Home ದೆಹಲಿ ಸಾವರ್ಕರ್ ವಿರುದ್ಧದ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ದೂರು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಸಾವರ್ಕರ್ ವಿರುದ್ಧದ ಹೇಳಿಕೆ ಪ್ರಕರಣ: ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ದೂರು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

0

ದೆಹಲಿ: ಹಿಂದುತ್ವ ಸಿದ್ಧಾಂತವಾದಿ ವಿ.ಡಿ. ಸಾವರ್ಕರ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದೂರನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಶೀಲ್ ನಾಗು ಅವರಿದ್ದ ಪೀಠವು, ರಾಹುಲ್ ಗಾಂಧಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಗತ್ಯವಿರುವ ಸರ್ಕಾರದ ಅನುಮತಿ (Sanction) ಪಡೆದಿಲ್ಲ ಎಂಬ ಅಂಶವನ್ನು ಪರಿಗಣಿಸಿ ಲಖನೌ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಸಮನ್ಸ್ ಮತ್ತು ದೂರು ಪ್ರಕ್ರಿಯೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿತು.

ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕಾನೂನು ಪ್ರಕಾರ ಅಗತ್ಯವಿರುವ ವಿಚಾರಣಾ ಅನುಮತಿ ದೊರೆತಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ಕಾನೂನುಬದ್ಧ ಅನುಮತಿಯಿಲ್ಲದೆ ಮ್ಯಾಜಿಸ್ಟ್ರೇಟ್ ಹೊರಡಿಸಿದ ಆದೇಶಗಳು ಮತ್ತು ದೂರು ಮಾನ್ಯವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

2022ರ ನವೆಂಬರ್‌ನಲ್ಲಿ ನಡೆದ ‘ಭಾರತ್ ಜೋಡೋ ಯಾತ್ರೆ’ಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ‘ಬ್ರಿಟಿಷರ ಸಹಯೋಗಿ ಮತ್ತು ಪಿಂಚಣಿ ಪಡೆಯುತ್ತಿದ್ದ ವ್ಯಕ್ತಿ’ ಎಂದು ಕರೆದಿದ್ದರು ಎಂದು ಆರೋಪಿಸಿ ವಕೀಲ ನೃಪೇಂದ್ರ ಪಾಂಡೆ ಎಂಬುವವರು ಲಖನೌ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಈ ದೂರನ್ನು 2023ರ ಜೂನ್‌ನಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಜಾಗೊಳಿಸಿದ್ದರು. ಆದರೆ, ಅರ್ಜಿದಾರರು ಸೆಷನ್ಸ್ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ ನಂತರ, 2024ರ ಡಿಸೆಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರಾಹುಲ್ ಗಾಂಧಿಯವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ರಾಹುಲ್ ಗಾಂಧಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರೂ, ಹೈಕೋರ್ಟ್ ಪರಿಹಾರ ನೀಡಲು ನಿರಾಕರಿಸಿತ್ತು. ನಂತರ ರಾಹುಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಹಿಂದಿನ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ‘ಬೇಜವಾಬ್ದಾರಿಯುತ’ ಎಂದು ಟೀಕಿಸಿತ್ತು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇಂತಹ ಹೇಳಿಕೆಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿತ್ತು. ಆದರೆ ಅಂತಿಮ ತೀರ್ಪಿನಲ್ಲಿ ಕಾನೂನು ನಿಯಮಾವಳಿಗಳ ಪ್ರಕಾರ ಸರ್ಕಾರದ ಪೂರ್ವಾನುಮತಿ ಇಲ್ಲದಿರುವುದನ್ನು ಪರಿಗಣಿಸಿ ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಇದಲ್ಲದೆ, 2023ರ ಮಾರ್ಚ್‌ನಲ್ಲಿ ಲಂಡನ್‌ನಲ್ಲಿ ಸಾವರ್ಕರ್ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿ ಪ್ರತ್ಯೇಕ ಮಾನನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ.

You cannot copy content of this page

Exit mobile version