ಮಾತನಾಡಿದರೆ ಇಡೀ ಸಮುದಾಯ ಒಗ್ಗಟ್ಟಾಗಿ ನಮ್ಮ ಮೇಲೆ ತಿರುಗಿ ಬೀಳಬಹುದೆಂದು. ಆದರೆ ಈ ವಿಷಯ ಶೂದ್ರರಿಗೆ ಗೊತ್ತಿಲ್ಲ. ಶೂದ್ರರಿಗೆ ಅಧಿಕಾರ ಬೇಕು ಹಾಗಾಗಿ ಇಷ್ಟೆಲ್ಲಾ ದಡ್ಡತನದಿಂದ ವರ್ತಿಸುತ್ತಾರೆ.

ಕುಮಾರಸ್ವಾಮಿಯ ವಿರುದ್ಧ ಪ್ರದೀಪ್ ಈಶ್ವರ್ ಆರೋಪ ಮಾಡಿದ್ದಕ್ಕೆ, ಆತನನ್ನು ಕಾರ್ಯಕ್ರಮದಿಂದ ಹೊರಗೆ ಹೋಗುವಂತೆ ಮಾಡಿದ್ದು ಮತ್ತು ಆತನ ಮೇಲೆ ಚಪ್ಪಲಿ ಎಸೆದ್ದಿದ್ದು ಇದು ವ್ಯಕ್ತಿಗತ ಮತ್ತು ಪಕ್ಷದ ಆಧಾರದ ಮೇಲೆ ನಡೆದ ಘಟನೆಗಳೆ ಹೊರತು, ಇಡೀ ಸಮುದಾಯವನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುವುದು ನಾಡಿಗೆ ಒಳಿತಲ್ಲ.

ರಾಜಕಾರಣಿಗಳಿಗೆ ಮತ್ತು ರಾಜಕಾರಣಿಗಳ ಬೆಂಬಲಿಗರಿಗೆ ನೈತಿಕತೆ ಇದ್ದರೆ ಯಾರನ್ನೇ ಆಗಲಿ ವ್ಯಕ್ತಿನಿಷ್ಠವಾಗಿ ಮತ್ತು ಪಕ್ಷದ ಆಧಾರದ ಮೇಲೆ ಟೀಕೆಗಳನ್ನು ಮಾಡುವುದು ಅವರನ್ನು ವಿಮರ್ಶಿಸುವುದು, ಪ್ರಶ್ನೆ ಮಾಡುವುದನ್ನು ಮಾಡಿ ಅದನ್ನು ಬಿಟ್ಟು ಜಾತಿಯನ್ನು ಅಡ್ಡ ತಂದು ಇಡೀ ಸಮುದಾಯವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುವುದು ನಿಮ್ಮ ಮೂರ್ಖತನ ನಿಮ್ಮ ಕೇಡಿತನ ಮತ್ತು ನಿಮ್ಮ ದುರ್ಬುದ್ದಿಯನ್ನು ತೋರಿಸುತ್ತದೆ. ಇದನ್ನು ಮಾಡುವ ಎಲ್ಲಾ ನಾಯಕರು ಮತ್ತವರ ಬೆಂಬಲಿಗರು ನಾಡ ದ್ರೋಹಿಗಳು.

ಬಂದ ಆರೋಪಗಳನ್ನು ನೈತಿಕವಾಗಿ ಎದುರಿಸಲು ಶಕ್ತಿ ಇಲ್ಲದ ವ್ಯಕ್ತಿ ತನ್ನನ್ನು ಜಾತಿ ಆಧಾರದ ಮೇಲೆ ಮೇಲೆ ಗುರುತಿಸಿಕೊಂಡು ಬಚಾವಾಗಲು ಪ್ರಯತ್ನಿಸುತ್ತಾನೆ. ಜಾತಿಯಿಂದ ಬಂದಂತಹ ವೈಭೋಗವೆಲ್ಲ ವೈಯಕ್ತಿಕವಾಗಿ ಅನುಭವಿಸಿ ವೈಯಕ್ತಿಕವಾಗಿ ಬಂದಂತಹ ಆರೋಪಗಳನ್ನು ಜಾತಿಯ ಮೇಲೆ ಒರಿಸುವುದು ಎಷ್ಟರ ಮಟ್ಟಿಗೆ ಸರಿ?

ಕಳೆದ ವರ್ಷ ನಡೆದ ದಸರಾ ಉದ್ಘಾಟನೆಗೆ ಭಾನು ಮುಸ್ತಾಕ್ ಅವರನ್ನು ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿತ್ತು. ಅದನ್ನು ನೈತಿಕವಾಗಿ ಪ್ರಶ್ನೆ ಮಾಡಲು ಯೋಗ್ಯತೆ ಇಲ್ಲದ ಅವಿವೇಕಿಗಳು ಆಕೆಯ ಧರ್ಮವನ್ನು ಉದ್ದೇಶಿಸಿ ಒಬ್ಬ ಮುಸ್ಲಿಂ ಮಹಿಳೆ ದಸರಾವನ್ನು ಉದ್ಘಾಟಿಸಲು ಯೋಗ್ಯರಲ್ಲ ಎಂದು ಜರಿಯುವುದು ಅನಾಗರಿಕತೆಯ ಮತ್ತು ಕೈಲಾಗದವರ ಲಕ್ಷಣ. ಒಬ್ಬ ವ್ಯಕ್ತಿಯನ್ನು ನೈತಿಕವಾಗಿ ಎದುರಿಸಲಾರದವರು ಅವರ ವಿರುದ್ಧ ಬಳಸುವ ಕೊನೆಯ ಅಸ್ತ್ರ ಅಪಪ್ರಚಾರ. ಭಾನು ಮುಸ್ತಾಕ್ ಅವರನ್ನು ಅವರ ಬರಹಗಳ ಮುಖಾಂತರ ಅವರು ಮಾಡಿರುವ ಸಾಮಾಜಿಕ ಕೆಲಸಗಳ ಮುಖಾಂತರ ಪ್ರಶ್ನಿಸಲಿ ಟೀಕಿಸಲಿ ವಿಮರ್ಶಿಸಲಿ ಆದರೆ ಧರ್ಮದ ಆಧಾರದ ಮೇಲೆ ಒಂದು ಹೆಣ್ಣನ್ನು ಅವಮಾನಿಸುವುದು, ಒಬ್ಬ ವ್ಯಕ್ತಿಯನ್ನು ಅವಮಾನಿಸುವುದು ಕೇಡಿಗಳ ಲಕ್ಷಣ.

ಕೆಂಪೇಗೌಡರಿಗೂ ಕುಮಾರಸ್ವಾಮಿಗೂ ಜಾತಿಯ ಆಧಾರದ ಮೇಲೆ ಸಮೀಕರಿಸಿ ಇಬ್ಬರೂ ಒಂದೇ ಎನ್ನುವುದು ಎಂತಹ ಮುಟ್ಟಾಳತನ. ರಾಜ್ಯದ ಮುಖ್ಯಮಂತ್ರಿಯನ್ನು ಒಂದು ಜಾತಿಯ ನಾಯಕ ಎಂದು ಬಿಂಬಿಸುವುದು ಸಹ ಮುಟ್ಟಾಳತನವೇ.

ಸಾಮಾಜಿಕತೆಯಲ್ಲಿ ಜಾತಿ ಇದೆ ಆ ಜಾತಿಯನ್ನು ಬಳಸಿಕೊಂಡು ವೈಯಕ್ತಿಕವಾಗಿ, ಅಸಮಾನತೆಯಿಂದ ಪಾರಾಗಲು ಜಾತಿಯಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಳ್ಳುವುದು ಉತ್ತಮ. ರಾಜಕೀಯದಲ್ಲಿ ಎಂತಹದೇ ಸಂದರ್ಭದಲ್ಲಿಯೂ ಸಹ ಜಾತಿಗೆ ಅವಕಾಶ ಕೊಡಬಾರದು. ಆದರೆ ಈಗಾಗಲೇ ಕೊಟ್ಟಾಗಿದೆ, ಇನ್ನು ಮುಂದೆ ಇದರ ಬಗ್ಗೆ ಎಚ್ಚರಿಕೆ ಇರಲಿ.

You cannot copy content of this page

Exit mobile version