Home ಅಂಕಣ ಮನೆಯೊಡೆಯನಿಗೆ ಮಡದಿಯಾಗಿದ್ದರೆ ಸಾಕೇ, ಸ್ವಾವಲಂಬಿ ಆಗಬಾರದೆ ; ಇಂದಿರಾ ಲಂಕೇಶ್ ಕುರಿತು

ಮನೆಯೊಡೆಯನಿಗೆ ಮಡದಿಯಾಗಿದ್ದರೆ ಸಾಕೇ, ಸ್ವಾವಲಂಬಿ ಆಗಬಾರದೆ ; ಇಂದಿರಾ ಲಂಕೇಶ್ ಕುರಿತು

0

“..ಲಂಕೇಶರ ಬರಹ, ಅವರ ಅಭಿರುಚಿಗೆ ಕುಂದು ಕೊರತೆ ಉಂಟುಮಾಡದ ಇಂದಿರಾ ಲಂಕೇಶ್, ಲಂಕೇಶ್ ಪತ್ರಿಕೆ ಜನಪ್ರಿಯವಾಗಿ ಮತ್ತು ಲಾಭದಾಯಕವಾಗಿ ನಡೆಯುತ್ತಿದ್ದಾಗ ಜನರು ಈ ಸೀರೆ ಅಂಗಡಿ ನಡೆಸುವುದರ ಅಗತ್ಯವೇನೆಂದು ಇಂದಿರಾ ಅವರನ್ನು ಪ್ರಶ್ನಿಸಿದ್ದು ಉಂಟು..” ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ದರ್ಶನ್ ಕುರುಬಾಸ್ ಅವರ ಬರಹದಲ್ಲಿ

ನಮಗಾಗಿ ನಮ್ಮವರು ಇದ್ದಾರೆಂದು ನಾವು ಕನಸಿನ ಲೋಕದಲ್ಲಿ ಇರುತ್ತೇವೆ, ಆ ಕನಸಿನ ಪರದೆ ಸರಿದಾಗ ತಿಳಿಯುತ್ತದೆ ನಾವು ಒಬ್ಬಂಟಿಯೆಂದು. ನಮಗಂಟಿದ ಜಡತ್ವ ಕೊಡವಿಕೊಂಡು ಎದ್ದಾಗ ತಿಳಿಯುವುದು ನಮಗಾಗಿ ಯಾರು ಇಲ್ಲ ಅಂತ, ನಮ್ಮ ಜೊತೆ ನಮ್ಮವರು ಇದ್ದಾರೆಂಬುದು ಬರೀ ಭ್ರಮೆ ಅಷ್ಟೇ. ಅಂತಹ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ಜೀವನದ ಪ್ರಾರಂಭದ ಸಂಕೇತ. ಈ ಸಂದರ್ಭವನ್ನು ಇಂದಿರಾ ಲಂಕೇಶ್ ತಮ್ಮ ಜೀವನದಲ್ಲಿ ಎದುರಿಸುತ್ತಾರೆ.

ಇಂದಿರಾ ಲಂಕೇಶ್ ರವರು ಬರಹಗಾರರಾದ ಪಿ.ಲಂಕೇಶ್ ಅವರ ಮಡದಿ, ಇಂದಿರಾ ರವರ ಬಗ್ಗೆ ತಿಳಿಯದ್ದು ಅವರು ಬರೆದ ‘ಹುಳಿಮಾವು ಮತ್ತು ನಾನು’ ಎಂಬ ಅವರ ಆತ್ಮಕಥನವನ್ನು ಓದಿದ ಮೇಲೆ. ಲಂಕೇಶರು ಅವರ ಬರಹದಿಂದ ನನಗೆ ಚಿರಪರಿಚಿತರು, ಅವರು ಬರೆದ ಕಥೆಗಳಲ್ಲಿ ಒಂದಾದ ‘ಮುಟ್ಟಿಸಿಕೊಂಡವನು’ ಎಂಬ ಕತೆ ನನಗೆ ಅಚ್ಚು ಮೆಚ್ಚು. ಹುಳಿಮಾವು ಮತ್ತು ನಾನು ಈ ಪುಸ್ತಕದ ಮುಖಪುಟದಲ್ಲಿ ಇಂದಿರಾ ಅವರು ಲಂಕೇಶ್ ಅವರ ಜೊತೆ ನಿಂತಿರುವ ಫೋಟೋವಿದೆ, ಇಂದಿರಾ ಅವರ ಹೆಸರಿನ ಮುಂದೆಯೂ ಲಂಕೇಶರ ಹೆಸರಿದೆ, ಇದರಿಂದ ನನಗೆ ಮೊದಲು ತಿಳಿದದ್ದು ಇವರು ಲಂಕೇಶರಿಗೆ ಸಂಬಂಧಪಟ್ಟವರೆಂದು. ಇದಕ್ಕಿಂತ ಮುಂಚೆ ನನಗೆ ಇಂದಿರಾ ಲಂಕೇಶ್ ಅವರ ಬಗ್ಗೆ ಗೊತ್ತಿರಲಿಲ್ಲ.

ಇವರ ಆತ್ಮಕಥನ ಓದುತ್ತಾ ನನಗೆ ಅನಿಸಿದ್ದನ್ನು ಈ ಅಂಕಣದ ಮುಖಾಂತರ ಹೇಳಾ ಹೊರಟಿರುವೆ –

ಬಹುಶಃ ಇಂದಿರಾ ಅವರು ತಮ್ಮ ತಂದೆ ಸೋಮಸುಂದರ್ ಅವರ ಮಾತು ಕೇಳಿ ಲಂಕೇಶರನ್ನು ಮದುವೆಯಾಗದಿದ್ದರೆ? ಈ ಆತ್ಮಕಥನವನ್ನು ಅವರು ಬರೆಯುತ್ತಿರಲಿಲ್ಲ ಎಂದು ನನಗನಿಸುತ್ತದೆ. ಇಂದಿರಾ ಅವರ ಆತ್ಮಕಥನದ ಮುಖಪುಟದ ಲಂಕೇಶರ ಚಿತ್ರದಿಂದ ಹಿಡಿದು ಕೊನೆಯ ಪುಟದವರೆಗೂ ಲಂಕೇಶರೇ ಮುಖ್ಯ ವಸ್ತು. ಲಂಕೇಶ್ ಎಂಬ ಮರದ ಸುತ್ತ ಇಂದಿರಾ ಅವರು ಬಳ್ಳಿಯ ಹಾಗೆ ಸುತ್ತ ಸುತ್ತಿಕೊಂಡಿದ್ದಾರೆ.

ಇಂದಿರಾ ಅವರ ಊರು ಶಿಕಾರಿಪುರದ ಕುಸ್ಕೂರು ಆಗಿದ್ದರು, ಇವರ ಅಮ್ಮನ ಮನೆಯವರು 500 ಎಕರೆ ಜಮೀನ್ದಾರರಾಗಿದ್ದರು, ತಾಯಿ ಇಲ್ಲದ ಮೂರು ಮಕ್ಕಳೊಂದಿಗೆ ಸೋಮಸುಂದರ್ ತಮ್ಮ ಕೆಲಸ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೊದಲು ದಾವಣಗೆರೆ ನಂತರ ಶಿವಮೊಗ್ಗದಲ್ಲಿ ಬಾಡಿಗೆ ಮನೆ ಹಿಡಿದು ವಾಸಿಸತೊಡಗಿದರು.

ಶಿವಮೊಗ್ಗೆಯಲ್ಲಿ ಇವರು ಬಾಡಿಗೆಗೆ ಇದ್ದದ್ದು ಸ್ವತಃ ಲಂಕೇಶರವರ ಮನೆಯಲ್ಲಿಯೇ, ಆಗ ಲಂಕೇಶರು ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಲಂಕೇಶರ ಪರಿಚಿತರು ಲಂಕೇಶರಿಗೆ ಇಂದಿರಾರನ್ನು ಗೊತ್ತು ಮಾಡಿದ್ದರು. ವಿದ್ಯಾಭ್ಯಾಸ ಮುಗಿಸಿದ ಲಂಕೇಶರು ಶಹ್ಯಾದ್ರಿ ಕಾಲೇಜಿನಲ್ಲಿ 240 ರೂ ಸಂಬಳದೊಂದಿಗೆ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರುತ್ತಾರೆ. ಮದುವೆಯಾಗದಿದ್ದರೂ ಸಹ ತಮ್ಮ ಸ್ವಂತ ಮನೆಯಲ್ಲಿ, ಅಥವಾ ತಮ್ಮ ಮಾವನವರ ಮನೆಯಲ್ಲಿ ಉಳಿದುಕೊಂಡರು. ಸೋಮಸುಂದರವರು ತಮ್ಮ ಅಳಿಯರಾದ ಲಂಕೇಶರು ತಮ್ಮ ಜೊತೆ ಇದ್ದರು ಸಹ, ಬಾಡಿಗೆಗೆ ತಪ್ಪಿಸಿಕೊಳ್ಳದೆ ಪ್ರತಿ ತಿಂಗಳು ಸರಿಯಾಗಿ ಲಂಕೇಶರ ಅಣ್ಣನಿಗೆ ಮನೆಬಾಡಿಗೆ ಕಟ್ಟುತ್ತಿದ್ದರು.

ಇಂದಿರಾ ಅವರಿಗೆ ವಿದ್ಯಾಭ್ಯಾಸ ಕೊಡಿಸಲು ಸೋಮಸುಂದರ್ ಕುಟುಂಬ ಸಮೇತ ಶಿವಮೊಗ್ಗಕ್ಕೆ ಬಂದಿದ್ದರು ಸಹ, ಇಂದಿರಾ ಅವರು ಎಸ್ ಎಲ್ ಸಿ ಮುಗಿಸಿ ಪಿಯುಸಿಗೆ ಸೇರಿದ್ದರು, ಆಗ ಅವರಿಗೆ ಮದುವೆ ನಿಶ್ಚಯ ಮಾಡಿದ್ದರಿಂದ ಓದಿನ ಕಡೆ ಗಮನ ಕೊಡದೆ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು. ಅದಾದ ನಂತರ ತಮ್ಮ 17ನೇ ವಯಸ್ಸಿಗೆ ಲಂಕೇಶರ ಜೊತೆ ಮದುವೆಯಾದರು. ಲಂಕೇಶ್ ಅವರಿಗೆ ಬೆಂಗಳೂರಿಗೆ ವರ್ಗಾವಣೆಯಾದಾಗ ಅವರ ಜೊತೆ ಇಂದಿರಾ ಅವರು ರಾಜಾಜಿನಗರದಲ್ಲಿ ಬಾಡಿಗೆ ಮನೆ ಮಾಡಿ ವಾಸಿಸತೊಡಗಿದರು.

ಭಾಗಶಃ ಎಲ್ಲ ಸಂಸಾರಗಳು ಶುರುವಾಗುವಾಗ ಇರುವ ಲಕ್ಷಣಗಳೇ ಇವರ ಸಂಸಾರಗಳಲ್ಲಿಯೂ ಇದ್ದವು, ಕಡಿಮೆ ಸಂಬಳವಿದ್ದರೂ ಇಬ್ಬರ ನಡುವಿನ ಅನ್ಯೋನ್ಯತೆ, ಅವರ ಪ್ರೇಮಲೋಕದಲ್ಲಿ ಲಂಕೇಶರ ಮೊಂಡುತನವನ್ನು ಸಹ ಇಷ್ಟಪಡುತ್ತಾ ಸಾಗುತ್ತಿತ್ತು ಅವರ ಜೀವನ.

ಈ ನಡುವೆ ಗೌರಿ ಲಂಕೇಶ್ , ಕವಿತಾ ಲಂಕೇಶ್ , ಇಂದ್ರಜಿತ್ ಲಂಕೇಶ್ ಮೂವರು ಹುಟ್ಟಿರುತ್ತಾರೆ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಲಂಕೇಶರದ್ದು ಪ್ರಾಧ್ಯಾಪಕರಾಗಿ ಕೆಲಸ, ಇಂದಿರಾ ಅವರು ಮಕ್ಕಳು ನೋಡಿಕೊಳ್ಳುವುದರ ಜೊತೆಗೆ ಮನೆಯನ್ನು ನಿಭಾಯಿಸುವುದು.

ಹೀಗೆ ಸಾಗುತ್ತಿದ್ದ ಜೀವನ ಸಾರ, ಒಮ್ಮೆ ಇಂದಿರಾ ಅವರು ಲಂಕೇಶರ ಕೋಣೆಯನ್ನು ಸ್ವಚ್ಛಗೊಳಿಸುವಾಗ ಕಸದ ಬುಟ್ಟಿಯಲ್ಲಿ ಒಂದು ಪತ್ರ ಹರಿದು ನಾಲ್ಕು ಚೂರುಗಳಾಗಿದ್ದನ್ನು ತೆಗೆದು ಜೋಡಿಸಿ ಓದುತ್ತಾರೆ. ಆಗ ಅವರಿಗೆ ಆಕಾಶವೇ ಮುರಿದು ತಲೆ ಮೇಲೆ ಬಿದ್ದಂತಾಗಿ, ನನ್ನ ಪ್ರೀತಿ ನನ್ನ ಸಂಸಾರವೆಲ್ಲ ಗಾಳಿಯ ಮೇಲಿನ ಗೋಪುರವೆಂದು ಅವರ ಅರಿವಿಗೆ ಬರುತ್ತದೆ. ಲಂಕೇಶರು ತಮ್ಮ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದು, ಆಕೆ ಒಪ್ಪಿದರೆ ತನ್ನ ಮನೆ, ಮಕ್ಕಳು ಹೆಂಡತಿಯನ್ನೆಲ್ಲ ಬಿಟ್ಟು ಆಕೆ ಜೊತೆ ಹೋಗಲು ಸಿದ್ಧರಿದ್ದರು. ಆಕೆಗೆ ಒಂದು ಪ್ರೇಮಕಾಗದ ಬರೆದು ನಂತರ ಅದನ್ನು ಹರಿದು ಕಸದ ಬುಟ್ಟಿಯಲ್ಲಿ ಹಾಕಿದ್ದು ಇಂದಿರಾ ಅವರಿಗೆ ಸಿಕ್ಕಿದ್ದು. ಈ ವಿಷಯವಾಗಿ ಲಂಕೇಶರನ್ನು ಪ್ರಶ್ನಿಸಿದಾಗ ಅವರು ಮರುತ್ತರವಾಗಿ, ತಮ್ಮ ಕಥೆಗಾಗಿ ಬರೆದ ಸಾಲುಗಳೆಂದು ಸುಳ್ಳನ್ನು ಹೇಳದೆ ನಿಜವನ್ನು ನುಡಿದರು ಈಗ ಆಕೆ ಇಲ್ಲಿ ಇಲ್ಲ ಬೇರೆ ಎಲ್ಲೋ ಇದ್ದಾರೆಂದು.

ಭ್ರಮನಿರಸನಗೊಂಡ ಇಂದಿರಾ ಅವರು, ಅಳುತ್ತಾ ಗೋಳಾಡುತ್ತಾ, ತಾಳಿಯನ್ನು ಕಿತ್ತೆಸೆದು, ತಮ್ಮ ದಾಂಪತ್ಯದ ಕ್ಷಣಗಳನ್ನು ಸೆರೆಹಿಡಿದ ಫೋಟೋಗಳನ್ನೆಲ್ಲವನ್ನು ಬೆಂಕಿ ಹಾಕಿ ಸುಟ್ಟು, ಅಳುತ್ತಾ ಕುಳಿತಿರುವಾಗ ಯೋಚಿಸುತ್ತಾರೆ. ನನ್ನ ಗಂಡ ನನ್ನ ಪಾಲಿಗೆ ಇಲ್ಲ, ನಾನು ಓದಿದ್ದು ಕೇವಲ ಎಸ್‌ಎಸ್‌ಎಲ್‌ಸಿ ಮಾತ್ರ, ಪಿಯುಸಿ ಫೇಲ್ ಆಗಿದ್ದೇನೆ, ನನಗೆ ಮೂರು ಮಕ್ಕಳು, ಅವರ ಗತಿಯೇನು ? ನಾನೇ ದುಡಿಯಬೇಕು, ನಾನೇ ನನ್ನ ಮಕ್ಕಳ ಭವಿಷ್ಯ ರೂಪಿಸಬೇಕೆಂದು, ತಮಗಂಟಿದ್ದ ಜಡತ್ವ ಬದುಕನ್ನು ಸಡಿಲಿಸಿ, ಅವರು ತನ್ನ ಬದುಕು ಪರಾವಲಂಬಿಯಾಗಿದ್ದು ಸಾಕೆಂದು ಸ್ವಾವಲಂಬಿ ಬದುಕಿಗೆ ಅಪಹಪಿಸಿ. ತಮ್ಮ ಮನೆಯ ಎದುರುಗಡೆಯವರ ಜೊತೆ ಸೇರಿ ಸೀರೆ ಅಂಗಡಿ ಶುರು ಮಾಡಲು ಯೋಚಿಸಿ, ಸೀರೆ ಅಂಗಡಿ ಶುರು ಮಾಡುತ್ತಾರೆ.

ಬೇರೆ ಬೇರೆ ಊರುಗಳಿಗೆ ಹೋಗಿ ಸೀರೆ ತಂದು ಮಹಿಳಾ ಸಂಘ ಅಲ್ಲಿ ಇಲ್ಲಿ ಅಂತ ಅನ್ನದೆ ಅಲೆದು ಸೀರೆ ಮಾರಲು ಶುರು ಮಾಡುತ್ತಾರೆ, ಎದುರುಗಡೆ ಮನೆಯವರೊಂದಿಗಿನ ಜಗಳದಿಂದ ಹೊರಬಂದು, ಗಾಂಧಿ ಬಜಾರ್ ಅಲ್ಲಿ ಒಂದು ಬಾಡಿಗೆ ಮನೆ ಹಿಡಿದು ಅಲ್ಲಿ ತಮ್ಮ ಸೀರೆ ಅಂಗಡಿಗೆ ಕಾಯಂ ವಿಳಾಸ ಕಲ್ಪಿಸುತ್ತಾರೆ. ಸೀರೆ ಅಂಗಡಿಯ ಹೆಸರು ‘ಮಯೂರ್ ಟೆಕ್ಸ್ ಟೈಲ್ಸ್’.

ಲಂಕೇಶರ ಜೊತೆ ಒಂದೇ ಮನೆಯಲ್ಲಿ ಇದ್ದರೂ, ಅವರೊಂದಿಗೆ ವೈಮನಸ್ಸಿನಿಂದ ಇದ್ದರು, ತಮ್ಮ ಮಕ್ಕಳ ಭವಿಷ್ಯಕ್ಕಾಗಿ ವ್ಯಾಪಾರದ ಏರುಪೇರುಗಳನ್ನೆಲ್ಲ ಎದುರಿಸಿ ಸಾಗುತ್ತಾರೆ, ಅವರ ಮಗಳಾದ ಕವಿತಾ ಲಂಕೇಶರು ಸೀರೆ ವ್ಯಾಪಾರದಲ್ಲಿ ಸಹಾಯಕ್ಕೆ ಬರುತ್ತಿರುತ್ತಾರೆ.

ಯು ಆರ್ ಅನಂತಮೂರ್ತಿ ಅವರ ಸಂಸ್ಕಾರ ಕಾದಂಬರಿಯನ್ನು ಲಂಕೇಶರು ಸಿನಿಮಾ ಮಾಡಲು ಮುಂದಾಗಿ ಗಿರೀಶ್ ಕಾರ್ನಾಡ್ ಅವರೊಂದಿಗೆ ಸೇರಿ ತಾವು ಆ ಕಾದಂಬರಿಯಲ್ಲಿ ಬರುವ ನಾರಾಣಪ್ಪ ಪಾತ್ರದಲ್ಲಿ ನಟಿಸುತ್ತಾರೆ.

ಮುಂದೆ, ತಾವೇ ಚಲನಚಿತ್ರ ನಿರ್ಮಿಸಬೇಕೆಂದು, ಶಿವಮೊಗ್ಗದಲ್ಲಿ ತಮ್ಮ ಭಾಗಕ್ಕೆ ಬಂದಿದ್ದ ಮನೆಯನ್ನು ಮಾರಿ, ‘ಇಂದಿರಾ ಲಂಕೇಶ್ ಪ್ರೊಡಕ್ಷನ್’ ಬ್ಯಾನರಿನ ಅಡಿಯಲ್ಲಿ 1977ರಲ್ಲಿ ಪಲ್ಲವಿ ಚಿತ್ರ ನಿರ್ಮಿಸುತ್ತಾರೆ. ಆಗಿನ ಸಮಯದಲ್ಲಿಯೂ ಸಹ ಚಿತ್ರೋದ್ಯಮ ಬಹಳ ದುಬಾರಿ, ಆಗ ಇಂದಿರಾ ಅವರು ಪ್ರತಿ ದಿನ ಸಿನಿಮಾ ಸೆಟ್ಟಿಗೆ ತಮ್ಮ ಮನೆಯಲ್ಲಿ ಅಡುಗೆ ಮಾಡಿ ಸಾಗಿಸುವುದು ಮಾಡುತ್ತಿರುತ್ತಾರೆ ಯಾಕೆಂದರೆ ಸಿನಿಮಾಕ್ಕೆ ಆಗುವ ಖರ್ಚುಗಳನ್ನು ಉಳಿಸಲು. ಸಿನಿಮಾ ನಿರ್ಮಾಣ ಮುಗಿದು ಆ ಸಿನಿಮಾಕ್ಕೆ ಆಗ ರಜತ ಕಮಲ ಪ್ರಶಸ್ತಿ, ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, 25,000 ಬಾಂಡ್ ಜೊತೆಗೆ ಬೆಳ್ಳಿಯ ಪದಕ ಮತ್ತು ನ್ಯಾಷನಲ್ ಅವಾರ್ಡ್ ಕೂಡ ಬರುತ್ತವೆ.

ಲಂಗೇಶರ ಬಗ್ಗೆ ವೈಮನಸಿದ್ದ ಸೋಮಸುಂದರವರು ಈಗ ಯಾವುದೇ ಮನಸ್ತಾಪಗಳಿಲ್ಲದೆ ಶಿವಮೊಗ್ಗೆಯ ಮನೆ ಮುಂದೆ ನಿಂತು ದಾರಿಯಲ್ಲಿ ಹೋಗುತ್ತಿದ್ದ ಕಂಡ ಕಂಡವರನ್ನೆಲ್ಲಾ ನಿಲ್ಲಿಸಿ, ನನ್ನ ಅಳಿಯನ ಪಿಚ್ಚರ್ ಗೆ ನ್ಯಾಷನಲ್ ಅವಾರ್ಡ್ ಬಂದಿದೆ ಎಂದು ಹಿಗ್ಗಿ. ಅಳಿಯನಿಗೆ ಬಂದಿರುವ ನ್ಯಾಷನಲ್ ಅವಾರ್ಡ್ ಅನ್ನು ರಾಷ್ಟ್ರಪತಿಯವರು ಕೊಡುತ್ತಾರೆ ಎಂದು ಎಲ್ಲರ ಬಳಿಯೂ ಹೇಳುತ್ತಾ, ಇಂದಿರಾ ಅವರನ್ನು ಲಂಕೇಶರ ಹೆಂಡತಿಯೆಂದು ಪರಿಚಯ ಮಾಡ ತೊಡಗಿದರು. ಆಗ ಇಂದಿರಾ ರವರು ನಾನು ನಿಮ್ಮ ಮಗಳು ಎಂದು ಅವರ ವಾದವನ್ನು ಸರಿಪಡಿಸಿದರೂ ಸಹ ಅವರ ಅಪ್ಪಯ್ಯ ಅವರ ವಾದವನ್ನೇ ಮುಂದುವರಿದರು. ಸೋಮಸುಂದರವರು ಪ್ರಶಸ್ತಿ ಸಮಾರಂಭವನ್ನು ನೋಡಬೇಕೆಂದು ಊರಿಗಿಂತ ಮುಂದೆ ನಿಂತಿದ್ದರು. ದೆಹಲಿಯಲ್ಲಿನ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಇಂದಿರಾ ಅವರ ಅಪ್ಪಯ್ಯ ಮತ್ತು ಮಕ್ಕಳು ರೈಲಿನಲ್ಲಿ ಹೊರಟರೆ, ಲಂಕೇಶ್ ಅವರು ಪಲ್ಲವಿ ಸಿನಿಮಾದ ನಟಿ ವಿಮಲ ನಾಯ್ಡು ಜೊತೆ ವಿಮಾನ ಹೇರಿ ದೆಹಲಿ ತಲುಪಿ, ಆಕೆಯೊಂದಿಗೆ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಸಿನಿಮಾ ನಿರ್ಮಾಣದಲ್ಲಿ ಇಂದಿರಾ ರವರು ನಿರರ್ಗಳವಾಗಿ ದುಡಿದಿದ್ದರು ಸಹ ಪ್ರಶಸ್ತಿ ಸಮಾರಂಭದಲ್ಲಿ ಅವರನ್ನು ಕಡೆಗಣಿಸಲಾಗಿದ್ದು ಶೋಚನೀಯ. ಇದರಿಂದಾಗಿ ಅವರಿಗೆ ನೋವು ಹೇಳಿಕೊಳ್ಳದಷ್ಟಗಿತ್ತು.

ಮುಂದೆ ಪ್ರಾಧ್ಯಾಪಕ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಮಧ್ಯ ವಯಸ್ಸಿನ ಲಂಕೇಶರು ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತರು, ಆಗ ಇಂದಿರಾ ಅವರ ಸಂಪಾದನೆಯಲ್ಲಿ ಮನೆ ನಡೆಯುತ್ತಿತ್ತು. ಲಂಕೇಶ್ ಪತ್ರಿಕೆ ಆರಂಭಿಸಲು ತಯಾರಿ ನಡೆಸಿ ಯಶಸ್ವಿಯಾದರು. ಲಂಕೇಶರ ಬದುಕು- ಬರಹ, ಸಾಹಿತ್ಯ, ಪತ್ರಿಕೆ, ಸಿನಿಮಾ, ನಾಟಕ, ಗೆಳತಿಯರು ಅಂತ ಇದ್ದರೆ, ಇಂದಿರಾ ಅವರದ್ದು ಸೀರೆ ಅಂಗಡಿ ವ್ಯಾಪಾರ, ಮಕ್ಕಳು, ತೋಟ, ಮನೆ ಇತ್ಯಾದಿ.

ಎಷ್ಟೇ ವೈಮನಸಿದ್ದರು ಸಹ, ಲಂಕೇಶರ ಬರಹ, ಅವರ ಅಭಿರುಚಿಗೆ ಕುಂದು ಕೊರತೆ ಉಂಟುಮಾಡಲಿಲ್ಲ ಇಂದಿರಾ ಅವರು. ಲಂಕೇಶ್ ಪತ್ರಿಕೆ ಜನಪ್ರಿಯವಾಗಿ ಮತ್ತು ಲಾಭದಾಯಕವಾಗಿ ನಡೆಯುತ್ತಿದ್ದಾಗ ಜನರು ಈ ಸೀರೆ ಅಂಗಡಿ ನಡೆಸುವುದರ ಅಗತ್ಯವೇನೆಂದು ಇಂದಿರಾ ಅವರನ್ನು ಪ್ರಶ್ನಿಸಿದ್ದು ಉಂಟು. ಸಾಮಾನ್ಯ ಮಹಿಳೆಯರಂತೆ ಗಂಡನ ನೆರಳನ್ನು ಅವಲಂಬಿಸದೆ, ಜೊತೆಯಾಗಿದ್ದರೂ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಂಡಿದ್ದಕ್ಕಾಗಿ ಈ ಆತ್ಮಕಥನಕ್ಕೆ ಅದರದೇ ಆದಂತಹ ಒಂದು ತೂಕವಿದೆ. ಇಲ್ಲದಿದ್ದರೆ ಲಂಕೇಶರ ಹೆಂಡತಿ ಆಗಿರುವುದಕ್ಕಿಂತ ದೊಡ್ಡದೇನು ? ಎಂಬಂತಾಗುತ್ತಿತ್ತು.

ಸೋಮ ಸುಂದರ್ ಅವರು ಯಾರೊಂದಿಗೂ, ಎಲ್ಲಿಯೂ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಟ್ಟವರಲ್ಲ. ಅವರು ತಮ್ಮ ಮುಪ್ಪಿನ ಕಾಲದಲ್ಲಿ ಅನಾರೋಗ್ಯದಿಂದ ಬಳಲುವಾಗ ಇನ್ನೊಬ್ಬರಿಗೆ ಹೊರೆಯಾಗಬಾರದೆಂದು, ಸ್ವಯಿಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿಯಾಗಿಯೂ ಸಹ ಪಿತೃ ಪ್ರಧಾನ ವ್ಯವಸ್ಥೆಯ, ಸಮಾಜದ ಕಟ್ಟುಪಾಡುಗಳನ್ನು ಮೀರಿದವರಾಗಿರಲಿಲ್ಲ.

ಲಂಕೇಶ್ ನಿರುದ್ಯೋಗಿಯಾಗಿ ಮನೆಯಲ್ಲಿ ಇರಬೇಕಾದರೆ ಇಂದಿರಾ ಅವರನ್ನು ಸಿಗರೇಟಿಗಾಗಿ ಮತ್ತು ತಮ್ಮ ಖರ್ಚಿಗಾಗಿ ಆಗಾಗ ಕಾಸು ಕೇಳುತ್ತಿದ್ದರು. ಒಮ್ಮೆ ಲಂಕೇಶರು ಎಲ್ಲೋ ಭಾಷಣ ಮಾಡುತ್ತಿದ್ದಾಗ ನರಸಿಂಹಸ್ವಾಮಿಯವರ ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ’ ಎಂಬ ಕವನದ ಸಾಲುಗಳನ್ನು ನೆನೆಯುತ್ತಾ “ಜಿಎಸ್‌ಎಸ್ ಅವರಿಗೆ ಎರಡು ಕೋಟಿ ರೂಪಾಯಿ” ಎಂದು ಹೇಳಿದ್ದರಿಂದ ಶಿವರುದ್ರಪ್ಪನವರ ಕೋಪಕ್ಕೆ ಗುರಿಯಾದರು. ಲಂಕೇಶರು ತಮಗನಿಸಿದ್ದನ್ನು ಮುಚ್ಚುಮರೆ ಇಲ್ಲದೆ ನೇರವಾಗಿ ಹೇಳಿ ಬಿಡುತ್ತಿದ್ದರು, ಇದರಿಂದಾಗಿ ಲಂಕೇಶರಿಗೆ ಶತ್ರುಗಳು ಯಾರು? ಸ್ನೇಹಿತರು ಯಾರು ಎಂಬುದೆ ಇಂದಿರಾರವರಿಗೆ ತಿಳಿಯದಂತಾಗುತ್ತಿತ್ತು. ಲಂಕೇಶರವರಿಗೆ ಈ ಪುಸ್ತಕದಲ್ಲಿ ಅವಮಾನವಾಗುವಂತೆ ಎಲ್ಲೂ ಬರೆದಿಲ್ಲ, ಲಂಕೇಶ್ ಅವರು ಹಾಗೆ ನಡೆದುಕೊಂಡಿದ್ದಕ್ಕೆ ಇವರು ಸ್ವಾವಲಂಬಿ ಬದುಕು ಬದುಕಲು ಸಾಧ್ಯವಾಯಿತು. ಇಲ್ಲದಿದ್ದರೆ, ಗಂಡನ ನೆರಳಲ್ಲೇ ಜೀವನ ಕಳೆದು ಹೋಗುತ್ತಿತ್ತು.

ಲಂಕೇಶರು ಲಿವರ್ ಸಮಸ್ಯೆಯಿಂದ ಆಸ್ಪತ್ರೆ ಸೇರಿ ಸ್ವಲ್ಪ ಚೇತರಿಸಿಕೊಂಡರು ಸಹ ಆ ಸಮಸ್ಯೆಯಿಂದ ಬಳಲುತ್ತಿದ್ದರು, ಆಗಲು ಸಹ ಅವರ ಹಾರೈಕೆಯಲ್ಲಿ ಇಂದಿರಾ ಅವರು ಪಾಲುದಾರರಾಗಿದ್ದರು. ಆದರೆ ಇಬ್ಬರೂ ಈಗ ಇಲ್ಲ ಅವರ ಬರಹ, ಸಿನಿಮಾ ಮತ್ತು ನೆನಪುಗಳಷ್ಟೇ.

ಹೆಣ್ಣೆ ಆಗಲಿ ಗಂಡ ಆಗಲಿ ಸ್ವಾವಲಂಬಿಗಳಾಗುವುದು ಉತ್ತಮ. ಪರಾವಲಂಬಿಯಾಗಿ ಸುಪ್ಪತ್ತಿಗೆಯಲ್ಲಿ ಇದ್ದರೂ ಅದು ನಗಾಣ್ಯದ ಬದುಕು. ಇವತ್ತಿನ ದಿನಕ್ಕೆ ಜೀವನದಲ್ಲಿ ಪೋಷಕರು ಸರ್ಕಾರದ ನೀತಿ ನಿಯಮ ಪಾಲಿಸಲು ಶಿಕ್ಷಣ ಕೊಡಿಸಿದರು ಸಹ ಮಕ್ಕಳನ್ನು ತಮ್ಮ ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಸಿ ಇಡುತ್ತಾರೆ. ಹೆಣ್ಣು ಎಂಬಾಕೆ ಎಷ್ಟೇ ಓದಿದರು, ಉತ್ತಮ ರ್ಯಾಂಕ್ ಪಡೆದು ಪಾಸಾದರು, ಬುದ್ದಿವಂತೆಯಾಗಿದ್ದರು, ತಂದೆ ತಾಯಿಗಳಾದವರು ಹೆಣ್ಣಿಗಿಂತ ಎಲ್ಲಾ ವಿಷಯದಲ್ಲೂ ಮೇಲಿರುವಂತಹ ವರನನ್ನು ನೋಡಿ ಮದುವೆ ಮಾಡಿ ಉದ್ದೇಶಪೂರ್ವಕವಾಗಿ ಗಂಡನ ಮನೆಯಲ್ಲಿ ಕೂಡಿ ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹೆಣ್ಣಿಗೆ ಅವಳದೇ ಆದ ವ್ಯಕ್ತಿತ್ವ ಇದೆ ಎಂಬುದು ಸುಳ್ಳಾಗುತ್ತದೆ. ಏಕೆಂದರೆ ಅವಳು ಬದುಕುತ್ತಿರುವುದು ಗಂಡನ ಆಶ್ರಯದಲ್ಲಿ, ಹೆಣ್ಣಾದವಳು ಬಾಲ್ಯದಲ್ಲಿ ತಂದೆಯ ಆಶ್ರಯದಲ್ಲಿ, ಯವ್ವನದಲ್ಲಿ ಗಂಡನ ಆಶಯದಲ್ಲಿ, ಮುಪ್ಪಿನಲ್ಲಿ ಮಗನ ಅಶ್ರಯದಲ್ಲಿ ಪರಾವಲಂಬಿಯಾಗಿ ಬದುಕಬೇಕೆಂಬುದು ಮನಸ್ಸೃತಿಯಲ್ಲಿ ಹೇಳಿರುವಂತೆ ಇಂದಿನ ಸಮಾಜವು ಈ ನೀತಿಯನ್ನು ಪರೋಕ್ಷವಾಗಿ ಪಾಲಿಸುತ್ತಿದೆ.

ವರದಕ್ಷಿಣೆ ಕೊಟ್ಟು ವರೋಪಚಾರ ಮಾಡಿ ಮದುವೆ ಆದಂತಹ ಹೆಣ್ಣು ಹೇಗೆ ತಾನೇ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ ? ಸಂಪ್ರದಾಯಗಳ ಸಂಕೋಲೆಗಳಲ್ಲಿ ಬಂದಿಯಾಗಿ ನರಳುಹುದೇ ಭಾಗ್ಯ.

ಪ್ರಕೃತಿಯ ನಿಯಮದಂತೆ ಗಂಡಿಗೆ ಹೆಣ್ಣಿನ ಆಸರೆ, ಹೆಣ್ಣಿಗೆ ಗಂಡಿನ ಆಸರೆ. ಸ್ವಯಲಂಬನೆಗಾಗಿ ಇಬ್ಬರು ದುಡಿದಾಗ ಮಾತ್ರ ಅವರಲ್ಲಿ ಪರಸ್ಪರ ಗೌರವ ಇರಲು ಸಾಧ್ಯ, ಇಲ್ಲದಿದ್ದರೆ ಯಜಮಾನ ಮತ್ತು ಕೈ ಕೆಳಗಿನ ಆಳಿನ ಸಂಬಂಧವಾಗಿ ಮಾರ್ಪಡುತ್ತದೆ.

ಈ ಆತ್ಮಕಥನದಲ್ಲಿ ಲಂಕೇಶರ ಬಗ್ಗೆ ಹೆಚ್ಚು ಹೇಳಿದ್ದರು, ಇಂದಿರಾ ಅವರು ಯಾರ ಆಶಯವು ಇಲ್ಲದೆ ಸ್ವಾವಲಂಬಿಯಾಗಿ ಬದುಕ ತೊಡಗಿದಾಗ ಅವರಿಗೆ ಒಂದು ವ್ಯಕ್ತಿತ್ವ ಏರ್ಪಡುತ್ತದೆ. ಹಾಗೂ ಅವರ ಜೀವನಕ್ಕೆ ಅರ್ಥ ಬರುವುದು. ಸಾಧನೆ ಎಂದರೆ ಉಪಗ್ರಹಣ ಉಡಾವಣೆ ಒಂದೇ ಮಾತ್ರವಲ್ಲ, ಪ್ರತಿಯೊಬ್ಬ ಮನುಷ್ಯನು ಸ್ವಾವಲಂಬಿಗಳಾಗಿ ಬದುಕುವುದು ಕೂಡ ಸಾಧನೆ.

ಇಂದಿರಾ ಅವರ ಮಕ್ಕಳಾದ ಗೌರಿ ಲಂಕೇಶರು ಸಮಾಜವು ಎಂದೆಂದಿಗೂ ಮರೆಯದ ನಿಷ್ಠೆ ಪತ್ರಕರ್ತೆಯಾಗಿ ಉಳಿದುಕೊಂಡಿದ್ದಾರೆ, ಎರಡನೇ ಮಗಳಾದ ಕವಿತಾ ಲಂಕೇಶರು ಸಿನಿಮಾ ಸಾಹಿತ್ಯದಲ್ಲಿ ತೊಡಗಿ ಅವರದೇ ಒಂದು ಚಾಪನ್ನು ಮೂಡಿಸಿದ್ದಾರೆ. ಇವರು ಇಷ್ಟೆಲ್ಲ ಸಾಧಿಸಲು ಇಂದಿರಾ ಅವರ ಕೊಡುಗೆಯು ಇದೆ. ಇವರ ಸಾಧನೆಯನ್ನು ಗೌರವಿಸುವಾಗ ಇಂದಿರಾ ಅವರನ್ನು ಸ್ಮರಿಸುವುದು ಅವರಿಗೆ ಕೊಡುವಂತ ಗೌರವ.

ಹಾಗಾಗಿ ಲಂಕೇಶರು ಅದೆಷ್ಟೋ ಬಾರಿ ನನ್ನ ಹೆಂಡತಿ ದುಡಿದು ಸಂಪಾದಿಸಿದ ಹಣದಿಂದ ನಾನು ಊಟ ಮಾಡುತ್ತಿದ್ದೇನೆ ಅಂತ ಹೇಳಿಕೊಂಡಿದ್ದಾರೆ. ಹೀಗೆ ಯಾರಾದರೂ ಯಾರ ಬಗ್ಗೆ ಆದರೂ ಸುಖ ಸುಮ್ಮನೆ ಹೇಳಲು ಸಾಧ್ಯವೇ? ಅಡುಗೆ ಬೇಯಿಸಿ ಹಾಕುವ ಮಕ್ಕಳ ನ್ನೆರುವ ಯಂತ್ರಕ್ಕೆ ಯಾರು ತಾನೆ ಮರ್ಯಾದೆ ಕೊಡುತ್ತಾರೆ ?

ಈ ಪುಸ್ತಕ ಓದಿದ ಮೇಲೆ ತಿಳಿಯಿತು ಇಂದಿರಾ ಲಂಕೇಶ್ ಅವರು ಈಗ ಇಲ್ಲ ತೀರಿ ಹೋಗಿದ್ದಾರೆಂದು, ಈ ಅಂಕಣ ಅವರ ಬಗ್ಗೆ ಪೂರ್ಣ ಚಿತ್ರಣ ನೀಡದಿದ್ದರೂ, ಅವರು ಬರೆದಿರುವ ಆತ್ಮಕಥನವನ್ನು ಓದಿದ ನಾನು, ಅರ್ಥೈಸಿಕೊಂಡ ಕೆಲವು ಅಂಶಗಳನ್ನು ಇಲ್ಲಿ ಬರೆದಿದ್ದೇನೆ. ಓದುಗರಿಗೆ ನನ್ನ ಅಂಕಣ ಅವರ ಆತ್ಮಕಥನದ ಪರಿಚಯದಂತೆ, ಅವರ ಬಗ್ಗೆ ತಿಳಿದುಕೊಳ್ಳಲು ಒಂದು ಉತ್ತಮ ಮಾರ್ಗವೆಂದರೆ ಅವರ ಆತ್ಮಕಥನ ಓದುವುದು.

You cannot copy content of this page

Exit mobile version