Home ಅಂಕಣ ಕಟೀಲಿನ ಮುಂದೆ ಪ್ರಾರ್ಥಿಸುವ ವಿಶ್ವಹಿಂದೂ ಪರಿಷತ್ ಗೆ ದಾಖಲೆ ಸಹಿತ ಪ್ರಶ್ನೆಗಳು!

ಕಟೀಲಿನ ಮುಂದೆ ಪ್ರಾರ್ಥಿಸುವ ವಿಶ್ವಹಿಂದೂ ಪರಿಷತ್ ಗೆ ದಾಖಲೆ ಸಹಿತ ಪ್ರಶ್ನೆಗಳು!

0

“..ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಆಶ್ರಯದಲ್ಲಿ ಬೆಳೆದ ಮೇಳಗಳ ಇತಿಹಾಸವನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ದೇವಾಲಯದ ಆಶ್ರಯದಲ್ಲಿ ಬೆಳೆದಿದೆ ಎಂಬ ಕಾರಣಕ್ಕೆ ಈ ದಿನಗಳ ಯಕ್ಷಗಾನದ ಪ್ರತಿಯೊಂದು ನಡೆಯನ್ನೂ ಪವಿತ್ರ ಎಂದು ಒಪ್ಪಿಕೊಳ್ಳಬೇಕಿಲ್ಲ..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಯಕ್ಷಗಾನದಲ್ಲಿ ಹಾಸುಹೊಕ್ಕಾಗಿರುವ ಕೋಮುವಾದ, ಜಾತಿವಾದ, ಅಶ್ಲೀಲತೆ, ಅಸಂಬದ್ಧ ಮಾತುಗಳ ಬಗೆಗಿನ ವಿಮರ್ಶೆ ಮತ್ತು ಯಕ್ಷಗಾನ ತಿರುಗಾಟದ ದೇವಿ ಶೂದ್ರರ ಮನೆಗೂ ಬರಬೇಕು ಎಂಬ ಆಗ್ರಹದ ವಿರುದ್ಧ ವಿಶ್ವ ಹಿಂದೂ ಪರಿಷತ್, ಶ್ರೀಕ್ಷೇತ್ರ ಕಟೀಲಿನಲ್ಲಿ ‘ಸಾಮೂಹಿಕ ಪ್ರಾರ್ಥನೆ’ ಕಾರ್ಯಕ್ರಮವನ್ನು ಆಗಸ್ಟ್ 18 ರಂದು ಆಯೋಜಿಸಿದೆ. ಯಕ್ಷಗಾನದ ದೇವರಿಗೆ ‘ಆಗಮ ಸಂಪ್ರದಾಯ ಅನ್ವಯಿಸಲ್ಲ’ ಎನ್ನುವ ಮೂಲಕ ಖುದ್ದು ಪೇಜಾವರ ಸ್ವಾಮೀಜಿಯೇ ಯಕ್ಷಗಾನದ ದೇವರಿಗೆ ಮಡಿಮೈಲಿಗೆಗಳು ಇಲ್ಲ ಎಂದು ಹೇಳಿದ್ದರು. ಯಕ್ಷಗಾನದಲ್ಲಿ ಜಾತಿ, ಮಡಿಮೈಲಿಗೆ ಬಗೆಗೆ ಬಿಜೆಪಿ ಶಾಸಕರು, ಪೇಜಾವರ ವಿಶ್ವೇಶತೀರ್ಥಸ್ವಾಮಿಗಳು ಏನು ಹೇಳಿದ್ದಾರೆ ಎಂಬ ದಾಖಲೆ ಇಲ್ಲಿದೆ.

ಹಾಗೆ ನೋಡಿದರೆ, ಯಕ್ಷಗಾನದಲ್ಲಿರುವ ‘ಆಶ್ಲೀಲತೆ, ಅಸಂಬದ್ಧ ಮಾತುಕತೆ’ಗಳನ್ನು ಮೊತ್ತ ಮೊದಲು ಸರ್ಕಾರದ ಮಟ್ಟದಲ್ಲಿ ವಿರೋಧಿಸಿದ್ದು ವಿಶ್ವ ಹಿಂದೂ ಪರಿಷತ್ತಿನ ರಾಜಕೀಯ ವಿಭಾಗವಾದ ಬಿಜೆಪಿ ಪಕ್ಷದ ಶಾಸಕರು ! ಬ್ರಹ್ಮಾವರ ವಿಧಾನಸಭಾ ಕ್ಷೇತ್ರ 1983 ರಲ್ಲಿ ಅಸ್ತಿತ್ವದಲ್ಲಿದ್ದಾಗ ಬಿ ಬಿ ಶೆಟ್ಟಿಯವರು ಬಿಜೆಪಿಯ ಶಾಸಕರಾಗಿದ್ದರು. ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ‘ಪರಭಾಷಾ ಚಲನಚಿತ್ರಗಳನ್ನು ಗುರಿಯಾಗಿರಿಸಿಕೊಂಡ ಮನರಂಜನಾ ತೆರಿಗೆ ತಿದ್ದುಪಡಿ ಮಸೂದೆ’ಯನ್ನು 26 ಸೆಪ್ಟೆಂಬರ್ 1983 ರಂದು ಮಂಡಿಸುತ್ತಾರೆ. ಈ ಮಸೂದೆಗೂ ಯಕ್ಷಗಾನಕ್ಕೂ ಸಂಬಂಧವೇ ಇಲ್ಲ. ಕೇವಲ ಕನ್ನಡವಲ್ಲದ ಸಿನೇಮಾಗಳನ್ನು ಗುರಿಯಾಗಿರಿಸಿ ಈ ಕಾಯ್ದೆಯನ್ನು ರಚಿಸಲಾಗಿತ್ತು. ಆಗ ರಾಮಕೃಷ್ಣ ಹೆಗಡೆಯವರ ಸರ್ಕಾರದ ಜೊತೆ ಸಿಪಿಐ ಮತ್ತು ಸಿಪಿಐಎಂ ಮೈತ್ರಿ ಇತ್ತು. ಆದರೂ ಸಿಪಿಐ ಮತ್ತು ಸಿಪಿಐಎಂನ ಆಗಿನ ಪ್ರಭಾವಿ ಶಾಸಕರುಗಳು ರಾಮಕೃಷ್ಣ ಹೆಗಡೆಯವರು ಮಂಡಿಸಿದ ಕಾಯ್ದೆಯನ್ನು ವಿರೋಧಿಸುತ್ತಾರೆ. ‘ಕರ್ನಾಟಕವೆಂದರೆ ಕನ್ನಡ ಎಂಬುದು ಸರಿ. ಆದರೆ ಇಲ್ಲಿ ತುಳು, ಬ್ಯಾರಿ, ಕೊಂಕಣಿ, ಕೊಡವ ಸೇರಿದಂತೆ ರಾಜ್ಯದ ಪ್ರತೀ ಜಿಲ್ಲೆಗೆ ಹತ್ತು ಹಲವು ಭಾಷೆಗಳಿವೆ. ಅಲ್ಲಿನ ಸಿನೇಮಾಗಳ ಮೇಲೆ ಈ ಕಾಯ್ದೆ ಪರಿಣಾಮ ಬೀರಬಾರದು’ ಎಂದು ಉಳ್ಳಾಲದ ಸಿಪಿಐಎಂ ಶಾಸಕರಾಗಿದ್ದ ಪಿ ರಾಮಚಂದ್ರರಾವ್ ಸ್ಪಷ್ಟವಾಗಿ ಸುದೀರ್ಘವಾಗಿ ಭಾಷಣ ಮಾಡುತ್ತಾರೆ.

ಮಧ್ಯೆ ಎದ್ದು ನಿಂತ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಿ ಬಿ ಶೆಟ್ಟಿಯವರು ‘ಅಧ್ಯಕ್ಷರೆ , ತಮಗೆಲ್ಲಾ ಚೆನ್ನಾಗಿ ಗೊತ್ತಿರಬಹುದು. ನಮ್ಮಲ್ಲಿ ಯಕ್ಷಗಾನ ಬಯಲಾಟ ಒಂದು ಒಳ್ಳೆಯ ಕಲೆಯಾಗಿ ನಡೆದುಬರುತ್ತಿದೆ. ಆದರೆ ಅದಕ್ಕೆ ಯಾವ ರೀತಿಯ ಪುರಸ್ಕಾರ ಸಿಕ್ಕುತ್ತಿದೆ ಎಂಬುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲು ಬಯಸುತ್ತೇನೆ. ಯಕ್ಷಗಾನ ಕಲೆ ಎಂದರೆ ಇಂದು ಮನರಂಜನಾ ಕಾರ್ಯವೂ ಹೌದು ಮತ್ತು ಒಂದು ಧಾರ್ಮಿಕ ಪ್ರಚಾರವೂ ಹೌದು. ಆದರೆ ಇತ್ತೀಚೆಗೆ ಯಕ್ಷಗಾನದಲ್ಲಿ ಅಶ್ಲೀಲವಾದ ದೃಶ್ಯ ಮತ್ತು ಅಸಹ್ಯಕರವಾದ ಮಾತುಗಳನ್ನು ಸೇರಿಸಿ ಕಟ್ಟುಕತೆಯನ್ನು ಬರೆದು ನಮ್ಮ ಯುವ ಪೀಳಿಗೆಯನ್ನು ತಪ್ಪುದಾರಿಗೆಳೆಯುವ ಕೆಲಸ ನಡೆಯುತ್ತಿದೆ. ಆದ್ದರಿಂದ ಇಂಥ ಅಶ್ಲೀಲ ದೃಶ್ಯ , ಕಟ್ಟುಕತೆಗಳ ಯಕ್ಷಗಾನಕ್ಕೆ ತೆರಿಗೆಯನ್ನು ಹಾಕಬೇಕೆಂದು ಹೇಳಬಯಸುತ್ತೇನೆ. ಏಕೆಂದರೆ ಇದರಿಂದ ತೆರಿಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರಲಿ ಎಂಬ ದೃಷ್ಟಿಯಿಂದ ಹೇಳುತ್ತಿಲ್ಲ. ಆದರೆ ಇಂಥ ಅಶ್ಲೀಲ ದೃಶ್ಯಗಳನ್ನು ಈ ಕಲೆಯಲ್ಲಿ ಸೇರಿಸುವುದನ್ನು ತಪ್ಪಿಸಬೇಕೆಂಬ ದೃಷ್ಟಿಯಿಂದ ಮಾನ್ಯ ಮುಖ್ಯ ಮಂತ್ರಿಯವರಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತಿದ್ದೇನೆ’ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತಾರೆ.

ಬಿಜೆಪಿ ಶಾಸಕ ಬಿ ಬಿ ಶೆಟ್ಟಿಯವರ ಪ್ರಸ್ತಾಪಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ‘ಯಕ್ಷಗಾನಕ್ಕೆ ನಾವು ತೆರಿಗೆ ಹಾಕುವುದಿಲ್ಲ. ಅಂತಹ ಅಶ್ಲೀಲ, ಅಸಂಬದ್ದ ಸಂವಾದಗಳನ್ನು ಮಾಡುವ ಯಕ್ಷಗಾನದ ಬಗ್ಗೆ ಜನರೇ ಮಾತನಾಡಬೇಕು. ಅಂತಹ ಯಕ್ಷಗಾನಗಳ ಬಗ್ಗೆ ಜನರೇ ತೀರ್ಮಾನ ಕೈಗೊಳ್ಳಲಿ’ ಎನ್ನುತ್ತಾರೆ.

2004 ಆಗಸ್ಟ್ 02 ರಂದು ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಅವರು ‘ಉಡುಪಿ ಜಿಲ್ಲೆಯ ಮಂದರ್ತಿ ದೇವಸ್ಥಾನದ ಯಕ್ಷಗಾನ ಮೇಳದಲ್ಲಿ ಬಿಲ್ಲವ ಸಮೂದಾಯಕ್ಕೂ ಅವಕಾಶ ನೀಡುವ ಬಗ್ಗೆ’ ಎಂದು ಗಮನ ಸೆಳೆಯುವ ಸೂಚನೆ ಮಂಡಿಸಿ ಸುಧೀರ್ಘವಾಗಿ ಮಾತನಾಡುತ್ತಾರೆ. ಆ ಪೈಕಿ ಅವರ ಕೆಲವು ವಾಕ್ಯಗಳು ಕಟೀಲು ಮೇಳವೂ ಸೇರಿ ಕರಾವಳಿಯ ಎಲ್ಲಾ ಯಕ್ಷಗಾನ ಮೇಳಗಳನ್ನು ಉದ್ದೇಶಿಸಿ ಹೇಳಿದ್ದಾಗಿದೆ. ಬಿಜೆಪಿ ಶಾಸಕ ರಘುಪತಿ ಭಟ್ಟರು ಸದನದಲ್ಲಿ ಆಡಿದ ಅಂತಹ ಕೆಲ ವಾಕ್ಯಗಳು ಹೀಗಿವೆ: ‘ಯಕ್ಷಗಾನಮೇಳ ಎಂಬುದೊಂದು ಕಲೆ. ಕೇವಲ ಸೇವೆಗೋಸ್ಕರ ಮಾಡುವಂತಹದ್ದಲ್ಲ. ನಮ್ಮ ದಕ್ಷಿಣಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅದೊಂದು ಕಲೆ. ಕಲೆ ಎಂಬುದನ್ನು ಯಾವುದೇ ಒಂದು ಜನಾಂಗಕ್ಕೆ ಅವಕಾಶ ಮಾಡಿಕೊಡದಿರುವುದು ಬಹಳ ತಪ್ಪು. ಇದಕ್ಕಿಂತ ಮುಂಚೆ ಸಾಕಷ್ಟು ಆಚರಣೆಗಳಿದ್ದವು. ನಾವು ಇಪ್ಪತ್ತೊಂದನೆ ಶತಮಾನದಲ್ಲಿ ಇದ್ದೇವೆ. ಇವತ್ತು ಸಾಕಷ್ಟು ಬದಲಾವಣೆಗಳಾಗಿರುವ ಸಮಯದಲ್ಲಿ ಸರ್ಕಾರ ಈ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ.

ಮುಂದುವರೆದು ಮಾತನಾಡಿರುವ ರಘುಪತಿ ಭಟ್ ಅವರು ‘ಕೆಲವು ಯಕ್ಷಗಾನ ಮೇಳಗಳಲ್ಲಿ ಜಾತಿಯ ತಾರತಮ್ಯ ನಡೆಯುವುದಿದೆ. ಹಾಗಾಗಿ ಸರ್ಕಾರವು ಒಂದು ದೇವಸ್ಥಾನದ ಮಟ್ಟಿಗೆ ಮಾತ್ರವಲ್ಲ, ಎಲ್ಲಾ ದೇವಸ್ಥಾನಗಳನ್ನು ಉದ್ದೇಶಿಸಿ ಆದೇಶವನ್ನು ಹೊರಡಿಸಬೇಕು. ಯಕ್ಷಗಾನ ಮೇಳ ಕಲೆಯಾದ್ದರಿಂದ ಯಾವುದೇ ಒಂದು ಜಾತಿಯ ಬಗ್ಗೆ ತಾರತಮ್ಯ ತೋರಿಸುವುದು ಸೂಕ್ತವಲ್ಲವೆಂಬ ಆದೇಶವನ್ನು ಸರ್ಕಾರ ಹೊರಡಿಸಬೇಕು’ ಎಂದು ಸರ್ಕಾರವನ್ನು ಆಗ್ರಹಿಸಿದ್ದರು. ರಘುಪತಿ ಭಟ್ಟರ ಈ ಆಗ್ರಹವು ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದ ತಿರುಗಾಟದ ದೇವಿಯ ಪೆಟ್ಟಿಗೆ ಶೂದ್ರರ ಮನೆಗೆ ಬರುವುದಿಲ್ಲ ಎಂಬ ವಿಷಯಕ್ಕೆ ಈಗ ನೇರವಾಗಿ ಅನ್ವಹಿಸುತ್ತದೆ.

ಕಟೀಲು ಯಕ್ಷಗಾನ ಮೇಳದ ತಿರುಗಾಟ ದೇವಿಯ ಪೆಟ್ಟಿಗೆಯು ಮಡಿಯ ಕಾರಣಕ್ಕಾಗಿ ಕೇವಲ ಸಸ್ಯಹಾರಿಗಳ ಮನೆಗೆ ಮಾತ್ರ ಹೋಗುತ್ತದೆ ಎಂದು ಮೇಳಕ್ಕೆ ಸಂಬಂಧಪಡದ ಕಟೀಲು ಅರ್ಚಕ ಹರಿನಾರಾಯಣ ದಾಸ ಅಸ್ರಣ್ಣ ಸ್ಪಷ್ಟಣೆ ನೀಡಿದ್ದಾರೆ. ಕಟೀಲಿನ ತಿರುಗಾಟದ ದೇವಿಗೆ ಮಡಿಮೈಲಿಗೆಗಳು ಇಲ್ಲ. ಕಟೀಲಿನಲ್ಲಿ ಮೂರು ರೀತಿಯ ದೇವಿಯ ಪ್ರಸ್ತುತಿ ಇದೆ. ಒಂದು ಕಟೀಲಿನಲ್ಲಿ ನಿತ್ಯ ಪೂಜಿಸಲ್ಪಡುವ ಲಿಂಗರೂಪಿ ಉಲ್ಲಾಳ್ತಿ, ಎರಡನೆಯದ್ದು ಜಾತ್ರೆ ಉತ್ಸವಾಧಿಗಳ ಸಂದರ್ಭ ಹೊರಗೆ ಬರುವ ‘ಉತ್ಸವ ಮೂರ್ತಿ’, ಮೂರನೆಯದ್ದು ಯಕ್ಷಗಾನ ಮೇಳದಲ್ಲಿರುವ ತಿರುಗಾಟದ ದೇವಿಯ ಮೂರ್ತಿ. ಮೂರನೆಯ ಮೂರ್ತಿಗೆ ಒಂದನೆಯ ಮತ್ತು ಎರಡನೆ ಮೂರ್ತಿಯಂತಹ ಮಡಿಮೈಲಿಗೆಯ ಪ್ರಾಮುಖ್ಯತೆ ಇಲ್ಲ. ಯಕ್ಷಗಾನ ಮೇಳಗಳ ಸಂಖ್ಯೆ ಹೆಚ್ಚಿದಷ್ಟು ತಿರುಗಾಟದ ದೇವಿಯ ಮೂರ್ತಿಯ ಸಂಖ್ಯೆಯೂ ಹೆಚ್ಚುತ್ತದೆ. ಹಾಗಾಗಿಯೇ ಕಟೀಲು ಅರ್ಚಕರ ಮೂಲವಾದ ಉಡುಪಿ ಮದ್ವಾಚಾರ್ಯ ಮಠಗಳಲ್ಲಿ ಒಂದಾದ ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥರು (ಕೃಷ್ಣೈಕ್ಯ) ‘ಯಕ್ಷಗಾನ ಮೇಳಕ್ಕೆ ಆಗಮ ಶಾಸ್ತ್ರದ ಯಾವುದೇ ಸಂಪ್ರದಾಯಗಳು ಅನ್ವಯವಾಗುವುದಿಲ್ಲ’ ಎಂದು ಹೇಳುವ ಮೂಲಕ ಯಕ್ಷಗಾನದ ದೇವರ ವಿಷಯದಲ್ಲಿ ಜಾತಿತಾರತಮ್ಯ, ಮಡಿಮೈಲಿಗೆ ಮಾಡಬಾರದು ಎಂದು ಹೇಳಿದ್ದರು. ಪೇಜಾವರ ಸ್ವಾಮಿಗಳ ಈ ಹೇಳಿಕೆ ವಿಧಾನಸಭೆಯಲ್ಲಿ ಚರ್ಚೆಯಾದ್ದರಿಂದ ಅದು ವಿಧಾನಸಭೆಯ ಕಡತಗಳಲ್ಲಿ ಅಧಿಕೃತವಾಗಿ ಸೇರಿಕೊಂಡು ದಾಖಲೆಯಾಗಿದೆ.

ಮನೆಯ ಮೇಲ್ಛಾವಣಿ ಸೋರುತ್ತಿದ್ದರೆ ಅದನ್ನು ಸರಿಪಡಿಸುವುದು ಮನೆಗೆ ಅವಮಾನವಲ್ಲ. ಅದು ಮನೆಯ ಮೇಲಿನ ಕಾಳಜಿ. ಹಾಗೆಯೇ ಯಕ್ಷಗಾನದಲ್ಲಿ ಜಾತಿಯ ಅಹಂಕಾರ, ಧಾರ್ಮಿಕ ದ್ವೇಷ ಅಥವಾ ಒಂದು ಸಮುದಾಯವನ್ನು ಕೀಳಾಗಿ ಚಿತ್ರಿಸುವ ಅಂಶಗಳು ಕಾಣಿಸಿದರೆ ಅವನ್ನು ಪ್ರಶ್ನಿಸುವುದು ಎಂದರೆ ಕಲೆಯನ್ನು ಧ್ವಂಸ ಮಾಡುವುದಲ್ಲ. ಬದಲಾಗಿ ಕಲೆಯನ್ನು ಉಳಿಸುವ ಪ್ರಯತ್ನ.

ಕಟೀಲು ದುರ್ಗಾಪರಮೇಶ್ವರಿ ದೇವಾಲಯದ ಆಶ್ರಯದಲ್ಲಿ ಬೆಳೆದ ಮೇಳಗಳ ಇತಿಹಾಸವನ್ನು ಯಾರೂ ನಿರಾಕರಿಸುವುದಿಲ್ಲ. ಆದರೆ ದೇವಾಲಯದ ಆಶ್ರಯದಲ್ಲಿ ಬೆಳೆದಿದೆ ಎಂಬ ಕಾರಣಕ್ಕೆ ಯಕ್ಷಗಾನದ ಪ್ರತಿಯೊಂದು ನಡೆಯನ್ನೂ ಪವಿತ್ರ ಎಂದು ಒಪ್ಪಿಕೊಳ್ಳಬೇಕಿಲ್ಲ. ಕಟೀಲು ದೇವಿಯ ಪೆಟ್ಟಿಗೆ ಶೂದ್ರರ ಮನೆಗೆ ಬರುವುದಿಲ್ಲ ಎನ್ನುವುದು ಕಟೀಲು ದೇವಿಯ ತಪ್ಪಲ್ಲ. ಅದು ಪೆಟ್ಟಿಗೆ ಹೊರುವವರ ತಪ್ಪು. ಶೂದ್ರರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹರಕೆಯ ಯಕ್ಷಗಾನ ಆಡಿಸಿದರೂ ದೇವಿಯ ಪೆಟ್ಟಿಗೆ ಹಗಲಿನಲ್ಲಿ ಬ್ರಾಹ್ಮಣರ ಮನೆಯಲ್ಲೋ, ದೇವಸ್ಥಾನ, ಭಜನಾಮಂದಿರದಲ್ಲೋ ಆಹಾರದ ಕಾರಣಕ್ಕಾಗಿ ಉಳಿಯಬೇಕು ಎಂದು ಹೇಳುವ ಹರಿ ಅಸ್ರಣ್ಣರಂತಹ ಬ್ರಾಹ್ಮಣರ ತಪ್ಪು ಮಾತ್ರ! ಪೇಜಾವರ ವಿಶ್ವೇಶತೀರ್ಥರು ಹೇಳಿದಂತೆ ‘ಯಕ್ಷಗಾನದಲ್ಲಿ ಆಗಮ ಸಂಪ್ರದಾಯ ಇಲ್ಲ’. ಪೇಜಾವರ ಸ್ವಾಮಿಗಳಿಗಿಂತಲೂ ಕಟೀಲು ಹತಿಅಸ್ರಣ್ಣರು ಧಾರ್ಮಿಕ ಪಂಡಿತರೇ ? ಯಕ್ಷಗಾನದಲ್ಲಿ ಇರಬಾರದಾಗಿದ್ದ ಈ ಜಾತಿತಾರತಮ್ಯವನ್ನು ಯಕ್ಷಗಾನದಲ್ಲಿ ಹೇರಿದ್ದು ಯಾಕೆ ? ಇದನ್ನು ಕರಾವಳಿಯ ಎಲ್ಲರೂ ಪ್ರಶ್ನಿಸಿದರೆ ಯಕ್ಷಗಾನ ಎಲ್ಲರದ್ದಾಗುತ್ತದೆ.

You cannot copy content of this page

Exit mobile version