"..ಗೋದಿ ಮೀಡಿಯಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಸುದ್ದಿಯ ಶೀರ್ಷಿಕೆಯಲ್ಲಿ ಎದ್ದು ಕಾಣುವುದೆಂದರೆ “ಹೋಟೆಲ್‌ಗಳಿಗೆ ನಿರಾಳ!" ಈ ಶೀರ್ಷಿಕೆಯು ನಿರೂಪಣಾ ಕಣ್ಕಟ್ಟು ಈ ಸಣ್ಣ ಹೊಂದಾಣಿಕೆಯನ್ನೇ ಭಾರೀ ಅನಿರೀಕ್ಷಿತ ಲಾಭವೆಂದು ಬಿಂಬಿಸುತ್ತಿದೆ.." ನಿಖಿಲ್ ಕೋಲ್ಪೆಯವರ ಬರಹದಲ್ಲಿ
ಗೋದಿ ಮೀಡಿಯಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಸುದ್ದಿಯ ಶೀರ್ಷಿಕೆಯಲ್ಲಿ ಎದ್ದು ಕಾಣುವುದೆಂದರೆ “ಹೋಟೆಲ್‌ಗಳಿಗೆ ನಿರಾಳ!” ಮೊದಲೇ ಹಲವು ಸಲ ಏರಿಸಲಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಕೇವಲ 183.50 ರೂ.ಗಳ ಕಡಿತ ಮಾಡಿದ್ದನ್ನೇ ಆಚರಿಸುವ ಈ ಶೀರ್ಷಿಕೆಯು ನಿರೂಪಣಾ ಕಣ್ಕಟ್ಟು ಈ ಸಣ್ಣ ಹೊಂದಾಣಿಕೆಯನ್ನೇ ಭಾರೀ ಅನಿರೀಕ್ಷಿತ ಲಾಭವೆಂದು ಬಿಂಬಿಸುತ್ತದೆ. ಆದರೆ, ಹಿಂದಿನ ಹಂತಹಂತಗಳ ಭಾರೀ ಬೆಲೆ ಏರಿಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತದೆ. ಶೀರ್ಷಿಕೆ ನೋಡಿದರೆ “ಮೋದಿ ಸರಕಾರ ಭಾರೀ ಪರಿಹಾರ ಒದಗಿಸಿದೆ, ಎಲ್ಲವೂ ಮೊದಲಿನ ಸ್ಥಿತಿಗೆ ಮರಳಿದೆ, ಹೊಟೇಲು ಉದ್ಯಮಿಗಳು ನಿರಾಳವಾಗಿದ್ದಾರೆ, ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ, ನಾಳೆ ನಾಡಿದ್ದರಲ್ಲಿ ಊಟ ತಿಂಡಿ ಬೆಲೆ ಇಳಿಸುತ್ತಾರೆ” ಎಂದು ಓದುಗರು ನಂಬಬೇಕು.
ದಿಲ್ಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ. 3,113.50ರಿಂದ ರೂ. 2,930ಕ್ಕೆ ಮತ್ತು ಬೆಂಗಳೂರಿನಲ್ಲಿ ರೂ. 3,021ಕ್ಕೆ ಇಳಿಯಿತು. ಆದರೆ ಈ “ನಿರಾಳ” ವರದಿಯು ಉದ್ದೇಶಪೂರ್ವಕವಾಗಿ ಮರೆಮಾಚಿರುವ ವಿಷಯವೆಂದರೆ ಈ “ಪರಿಹಾರ” ಬಂದಿರುವುದು ವಾಣಿಜ್ಯ ಅನಿಲದ ಬೆಲೆಯನ್ನು ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಳ್ಳಿದ ನಂತರ ಎಂಬುದು. ಮಾರ್ಚ್ 2026ರ ಆರಂಭದಲ್ಲಿ 1,768.50 ರೂ. ಇದ್ದ ಬೆಲೆಯನ್ನು ಕೇವಲ ಎರಡು ತಿಂಗಳ ಅವಧಿಯಲ್ಲಿ ಹಂತಹಂತವಾಗಿ ಬರೋಬ್ಬರಿ 1,345 ರೂ.ಗಳಷ್ಟು ಹೆಚ್ಚಿಸಿ 3,113.50 ರೂ.ಗಳ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಳ್ಳಲಾಗಿತ್ತು. ಮತ್ತೆ ಮತ್ತೆ ಹೆಚ್ಚಿಸಲಾದ ಬೆಲೆಯಲ್ಲಿ ಈಗ ಕೇವಲ ಆರು ಶೇಕಡಾ ಕಡಿಮೆ ಮಾಡಿದರೆ, ಗೋದಿ ಮಾಧ್ಯಮಕ್ಕೆ “ನಿರಾಳ”ವಾಗುತ್ತದೆ! ಅಂತರರಾಷ್ಟ್ರೀಯ ಬೆಲೆ ಇಳಿದರೂ- ಈ ಏರಿಸಿದ ಬೆಲೆ ಬಹುತೇಕ ಹಾಗೆಯೇ ಮುಂದುವರಿದಿರುವಾಗ, ಈ “ನಿರಾಳ” ಎಂದರೆ ಏನೆಂದು ಜನರು ಯೋಚಿಸಬೇಕು! ವಾಣಿಜ್ಯ ಅನಿಲದ ಬೆಲೆ ಏರಿಕೆ ಕಾರಣದಿಂದ ಬೆಲೆ ಏರಿಕೆ ಮಾಡಿದ ಹೊಟೇಲುಗಳ ಬೆಲೆ ಮೊದಲಿದ್ದ ಪ್ರಮಾಣಕ್ಕೆ ಇಳಿಯುವುದು ಸಂಶಯ. ಯಾಕೆಂದರೆ, ಸರಕಾರ ಅನಿಲ ಬೆಲೆಯನ್ನು ಮೊದಲಿದ್ದ ಮಟ್ಟಕ್ಕೆ ಇಳಿಸುವುದೂ ಸಂಶಯ!
ವರದಿಯು ಒಟ್ಟಾರೆ ಈಗಿನ ಇಂಧನ ಪರಿಸ್ಥಿತಿಯನ್ನು ಪಕ್ಕವಾದ್ಯದಂತೆ ಬಾರಿಸಿ, ನಯಾರ ಎಂಬ ಖಾಸಗಿ ಉದ್ದಿಮೆ ಮಾಡಿರುವ- ಲೀಟರಿಗೆ ಐದು ರೂಪಾಯಿ ಬೆಲೆ ಕಡಿತವನ್ನು ಸರಕಾರಿ ಸಾಧನೆಯೋ ಎಂಬಂತೆ ಉಲ್ಲೇಖಿಸುತ್ತದೆ. ಬೆಂಗಳೂರಿನಲ್ಲಿ ಪರಿಷ್ಕೃತ ಚಿಲ್ಲರೆ ಇಂಧನ ಬೆಲೆ- ಪ್ರತಿ ಲೀಟರ್ ಪೆಟ್ರೋಲ್‌ಗೆ 111.20 ರೂ. ಮತ್ತು ಡೀಸೆಲ್‌ಗೆ 98.80 ರೂ.ಗಳಿಗೆ ಇಳಿದಿದೆ ಎಂದು ಹೇಳುತ್ತದೆ. ಆದರೆ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂನಂತ ಸರಕಾರಿ ನಿಯಂತ್ರಣದ ಸಂಸ್ಥೆಗಳು, ರಿಲಯನ್ಸ್‌ನಂತ ಖಾಸಗಿ ಸಂಸ್ಥೆಗಳು ಯಾಕೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿಲ್ಲ? ಇಳಿಸುವುದು ಯಾವಾಗ? ಈ ರೀತಿಯ- ಸರಕಾರವನ್ನು ಬಯಲುಗೊಳಿಸುವ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಗಳನ್ನು ಅದು ಎತ್ತುವುದಿಲ್ಲ!
ಯುದ್ಧ, ಬಿಕ್ಕಟ್ಟು, ಹೊರ್ಮುಜ್ ಎಂದು ಜಾಗಟೆ ಬಾರಿಸುತ್ತಿರುವ ಸರಕಾರ ಮತ್ತು ಗೋದಿ ಮಾಧ್ಯಮದ ಕಳ್ಳಾಟದ ನಡುವೆ, ಜಾಗತಿಕ ಬೆಲೆಯ ಚಲನಶೀಲತೆಗೂ ನಾವು ಪಂಪ್‌ನಲ್ಲಿ ಪಾವತಿಸುವ ಮೊತ್ತಕ್ಕೂ ಯಾವುದೇ ತಾಳಮೇಳ ಇಲ್ಲದಿರುವುದನ್ನು ಕಂಡುಕೊಳ್ಳಲು ಕೆಲವು ಅಂಕಿಅಂಶಗಳನ್ನು ನೋಡಬೇಕು.
ಯುಪಿಎ ಯುಗದಲ್ಲಿ ಲಾಭ-ನಷ್ಟದ ಸಂತುಲನ
ಯುಪಿಎ ಯುಗದಲ್ಲಿ, ಅಂದರೆ 2009ರಿಂದ 2014 ತನಕ ಅಂದಾಜು ಕಚ್ಚಾ ತೈಲ ಬೆಲೆ ನಿರಂತರವಾಗಿ ಐತಿಹಾಸಿಕ ಗರಿಷ್ಠ ಮಟ್ಟಗಳನ್ನು ತಲಪಿ, ಪ್ರತೀ ಬ್ಯಾರೆಲ್‌ಗೆ ಸರಾಸರಿ 110 ಮತ್ತು 112 ಡಾಲರ್ ಮಧ್ಯೆ ಓಲಾಡುತ್ತಿತ್ತು. ನಡುವೆ, ಸಾಂದರ್ಭಿಕವಾಗಿ ಜಾಗತಿಕವಾಗಿ ಪ್ರತಿ ಬ್ಯಾರೆಲ್‌ಗೆ 140 ಡಾಲರ್ ತನಕವೂ ತಲುಪಿತ್ತು. ಆದರೂ, ದೇಶೀಯ (ದಿಲ್ಲಿ ದರದಂತೆ) ಚಿಲ್ಲರೆ ಬೆಲೆಗಳು ಪೆಟ್ರೋಲ್ ಪ್ರತಿ ಲೀಟರ್‌ಗೆ ರೂ. 63 ಮತ್ತು ರೂ. 72ರ ನಡುವೆ ಇತ್ತು; ಡೀಸೆಲ್ ಬೆಲೆಯನ್ನು ಲೀಟರ್‌ಗೆ ರೂ. 40 ಮತ್ತು ರೂ. 53ರ ನಡುವೆ ಬಿಗಿಯಾಗಿ ನಿಯಂತ್ರಿಸಲಾಯಿತ್ತು. ನಾಗರಿಕರನ್ನು ರಕ್ಷಿಸಲು ಆಗಿನ ಸರಕಾರವು ಆಡಳಿತಾತ್ಮಕ ಬೆಲೆ ಕಾರ್ಯವಿಧಾನ (Administered Price Mechanism- APM) ಮತ್ತು ಹಣಕಾಸಿನ ಸಬ್ಸಿಡಿಗಳನ್ನು ಬಳಸಿತು. ಇದರಿಂದಾಗಿ ಏರುಪೇರಿನ ಸಂದರ್ಭದಲ್ಲಿ ಸರಕಾರಿ ಮತ್ತು ಖಾಸಗಿ ತೈಲ ಸಂಸ್ಥೆಗಳು ಕಡಿಮೆ ನಷ್ಟ ಅನುಭವಿಸುತ್ತಿದ್ದವು.
ಮೋದಿ ಯುಗದ ಲಾಭ ಸರಕಾರದ ಜೇಬಿಗೆ!
ಎನ್‌ಡಿಎ ಅಥವಾ ವಾಸ್ತವದಲ್ಲಿ ಮೋದಿ ಯುಗದ ಮೊದಲ ಹಂತವಾದ 2014ರಿಂದ 2016ರ ತನಕ ತೈಲ ಬೆಲೆಯು ನಾಟಕೀಯವಾಗಿ ಕುಸಿದು, ಪ್ರತಿ ಬ್ಯಾರೆಲ್‌ಗೆ 100ರಿಂದ ಕೇವಲ 40–50 ಡಾಲರ್‌ಗಳಿಗೆ ಇಳಿದು, ಮತ್ತು 2016ರ ಆರಂಭದಲ್ಲಿ ಸುಮಾರು 28–35 ಡಾಲರ್‌ಗಳ ದಾಖಲೆಯ ಕನಿಷ್ಠ ಮಟ್ಟವನ್ನು ಮುಟ್ಟಿತು. ಆದರೂ, ಅದಕ್ಕೆ ತಕ್ಕಂತೆ ದೇಶೀಯ ಚಿಲ್ಲರೆ ಬೆಲೆಗಳು 35–40 ರೂ.ಗಳಿಗೆ ಅನುಪಾತದಲ್ಲಿ ಇಳಿಯುವ ಬದಲು, ಪೆಟ್ರೋಲ್ ಲೀಟರ್‌ಗೆ ಸ್ವಲ್ಪ ದರ ಕಡಿಮೆಯಾಗಿ 60–65 ರೂ.ಗಳಿಗೆ ತಲುಪಿತು. ಆದರೆ ಡೀಸೆಲ್ ಲೀಟರ್‌ಗೆ 50–55 ರೂ.ಗಳ ಆಸುಪಾಸಿನಲ್ಲಿತ್ತು. ಬೆಲೆ ಇಳಿಕೆಯ ಲಕ್ಷಾಂತರ ಕೋಟಿ ರೂ. ಲಾಭವನ್ನು ಮೋದಿ ಸರಕಾರ ಗ್ರಾಹಕರಿಗೆ ವರ್ಗಾಯಿಸಲಿಲ್ಲ. 2014 ಮತ್ತು 2016ರ ನಡುವೆ, ಆಡಳಿತವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಸತತವಾಗಿ ಹಲವು ಬಾರಿ ಹೆಚ್ಚಿಸಿತು. ಅಗ್ಗದ ತೈಲದ ಆರ್ಥಿಕ ಲಾಭವು ನಾಗರಿಕರ ಜೇಬಿಗೆ ಬದಲಾಗಿ ನೇರವಾಗಿ ರಾಜ್ಯದ ಖಜಾನೆಗೆ ಹೋಗುವುದನ್ನು ಖಚಿತಪಡಿಸಿಕೊಂಡಿತು. ಆಗಲೂ ಗೋದಿ ಮಾಧ್ಯಮಗಳು ಅದರ ವಿರುದ್ಧ ಬಾಯಿಬಿಚ್ಚದೇ ಭವಿಷ್ಯದ “ವಿಕಾಸ” ಎಂದೆಲ್ಲಾ ಪುಂಗಿಯೂದಿದ್ದವು.
ಮೋದಿ ಯುಗದ ಎರಡನೇ ಹಂತವಾದ 2020–2021ವು ನಿಜಕ್ಕೂ ಸಾಂಕ್ರಾಮಿಕ ಶೋಷಣೆಯ ಕಾಲವಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗವು ಜಾಗತಿಕ ಬೇಡಿಕೆ ಕುಸಿತಕ್ಕೆ ಕಾರಣವಾಯಿತು. ಏಪ್ರಿಲ್/ಮೇ 2020ರಲ್ಲಿ ಭಾರತೀಯ ಖರೀದಿಯ ಕಚ್ಚಾ ತೈಲ ಬೆಲೆ ಸರಾಸರಿ ಬ್ಯಾರೆಲ್‌ಗೆ 20ರಿಂದ 30ರ ವರೆಗಿನ ಐತಿಹಾಸಿಕ ಕನಿಷ್ಟ ಮಟ್ಟವನ್ನು ತಲುಪಿತ್ತು. ಆದರೂ, ದೇಶೀಯ ಚಿಲ್ಲರೆ ಬೆಲೆಗಳು ಕುಸಿಯಲಿಲ್ಲ. ಬದಲಾಗಿ, ಇಂಧನ ಬೆಲೆಗಳನ್ನು ವ್ಯವಸ್ಥಿತವಾಗಿ ಐತಿಹಾಸಿಕ ಗರಿಷ್ಠ ಮಟ್ಟಕ್ಕೆ ತಳ್ಳಲಾಯಿತು. ಪೆಟ್ರೋಲ್‌ಗೆ ಲೀಟರ್‌ಗೆ 100 ರೂ. ಮೈಲಿಗಲ್ಲನ್ನು ದಾಟಿ, ಪ್ರಮುಖ ನಗರಗಳಲ್ಲಿ ಡೀಸೆಲ್‌ಗೆ 90–98 ರೂ.ಗಳನ್ನು ತಲುಪಿತು. ಜಾಗತಿಕ ಕೊಲ್ಲಿ ರಾಷ್ಟ್ರಗಳ ಅತಿಯಾದ ಪೂರೈಕೆ ಬಿಕ್ಕಟ್ಟಿನಿಂದ ಉಂಟಾದ ಬೆಲೆ ಇಳಿಕೆಯನ್ನು ಮೋದಿ ಸರಕಾರವು ಅಭೂತಪೂರ್ವ ತೆರಿಗೆ ದರೋಡೆಗೆ ಬಳಸಿಕೊಂಡಿತು. ಮೇ 2020ರಲ್ಲಿ, ಕೇಂದ್ರ ಅಬಕಾರಿ ಸುಂಕಗಳನ್ನು ಒಂದೇ ಸಲಕ್ಕೆ ರಾತ್ರೋರಾತ್ರಿ ಪೆಟ್ರೋಲ್ ಮೇಲೆ ಲೀಟರ್‌ಗೆ 10 ರೂ. ಮತ್ತು ಡೀಸೆಲ್‌ಗೆ ಲೀಟರ್‌ಗೆ 13 ರೂ.ಗಳಷ್ಟು ಹೆಚ್ಚಿಸಲಾಯಿತು. ಆಗಲೂ ಗೋಧಿ ಮಾಧ್ಯಮಗಳ ಸಮರ್ಥನೆ ಮುಂದುವರಿದಿತ್ತು.
ಬಿಕ್ಕಟ್ಟಿನ ನಷ್ಟ ನಮ್ಮ ನಿಮ್ಮ ಜೇಬಿಗೆ!
ಇದೀಗ ಇರಾನ್ ಯುದ್ಧದ ನೆಪದಲ್ಲಿ ಮತ್ತೆ ಮತ್ತೆ ಪೆಟ್ರೋಲ್, ಡೀಸೆಲ್, ವಾಣಿಜ್ಯ ಮತ್ತು ಗೃಹೋಪಯೋಗಿ ಅನಿಲದ ಬೆಲೆಯನ್ನು ಮತ್ತೆ ಮತ್ತೆ ಸ್ವಲ್ವ ಸ್ವಲ್ಪವೇ ಏರಿಸಿ ದಾಖಲೆ ಪ್ರಮಾಣಕ್ಕೆ ಮುಟ್ಟಿಸಲಾಯಿತು. ಈಗ ಅಷ್ಟೊಂದು ಏರಿದ ವಾಣಿಜ್ಯ ಅನಿಲದ ಬೆಲೆಯನ್ನು ಸ್ವಲ್ಪವೇ ಇಳಿಸಿ, ಎಲ್ಲವೂ “ನಿರಾಳ” ಎಂದು ಬಿಂಬಿಸಲು ಯತ್ನಿಸುವುದು ಜನರಿಗೆ ಅರಿವಳಿಕೆ ಚುಚ್ಚಿ, ಅವರು ಎಲ್ಲವನ್ನೂ ಮರೆತು ಮೋದಿ ಆಡಳಿತದಲ್ಲಿ ಎಲ್ಲವೂ “ಚಂಗಾಸಿ” ಎಂಬ ಭ್ರಮೆಯನ್ನು ಮೂಡಿಸಿ, ವಾಸ್ತವ ಮರೆಸುವ ತಂತ್ರವಷ್ಟೇ. ಈ ವರದಿ ಅದಕ್ಕೊಂದು ಕ್ಲಾಸಿಕ್ ಉದಾಹರಣೆ. ಇರಾನ್ ಯುದ್ಧದ ನೆಪದಲ್ಲಿ ಭಾರತೀಯ ಜನತೆಗೆ ನಡೆಸಿದ ವಂಚನೆಯ ಒಳಹೊರಗನ್ನು ಪ್ರತ್ಯೇಕ ಲೇಖನದಲ್ಲಿ ನೋಡೋಣ! “ಬೆಲೆ ಏರಿದರೆ ನಷ್ಟ ನಿಮಗೆ, ಬೆಲೆ ಇಳಿದರೆ ಲಾಭ ನಮಗೆ” ಎನ್ನುವ ಮೋದಿ ಸರಕಾರದ ಮಹಾ ಆತ್ಮವಂಚನೆಯದು! ವಾಹ್ ಮೋದಿ! ವಾಹ್!
