ಸ್ವಾತಂತ್ರ್ಯ ಹೋರಾಟದ ಕಿಚ್ಚು ಹತ್ತಿಸಿದ, ಬ್ರಿಟಿಷರ ಎದೆ ನಡುಗಿಸಿದ ಆ ಮೂರು ರೋಮಾಂಚನಕಾರಿ ಪದಗಳು ಯಾವುವು ಎಂದು ಕೇಳಿದರೆ, ಪ್ರತಿಯೊಬ್ಬ ಭಾರತೀಯನ ಬಾಯಿಂದ ತಕ್ಷಣ ಬರುವ ಘೋಷಣೆ ‘ಇಂಕ್ವಿಲಾಬ್ ಝಿಂದಾಬಾದ್’!
ಈ ಘೋಷಣೆಯನ್ನು ಕೇಳಿದಾಗಲೆಲ್ಲಾ ನಮ್ಮ ಕಣ್ಣುಗಳ ಮುಂದೆ ಬರುವುದು ಇತ್ತೀಚೆಗೆ ಜಂತರ್ ಮಂತರ್ ನಲ್ಲಿ GenZಗಳು ನಡೆಸಿದ ಹೋರಾಟ, ಅದಕ್ಕಿಂತ ಹಿಂದೆ ನೋಡಿದರೆ ಕಾರ್ಮಿಕ, ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆಗಳು, ಅದಕ್ಕೂ ಹಿಂದೆ ನೋಡಿದರೆ ಸಿಗೋದೆ ಧೀರ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಅವರ ಒಡನಾಡಿಗಳ ಹೆಸರು.
ಆದರೆ, ಭಾರತದ ಇತಿಹಾಸವನ್ನು ಬದಲಿಸಿದ ಈ ಘೋಷಣೆಯನ್ನು ಮೊದಲು ಬರೆದವರು ಯಾರು ಗೊತ್ತೇ ಎಂದು ಕೇಳಿದರೆ ಬಹುತೇಕರಿಗೆ ಭಗತ್ ಸಿಂಗ್ ಇರಬಹುದು ಎಂಬ ಅಲೋಚನೆ ಬರಬಹುದು. ಭಗತ್ ಸಿಂಗ್ ಅವರಿಗೂ ಮುಂಚೆಯೇ ಈ ಘೋಷಣೆಯನ್ನು ಮೊಳಗಿಸಿದ ಆ ಮಹಾನ್ ಚೇತನ ಕ್ರಾಂತಿ ಕವಿ ಹಸರತ್ ಮೊಹಾನಿ.
ಸ್ವಾತಂತ್ರ್ಯ ಸಂಗ್ರಾಮದ ಅಗ್ನಿಪುತ್ರ, ಕ್ರಾಂತಿಕಾರಿ ಕವಿ “ಮೌಲಾನಾ ಹಸರತ್ ಮೊಹಾನಿ” ಅವರ ಹೆಸರು ಇತಿಹಾಸದ ಪುಟಗಳಲ್ಲಿ ಮರೆಮಾಚಲ್ಪಟ್ಟಿದೆ. ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಮೋಹನ್ ಗ್ರಾಮದಲ್ಲಿ 1875ರಲ್ಲಿ ಜನಿಸಿದ ಸೈಯದ್ ಫಜ್ಲುಲ್ ಹಸನ್, ಮುಂದೆ ಜಗತ್ತಿಗೆ ಪರಿಚಿತರಾಗಿದ್ದು “ಹಸರತ್ ಮೊಹಾನಿ” ಎಂಬ ಹೆಸರಿನಿಂದ.
ಹಸರತ್ ಮೊಹಾನಿ ಅವರು ಕೇವಲ ಒಬ್ಬ ರಾಜಕೀಯ ನಾಯಕರಾಗಿರಲಿಲ್ಲ; ಅವರು ಉರ್ದು ಸಾಹಿತ್ಯದ ದಿಗ್ಗಜ ಕವಿ ಮತ್ತು ಶಾಯರಿ ರಚನೆಕಾರ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಮುಸ್ಲಿಂ ಲೀಗ್ ಮತ್ತು ಭಾರತ ಕಮ್ಯುನಿಸ್ಟ್ ಪಾರ್ಟಿಯ (CPI) ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ ವಿವಿಧ ಹಂತಗಳಲ್ಲಿ ಗುರುತಿಸಿಕೊಂಡಿದ್ದರು “ಹಸರತ್ ಮೊಹಾನಿ”.
ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟಕ್ಕೆ ಅವರು ಆಯುಧವನ್ನಾಗಿ ಮಾಡಿಕೊಂಡದ್ದು ತಮ್ಮ ಲೇಖನಿಯನ್ನು ಮತ್ತು ಕಾವ್ಯ ಶಕ್ತಿಯನ್ನು. ಅವರ ಪ್ರಸಿದ್ಧ ಶಾಯರಿಯೊಂದು ಹೀಗಿದೆ:
’ಚುಪ್ ರಹೇ ತೋ ಮುಶ್ಕಿಲ್, ಕಹೇ ತೋ ಮುಶ್ಕಿಲ್,
ದೋನೋಂ ತರಫ್ ಸೆ ಹೈ ಜಿಂದಗಿ ಮುಶ್ಕಿಲ್!”
ಅಂದರೆ, “ಮೌನವಾಗಿದ್ದರೂ ಕಷ್ಟ, ಮಾತನಾಡಿದರೂ ಕಷ್ಟ, ಬ್ರಿಟಿಷರ ಆಳ್ವಿಕೆಯಲ್ಲಿ ಬದುಕು ಎರಡೂ ಕಡೆ ಕಷ್ಟಕರವಾಗಿತ್ತು” ಎಂದು.
ಆದರೆ ಮೊಹಾನಿ ಲೇಖನಿ ಎಂದಿಗೂ ಮೌನವಾಗಿರಲಿಲ್ಲ. ಬ್ರಿಟೀಷರ ಆಳ್ವಿಕೆಯ ವಿರುದ್ಧ ಆಗಾಗ್ಗೆ ಸಿಡಿದೇಳುತ್ತಲೇ ಇತ್ತು.
ಹೀಗೆಯೇ ಅವರ ಲೇಖನಿಯಿಂದ ಉದಯಿಸಿದ ಹೊಸ ಘೋಷವೇ “ಇಂಕ್ವಿಲಾಬ್ ಝಿಂದಾಬಾದ್” ಅರ್ಥಾತ್ “ಕ್ರಾಂತಿ ಚಿರಾಯುವಾಗಲಿ”.
ಅದು 1921. ಭಾರತದಲ್ಲಿ ಅಸಹಕಾರ ಚಳವಳಿ ತೀವ್ರಗೊಂಡಿದ್ದ ಕಾಲ. ಬ್ರಿಟಿಷ್ ಸರ್ಕಾರವು ಭಾರತೀಯರ ಧ್ವನಿಯನ್ನು ಹತ್ತಿಕ್ಕಲು ದಮನಕಾರಿ ನೀತಿಗಳನ್ನು ಅನುಸರಿಸುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರು ಕೇವಲ ‘ಸ್ವದೇಶಿ’ ಘೋಷಣೆಗಳಿಂದ ಸಾಲದು, ದೇಶದಲ್ಲಿ ಸಂಪೂರ್ಣ ವ್ಯವಸ್ಥೆಯ ಬದಲಾವಣೆ ಅಂದರೆ ಕ್ರಾಂತಿ ಆಗಬೇಕು ಎಂದು ಹಸರತ್ ಮೊಹಾನಿ ಯೋಚನೆಯಾಗಿತ್ತು. 1921ರಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್ಯ’ ಅಂದರೆ ಸಂಪೂರ್ಣ ಸ್ವಾತಂತ್ರ್ಯದ ಪ್ರಸ್ತಾವನೆಯನ್ನು ಮಂಡಿಸಿದರು. ಇದು ಗಾಂಧೀಜಿಯವರಿಗಿಂತಲೂ ಮೊದಲು ಎಂದು ಹೇಳಬಹುದು. ಅಂದರೆ ಗಾಂಧೀಜಿಯವರಿಗಿಂತ ಮೊದಲು ಸ್ವರಾಜ್ಯದ ಕನಸು ಕಂಡಿದ್ದ ಹಲವರಲ್ಲಿ ಮೊಹಾನಿ ಕೂಡ ಒಬ್ಬರು. ಅದೇ ಸಮಯದಲ್ಲಿ, ಬ್ರಿಟಿಷರ ದಬ್ಬಾಳಿಕೆಯನ್ನು ವಿರೋಧಿಸಿ ಮತ್ತು ಯುವ ಜನತೆಯಲ್ಲಿ ಕ್ರಾಂತಿಯ ಕಿಚ್ಚು ಹತ್ತಿಸಲು ಮೊಹಾನಿ “ಇಂಕ್ವಿಲಾಬ್ ಝಿಂದಾಬಾದ್” ಎಂಬ ಪ್ರಸಿದ್ಧ ಘೋಷಣೆಯನ್ನು ರಚಿಸಿದರು. ಇದು ಯುವಕರಲ್ಲಿ ಎಷ್ಟರಮಟ್ಟಿಗೆ ತನ್ನೊಳಗೆ ಕಿಚ್ಚು ಎಬ್ಬಿಸಿತೆಂದರೆ ಅಂದಿನ ಕ್ರಾಂತಿಕಾರಿ ಯುವಕ ಭಗತ್ ಸಿಂಗ್ ರಿಂದ ಹಿಡಿದು ಇಂದಿನ ಯುವ ತಲೆಮಾರುಗಳ ಉಸಿರಿನಲ್ಲೂ ಬೆರೆತು, ಕಿಚ್ಚಾಗಿ ಹೊರ ಹೊಮ್ಮುತ್ತಲೇ ಇದೆ.
ಇದು ಕೇವಲ ಪದವಲ್ಲ, ಲಕ್ಷಾಂತರ ಯುವಕರ ರಕ್ತದಲ್ಲಿ ದೇಶಪ್ರೇಮದ ಜ್ವಾಲೆ ಹೊತ್ತಿಸಿದ ಘೋಷ ಮಂತ್ರವಾಗಿದೆ. ಹಸರತ್ ಮೊಹಾನಿ ಅವರು ಮೊದಲು ಸೃಷ್ಟಿಸಿದ ಈ ಘೋಷಣೆಯನ್ನು ರಾಷ್ಟ್ರವ್ಯಾಪಿ ಮನೆಮಾತಾಗಿಸಿದ ಶ್ರೇಯಸ್ಸು ಶಹೀದ್ ಭಗತ್ ಸಿಂಗ್ ಮತ್ತು ಅವರ ಕ್ರಾಂತಿಕಾರಿ ಸಹಚರರಿಗೆ ಸಲ್ಲುತ್ತದೆ .
1929ರಲ್ಲಿ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರು ದೆಹಲಿಯ ಕೇಂದ್ರ ವಿಧಾನಸಭೆಯಲ್ಲಿ ಬಾಂಬ್ ಸಿಡಿಸಿದ ನಂತರ, ಬ್ರಿಟಿಷ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಮೊದಲು ಕೂಗಿದ ಘೋಷಣೆ “ಇಂಕ್ವಿಲಾಬ್ ಝಿಂದಾಬಾದ್!”.
ಭಗತ್ ಸಿಂಗ್ ಹಾಗೂ ನೌಜವಾನ್ ಭಾರತ್ ಸಭಾದ ಕ್ರಾಂತಿಕಾರಿಗಳಿಗೆ ಹಸರತ್ ಮೊಹಾನಿ ಅವರು ದೊಡ್ಡ ಸ್ಪೂರ್ತಿಯಾಗಿದ್ದರು. ಇಬ್ಬರ ಮಾರ್ಗಗಳು ಭಿನ್ನವಾಗಿದ್ದರೂ ಅಂದರೆ ಮೊಹಾನಿ ಅವರು ಗಾಂಧೀಜಿಯವರ ಅಹಿಂಸಾ ಮಾರ್ಗ ಮತ್ತು ಕ್ರಾಂತಿಕಾರಿ ಚಿಂತನೆಗಳೆರಡರ ಜೊತೆಗೂ ಗುರುತಿಸಿಕೊಂಡಿದ್ದರು. ದೇಶದ ಸ್ವಾತಂತ್ರ್ಯ ಎಂಬ ಒಂದೇ ಗುರಿಯತ್ತ ಅವರ ಹೆಜ್ಜೆಗಳು ಸಾಗಿದ್ದವು. ಭಗತ್ ಸಿಂಗ್ ತಮ್ಮ ಭಾಷಣಗಳು ಮತ್ತು ಕರಪತ್ರಗಳಲ್ಲಿ ಮೊಹಾನಿ ಅವರ ಕವನಗಳು ಮತ್ತು ಘೋಷಣೆಯನ್ನು ಸತತವಾಗಿ ಬಳಸುತ್ತಿದ್ದರು ಎಂಬುವುದಕ್ಕೆ ಹಲವು ಪುರಾವೆಗಳಿವೆ.
ಬ್ರಿಟಿಷ್ ಸರ್ಕಾರಕ್ಕೆ ಹಸರತ್ ಮೊಹಾನಿ ಅವರ ಬರಹಗಳು ಬ್ರಿಟೀಷರ ಗಂಟಲಲ್ಲಿ ಮುಳ್ಳಿನಂತೆ ಚುಚ್ಚುತ್ತಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಮೊಹಾನಿಯವರನ್ನು ಬ್ರಿಟಿಷರು ಹಲವು ಬಾರಿ ಬಂಧಿಸಿ ಕಠಿಣ ಸೆರೆಮನೆ ಶಿಕ್ಷೆಗೆ ಗುರಿಪಡಿಸಿದ್ದರು. ಜೈಲಿನಲ್ಲಿ ಮೊಹಾನಿ ಅತ್ಯಂತ ಕಠಿಣ ಕೆಲಸಗಳನ್ನು ಎದುರಿಸಬೇಕಾಯಿತು. ಯಾವುದೇ ಯಂತ್ರ ಅಥವಾ ಜಾನುವಾರುಗಳ ಸಹಾಯವಿಲ್ಲದೆ ಕಬ್ಬಿನ ಯಂತ್ರ ತಿರುಗಿಸುವಂತಹ ಮುಂತಾದ ಕಠಿಣ ಶಿಕ್ಷೆಗಳನ್ನು ಎದುರಿಸಬೇಕಾಯಿತು. ಎಂತಹಾ ಶಿಕ್ಷೆ ಎದುರಿಸಿದರೂ ಎಂದಿಗೂ ತನ್ನನ್ನು ತಾನು ಬ್ರಿಟೀಷರಿಗೆ ಶರಣಾಗಿ ಕ್ಷಮೆ ಕೇಳುವ ಪರಿಪಾಠಕ್ಕೆ ಮುಂದಾಗಿರಲಿಲ್ಲ ಮೊಹಾನಿ.
ಕಾರಾಗೃಹದ ಶಿಕ್ಷೆಗಳ ಯಾತನೆಗಳಲ್ಲೂ ಅವರು ತಮ್ಮ ಕ್ರಾಂತಿಕಾರಕ ಕಾವ್ಯ ಬರೆಯುವುದನ್ನು ನಿಲ್ಲಿಸಲಿಲ್ಲ. ಜೈಲಿನ ಗೋಡೆಗಳ ಮೇಲೂ ತಮ್ಮ ಶಾಯರಿಗಳನ್ನು ಬರೆಯುತ್ತಾ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದವರು ಮೊಹಾನಿ.
ಉರ್ದು ಗಜಲ್ ಕವಿಯಾಗಿ ಪ್ರಸಿದ್ಧಿ ಪಡೆದ ಮೊಹಾನಿ ‘ಉರ್ದು-ಎ-ಮುಅಲ್ಲಾ’ ಪತ್ರಿಕೆಯ ಸಂಪಾದಕರಾಗಿದ್ದರು. ಕೃಷ್ಣಭಕ್ತಿಯ ಗೀತೆಗಳನ್ನು ಮತ್ತು ಪ್ರವಾದಿ ಮುಹಮ್ಮದ್ (ಸ.ಅ) ಅವರ ಸ್ತುತಿಗೀತೆಗಳನ್ನೂ ಅಂದರೆ ‘ನಾತ್’ ರಚಿಸುವ ಮೂಲಕ ಸಾಂಸ್ಕೃತಿಕ ಸಮನ್ವಯತೆಗೆ ಹೆಸರಾಗಿದ್ದರು. ಅಲ್ಲದೆ ರಾಷ್ಟ್ರದ ಸಂವಿಧಾನ ರಚನಾ ಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು ಹಸರತ್ ಮೊಹಾನಿ.
ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ಹಸರತ್ ಮೊಹಾನಿ ಎಂಬ ಹೆಸರು ಮರೆತಿದ್ದರೂ ಅವರು ಬಿತ್ತಿ ಹೋದ ‘ಇಂಕ್ವಿಲಾಬ್ ಝಿಂದಾಬಾದ್’ ಎಂಬ ಘೋಷಣೆ ಇಂದಿಗೂ ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ಅರಳುತ್ತಲೇ ಇದೆ. ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ, ಕಾವ್ಯವನ್ನೇ ಕ್ರಾಂತಿಯ ಅಸ್ತ್ರವನ್ನಾಗಿಸಿದ ಹಸರತ್ ಮೊಹಾನಿ ಅವರ ಹೆಸರು ಭಾರತೀಯರ ಮನದಲ್ಲಿ ಸದಾ ಅಮರವಾಗಿರಲಿ.
ಜೈ ಹಿಂದ್, ಇಂಕ್ವಿಲಾಬ್ ಝಿಂದಾಬಾದ್!”
– ಆಝಾದ್ ಕಂಡಿಗ
ಪತ್ರಕರ್ತ
