Home ಅಂಕಣ ಬೊಗಸೆಗೆ ದಕ್ಕಿದ್ದು-96 : ದೇಶಪ್ರೇಮದ ಸೋಗಿನಲ್ಲಿ ರಕ್ಷಣಾ ರಂಗದ ಲಾಭ ಅದಾನಿ, ಅಂಬಾನಿಗೆ!?

ಬೊಗಸೆಗೆ ದಕ್ಕಿದ್ದು-96 : ದೇಶಪ್ರೇಮದ ಸೋಗಿನಲ್ಲಿ ರಕ್ಷಣಾ ರಂಗದ ಲಾಭ ಅದಾನಿ, ಅಂಬಾನಿಗೆ!?

0

“..ನಾಝಿಗಳು ಹೊರಗಿನ ಶತ್ರುವನ್ನು ತೋರಿಸಿ, ಒಳಗಿನ ಎಲ್ಲಾ ಸಮಸ್ಯೆಗಳನ್ನು ಜನರು ದೇಶಪ್ರೇಮದ ಹೆಸರಿನಲ್ಲಿ ಮರೆಯುವಂತೆ ಪ್ರಚೋದಿಸುತ್ತಿದ್ದರು. “ದೇಶಕ್ಕಾಗಿ ಇಷ್ಟಾದರೂ ತ್ಯಾಗ ಮಾಡಲಾಗದಿದ್ದರೆ ಹೇಗೆ!?” ಎಂಬುದು ನೈಜ ನಾಝಿ ಸಿದ್ಧಾಂತ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಪೊಳ್ಳು ರಾಷ್ಟ್ರೀಯತೆ ಮತ್ತು ಜನಪ್ರೀತಿಯಿಲ್ಲದ ಭೂಪಟ ಪ್ರೇಮವು ಸರ್ವಾಧಿಕಾರದ ಒಂದು ಮುಖ್ಯ ಲಕ್ಷಣ. ಆಸ್ಟ್ರಿಯನ್ ಸಂಜಾತ ಅಡಾಲ್ಫ್ ಹಿಟ್ಲರ್ “ಜರ್ಮನ್ ರಾಷ್ಟ್ರೀಯತೆ” ಹೆಸರಿನಲ್ಲಿ ಜರ್ಮನಿಯಲ್ಲಿ ಅಧಿಕಾರ ಹಿಡಿದ. ಅವನ ಜರ್ಮನ್ ರಾಷ್ಟ್ರೀಯತೆಯಲ್ಲಿ- ಅಲ್ಲೇ ಹುಟ್ಟಿಬೆಳೆದು ತಲೆತಲಾಂತರಗಳಿಂದ ವಾಸಿಸುತ್ತಿದ್ದ ಯಹೂದಿಗಳಿಗೆ, ಜಿಪ್ಸಿಗಳಿಗೆ, ಪೋಲಿಷ್ ಸಂಜಾತರಿಗೆ, ಕರಿಯರು ಮತ್ತು ಮಿಶ್ರ ರಕ್ತದವರಿಗೆ ಸ್ಥಾನವಿರಲಿಲ್ಲ! ಶುದ್ಧರಕ್ತದವರೆಂದು ಅವನು ಭಾವಿಸಿದ್ದ “ಅರ್ಯನ್” ಜನಾಂಗದವರಿಗೆ ಮಾತ್ರ ಸ್ಥಾನವಿತ್ತು.

ಆತ ಸುಳ್ಳು ದೇಶಪ್ರೇಮದ ಡೋಲು ಬಾರಿಸಿದಾಗ ಎಲ್ಲರೂ ಅದಕ್ಕೆ ತಲೆದೂಗಿದರು. ಎಲ್ಲರೂ ದೇಶಕ್ಕಾಗಿ “ಅದನ್ನು” ತ್ಯಾಗ ಮಾಡಬೇಕು, “ಇದನ್ನು” ತ್ಯಾಗ ಮಾಡಬೇಕು ಎಂದು ಆತ ಹೇಳಿದ. ಕೊನೆಗೆ ಜನರು ತಮ್ಮ ಸ್ವಾತಂತ್ರ್ಯವನ್ನೇ ತ್ಯಾಗ ಮಾಡಬೇಕಾಯಿತು. ತನ್ನ ವಿಚಾರಗಳಿಗೆ ತಲೆಬಾಗುವವರು ಮಾತ್ರವೇ ದೇಶಪ್ರೇಮಿಗಳು, ಉಳಿದವರೆಲ್ಲ ದೇಶದ್ರೋಹಿಗಳೆಂದು ಆತನ ಭ್ರಮೆಯಾಗಿತ್ತು. ಆ ಭ್ರಮೆಯನ್ನು ಜನರ ತಲೆಗೆ ಆತ ಕಟ್ಟಿಬಿಟ್ಟ. ಜರ್ಮನ್ ಜನರನ್ನು- ಪೋಲೆಂಡ್ ಸಹಿತ ನೆರೆಯ ದೇಶಗಳ ಮೇಲೆ ಒಂದೊಂದಾಗಿ ಎತ್ತಿಕಟ್ಟಿ ದೇಶಪ್ರೇಮದ ಹೆಸರಿನಲ್ಲಿ ಆಕ್ರಮಣ ಮಾಡಿ, ಜರ್ಮನಿಯನ್ನು ಭೂಪಟದಲ್ಲಿ ವಿಸ್ತರಿಸಿದ. ಆದರೆ ಮುಂದೆ, ಜನರದ್ದು ನಾಯಿಪಾಡಾಯಿತು.

ಇದೀಗ ಭಾರತದಲ್ಲಿ ದೇಶಪ್ರೇಮದ ಮತ್ತು ರಾಷ್ಟ್ರೀಯತೆಯ ಜಾಗಟೆ ಬಡಿಯಲಾಗುತ್ತಿದೆ. ಈ ರಾಷ್ಟ್ರೀಯತೆಯಲ್ಲಿ ಮತೀಯ ಅಲ್ಪಸಂಖ್ಯಾತರಿಗೆ, ಹಿಂದುಳಿದವರಿಗೆ, ದಲಿತರಿಗೆ ಯಾವ ಸ್ಥಾನವಿದೆ? ಆಡುವುದು ಒಂದು, ಮಾಡುವುದು ಇನ್ನೊಂದು ಎಂಬುದನ್ನು ಆರಂಭದಿಂದಲೂ ಅನುಸರಿಸಿಕೊಂಡು ಬರುತ್ತಿರುವ ಆರೆಸ್ಸೆಸ್ಸಿನ ಸರಸಂಘಚಾಲಕ ಮೋಹನ್ ಭಾಗವತ್ ಇತ್ತೀಚೆಗೆ ವಿದೇಶಗಳಲ್ಲಿ ಮುಸ್ಲಿಮರ ಮೇಲೆ ಭಾರೀ ಧೃತರಾಷ್ಟ್ರ ಪ್ರೀತಿ ತೋರಿಸಿದರು. ಅದನ್ನು ಅನುಸರಿಸುವಂತೆ ಅವರು ತನ್ನ ಬೆಂಬಲಿಗರನ್ನು, ಹಿಂದೂತ್ವದ ಪಟಲಾಂಗಳನ್ನು ಒತ್ತಾಯಿಸಿದ್ದಾರೆಯೇ? ಅಥವ ಅವರು ಈತನ ಮಾತನ್ನು ಅನುಸರಿಸುತ್ತಾರೆಯೇ? ಅದು ಬರೇ ತೋರಿಕೆ ಮಾತೆಂದು ಅವರಿಗೂ ಗೊತ್ತು. ಆರೆಸ್ಸೆಸ್ಸಿಗೆ ಬೇಕಾಗಿರುವುದು ಮತ್ತು ಅದರ ಗುರಿ ರಾಷ್ಟ್ರೀಯತೆಯ ಹೆಸರಲ್ಲಿ ಬ್ರಾಹ್ಮಣ ಮತ್ತು “ಮೇಲ್ಜಾತಿ” ಪ್ರಾಬಲ್ಯದ, ಜಾತಿ ಶ್ರೇಣೀಕರಣವು ಶಾಶ್ವತವಾಗಿರುವ “ಹಿಂದೂ ರಾಷ್ಟ್ರ”. ಅದನ್ನು ನಾವು ಒಪ್ಪಿಕೊಳ್ಳಬೇಕೆ?

ನಮ್ಮಲ್ಲಿಯೂ ದೇಶಕ್ಕಾಗಿ ಅದನ್ನು ತ್ಯಾಗ ಮಾಡಿ, ಇದನ್ನು ತ್ಯಾಗ ಮಾಡಿ, ಸಬ್ಸಿಡಿ ತ್ಯಾಗಮಾಡಿ ಇತ್ಯಾದಿ ಹೇಳಲಾಗುತ್ತದೆ. ಗಗನಕ್ಕೇರಿದ ತೈಲ, ಅನಿಲ ಬೆಲೆಯೂ ದೇಶಕ್ಕಾಗಿ ಮಾಡುವ ತ್ಯಾಗವಂತೆ! ಬಾಯಿ ಮುಚ್ಚಿಕೊಂಡು ತೆರಿಗೆ ಕಟ್ಟಬೇಕು. ಬೆಲೆ ಏರಿಕೆ ಕುರಿತು ಮಾತನಾಡಬಾರದು. ಸರಕಾರವನ್ನು ಪ್ರಶ್ನಿಸಬಾದು. ಪರೀಕ್ಷಾ ಅಕ್ರಮಗಳು ನಡೆದಾಗ ಪ್ರತಿಭಟಿಸಬಾರದು. ಪಿಎಂ ಕೇರ್ಸ್ ಮೂಲಕ ಸಂಗ್ರಹಿಸಿ, ಯಾವುದೇ ತುರ್ತು ಸಂದರ್ಭದಲ್ಲಿ ಬಳಸದ ಭಾರೀ ಪ್ರಮಾಣದ ಹಣ ಎಲ್ಲಿ ಹೋಯಿತು ಎಂದು ಕೇಳಬಾರದು. ಸುಪ್ರೀಂಕೋರ್ಟ್ ಕಿತ್ತುಹಾಕಿದ ಚುನಾವಣಾ ಬಾಂಡ್ ಮೂಲಕ ಬಿಜಿಪಿಯು ಉಳಿದ ಪಕ್ಷಗಳಿಗಿಂತ ಹಲವಾರು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿದ “ಭ್ರಷ್ಟಾಚಾರದ ಸಾಂಸ್ಥೀಕರಣ”ದ ಹಣದ ಲೆಕ್ಕ ಕೇಳಬಾರದು. ಹಿಂದೂತ್ವದ ಹೆಸರಿನಲ್ಲಿ ಕಾರ್ಯಕರ್ತರು ನಡೆಸುತ್ತಿರುವ ದೌರ್ಜನ್ಯ ಮತ್ತು ಅತಿರೇಕಗಳನ್ನು ಪ್ರಶ್ನಿಸಬಾರದು. ರಾಮಮಂದಿರ ಸೇರಿದಂತೆ ದೇಶದ ದೇವಾಲಯಗಳಲ್ಲಿ ನಡೆಯುತ್ತಿರುವ “ಹುಂಡಿ ಕಳ್ಳತನ” ಮತ್ತಿತರ ಅವ್ಯವಹಾರಗಳನ್ನು ಬಿಜೆಪಿಯವರಲ್ಲದ ಹಿಂದೂಗಳೇ ಪ್ರಶ್ನಿಸಬಾರದು. ಚುನಾವಣಾ ಆಯೋಗದ ಮೂಲಕ ನಡೆಯುತ್ತಿರುವ ವ್ಯವಸ್ಥಿತ “ವೋಟ್ ಚೋರಿ” ಮತ್ತು ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ ವಿರೋಧ ಪಕ್ಷಗಳಿಗೆ ಮತ ನೀಡುವವರ ಹೆಸರುಗಳನ್ನು ಸಗಟು ಲೆಕ್ಕದಲ್ಲಿ ಮತದಾರರ ಪಟ್ಟಿಯಿಂದ ತೆಗೆದು ಹಾಕುವುದನ್ನು ಪ್ರಶ್ನಿಸಬಾರದು. ಚುನಾವಣಾ ಆಯೋಗ ಒಮ್ಮತವಿಲ್ಲದೇ ತೆಗೆದುಕೊಂಡ ಕಾನೂನುಬಾಹಿರ ನಿರ್ಧಾರಗಳನ್ನು ಪ್ರಶ್ನಿಸಬಾರದು! ಒಂದೇ, ಎರಡೇ!? ಒಟ್ಟಿನಲ್ಲಿ ಸರಕಾರವನ್ನು ಬೆಂಬಲಿಸಿದರೆ ದೇಶಪ್ರೇಮಿ, ಪ್ರಶ್ನಿಸಿ ವಿರೋಧಿಸಿದರೆ ದೇಶದ್ರೋಹಿ! ಇದುವೇ ಸರ್ವಾಧಿಕಾರದತ್ತ ಸಾಗುವ ಹಾದಿ.

ಇಲ್ಲಿ ಕೂಡಾ “ಹಿಂದೂ ರಾಷ್ಟ್ರ”ದ ಕನವರಿಕೆಯಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಬರ್ಮಾ (ಮ್ಯಾನ್ಮಾರ್) ಹಾಗೂ ಇಂಡೋನೇಷ್ಯಾ , ಮಲೇಷಿಯಾ ಭಾಗಗಳನ್ನು ಒಳಗೊಂಡಂತ “ಅಖಂಡ ಭಾರತ”ದ “ಸಾಮ್ರಾಜ್ಯಶಾಹಿ” ಕಲ್ಪನೆಗೆ ನೀರುಣಿಸಿ ಇನ್ನೂ ಜೀವಂತವಾಗಿ ಇಡಲಾಗಿದೆ. ಇವುಗಳಲ್ಲಿ ಕೆಲವು ದೇಶಗಳಲ್ಲಿ ಮುಸ್ಲಿಮರೇ ಬಹುಸಂಖ್ಯಾತರು. ಅವೆಲ್ಲವೂ ಅಖಂಡ ಭಾರತಕ್ಕೆ ಸೇರಿದವು ಎಂದೇ ಊಹಿಸೋಣ. ಆಗ ಭಾರತದಲ್ಲಿ ಮುಸ್ಲಿಮರ ಶೇಕಡಾವಾರು ಜನಸಂಖ್ಯೆ ಗಣನೀಯವಾಗಿ ಏರಲಿದೆ. ಖಂಡಿವಾಗಿಯೂ ಇವರ ಕಲ್ಪನೆಯ “ಹಿಂದೂ ರಾಷ್ಟ್ರ” ಸ್ಥಾಪನೆ ಖಂಡಿತವಾಗಿಯೂ ಧೂಳೀಪಟವಾಗುತ್ತದೆ. ಈಗಿನ ಸಂದರ್ಭದಲ್ಲಿ ಈ ಕೆಲವು ದೇಶಗಳು ಎದುರಿಸುತ್ತಿರುವ ಸಾವಿರಾರು ಸಮಸ್ಯೆಗಳ ಗೋಜಲುಗಳ ಉಸಾಬರಿ ನಮಗೆ ಬೇಕೇ? ಮೇಲಾಗಿ ದೇಶ ವಿಭಜನೆಯ ಬೇಡಿಕೆಯನ್ನು ಮುಸ್ಲಿಂ ಲೀಗ್ ಜೊತೆಗೆ ಮೊದಲು ಎತ್ತಿದ್ದೇ ಹಿಂದೂ ಮಹಾ ಸಭಾ! ಇದು ಅವರಿಗೂ ಗೊತ್ತು . ಹಾಗಿದ್ದರೂ ಅದನ್ನು ತಮಗೆ ಲಾಭ ತಂದುಕೊಡುವ ಭಾವನಾತ್ಮಕ ವಿಚಾರವಾಗಿ ಜೀವಂತ ಇಟ್ಟುಕೊಳ್ಳಲಾಗಿದೆ. ಭೂಪಟ ಪ್ರೇಮ ಮತ್ತು ಜನಪ್ರೇಮದ ವ್ಯತ್ಯಾಸವನ್ನು, ನಿಜವಾದ ದೇಶಪ್ರೇಮವನ್ನು ಸರ್ವಾಧಿಕಾರಿ ಪ್ರವೃತ್ತಿಯು ಎಂದಿಗೂ ತಿಳಿದುಕೊಳ್ಳಲಾರದು. ನಾಜಿ ಜರ್ಮನಿಯು ನೆರೆಯ ಪೋಲೆಂಡ್ ನಮ್ಮದು, ಆಸ್ಟ್ರಿಯಾ ನಮ್ಮದು ಎಂದು ಹೇಳುತ್ತಲೇ, ಜರ್ಮನ್‌ ಜನರಲ್ಲಿ ದ್ವೇಷ ಹುಟ್ಟಿಸಿ, ಅವುಗಳ ಮೇಲೆ ಮತ್ತು ನಂತರ ಫ್ರಾನ್ಸ್, ಸ್ಕ್ಯಾಂಡಿನೇವಿಯನ್ ದೇಶಗಳ ಸಹಿತ ನೆರೆಹೊರೆಯ ಹಲವು ದೇಶಗಳ ಮೇಲೆ ದಂಡೆತ್ತಿಹೋಗಿತ್ತು. ನಮ್ಮಲ್ಲಿರುವ “ಅಖಂಡ ಭಾರತ”ದ ಸಂಘ ಪರಿವಾರದ ಕಲ್ಪನೆಗೂ ಇದಕ್ಕೂ ಮಾನಸಿಕವಾಗಿಯಾದರೂ ಏನಾದರೂ ಸಾಮ್ಯ ನಿಮಗೆ ಕಾಣುತ್ತಿದೆಯೆ!?

ಎಲ್ಲಾ ಸರ್ವಾಧಿಕಾರಿಗಳು ಹಿಂದಿನ ಆಡಳಿತವನ್ನು ದೂರಿ ಅಭಿವೃದ್ಧಿಯ ಮಂತ್ರವನ್ನು ಜಪಿಸಿದ್ದಾರೆ. ಹಿಟ್ಲರ್ ಮತ್ತು ಇಟಲಿಯ ಸರ್ವಾಧಿಕಾರಿ ಬೆನಿಟೊ ಮುಸೊಲಿನಿಯಂತವರೂ ಹಿಂದೆ ಬಿದ್ದಿರಲಿಲ್ಲ. ತಮ್ಮ ತಮ್ಮ ದೇಶಗಳನ್ನು ಸಮೃದ್ಧಿಯ ಶಿಖರಕ್ಕೆ ಕೊಂಡೊಯ್ಯುವ ಭರವಸೆ ನೀಡಿ ವಿನಾಶದ ಪಾತಾಳಕ್ಕೆ ತಳ್ಳಿದರು. ಜನಕೇಂದ್ರಿತವಲ್ಲದ ಮತ್ತು ಮಿಲಿಟರಿ ಯಂತ್ರವನ್ನು ಬಲಪಡಿಸುವ ಕೈಗಾರಿಕೀಕರಣ ಅದಾಗಿತ್ತು. ಹೊಸ ರೀತಿಯ ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‌ಗಳು, ಯುದ್ಧ ವಿಮಾನಗಳು, ಹಡಗುಗಳು, ಜಲಾಂತರ್ಗಾಮಿಗಳು, ಸೋನಾರ್, ರಾಡಾರ್ ತಂತ್ರಜ್ಞಾನಗಳು ಅಭಿವೃದ್ಧಿ ಹೊಂದಿ ವಿನಾಶದ ಸಲಕರಣೆಗಳು ಭಾರೀ ಪ್ರಮಾಣದಲ್ಲಿ ನಿರ್ಮಾಣವಾದವು. ಇಂದು ಮಧ್ಯಮ ವರ್ಗದ, ಅದರಲ್ಲೂ ಈಗ ಯುವಕರ ನೆಚ್ಚಿನ ಶೋಕಿಗಳಾಗಿರುವ ಮೋಟಾರ್ ಬೈಕ್‌ಗಳನ್ನು ಜರ್ಮನಿಯಲ್ಲಿ BMW ಮತ್ತು Zündapp ಕಂಪನಿಗಳು ಎರಡನೇ ಮಹಾಯುದ್ಧದಲ್ಲಿ ಮಿಲಿಟರಿ ಸಾರಿಗೆಗಾಗಿ ಭಾರಿ ಪ್ರಮಾಣದಲ್ಲಿ ತಯಾರಿಸಿದವು. ಇಟಲಿಯಲ್ಲಿ ಯುದ್ಧದ ನಂತರ ಧ್ವಂಸಗೊಂಡ ರಸ್ತೆಗಳಲ್ಲಿ ಸಾಗಲು ಮತ್ತು ಆಗಿನ ವಿಮಾನ ತಯಾರಿಕಾ ತಂತ್ರಜ್ಞಾನವನ್ನು ಬಳಸಿ Vespino / Vespa ಸ್ಕೂಟರ್‌ಗಳನ್ನು (Piaggio ಕಂಪೆನಿ) ನಿರ್ಮಿಸಲಾಯಿತು. ಒಟ್ಟಿನಲ್ಲಿ ಎರಡನೇ ಮಹಾಯುದ್ಧಕ್ಕೆಂದೇ ಶಸ್ತ್ರಾಸ್ತ್ರ, ವಾಯುಯಾನ, ಸಮುದ್ರಯಾನ, ದೂರ ಸಂಪರ್ಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಡೆದ ಸಂಶೋಧನೆಗಳೇ ಇಂದಿನ ಬಹುತೇಕ ತಂತ್ರಜ್ಞಾನಕ್ಕೆ ಅಡಿಪಾಯ ಒದಗಿಸಿದವು. ಮುಂದೆ ಸೋವಿಯತ್ ಕಾಲದಲ್ಲಿ ನಡೆದ ಶೀತಲ ಸಮರವು ತಂತ್ರಜ್ಞಾನ ಅಭಿವೃದ್ಧಿಗೆ ಇನ್ನಿಲ್ಲದ ಪೈಪೋಟಿಯ ಚಾಲನೆ ಒದಗಿಸಿತು.

ನಮ್ಮಲ್ಲಿಯೂ ಯುದ್ಧಾಸ್ತ್ರಗಳ ಖಾಸಗಿ ನಿರ್ಮಾಣಕ್ಕೆ ಚಾಲನೆ ದೊರಕಿದೆ. ​ಎಚ್‌ಎಎಲ್ (Hindustan Aeronautics Limited) ದಶಕಗಳಿಂದ ಸುಖೋಯ್, ಮಿಗ್ ಮತ್ತು ತೇಜಸ್ ವಿಮಾನಗಳನ್ನು ಜೋಡಿಸಿದ ಸುದೀರ್ಘ ಅನುಭವ ಹೊಂದಿದೆ. ರಫೇಲ್ ಒಪ್ಪಂದದ ‘ಆಫ್‌ಸೆಟ್’ ಪಾಲುದಾರಿಕೆಯ ಭಾಗವಾಗಿ 2015-16 ರಲ್ಲಿ ಅನಿಲ್ ಅಂಬಾನಿಯ (ರಿಲಯನ್ಸ್ ಡಿಫೆನ್ಸ್) ಕಂಪೆನಿ ಮುಂಚೂಣಿಗೆ ಬಂದಾಗ, ಅನುಭವವಿಲ್ಲದ ಆ ಕಂಪೆನಿಗೆ ಶತಕೋಟಿ ರೂಪಾಯಿಗಳ ಅವಕಾಶ ಸಿಕ್ಕಿದ್ದರ ಬಗ್ಗೆ ರಾಜಕೀಯ ಮತ್ತು ರಕ್ಷಣಾ ವಲಯದಲ್ಲಿ ದೊಡ್ಡ ಮಟ್ಟದ ಟೀಕೆಗಳು ಎದ್ದವು.

ಡ್ರೋನ್ ಮತ್ತು ರಕ್ಷಣಾ ರಫ್ತು ಕ್ಷೇತ್ರಗಳಲ್ಲೂ ಇದೇ ಕತೆ. ‘ಮೇಕ್ ಇನ್ ಇಂಡಿಯಾ’ ಅಡಿಯಲ್ಲಿ ಅದಾನಿ ಡಿಫೆನ್ಸ್ ಎಂಡ್ ಏರೋಸ್ಪೇಸ್ ಕಂಪೆನಿಯು ಡ್ರೋನ್‌ಗಳು (Hermes 900) ಮತ್ತು ಇತರ ಶಸ್ತ್ರಾಸ್ತ್ರ ತಯಾರಿಕೆಯಲ್ಲಿ ದೊಡ್ಡ ಪ್ರಮಾಣದ ಗುತ್ತಿಗೆಗಳನ್ನು ಪಡೆದಿದೆ. ಪ್ರಮುಖ ರಕ್ಷಣಾ ವಲಯದ ಹೂಡಿಕೆಗಳು ಸಾರ್ವಜನಿಕ ಸಂಸ್ಥೆಗಳಾದ DRDO, HAL ಬಿಟ್ಟು ಖಾಸಗಿ ಬೃಹತ್ ಉದ್ದಿಮೆಗಳಿಗೆ ವರ್ಗಾವಣೆಯಾಗುತ್ತಿರುವುದು ಏಕಸ್ವಾಮ್ಯವನ್ನು ಸೃಷ್ಟಿಸುತ್ತಿದೆ. ಉದಾಹರಣೆಗೆ, ಭಾರತೀಯ ಸೇನೆಯು ದಶಕಗಳಿಂದ ಬಳಸುತ್ತಿದ್ದ ಸ್ವದೇಶಿ INSAS (ಇನ್ಸಾಸ್) ರೈಫಲ್‌ಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ. ಅದನ್ನು ಸುಧಾರಿಸಲು ಸ್ವದೇಶಿ DRDOಗೆ ಅವಕಾಶ ನೀಡುವ ಬದಲು, AK-47 ಮಾದರಿಯ AK-203 ಅಸಾಲ್ಟ್ ರೈಫಲ್‌ಗಳನ್ನು ಈಗ ​ ಉತ್ತರ ಪ್ರದೇಶದ ಅಮೇಠಿಯಲ್ಲಿ Indo-Russian Rifles Private Limited (IRRPL) ಸಂಸ್ಥೆಯ ಅಡಿಯಲ್ಲಿ ತಯಾರಿಸಲಾಗುತ್ತಿದೆ. ಹೀಗಿದ್ದರೂ, ಭಾರತದಲ್ಲಿ ಖಾಸಗಿ ಸಂಸ್ಥೆಗಳಾದ ಎಸ್ಎಸ್‌ಎಸ್ ಡಿಫೆನ್ಸ್ ಮತ್ತು ಅದಾನಿ ಡಿಫೆನ್ಸ್ ಮುಂತಾದ ಖಾಸಗಿ ಕಂಪನಿಗಳು ಕೂಡಾ ಸೇನಾ ಪಡೆಗಳಿಗೆ “ಎಕೆ” ಸರಣಿಯ ಆಧುನಿಕ ಆವೃತ್ತಿಗಳು (AK-47/74 ) ಮತ್ತು ಸಣ್ಣ ಶಸ್ತ್ರಾಸ್ತ್ರಗಳನ್ನು ಪೂರೈಸಲು ಸಜ್ಜಾಗುತ್ತಿವೆ. ಇದರಲ್ಲಿಯೂ ಖಾಸಗಿ ಸಂಸ್ಥೆಗಳಿಗೆ ಬಾಗಿಲು ತೆರೆದು ‘ಮೇಕ್ ಇನ್ ಇಂಡಿಯಾ’ ಹೆಸರಿನಲ್ಲಿ ವ್ಯಾಪಾರಿ ಲಾಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾಂಪ್ರದಾಯಿಕ ಸಾರ್ವಜನಿಕ ರಕ್ಷಣಾ ಸಂಸ್ಥೆಗಳನ್ನು ಬದಿಗೊತ್ತಿ, ಭಾರತದ ಬೃಹತ್ ಕಾರ್ಪೊರೇಟ್ ಮನೆತನಗಳಿಗೆ ರಕ್ಷಣಾ ವಲಯದ ಬಾಗಿಲು ತೆರೆಯಲಾಗುತ್ತಿದೆ. ಇದಕ್ಕೆ ನಿದರ್ಶನ ಎಂದರೆ ಟಾಟಾ, ಕಲ್ಯಾಣಿ ಗ್ರೂಪ್, ಲಾರ್ಸನ್ & ಟೂಬ್ರೊ (L&T) ಮುಂತಾದ ಭಾರತೀಯ ಬೃಹತ್ ಖಾಸಗಿ ಕಂಪನಿಗಳು ಇಂದು ರಕ್ಷಣಾ ವಲಯದಲ್ಲಿ (Defense Sector) ಭಾರಿ ಪ್ರಮಾಣದಲ್ಲಿ ಪ್ರವೇಶಿಸಿರುವುದು.

ಹೀಗಿದ್ದರೂ, ಭಾರತದ “ಸ್ವದೇಶಿ” ಶಸ್ತ್ರಾಸ್ತ್ರ ರಫ್ತು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಭಾರೀ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ. ನೈತಿಕವಾಗಿ ವಿದೇಶಳಿಗೆ ಶಸ್ತ್ರಾಸ್ತ್ರ ರಫ್ತು ಮಾಡುವುದರ ಅರ್ಥವೇ “ನೀವು ಹೊಡೆದಾಡಿಕೊಂಡು ಸಾಯಿರಿ, ನಮಗೆ ಶಸ್ತ್ರಾಸ್ತ್ರದ ಹಣ ಕೊಡಿ” ಎಂದು ಹೇಳುವುದೇ ಆಗಿದೆ. ಜಾಗತಿಕ ಶಸ್ತ್ರಾಸ್ತ್ರ ಉತ್ಪಾದನೆ ಮತ್ತು ರಫ್ತು ಉದ್ದಿಮೆಯೇ ಒಂದು ಅಮಾನವೀಯ ಮಾಫಿಯಾ. ಅದರ ಬಗ್ಗೆಯೇ ಮುಂದೊಮ್ಮೆ ಸ್ಥೂಲವಾಗಿ ನೋಡೋಣ. ಭಾರತವೂ ಇದಕ್ಕೆ ಸೇರ್ಪಡೆಯಾಗಿದೆ ಎಂದು ನಾವು ಹೆಮ್ಮೆಪಡಬೇಕೆ? ಇದರಿಂದ ಜನಸಾಮಾನ್ಯರಿಗೆ ಏನು ಲಾಭ? ನಿಜವೆಂದರೆ,​ ರಕ್ಷಣಾ ವಲಯ ಅಥವಾ ಬೃಹತ್ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಬಂಡವಾಳವು ಮೇಲಿನಿಂದ ಕೆಳಗೆ ಹರಿದುಬಂದು (ಟ್ರಿಕಲ್ ಡೌನ್) ಆಗಿ ಸಾಮಾನ್ಯ ಜನರಿಗೆ ತಲುಪುವುದಿಲ್ಲ. ಯುದ್ಧ ಉಪಕರಣಗಳು ಉದ್ಯೋಗಗಳನ್ನು ಸೃಷ್ಟಿಸಬಹುದಾದರೂ, ಅವು ಸಾರ್ವಜನಿಕ ಆರೋಗ್ಯ, ಶಿಕ್ಷಣ ಅಥವಾ ಗ್ರಾಮೀಣ ಮೂಲಸೌಕರ್ಯದಂತಹ “ಜನಕೇಂದ್ರಿತ” ಅಭಿವೃದ್ಧಿಗೆ ಪೂರಕವೇನಲ್ಲ.​ ಅಂಬಾನಿ, ಅದಾನಿ ಮುಂತಾದ ಆಗರ್ಭ ಶ್ರೀಮಂತರ ಬೃಹತ್ ಉದ್ದಿಮೆಗಳಿಗೆ ಲಾಭ ಮಾಡಿಕೊಡುವುದರಿಂದ ಸಾಮಾನ್ಯ ಜನರ ಅಭಿವೃದ್ಧಿ ಅಗುವುದು ಹೇಗೆ? ಬಂಡವಾಳ ಹೂಡಿಕೆಯ ಲಾಭ ಕೇವಲ ಉದ್ದಿಮೆಗಳಿಗೆ, ರಾಜಕೀಯ ಪಕ್ಷಗಳ ನಿಧಿಗೆ, ರಾಜಕಾರಣಿಗಳ ಜೇಬಿಗೆ ತಲುಪಿದರೆ ಸಾಕೆ?

ವಿಕೇಂದ್ರೀಕೃತವಾದ ಜನಪರ ಅಭಿವೃದ್ಧಿಗೆ ತಿಲಾಂಜಲಿ ಬಿಟ್ಟು, ದೊಡ್ಡ ಕೈಗಾರಿಕೆಗಳಿಗೆ ಭೂಮಿ ಒದಗಿಸಿಕೊಡುವ ರಿಯಲ್ ಎಸ್ಟೇಟ್ ದಂಧೆಗೆ ಇಳಿದು, ಅದಕ್ಕೆ ಅನುಕೂಲವಾಗುವಂತೆ ರೈತವಿರೋಧಿ ಭೂಸ್ವಾಧೀನ ಕಾಯಿದೆಯನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂಬುದು ಅಪಾಯದ ಗಂಟೆಯನ್ನು ಮೊಳಗಿಸುತ್ತಿದೆಯೆ? ಇತ್ತೀಚೆಗೆ ಹೊರಬಿದ್ದ ಹಿಂದಿನ ಚುನಾವಣಾ ಬಾಂಡ್ ಅಂಕಿ-ಅಂಶಗಳನ್ನು ಉದಾಹರಣೆಯಾಗಿ ನೀಡಬಹುದು. ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ, ಅದರಲ್ಲೂ ಆಳುವ ಬಿಜೆಪಿಗೆ ಸಿಂಹಪಾಲು ನಿಧಿ ನೀಡುವ ಮೂಲಕ ತಮ್ಮ ಅನುಕೂಲಕ್ಕೆ ತಕ್ಕಂತೆ ನೀತಿಗಳನ್ನು (ಭೂಸ್ವಾಧೀನ ಮತ್ತು ಪರಿಸರ ಸಂಬಂಧಿ ಪರವಾನಿಗೆ) ರೂಪಿಸಿಕೊಳ್ಳುತ್ತಿವೆ ಎಂಬ ವಾದಕ್ಕೆ ಇದು ಬಲವಾದ ಸಾಕ್ಷಿ.​ 2013ರ ‘ಭೂಸ್ವಾಧೀನ ಕಾಯಿದೆ’ಯಲ್ಲಿದ್ದ “ಶೇ. 80ರಷ್ಟು ರೈತರ ಒಪ್ಪಿಗೆ” ಮತ್ತು “ಸಾಮಾಜಿಕ ಪ್ರಭಾವದ ಮೌಲ್ಯಮಾಪನ” (Social Impact Assessment) ನಿಯಮಗಳನ್ನು ಸಡಿಲಗೊಳಿಸಿ, ‘ಕೈಗಾರಿಕಾ ಕಾರಿಡಾರ್’ ಮತ್ತು ರಕ್ಷಣಾ ಉತ್ಪಾದನಾ ವಲಯಗಳ (Defense Corridors) ಹೆಸರಿನಲ್ಲಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗುತ್ತಿದೆ.​ ಭೂಸ್ವಾಧೀನ ಕಾಯಿದೆ ತಿದ್ದುಪಡಿಯ ದುರ್ಬಳಕೆ ಮಾಡಿ, “ಲ್ಯಾಂಡ್ ಬ್ಯಾಂಕ್” ಹೆಸರಿನಲ್ಲಿ ಕೈಗಾರಿಕೆಗಳಿಗಾಗಿ ರೈತರಿಂದ ಕಡಿಮೆ ಬೆಲೆಗೆ ಭೂಮಿ ಪಡೆದು, ನಂತರ ಅದನ್ನು ರಿಯಲ್ ಎಸ್ಟೇಟ್ ಮತ್ತು ಕಾರ್ಪೊರೇಟ್ ಆಸ್ತಿಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಗ್ರಾಮೀಣ ಆರ್ಥಿಕತೆಯನ್ನು ತೀವ್ರವಾಗಿ ಜರ್ಜರಿತಗೊಳಿಸುತ್ತಿದೆ.

ರಕ್ಷಣಾ ವಲಯದಂತಹ ಸೂಕ್ಷ್ಮ ಕ್ಷೇತ್ರಗಳನ್ನೂ ಖಾಸಗಿ ಬಂಡವಾಳಗಾರರಿಗೆ ಬಿಟ್ಟುಕೊಡುತ್ತಿರುವುದು ಅಪಾಯಕಾರಿ ನಡೆ. 1961ರಲ್ಲಿ ಅಮೆರಿಕದ ಅಧ್ಯಕ್ಷ ಡ್ವೈಟ್ ಡಿ. ಐಸನ್‌ಹೋವರ್ ತಮ್ಮ ವಿದಾಯ ಭಾಷಣದಲ್ಲಿ ನೀಡಿದ್ದ, “ಖಾಸಗಿ ರಕ್ಷಣಾ ಉದ್ದಿಮೆಗಳು ಮತ್ತು ರಾಜಕಾರಣಿಗಳ ಅನೈತಿಕ ಸಮ್ಮಿಲನವು ಪ್ರಜಾಪ್ರಭುತ್ವಕ್ಕೇ ಕಂಟಕ” ಎಂಬ ಎಚ್ಚರಿಕೆಯನ್ನು ನಾವು ನೆನಪಿಟ್ಟುಕೊಳ್ಳಬೇಕು. ​”ಯುದ್ಧಕ್ಕೆ ಸಿದ್ಧತೆ ಎಂದರೆ, ಕ್ಷೇಮರಾಷ್ಟ್ರದ (Welfare State) ಅಂತ್ಯ” ಎಂಬ ಮಾತಿದೆ. ಯುದ್ಧ ಮತ್ತು ಯುದ್ಧೋಪಕರಣಗಳ ಮೇಲಿನ ಅತಿಯಾದ ವ್ಯಾಮೋಹವು ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯದ ಬಜೆಟನ್ನು ಕಬಳಿಸುತ್ತದೆ. ​”ಪ್ರಜಾಪ್ರಭುತ್ವದ ಮಿಲಿಟರೀಕರಣ”ವು ಇದರ ಇನ್ನೊಂದು ಅಪಾಯ. ಶಸ್ತ್ರಾಸ್ತ್ರ ಉತ್ಪಾದನೆ ಖಾಸಗಿಯವರ ಕೈಸೇರಿದಾಗ, ಅವರಿಗೆ ಲಾಭ ಬರಬೇಕೆಂದರೆ ದೇಶದಲ್ಲಿ ಅಥವಾ ಜಗತ್ತಿನಲ್ಲಿ ಸದಾ ಯುದ್ಧದ ಭೀತಿ ಜೀವಂತವಾಗಿರಬೇಕಾಗುತ್ತದೆ. ಇದನ್ನೇ ಅಂತರರಾಷ್ಟ್ರೀಯವಾಗಿ ಈಗ ಮಾಡಲಾಗುತ್ತಿರುವುದು ನಮಗೆ ಸ್ಪಷ್ಟವಾಗಿ ಕಾಣುತ್ತಿದೆ!

ನಾಝಿಗಳು ಹೊರಗಿನ ಶತ್ರುವನ್ನು ತೋರಿಸಿ, ಒಳಗಿನ ಎಲ್ಲಾ ಸಮಸ್ಯೆಗಳನ್ನು ಜನರು ದೇಶಪ್ರೇಮದ ಹೆಸರಿನಲ್ಲಿ ಮರೆಯುವಂತೆ ಪ್ರಚೋದಿಸುತ್ತಿದ್ದರು. “ದೇಶಕ್ಕಾಗಿ ಇಷ್ಟಾದರೂ ತ್ಯಾಗ ಮಾಡಲಾಗದಿದ್ದರೆ ಹೇಗೆ!?” ಸರ್ವಾಧಿಕಾರಗಳಲ್ಲಿ ಸೈನ್ಯವನ್ನು ವಿಜ್ರಂಭಿಸಿ, ಸೈನಿಕರನ್ನು- ರೈತರು, ಕಾರ್ಮಿಕರು, ವೈದ್ಯರು… ಮುಂತಾಗಿ ಮತ್ತು ದೇಶವೊಂದರ ಹಸಿವು ನೀಗಿಸಲು ಮತ್ತು ದೈನಂದಿನ ಜೀವನಕ್ಕೆ ಅಗತ್ಯವಾದ ಎಲ್ಲವನ್ನೂ ಉತ್ಪಾದಿಸುವ ಇತರರಿಗಿಂತ ಹೆಚ್ಚಾಗಿ ಉನ್ನತ ಸ್ಥಾನದಲ್ಲಿ ಇಡಲಾಗುತ್ತದೆ. ಅವರಿಗೆ ಉತ್ತಮ ಸಂಬಳ, ಸವಲತ್ತು ಕೊಡದಿದ್ದರೂ, ಪ್ರತಿಭಟನಾ ನಿರತ ನಿವೃತ್ತ ಸೈನಿಕರ ಮೇಲೆ ಲಾಠಿ ಪ್ರಹಾರ ಮಾಡಿಸಿದರೂ ಪರವಾಗಿಲ್ಲ! ಸರಕಾರವನ್ನು ಟೀಕಿಸಿ ಬೇಡಿಕೆಗಳನ್ನು ಮುಂದಿಡುವ ಅವರು ದೇಶದ್ರೋಹಿಗಳು! “ಬಿಸಿಲು, ಮಳೆ, ಚಳಿ ಎನ್ನದೇ ಗಡಿ ಕಾಯುವ ವೀರ ಯೋಧರು” ಎಂಬ ಜನಪ್ರಿಯ ಘೋಷಣೆಯ ಹೊರತಾಗಿಯೂ ಸೈನಿಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತದೆ; ಬಲಿಕೊಡಲಾಗುತ್ತದೆ. “ವೀರ ಯೋಧರು” ಎಲ್ಲವನ್ನೂ ದೇಶಕ್ಕಾಗಿ ಸಹಿಸಿಕೊಳ್ಳಬೇಕು, ಕಣ್ಣುಮುಚ್ಚಿ ದೇಶಕ್ಕಾಗಿ ಪ್ರಾಣ ಕೊಡಬೇಕು! ಪ್ರಸ್ತುತ ಭಾರತದಲ್ಲಿ ಇಂತದ್ದು ನಡೆಯುತ್ತಿಲ್ಲ ಎಂದು ಹೇಳಬೇಡಿ. ರಕ್ಷಣಾ ವಲಯದ ಖಾಸಗೀಕರಣವೇ ಬಿಜೆಪಿ ಮತ್ತು ಸರಕಾರದ “ದೇಶಪ್ರೇಮ”ದ ನಿಜ ಆಯಾಮವನ್ನು ಬಯಲುಗೊಳಿಸುತ್ತದೆ.

14 ಫೆಬ್ರವರಿ 2019ರಂದು ಜಮ್ಮುವಿನಿಂದ ಶ್ರೀನಗರಕ್ಕೆ 78 ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ಸುಮಾರು 200 ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಿ ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆ ಆತ್ಮಾಹುತಿ ದಾಳಿ ನಡೆಸಿತು. ಈ ಭೀಕರ ಆತ್ಮಾಹುತಿ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಈ ಘಟನೆ ನಡೆದ ಕೆಲವೇ ತಿಂಗಳುಗಳಲ್ಲಿ (ಏಪ್ರಿಲ್-ಮೇ 2019) ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದವು. ಪ್ರತೀಕಾರಕ್ಕಾಗಿ ನಡೆಸಿದ ಬಾಲಾಕೋಟ್ ಏರ್‌ಸ್ಟ್ರೈಕ್ ಮತ್ತು ರಾಷ್ಟ್ರೀಯ ಭದ್ರತೆ ಹಾಗೂ “ದೇಶಭಕ್ತಿ”ಯ ವಿಚಾರಗಳು ಬಿಜೆಪಿಗೆ ಚುನಾವಣಾ ಪ್ರಚಾರದ ಕೇಂದ್ರಬಿಂದುವಾದವು. ಸೈನಿಕರ ಶೌರ್ಯವನ್ನು, ಸೇನಾಧಿಕಾರಿಗಳ ಯೋಜನೆಯನ್ನು ಸ್ವತಃ ಮೋದಿಯೇ ಮಾಡಿದಂತೆ ನಾಚಿಕೆಗೇಡಿಗಳಂತೆ ಬಣ್ಣಿಸಲಾಯಿತು. (ಮೋಡ ಇರುವಾಗ ರಾಡಾರ್‌ನಲ್ಲಿ ವಿಮಾನ ಕಾಣುವುದಿಲ್ಲ ಎಂಬ ಮೋದಿಯ ನಗೆಪಾಟಲಕ ಹೇಳಿಕೆ ಮರೆಯದಿರಿ!). ವಿಮಾನದಲ್ಲಿ ಹೋಗಬೇಕಾಗಿದ್ದವರನ್ನು ಬಸ್ಸಿನಲ್ಲಿ ಕಳಿಸಿದ್ದು, ಇದರ ಮಾಸ್ಟರ್‌ಮೈಂಡ್ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಸುಖವಾಗಿದ್ದಾನೆ ಎಂಬುದನ್ನು ಮತ್ತು ಅಷ್ಟು ದೊಡ್ಡ ಪ್ರಮಾಣದ ಸ್ಫೋಟಕ ಒಳಬರಲು ಕಾರಣರಾದ ಆಂತರಿಕ ವ್ಯವಸ್ಥೆಯ ‘ಕಪ್ಪು ಕುರಿಗಳು’ ಯಾರು, ಸೂತ್ರಧಾರರು ಯಾರು ಎಂಬುದನ್ನು ಇಂದಿಗೂ ಪತ್ತೆ ಮಾಡಿಲ್ಲ ಎಂಬ ಸತ್ಯ ಹಾಗೂ ಆಗಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರೇ ಒಪ್ಪಿಕೊಂಡ ಗಂಭೀರ ಭದ್ರತಾ ವೈಫಲ್ಯವನ್ನು ಮರೆಮಾಚಲಾಯಿತು. ಆಡಳಿತಾರೂಢ ಬಿಜೆಪಿ ಸರಕಾರದ ಪರವಾಗಿ ಇದು ಭಾರಿ ಜನಾಭಿಪ್ರಾಯ ಮೂಡಿಸಿತು ಮತ್ತು ಚುನಾವಣಾ ಲಾಭ ತಂದುಕೊಟ್ಟಿತು ಎಂಬುದನ್ನು ಮರೆಯದಿರೋಣ.

ಯಾವಾಗ ದುರಂತಗಳು ಮತ್ತು ಭದ್ರತಾ ಲೋಪಗಳು ಆಡಳಿತಗಾರರ ಬೇಜವಾಬ್ದಾರಿಯನ್ನು ಪ್ರಶ್ನಿಸುವ ಬದಲು, ಅವರ ಸಾಂವಿಧಾನಿಕ ಅಧಿಕಾರವನ್ನು ಇನ್ನಷ್ಟು ಗಟ್ಟಿ ಮಾಡುವ ಚುನಾವಣಾ ಲಾಭವಾಗಿ ಮಾರ್ಪಡುತ್ತವೆಯೋ, ಆಗ ಪ್ರಜಾಪ್ರಭುತ್ವವು ಸರ್ವಾಧಿಕಾರಿ ಆಡಳಿತವಾಗಿ ಬದಲಾಗುವ ಆತಂಕಕಾರಿ ಹಂತವನ್ನು ತಲುಪುತ್ತದೆ. ಸರ್ವಾಧಿಕಾರದ ಇನ್ನಷ್ಟು ಗುಣಲಕ್ಷಣಗಳನ್ನು ಮುಂದೆ ಸ್ಥೂಲವಾಗಿ ನೋಡೋಣ.

You cannot copy content of this page

Exit mobile version